ಸೋಮವಾರ, ಜೂನ್ 14, 2021
22 °C

ಮಹತ್ವದ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾಸನಸಭೆಗಳಲ್ಲಿ ನಮ್ಮನ್ನು ಪ್ರತಿನಿಧಿಸುವವರು ಸಚ್ಚಾರಿತ್ರ್ಯದಿಂದ ಕೂಡಿರಬೇಕು, ಅಪರಾಧಿ ಹಿನ್ನೆಲೆ ಹೊಂದಿರಬಾರದು ಎಂಬ ಒತ್ತಾಯ ಬಹುಕಾಲದಿಂದಲೂ ಇದೆ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ಸೋಮವಾರ  ಕೆಳಹಂತದ ವಿಚಾರಣಾ ನ್ಯಾಯಾಲಯಗಳಿಗೆ ನೀಡಿದ ನಿರ್ದೇಶನ, ಸಾರ್ವಜನಿಕ ಬದುಕನ್ನು ಅಪರಾಧೀಕರಣದಿಂದ ಮುಕ್ತ ಮಾಡಬೇಕು ಎನ್ನುವ ಜನಸಾಮಾನ್ಯರ  ಆಸೆ ಈಡೇರಿಸುವತ್ತ ಮಹತ್ವದ ಹೆಜ್ಜೆಯಾಗಿದೆ.‘ಜನತಾ ಪ್ರಾತಿನಿಧ್ಯ ಕಾಯ್ದೆಯಡಿ ಹಾಲಿ ಸಂಸದರು ಮತ್ತು ಶಾಸಕರ ವಿರುದ್ಧ ಹೂಡಲಾದ ಎಲ್ಲ ಮೊಕದ್ದಮೆಗಳನ್ನು ದೋಷಾರೋಪ ಪಟ್ಟಿ ಸಿದ್ಧಪಡಿಸಿದ ಒಂದು ವರ್ಷದ ಒಳಗೆ ಇತ್ಯರ್ಥ ಮಾಡಬೇಕು. ಅಕಸ್ಮಾತ್‌ ಈ ಗಡುವನ್ನು ಪಾಲಿಸಲು ಸಾಧ್ಯವಾಗದಿದ್ದರೆ ಅದಕ್ಕೆ ಕಾರಣ­ವಾದ ಅಂಶಗಳ ಬಗ್ಗೆ ಆಯಾ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ­ಯವರಿಗೆ ವಿವರಣೆ ಕೊಡಬೇಕು’ ಎಂದು ಅಧೀನ ನ್ಯಾಯಾಲಯಗಳ ನ್ಯಾಯಾಧೀಶರಿಗೆ ಅದು ತಾಕೀತು ಮಾಡಿದೆ.ಕಾರಣಗಳು ಸಮರ್ಥನೀಯ ಎಂದು ಮನವರಿಕೆಯಾದರೆ ಮಾತ್ರ ಮುಖ್ಯ ನ್ಯಾಯಮೂರ್ತಿಗಳು ವಿಚಾ­ರಣಾ ಅವಧಿ ವಿಸ್ತರಿಸಬಹುದು ಅಥವಾ ಸರಿ ಕಂಡ ಕ್ರಮ ಕೈಗೊಳ್ಳಬಹುದು. ಇಂಥ ಪ್ರಕರಣಗಳ ವಿಚಾರಣೆ ನಿತ್ಯ ನಡೆಯಬೇಕು ಎಂದು ಆದೇಶಿಸಿದೆ. ಹೀಗೆ ಅಧೀನ ಕೋರ್ಟ್‌ಗಳಿಗೂ ಹೊಣೆಗಾರಿಕೆ ನಿಗದಿಪಡಿಸಿರುವುದು ಅನುಕರಣೀಯ. ಈಗಿರುವ ನಿಯಮಗಳ ಪ್ರಕಾರ ಅಪರಾಧ ಸಾಬೀತಾದ  ಕೂಡಲೇ ಆಯಾ ಜನಪ್ರತಿನಿಧಿ ತನ್ನ ಸ್ಥಾನದಲ್ಲಿ ಮುಂದುವರಿಯಲು ಅನರ್ಹನಾಗುತ್ತಾನೆ. ಆದರೆ ಎಷ್ಟೋ ಸಲ ವಿಚಾರಣೆ ಮುಗಿಯುವುದರ ಒಳಗೆ ಅವರ ಸದಸ್ಯತ್ವದ ಅವಧಿಯೇ ಮುಕ್ತಾಯವಾಗಿರುತ್ತದೆ.ಹೀಗಾಗಿ ಕಳಂಕಿತ ಜನಪ್ರತಿನಿಧಿಗಳು ವಿಳಂಬ ಮತ್ತು ತಾಂತ್ರಿಕ ಲೋಪದ ಆಶ್ರಯ ಪಡೆದು ಶಾಸನಸಭೆ ಸದಸ್ಯತ್ವದ ಅಧಿಕಾರವನ್ನು ಅನುಭವಿಸುತ್ತಿದ್ದರು. ಇಲ್ಲಿ ರಾಜಕೀಯ ಶುದ್ಧೀಕರಣದ ಮೂಲ ಉದ್ದೇಶವೇ ನಿರರ್ಥಕವಾಗುತ್ತಿತ್ತು. ಇಂಥ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇವೆ. ಆದರೆ ಕೋರ್ಟ್‌ ಆದೇಶದಿಂದ ಈ ಪ್ರವೃತ್ತಿಗೆ ಕಡಿವಾಣ ಬೀಳಲಿದೆ. ಅಲ್ಲದೆ  ತ್ವರಿತವಾಗಿ ನ್ಯಾಯ ಪಡೆಯುವ ಆರೋಪಿಯೊಬ್ಬನ ಮೂಲಭೂತ ಹಕ್ಕಿಗೂ ಮಾನ್ಯತೆ ಸಿಗಲಿದೆ. ‘ತ್ವರಿತ ನ್ಯಾಯದ ಹಕ್ಕು ಸಂಸದ, ಶಾಸಕರಿಗಷ್ಟೇ ಅಲ್ಲ; ಎಲ್ಲರಿಗೂ ಇದೆ. ಆದರೆ ಮೊದಲ ಹಂತದಲ್ಲಿ ಜನಪ್ರತಿನಿಧಿಗಳಿಂದಲೇ ಪ್ರಾರಂಭಿಸುತ್ತಿದ್ದೇವೆ’ ಎಂದು ನ್ಯಾಯಪೀಠ ವ್ಯಾಖ್ಯಾನಿಸಿದೆ.ಇದರ ಜತೆಯಲ್ಲಿಯೇ, ರಾಜಕೀಯ ಅಪರಾಧೀಕರಣ ತಡೆಯಲು  ಕಾನೂನು ಆಯೋಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ನ್ಯಾಯಾ­ಲಯ ದೋಷಾರೋಪ ಪಟ್ಟಿಯಲ್ಲಿ ಹೆಸರಿಸುವ ಅಭ್ಯರ್ಥಿಗಳನ್ನು ಚುನಾ­ವಣಾ ಸ್ಪರ್ಧೆಯಿಂದಲೇ ಅನರ್ಹಗೊಳಿಸಬೇಕು, ಸುಳ್ಳು ಪ್ರಮಾಣಪತ್ರ ನೀಡಿದರೆ ಕನಿಷ್ಠ ಎರಡು ವರ್ಷಗಳ ಶಿಕ್ಷೆ ವಿಧಿಸಬೇಕು ಎಂದು ಶಿಫಾರಸು ಮಾಡಿದೆ. ದ್ವೇಷಸಾಧನೆ ಅಥವಾ ದುರುದ್ದೇಶದಿಂದ ಯಾವುದೇ ಅಭ್ಯರ್ಥಿ ಸ್ಪರ್ಧೆಗೆ ಅಡ್ಡಗಾಲು ಹಾಕುವ  ಹುನ್ನಾರ ನಡೆಯಬಹುದು ಎಂಬುದನ್ನೂ ಗುರುತಿಸಿದೆ. ಈ ಕಾರಣಕ್ಕಾಗಿಯೇ, ನಾಮಪತ್ರ ಪರಿಶೀಲನೆಗೆ ಒಂದು ವರ್ಷದ ಮೊದಲು ಅಭ್ಯರ್ಥಿ ವಿರುದ್ಧ ವಿಚಾರಣಾ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ನಿಗದಿಯಾಗಿದ್ದರೆ ಮಾತ್ರ ಅನರ್ಹತೆ ಅನ್ವಯಿಸಬೇಕು  ಎಂದು ಸಲಹೆ ಮಾಡಿದೆ. ಚುನಾವಣಾ ರಾಜಕಾರಣವನ್ನು ಶುದ್ಧೀಕರಿಸುವ,  ಪ್ರಜಾಸತ್ತೆ ಬಲಗೊಳಿಸುವ ಈ ಪ್ರಯತ್ನಗಳು ಪ್ರಶಂಸೆಗೆ ಅರ್ಹ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.