ಶುಕ್ರವಾರ, ಏಪ್ರಿಲ್ 23, 2021
31 °C

ಮಲೇರಿಯ: ನಿಯಂತ್ರಣ ಕ್ರಮಕ್ಕೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಮಲೇರಿಯ ಪ್ರಕರಣ ಹೆಚ್ಚಳ ಮತ್ತು ಅಸಮರ್ಪಕ ಕಸ ವಿಲೇವಾರಿ ಬಗ್ಗೆ ಉಡುಪಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಶನಿವಾರ ಚರ್ಚೆ ನಡೆಯಿತು.ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಮಲೇರಿಯ ಪ್ರಕರಣಗಳು ಹೆಚ್ಚಾಗುತ್ತಿವೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿ ರುವುದು ಆತಂಕಕಾರಿ ವಿಷಯವಾಗಿದೆ. ಮಲೇರಿಯ ಪೀಡಿತ ವಿದ್ಯಾರ್ಥಿಗಳು ತಿಂಗಳುಗಟ್ಟಲೆ ಶಾಲಾ- ಕಾಲೇಜುಗಳಿಗೆ ಹೋಗಲು ಆಗುತ್ತಿಲ್ಲ.ಈ ಬಗ್ಗೆ ನಗರಸಭೆ ಏನು ಕ್ರಮ ಕೈಗೊಂಡಿದೆ ಎಂದು ನಗರಸಭೆ ಸದಸ್ಯ ಜಯಾನಂದ್ ಅವರು ಆರಂಭದಲ್ಲೇ ಗಮನ ಸೆಳೆದರು. ಇದಕ್ಕೆ ಧ್ವನಿಗೂಡಿಸಿದ ಡಾ. ಎಂ.ಆರ್. ಪೈ ಅವರು ಬಹುಮಹಡಿ ಕಟ್ಟಡ ಹಾಗೂ ಅಪಾರ್ಟ್‌ಮೆಂಟ್ ನಿರ್ಮಾಣ ಸ್ಥಳದಲ್ಲಿ ನೈರ್ಮಲ್ಯತೆ ಕಾಪಾಡಿಕೊಳ್ಳದ ಕಾರಣ ಮಲೇರಿಯ ಹರಡಲು ಕಾರಣವಾಗುತ್ತಿದೆ ಎಂದರು.ಫಾಗಿಂಗ್ ಮಾಡುವುದನ್ನು ನಿಲ್ಲಿಸಿರುವುದನ್ನೂ ಅವರು ಪ್ರಶ್ನಿಸಿದರು. ಮಣಿಪಾಲದಲ್ಲಿ ವಾಸವಿದ್ದ ಹುಡುಗನೊಬ್ಬನಿಗೆ ಮಲೇರಿಯ ಕಾಣಿಸಿಕೊಂಡಿತ್ತು. ತನ್ನ ಊರಾದ ಬಾದಾಮಿಗೆ ತೆರಳಿದ್ದ ಆತ ಮೃತಪಟ್ಟಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ ಎಂದು ದಿನಕರ ಶೆಟ್ಟಿ ಮಾಹಿತಿ ನೀಡಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ಕಿರಣ್ ಕುಮಾರ್, ಮಲೇರಿಯ ತಡೆಗೆ ಸಂಬಂಧಿಸಿದಂತೆ ರಾಸಾಯನಿಕ ಸಿಂಪಡಿಸುವುದನ್ನು ರೂಢಿಸಿಕೊಂಡು ಬರಲಾಗಿತ್ತು. ಆದರೆ ಮಳೆಗಾಲ ಇರುವ ಕಾರಣ ಕಾರಣ ಸಿಂಪಡಣೆಯಿಂದ ಹೆಚ್ಚು ಲಾಭ ಇಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ. ಆದ್ದರಿಂದ ಕಡಿಮೆ ಮಾಡಲಾಗಿದೆ. ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕಾರ್ಮಿಕರಿಗೆ ಮಲೇರಿಯ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಪರಿಹಾರವಾಗಿ ಕಟ್ಟಡ ನಿರ್ಮಾಣ ಸ್ಥಳಕ್ಕೆ ಹೋಗಿ ಅಲ್ಲಿರುವ ಕಾರ್ಮಿಕರ ರಕ್ತದ ಮಾದರಿಯನ್ನು ತೆಗೆದುಕೊಂಡು ಪರೀಕ್ಷಿಸುವ ಕೆಲಸನವನ್ನು ಆರೋಗ್ಯ ಇಲಾಖೆ ಮಾಡುತ್ತಿದೆ ಎಂದರು.ಕಟ್ಟಡ ಕಾರ್ಮಿಕರಿಗೆ ಗುಡಿಸಲು ಹಾಕಿಕೊಳ್ಳಲು ಕೆಲವರು ಜಮೀನು ಬಾಡಿಗೆಗೆ ನೀಡುತ್ತಿದ್ದಾರೆ. ಇಂತಹ ಸ್ಥಳದಲ್ಲಿ ನೈರ್ಮಲ್ಯದ ಸಮಸ್ಯೆ ಉಂಟಾಗಿ ಕಾಯಿಲೆ ಹರಡುತ್ತಿದೆ. ಆದ್ದರಿಂದ ಭೂಮಿಯ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದರು.ನಗರದಲ್ಲಿ ಕಸ ಸರಿಯಾಗಿ ವಿಲೇವಾರಿ ಆಗುತ್ತಿಲ್ಲ. ಇದರಿಂದ ಸ್ವಚ್ಛತೆ ಇಲ್ಲದಂತಾಗಿದೆ. ಕಾಯಿಲೆಗಳೂ ಹರುವ ಭೀತಿ ಉಂಟಾಗಿದೆ ಎಂದು ಸದಸ್ಯೆ ಅಮೃತಾ ಕೃಷ್ಣಮೂರ್ತಿ ಕೇಳಿದರು. ಪ್ರತಿ ಮನೆಯಿಂದ ಮೂವತ್ತು ರೂಪಾಯಿ ವಸೂಲಿ ಮಾಡಿ ಅದನ್ನು ಕಸ ವಿಲೇವಾರಿ ಮಾಡುವವರಿಗೆ ನೀಡುವುದಕ್ಕಿಂತ ಆ ಹಣವನ್ನು ನಗರಸಭೆಯೇ ಭರಿಸಿದರೆ ಒಳ್ಳೆಯದು ಎಂಬ ಸಲಹೆಯೂ ಕೇಳಿ ಬಂತು.ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಸ್ವಸಹಾಯ ಗುಂಪುಗಳ ಮೂಲಕ ಈ ಕಸ ವಿಲೇವಾರಿ ಮಾಡಲಾಗುತ್ತಿದೆ. ಕೆಲವು ಮನೆ ಮಾಲೀಕರು ತಿಂಗಳಿಗೆ ನೀಡಬೇಕಾದ ಹಣವನ್ನು ನೀಡುತ್ತಿಲ್ಲ ಇದರಿಂದ ಸಮಸ್ಯೆ ಆಗುತ್ತಿದೆ ಎಂದರು.

ಪರ್ಕಳ ರಸ್ತೆ ವಿಸ್ತರಣೆ: ಪರ್ಕಳ ರಸ್ತೆ ವಿಸ್ತರಣೆ ಗಾಮಗಾರಿ ಆರಂಭವಾಗದ ಬಗ್ಗೆ ಪ್ರಶ್ನೆಗಳು ಕೇಳಿ ಬಂದವು. ಇದಕ್ಕೆ ಉತ್ತರಿಸಿದ ಶಾಸಕ ಕೆ.ರಘುಪತಿ ಭಟ್, ಈಗಾಗಲೇ ಸರ್ವೆ ನಡೆಸಲಾಗಿದೆ.ಈಗಿರುವ ಡಾಂಬರನ್ನು ರಸ್ತೆಯನ್ನು ಮಧ್ಯಭಾಗವನ್ನಾಗಿಸಿ ಅಲ್ಲಿಂದ ಎಡಕ್ಕೆ ನಲವತ್ತು ಮತ್ತು ಬಲಕ್ಕೆನಲವತ್ತು ಅಡಿ ವಿಸ್ತರಣೆ ಮಾಡಲಾಗುತ್ತದೆ. ಆದರೆ ನಗರಸಭೆ ಅಧಿಕಾರಿಗಳು ಕರ್ತವ್ಯಲೋಪ ಎಸಗಿ ಸರ್ವೆ ಸಿಬ್ಬಂದಿಗೆ ಸರಿಯಾಗಿ ಮಾಹಿತಿ ನೀಡದ ಕಾರಣ  ಸರ್ವೆ ತಪ್ಪಾಗಿದೆ. ಇದನ್ನು ಸರಿ ಪಡಿಸಿ ಕೂಡಲೇ ಕಾಮಗಾರಿ ಆರಂಭಿಸ ಲಾಗುತ್ತದೆ ಎಂದರು.ಕನಕದಾಸ ರಸ್ತೆ, ತೆಂಕಪೇಟೆ ರಸ್ತೆ ಮತ್ತು ಬಡಗುಪೇಟೆ ರಸ್ತೆ ವಿಸ್ತರಣೆ ಯನ್ನು ಕೈಬಿಡಲಾಗಿದೆ. ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದರು.ಪಡಿತರ ಚೀಟಿ ವಿತರಣೆ, ಹೆಸರು ಸೇರ್ಪಡೆ, ಬೇರ್ಪಡೆ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ಸಮಸ್ಯೆ ಇದೆ ಎಂಬ ಪ್ರಶ್ನೆಗೆ ಉತ್ತರಿಸಿ ತಹಶೀಲ್ದಾರ್ ಅಭಿಜಿನ್ ಈ ಬಗ್ಗೆ ಮಾಹಿತಿ ಪಡೆದು ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು.ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಇರುವ ವೃತ್ತ ಹಾಗೂ ನಗರಸಭೆ ಎದುರು ಮಾಜಿ ಸಚಿವ ದಿ. ಡಾ.ವಿ.ಎಸ್. ಆಚಾರ್ಯ ಅವರ ಪ್ರತಿಮೆ ಪ್ರತಿಷ್ಠಾಪನೆ ಮಾಡುವ ಕಾರ್ಯವನ್ನು ಶ್ರೀಘ್ರದಲ್ಲೇ ಮಾಡಲಾಗುತ್ತದೆ ಎಂದು ರಘುಪತಿ ಭಟ್ ಹೇಳಿದರು.ನಗರಸಭೆ ಉಪಾಧ್ಯಕ್ಷೆ ಭಾರತಿ ಚಂದ್ರಶೇಖರ್, ಪೌರಾಯುಕ್ತ ಗೋಕುಲ್‌ದಾಸ್ ನಾಯಕ್ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.