ಶನಿವಾರ, ಮಾರ್ಚ್ 6, 2021
21 °C
ಕೃಷಿ ಉತ್ಸವದಲ್ಲಿ ಜಲತಜ್ಞ ಎನ್.ಜೆ.ದೇವರಾಜರೆಡ್ಡಿ ಅಭಿಮತ

ಮಳೆ ನೀರು ಸಂಗ್ರಹಿಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳೆ ನೀರು ಸಂಗ್ರಹಿಸಲು ಸಲಹೆ

ಚಿತ್ರದುರ್ಗ: ‘ಕೊಳವೆಬಾವಿಗಳು ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ನೀಡುತ್ತವೆ, ಆದರೆ ಶಾಶ್ವತವಾಗಿ ಜಲಕ್ಷಾಮ ಉಂಟು ಮಾಡುತ್ತವೆ’ ಎಂದು ತಜ್ಞ ಡಾ.ಎನ್.ಜೆ. ದೇವರಾಜರೆಡ್ಡಿ ಅಭಿಪ್ರಾಯಪಟ್ಟರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಾಗೂ ವಿವಿಧ ಸಂಸ್ಥೆ, ಇಲಾಖೆಗಳ ಸಹಯೋಗದಲ್ಲಿ ನಗರದ ಹಳೆ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಶನಿವಾರ ನಡೆದ ಕೃಷಿ ಉತ್ಸವದ ನೀರು ಸಂಗ್ರಹಣೆ ಹಾಗೂ ಕೃಷಿಯಲ್ಲಿ ನೀರಿನ ಸದ್ಬಳಕೆ ವಿಧಾನಗಳ ಕುರಿತು ಅವರು ಉಪನ್ಯಾಸ ನೀಡಿದರು.ಸರ್ಕಾರ ರಾಜ್ಯದಲ್ಲಿ 11 ಲಕ್ಷ ಕೊಳವೆ ಬಾವಿಗಳಿವೆ ಎಂದು ಅಂಕಿ ಅಂಶ ನೀಡುತ್ತದೆ. ಆದರೆ ಲೆಕ್ಕವಿಲ್ಲದಷ್ಟು ಕೊಳವೆಬಾವಿಗಳನ್ನು ಕೊರೆಸಲಾಗುತ್ತಿದೆ. ನಮ್ಮ ದೇಶದಲ್ಲಿ 113 ನದಿಗಳಿವೆ. 36 ಲಕ್ಷ ಕೆರೆಗಳಿವೆ. ಇವುಗಳಲ್ಲಿ ಬಹುತೇಕ ಕೆರೆ, ನದಿಗಳಿಗೆ ರಾಸಾಯನಿಕ ತ್ಯಾಜ್ಯವನ್ನು ಹರಿಸಿ ಮಲಿನಗೊಳಿಸಲಾಗುತ್ತಿದೆ' ಎಂದು ಆತಂಕ ವ್ಯಕ್ತಪಡಿಸಿದರು.ನೀರಿನ ಸಮಸ್ಯೆ ಪರಿಹಾರಕ್ಕೆ ಇರುವ ಏಕೈಕ ಪರಿಹಾರವೆಂದರೆ ಮಳೆ ನೀರು ಸಂಗ್ರಹಿಸುವುದು. ಇದು ಕೃಷಿಕರು ಜೊತೆಗೆ ಸಾರ್ವಜನಿಕರು ಅನುಸರಿಸಬೇಕಾದ ಪ್ರಕ್ರಿಯೆ. ಕೃಷಿಕರು ಜಮೀನಿನಲ್ಲಿರುವ ಕೊಳವೆಬಾವಿಗಳಿಗೆ ಮಳೆ ನೀರು ಇಂಗಿಸಲು ಗುಂಡಿಗಳನ್ನು ಮಾಡಬೇಕು. ಹೊಲಗಳಿಗೆ ಒಡ್ಡುಗಳನ್ನು ಹಾಕಿಸಿ, ನೀರನ್ನು ನಡೆಸಿ,  ನಡೆಯುವ ನೀರನ್ನು ತೆವಳುವಂತೆ ಮಾಡಿ, ತೆವಳುವ ನೀರನ್ನು ನಿಲ್ಲಿಸುವಂತೆ ಮಾಡಬೇಕು ಎಂದು ಸಲಹೆ ನೀಡಿದರು.ಕಡಿಮೆ ನೀರು ಬಳಸಿ ಬೆಳೆಯುವ ಬೆಳೆಗಳ ಕುರಿತು ಮಾತನಾಡಿದ ಪತ್ರಕರ್ತ ಗಾಣಧಾಳು ಶ್ರೀಕಂಠ, ‘ಭತ್ತ, ಕಬ್ಬು ಬೆಳೆಯಲು 2200 ಮಿ.ಮೀ ಮಳೆ ಅವಶ್ಯ. ಬಾಳೆ ಬೆಳೆಯಲು 1,500  ಮಿ.ಮೀ ಮಳೆ ಅಗತ್ಯ. ಆದರೆ ಸಿರಿಧಾನ್ಯಗಳಾದ ನವಣೆ, ಸಾಮೆ ಸಜ್ಜೆ, ಹಾರಕ, ಬರಗು, ಊದಲು, ಕೊರಲೆಯಂತಹ ಬೆಳೆಗಳನ್ನು 250 ಮಿ.ಮೀ ಮಳೆಯಲ್ಲೂ ಬೆಳೆಯಬಹುದು. ಗೊಬ್ಬರ, ನೀರಿನ ಆರೈಕೆ ಕೇಳದ ಈ ಬೆಳೆಗಳು ಔಷಧಯುಕ್ತ ಆಹಾರ ಧಾನ್ಯಗಳು ಹೌದು’ ಎಂದು ವಿವರಿಸಿದರು.ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಚಳ್ಳಕೆರೆ ಬಸವರಾಜು ಮಾತನಾಡಿ, ‘ಕೃಷಿ ಕಾರ್ಯಗಳಲ್ಲಿ ಮಹಿಳೆಯರೇ  ಪ್ರಮುಖ. ಮಹಿಳೆಯರು ಮನಸ್ಸು ಮಾಡಿದರೆ ಬೃಹತ್ ಸಂಘಟನೆ ಮಾಡಿ ಕೃಷಿ ಕ್ಷೇತ್ರವನ್ನು ಕ್ಷಿಪ್ರವಾಗಿ ಬೆಳೆಸಬಹುದು’ ಎಂದು ಅಭಿಪ್ರಾಯಪಟ್ಟರು.ಮಾನಂಗಿ ಗ್ರಾಮದ ಮಹಾಂತೇಶ ಅವರು, 1/4 ಎಕರೆಯಲ್ಲಿ ಕಡಿಮೆ ನೀರಿನಿಂದ ಭತ್ತ ಬೆಳೆಯುವ ‘ಶ್ರೀ’ ಪದ್ಧತಿ ಕುರಿತು ಅನುಭವ ಹಂಚಿಕೊಂಡರು. ಎಂ.ಎಸ್‌.ರಾಜು, ಮಧ್ಯಕರ್ನಾಟಕ ನೀರಾವರಿ ಹೋರಾಟ ಸಂಘದ ಕಾರ್ಯಾಧ್ಯಕ್ಷ ತಿಪ್ಪೇಸ್ವಾಮಿ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.