ಮಂಗಳವಾರ, ಮೇ 18, 2021
31 °C
ನಗರ ಸಂಚಾರ

ಮಳೆಗಾಲ: ಎಚ್ಚೆತ್ತ ನಗರಸಭೆಯಿಂದ ಭರದ ಸಿದ್ಧತೆ

ಪ್ರಜಾವಾಣಿ ವಾರ್ತೆ/ ಚಿದಂಬರಪ್ರಸಾದ Updated:

ಅಕ್ಷರ ಗಾತ್ರ : | |

ಯಾದಗಿರಿ: ಬಿಸಿಲು ನಾಡಿನಲ್ಲಿ ಈಗ ಎಲ್ಲರಿಗೂ ಮಳೆಯದ್ದೇ ನಿರೀಕ್ಷೆ. ಬೇಸಿಗೆಯ ಬಿಸಿಲಿಗೆ ತತ್ತರಿಸಿರುವ ಜನರು, ತಂಪಾದ ವಾತಾವರಣಕ್ಕಾಗಿ ಹಾತೊರೆಯುತ್ತಿದ್ದಾರೆ. ಆಗಸದಲ್ಲಿ ಮೋಡ ಕವಿದರೂ, ಹನಿಗಳಾಗಿ ಧರೆಗೆ ಬೀಳುತ್ತಿಲ್ಲ. ಈಗಲೂ ಬೆವರಿನ ಹನಿಗಳನ್ನು ಒರೆಸಿಕೊಳ್ಳುತ್ತಲೇ ಕಾಲ ಕಳೆಯುತ್ತಿದ್ದಾರೆ.ಇದೆಲ್ಲರ ಮಧ್ಯೆ ಮಳೆಯಿಂದ ಆಗಬಹುದಾದ ತೊಂದರೆಗಳ ನಿವಾರಣೆಗೆ ನಗರಸಭೆ ಮುಂದಾಗಿದೆ. ತುಂಬಿರುವ ಚರಂಡಿಗಳ ಸ್ವಚ್ಛತೆ, ಕಸದ ರಾಶಿಗಳ ವಿಲೇವಾರಿ ಕಾರ್ಯವನ್ನು ಕೈಗೆತ್ತಿಕೊಂಡಿದೆ.ನಗರಸಭೆಗೆ ಚುನಾವಣೆ ನಡೆದು ಮೂರು ತಿಂಗಳಾದರೂ, ಇನ್ನೂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಾಗಿಲ್ಲ. ಆಯ್ಕೆಯಾಗಿರುವ ನಗರಸಭೆಯ 31 ಸದಸ್ಯರು ಇನ್ನೂ ಅಧಿಕಾರ ವಹಿಸಿಕೊಂಡಿಲ್ಲ. ಅದರಲ್ಲೂ ನಗರದ ಪ್ರಮುಖ ಸಮಸ್ಯೆಯಾಗಿರುವ ಚರಂಡಿ ವ್ಯವಸ್ಥೆಯ ಸುಧಾರಣೆಗೆ ಯಾವುದೇ ಕ್ರಮಗಳನ್ನೂ ಕೈಗೊಳ್ಳಲು ಆಗುತ್ತಿಲ್ಲ.ಇಂತಹ ಸಂದರ್ಭದಲ್ಲಿ ಮಳೆ ಬಂದರಂತೂ ನಗರದ ಸ್ಥಿತಿ ಗಂಭೀರವಾಗಲಿದೆ. ಚರಂಡಿಗಳು ತುಂಬಿ, ರಸ್ತೆಗಳಲ್ಲಿಯೇ ಕೊಳಚೆ ನೀರು ಹರಿಯುತ್ತದೆ. ಇದುವರೆಗೆ ಮಳೆಗಾಗಿ ಕಾಯುತ್ತಿರುವ ಜನರೇ, ಮಳೆ ಏಕಾದರೂ ಬಂತೋ ಎನ್ನುವಂತಾಗುತ್ತದೆ. ಕಳೆದ ವರ್ಷದ ಮಳೆಗಾಲದಲ್ಲಿ ಇಂಥದ್ದೇ ಸ್ಥಿತಿಯನ್ನು ನಗರದ ನಾಗರಿಕರು ಅನುಭವಿಸಿದ್ದರು.ಕೆರೆಯಾಗುವ ಕಾಲೇಜು ಆವರಣ: ಇದುವರೆಗೆ ಸರ್ಕಾರಿ ಸಮಾರಂಭಗಳಿಗೆ ವೇದಿಕೆಯಾಗುತ್ತಲೇ ಬಂದಿರುವ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಮೈದಾನದ ಬಗ್ಗೆ ಯಾರಿಗೂ ಕಾಳಜಿ ಇದ್ದಂತೆ ಕಾಣುವುದಿಲ್ಲ. ಸಮಾರಂಭಗಳ ಸಮಯದಲ್ಲಿ ಮಾತ್ರ ಅಲಂಕಾರಗೊಳ್ಳುವ ಈ ಆವರಣ, ಮಳೆಗಾಲದಲ್ಲಿ ಸಣ್ಣ ಕೆರೆಯಾಗಿ ಪರಿವರ್ತನೆ ಆಗುತ್ತದೆ.ಪಕ್ಕದಲ್ಲಿಯೇ ನಗರಸಭೆ ಕಾರ್ಯಾಲಯವಿದ್ದರೂ, ಇದುವರೆಗೆ ಯಾರೊಬ್ಬರಿಗೂ ಇತ್ತ ಗಮನಹರಿಸಿಲ್ಲ. ಈ ವರ್ಷವಾದರೂ ಹರಿದು ಬರುವ ನೀರನ್ನು ತಡೆಯುವ ವ್ಯವಸ್ಥೆ ಮಾಡಬೇಕು ಎನ್ನುವುದು ವಿದ್ಯಾರ್ಥಿಗಳ ಆಗ್ರಹ.“ಹ್ವಾದ ವರ್ಷ ಮಳಿ ಬಂದಾಗ, ಈ ಗ್ರೌಂಡ್‌ನ್ಯಾಗ ಕಾಲ ಎಲ್ಲಿ ಇಡೋದು ಅನ್ನೂದ ತಿಳಿದ್ಹಂಗ ಆಗಿತ್ರಿ. ಮಧ್ಯಾಹ್ನದಾಗ ಕಾಲೇಜ ಬಿಟ್ರು, ಸಂಜಿ ಮಟ ಕಾ ಲೇಜನ್ಯಾಗ ಇರುಹಂಗ ಆಗಿತ್ರಿ. ಹೊ ರ ಗ ಹ್ವಾದ್ರ ಮಣಕಾಲ ಮಟ ನೀರ ನಿಂ ತಿದ್ದು. ಈ ವರ್ಷರೇ ಗಟಾರ್ ನೀರ ಬರದ್ಹಂಗ ಮಾಡಿದ್ರ ಭಾಳ ಛೋಲೋ ಆ ಕ್ಕೇತ್ರಿ” ಎನ್ನುತ್ತಾರೆ  ವಿದ್ಯಾರ್ಥಿ ಸಿದ್ಧಪ್ಪ.ಇಂತಹ ಸಮಸ್ಯೆಗಳ ನಿವಾರಣೆಗೆ ಪ್ರಮುಖ ಚರಂಡಿಗಳ ಹೂಳು ತೆಗೆಯುವ ಕೆಲಸ ಅವಶ್ಯಕವಾಗಿದೆ. ಅದರಲ್ಲಿಯೂ ತರಕಾರಿ ಮಾರುಕಟ್ಟೆಯ ಅಕ್ಕಪಕ್ಕದ ಚರಂಡಿಗಳಲ್ಲಿ ಹೂಳಿನ ಪ್ರಮಾಣ ಇನ್ನಷ್ಟು ಹೆಚ್ಚಾಗಿದೆ.ಈ ಹಿನ್ನೆಲೆಯಲ್ಲಿ ನಗರದಲ್ಲಿರುವ ಪ್ರಮುಖ ಚರಂಡಿಗಳ ಹೂಳು ತೆಗೆಯು ವ ಕಾರ್ಯವನ್ನು ಆರಂಭಿಸಲಾಗಿದೆ.

ಆಡಳಿತಾಧಿಕಾರಿಯ ಮುತುವರ್ಜಿ: ನಗರಸಭೆಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಆಗದೇ ಇರುವ ಹಿನ್ನೆಲೆಯಲ್ಲಿ ಸದ್ಯದ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ ಅವರೇ, ನಗರಸಭೆಯ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ನಗರದ ಬಡಾವಣೆಗಳಲ್ಲಿ ಚರಂಡಿಗಳ ದುಸ್ಥಿತಿ ನೋಡಿರುವ ಜಿಲ್ಲಾಧಿಕಾರಿಗಳು, ಈ ಬಾರಿ ಮಳೆಗಾಲದಲ್ಲಿ ಹೆಚ್ಚಿನ ಅನಾಹುತ ಆಗದಂತೆ ಮುನ್ನೆಚ್ಚರಿಕೆ ವಹಿಸಿದ್ದಾ ರೆ. ಅದರ ಪರಿಣಾಮವಾಗಿ ನಗರಸಭೆ ಆಯುಕ್ತ ಮಹ್ಮದ್ ಮುನೀರ್ ನೇತೃತ್ವದಲ್ಲಿ ನಗರದಲ್ಲಿರುವ ಚರಂಡಿಗಳ ಹೂಳು ತೆಗೆಯುವ ಕಾರ್ಯವೂ ಆರಂಭವಾಗಿದೆ.ಮೊದಲೇ ನಗರಸಭೆ ಎಚ್ಚೆತ್ತುಕೊಂಡಿರುವುದು ಸಂತೋಷ. ಆದರೂ ಮಳೆ ಬಂದು ಹೋದ ಮೇಲೆಯೇ ನಗರದ ಚ ರಂಡಿಗಳು ಎಷ್ಟು ಸ್ವಚ್ಛವಾಗಿವೆ ಎಂಬು ದು ತಿಳಿಯಲಿದೆ ಎನ್ನುತ್ತಿದ್ದಾರೆ ನಗರದ ನಿವಾಸಿಗಳು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.