ಶುಕ್ರವಾರ, ಮೇ 29, 2020
27 °C

ಮಳೆ: ಎಚ್ಚರ ವಹಿಸಲು ಅಧಿಕಾರಿಗಳಿಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಮಳೆ ಬಂದ ಸಂದರ್ಭಗಳಲ್ಲಿ ಬಿಬಿಎಂಪಿ ಅಧಿಕಾರಿಗಳು ಕಡ್ಡಾಯವಾಗಿ ಸ್ಥಳದಲ್ಲಿದ್ದು ಜನರಿಗೆ ತೊಂದರೆಯಾಗದಂತೆ ಎಚ್ಚರವಹಿಸಬೇಕು~ ಎಂದು ಗೃಹ ಸಚಿವ ಆರ್.ಅಶೋಕ ಸೂಚನೆ ನೀಡಿದರು.ಮಳೆಯಿಂದಾಗಿ ಹಾನಿಗೊಳಗಾಗಿದ್ದ ನಗರದ ಬೊಮ್ಮನಹಳ್ಳಿ, ಮದೀನಾ ನಗರ, ಮಂಗಮ್ಮನ ಪಾಳ್ಯ, ಹೊಂಗಸಂದ್ರ, ಗಾರ್ವೆ ಪಾಳ್ಯ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿ ಬಿಬಿಎಂಪಿ ಹಾಗೂ ಬೆಂಗಳೂರು ಜಲಮಂಡಲಿ ಕಾಮಗಾರಿಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.`ಮಳೆ ಬಂದು ಪ್ರವಾಹ ಉಂಟಾಗುವ ಸಂದರ್ಭಗಳಲ್ಲಿ ಮಕ್ಕಳ ಸಾವು ಹೆಚ್ಚುತ್ತಿದ್ದು ಇದರಿಂದ ಮಕ್ಕಳು ಕಳೆದುಕೊಂಡ ಪೋಷಕರಿಗೆ ಅಧಿಕಾರಿಗಳು ಜಾಗೃತಿ ಮೂಡಿಸಬೇಕು. ಭಿತ್ತಿಪತ್ರ ಹಾಗೂ ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡಬೇಕು~ ಎಂದು ಅವರು ತಿಳಿಸಿದರು.`ಹಲವು ಸಂದರ್ಭಗಳಲ್ಲಿ ಅಧಿಕಾರಿಗಳು, ಗುತ್ತಿಗೆದಾರರು ಅಗತ್ಯವಿಲ್ಲದ ಕಡೆಗಳಲ್ಲಿ ಕಾಮಗಾರಿ ನಡೆಸಿರುತ್ತಾರೆ. ಅದರಿಂದ ಸಾರ್ವಜನಿಕರಿಗೂ ಉಪಯೋಗವಿಲ್ಲ. ಕಾಮಗಾರಿಗೆ ವಿನಿಯೋಗಿಸಿದ ಹಣವೂ ವ್ಯರ್ಥವಾಗಲಿದೆ. ಆದ್ದರಿಂದ ಕಾಮಗಾರಿ ಆರಂಭಿಸುವ ಮುನ್ನು ಎಚ್ಚರಿಕೆ ವಹಿಸುವುದು ಅಗತ್ಯ~ ಎಂದು ಹೇಳಿದರು.`ಮಂಗಮ್ಮನ ಪಾಳ್ಯ ಹಾಗೂ ಮದೀನಾ ನಗರಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಚ್‌ಎಸ್‌ಆರ್ ಬಡಾವಣೆ ಅಗರ ಕೆರೆಯಿಂದ ಬೇಗೂರು ಕೆರೆಯವರೆಗೆ ಇರುವ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ರೂ 15 ಕೋಟಿ ವೆಚ್ಚದಲ್ಲಿ ಒತ್ತುವರಿ ತೆರವು, ಹೂಳೆತ್ತುವಿಕೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು~ ಎಂದರು.ಬೊಮ್ಮನಹಳ್ಳಿ ಜಂಕ್ಷನ್‌ನಲ್ಲಿ ಅಂಡರ್‌ಪಾಸ್ ಕಾಮಗಾರಿ ಆರಂಭಿಸಲು ಶಾಸಕ ಸತೀಶ್ ರೆಡ್ಡಿ ಮಾಡಿದ ಮನವಿಗೆ ಸ್ಪಂದಿಸಿದ ಅವರು ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಅವರು ಆದೇಶಿಸಿದರು.`ಬಿಬಿಎಂಪಿ ವ್ಯಾಪ್ತಿಗೆ ಒಳಪಟ್ಟಿರುವ ಬೊಮ್ಮನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆಯನ್ನು ಬೆಂಗಳೂರು ಜಲಮಂಡಲಿ  ಕಲ್ಪಿಸಬೇಕು. ಈ ಭಾಗದ ಜನರು ಪಟ್ಟಣ ಪಂಚಾಯ್ತಿಗೆ ನೀಡುತ್ತಿದ್ದ ನಿರ್ವಹಣಾ ವೆಚ್ಚವನ್ನು ಜಲಮಂಡಲಿಯೇ ಸ್ವೀಕರಿಸಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು~ ಎಂದು ಅವರು ಹೇಳಿದರು.ಬಿಬಿಎಂಪಿ ಆಯುಕ್ತ ಸಿದ್ದಯ್ಯ ಮಾತನಾಡಿ `ಬೊಮ್ಮನಹಳ್ಳಿ ಬಿಬಿಎಂಪಿ ಕಚೇರಿಯಿಂದ ರಾಷ್ಟ್ರೀಯ ಹೆದ್ದಾರಿವರೆಗೆ ಬೈಪಾಸ್ ರಸ್ತೆ ನಿರ್ಮಿಸಲು ಆದೇಶ ನೀಡಲಾಗಿದೆ. ಇದರಿಂದಾಗಿ ಸುತ್ತಮುತ್ತಲಿನ ಪ್ರದೇಶದ ಪ್ರಯಾಣಿಕರಿಗೆ ಅನುಕೂಲವಾಗಲಿದೆ~ ಎಂದರು.`ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಕೆರೆಗಳ ಹೂಳೆತ್ತುವಿಕೆ, ಬೇಲಿ ಹಾಕುವಿಕೆ, ಕೆರೆ ಸುತ್ತಲು ಗಿಡಮರಗಳನ್ನು ನೆಡಲಾಗುವುದು~ ಎಂದು ತಿಳಿಸಿದರು.

ಪಾಲಿಕೆಯ ತೋಟಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ರೂಪಾ ರಮೇಶ್, ಪಾಲಿಕೆ ಸದಸ್ಯರಾದ ಎಲ್.ರಮೇಶ್, ಸುಗುಣ ಬಾಲಕೃಷ್ಣ, ಪುರುಷೋತ್ತಮ್ ರವಿ, ಹಸೀನಾ ತಾಜ್, ಜಲಮಂಡಲಿ ಪ್ರಧಾನ ಎಂಜಿನಿಯರ್ ಟಿ. ವೆಂಕಟರಾಜು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.