ಭಾನುವಾರ, ಜನವರಿ 19, 2020
27 °C

ಮಹದಾಯಿ ನ್ಯಾಯಮಂಡಳಿ ಕಾನೂನು ಸಮರಕ್ಕೆ ವೇದಿಕೆ ಸಿದ್ಧ

ಹೊನಕೆರೆ ನಂಜುಂಡೇಗೌಡ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕರ್ನಾಟಕ ಮತ್ತು ಗೋವಾ ನಡುವೆ ಸಂಘರ್ಷಕ್ಕೆ ಕಾರಣವಾಗಿರುವ ಮಹಾದಾಯಿ ನದಿ ನೀರು ಹಂಚಿಕೆ ವಿವಾದ ಬಗೆಹರಿಸಲು ಕೇಂದ್ರ ಸರ್ಕಾರ ನೇಮಕ ಮಾಡಿರುವ ನ್ಯಾಯಮಂಡಳಿ ಸದ್ಯದಲ್ಲೇ ತನ್ನ ಕಾರ್ಯಕಲಾಪ ಆರಂಭಿಸಲಿದೆ. ಇದರೊಂದಿಗೆ ಸಂಧಾನದ ಪ್ರಯತ್ನಗಳಿಗೆ ತೆರೆ ಬಿದ್ದಿದ್ದು, ಕಾನೂನು ಸಮರಕ್ಕೆ ವೇದಿಕೆ ಸಿದ್ಧವಾಗಿದೆ.ಮಹಾದಾಯಿ ನ್ಯಾಯಮಂಡಳಿಗೆ ಜಲ ಸಂಪನ್ಮೂಲ ಸಚಿವಾಲಯ ಕಟ್ಟಡ ನಿಗದಿಪಡಿಸಿದೆ. ನ್ಯಾಯಮಂಡಳಿ ಅಧ್ಯಕ್ಷರಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜೆ.ಎಂ. ಪಾಂಚಾಲ್, ಸದಸ್ಯರಾಗಿ ಮಧ್ಯಪ್ರದೇಶ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿನಯ್ ಮಿತ್ತಲ್ ಮತ್ತು ಆಂಧ್ರ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ.ಎಸ್. ನಾರಾಯಣ ಅಧಿಕಾರ ವಹಿಸಿಕೊಂಡಿದ್ದಾರೆ. ಬಿ.ವಿ. ಶರ್ಮ ನ್ಯಾಯಮಂಡಳಿ ರಿಜಿಸ್ಟ್ರಾರ್. ಇದು ರಿಜಿಸ್ಟ್ರಾರ್ ಅವರಿಗೆ ಹೆಚ್ಚುವರಿ ಹೊಣೆ.ಕೇಂದ್ರ ಸರ್ಕಾರ 2009ರ ಡಿಸೆಂಬರ್ 10ರಂದೇ ಮಹಾದಾಯಿ ನದಿ ನೀರು ಹಂಚಿಕೆ ವಿವಾದ ಇತ್ಯರ್ಥಕ್ಕೆ ನ್ಯಾಯಮಂಡಳಿ ರಚಿಸಲು ತೀರ್ಮಾನಿಸಿ ಅಧ್ಯಕ್ಷರು ಮತ್ತು ಸದಸ್ಯರ ಹೆಸರು ಶಿಫಾರಸು ಮಾಡುವಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಮನವಿ ಮಾಡಿತ್ತು. ಮೂವರ ಹೆಸರು ಸೂಚನೆಯಾದ ಬಳಿಕ ಅಧಿಸೂಚನೆ ಪ್ರಕಟವಾಗಿದೆ.ಆದರೆ, ನ್ಯಾಯಮಂಡಳಿಗೆ ಅಗತ್ಯವಿರುವ ಸ್ಥಳಾವಕಾಶದ ಅಲಭ್ಯತೆ ಮತ್ತು ಅಧ್ಯಕ್ಷ ನ್ಯಾ.ಪಾಂಚಾಲ್ ಅಕ್ಟೋಬರ್‌ನಲ್ಲಷ್ಟೇ ಸುಪ್ರೀಂಕೋರ್ಟ್‌ನಿಂದ ನಿವೃತ್ತಿ ಆಗಿದ್ದರಿಂದ ನ್ಯಾಯಮಂಡಳಿ ಕಾರ್ಯಕಲಾಪ ವಿಳಂಬವಾಗಿತ್ತು ಎಂದು ಉನ್ನತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ಈ ಮಧ್ಯೆ, ಆದಷ್ಟು ತ್ವರಿತವಾಗಿ ನ್ಯಾಯಮಂಡಳಿ ಕಾರ್ಯ ಆರಂಭಿಸಿ, ವಿವಾದ ಇತ್ಯರ್ಥ ಪಡಿಸುವಂತೆ ಮನವಿ ಮಾಡಿ ರಾಜ್ಯದ ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಈಚೆಗೆ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. `ಕಾವೇರಿ ನ್ಯಾಯಮಂಡಳಿ~ ಕಾರ್ಯಕಲಾಪ ನಡೆಸಿದ `ಜನಪಥ್ ಭವನ~ದಲ್ಲೇ ಮಹಾದಾಯಿ ನ್ಯಾಯಮಂಡಳಿಗೂ ಸ್ಥಳಾವಕಾಶ ಕಲ್ಪಿಸಲಾಗಿದೆ. ಕಟ್ಟಡದ ನವೀಕರಣ ತ್ವರಿತಗತಿಯಲ್ಲಿ ಸಾಗಿದ್ದು, ಶೀಘ್ರವೇ ಕಲಾಪ ಆರಂಭವಾಗಲಿದೆ ಎಂದು ಮೂಲಗಳು ಹೇಳಿವೆ.ನ್ಯಾಯಮಂಡಳಿ ಮುಂದೆ ರಾಜ್ಯದ ನಿಲುವು ಮಂಡಿಸುವ ವಕೀಲರ ತಂಡವನ್ನು ಸರ್ಕಾರ ಈಗಾಗಲೇ ಅಂತಿಮಗೊಳಿಸಿದೆ. ಕಾವೇರಿ ಮತ್ತು ಕೃಷ್ಣಾ ನ್ಯಾಯಮಂಡಳಿಯಲ್ಲಿ ವಾದಿಸಿದ ಹಿರಿಯ ವಕೀಲ ಎಫ್.ಎಸ್.ನಾರಿಮನ್ ನೇತೃತ್ವದ ತಂಡವೇ ಈ ನ್ಯಾಯಮಂಡಳಿ ಮುಂದೆ ವಾದಿಸಲಿದೆ.

ಎಸ್. ಎಸ್. ಜವಳಿ, ಮೋಹನ ಕಾತರಕಿ ಮತ್ತು ಬ್ರಿಜೇಶ್ ಕಾಳಪ್ಪ ತಂಡದ  ಉಳಿದ ವಕೀಲರು. ಈ ತಂಡಕ್ಕೆ ಅಗತ್ಯ ಮಾಹಿತಿ ಒದಗಿಸುವ ತಾಂತ್ರಿಕ ಮತ್ತು ಆಡಳಿತಾತ್ಮಕ ಸಿಬ್ಬಂದಿಯನ್ನು ರಾಜ್ಯ ಸರ್ಕಾರ ಇನ್ನೂ ನೇಮಕ ಮಾಡಬೇಕಿದೆ.ಅಂತರರಾಜ್ಯ ನದಿ ನೀರು ವಿವಾದ ಕಾಯ್ದೆ 1956 ಸೆಕ್ಷನ್ 3ರ ಅಡಿ ನೇಮಿಸಿರುವ ನ್ಯಾಯಮಂಡಳಿಗೆ ತಗಲುವ ಎಲ್ಲ ಖರ್ಚು- ವೆಚ್ಚಗಳನ್ನು ಸಂಬಂಧಪಟ್ಟ ರಾಜ್ಯಗಳು ಸಮಾನವಾಗಿ ಭರಿಸಬೇಕು. ಇದೇ ಕಾಯ್ದೆ ಸೆಕ್ಷನ್ 5 (2)ರ ಪ್ರಕಾರ ಕಲಾಪ ಆರಂಭಿಸಿದ ಮೂರು ವರ್ಷದೊಳಗೆ ನ್ಯಾಯಮಂಡಳಿ ಅಂತಿಮ ತೀರ್ಪು ಪ್ರಕಟಿಸಬೇಕು. ಅಗತ್ಯವಾದರೆ ಗರಿಷ್ಠ ಎರಡು ವರ್ಷ ಕಾಲಾವಕಾಶ ವಿಸ್ತರಿಸಲು ಅವಕಾಶವಿದೆ.ವಿವಾದದ ಹಿನ್ನೆಲೆ:
ರಾಜ್ಯದ ಬೆಳಗಾವಿ ಜಿಲ್ಲೆಯಲ್ಲಿ ಹುಟ್ಟುವ ಮಹಾದಾಯಿ ನದಿ ಗೋವಾದಲ್ಲಿ ಹರಿದು ಅರಬೀ ಸಮುದ್ರ ಸೇರುತ್ತದೆ. ಇದರ ಉಪ ನದಿಗಳಾದ ಕಳಸಾ, ಬಂಡೂರಿಯ 7.56 ಟಿಎಂಸಿ ನೀರನ್ನು ಕಾಲುವೆ ಮೂಲಕ ಮಲಪ್ರಭಾ ಜಲಾಶಯಕ್ಕೆ ಹರಿಸಿ, ಹುಬ್ಬಳ್ಳಿ- ಧಾರವಾಡ ಒಳಗೊಂಡಂತೆ 100ಪಟ್ಟಣಗಳಿಗೆ ಕುಡಿಯುವ ಮತ್ತು ನೀರಾವರಿ ಉದ್ದೇಶದ ಮಹತ್ವದ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿದೆ. ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ ಜಿಲ್ಲೆಗಳ ಕೆಲವು ಪಟ್ಟಣಗಳಿಗೂ ಇದರಿಂದ ಲಾಭವಾಗಲಿದೆ.ಈ ಯೋಜನೆಗೆ ಅನುಮತಿ ನೀಡುವಂತೆ 2002ರ ಏಪ್ರಿಲ್ ತಿಂಗಳಿನಲ್ಲಿ ಕರ್ನಾಟಕವು ಜಲ ಸಂಪನ್ಮೂಲ  ಸಚಿವಾಲಯಕ್ಕೆ ಮನವಿ ಮಾಡಿತು. ನೀರಿನ ಲಭ್ಯತೆ ಆಧಾರದಲ್ಲಿ ಯೋಜನೆ ಜಾರಿಗೆ  ತಾತ್ವಿಕ ಒಪ್ಪಿಗೆ ಸಿಕ್ಕಿತು.ಅದೇ ವರ್ಷ ಜುಲೈನಲ್ಲಿ ಕೇಂದ್ರದ ಕ್ರಮವನ್ನು ತೀವ್ರವಾಗಿ ಪ್ರತಿಭಟಿಸಿದ ಗೋವಾ  ವಿವಾದ ಇತ್ಯರ್ಥಕ್ಕೆ ನ್ಯಾಯಮಂಡಳಿ ರಚಿಸಬೇಕೆಂದು ಪಟ್ಟು ಹಿಡಿಯಿತು. ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ  ಸೆಪ್ಟೆಂಬರ್‌ನಲ್ಲಿ ಅನುಮೋದನೆ ತಡೆ ಹಿಡಿಯಿತು.ಮಹಾದಾಯಿ ನದಿ ನೀರಿನ ಒಟ್ಟು ಇಳುವರಿ 200 ಟಿಎಂಸಿ ಆಗಿದ್ದು ಇದರಲ್ಲಿ 45ಟಿಎಂಸಿ ನೀರಿನ ಮೇಲೆ ಕರ್ನಾಟಕ ಹಕ್ಕು ಪಡೆದಿದೆ. ಈ ನೀರಿನ ಬಳಕೆಗೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ಗೋವಾ ನಡುವೆ 1989ರಲ್ಲಿ ಒಪ್ಪಂದವಾಗಿದ್ದು, ಅನಂತರ ಅಧಿಕಾರಕ್ಕೆ ಬಂದ ಗೋವಾ ಸರ್ಕಾರ ಇದಕ್ಕೆ ಸೊಪ್ಪು ಹಾಕುತ್ತಿಲ್ಲ.ಉಭಯ ರಾಜ್ಯಗಳ ಒಪ್ಪಂದದ ಅನ್ವಯ ಕರ್ನಾಟಕ ಜಲ ವಿದ್ಯುತ್ ಘಟಕ ನಿರ್ಮಿಸಬಹುದಾಗಿದೆ. ಇಲ್ಲಿ ಉತ್ಪಾದಿಸುವ ವಿದ್ಯುತ್‌ನಲ್ಲಿ ಗೋವಾ ಪಾಲೂ ಇದೆ.ಮಹಾದಾಯಿ ನ್ಯಾಯಮಂಡಳಿ ಕಾರ್ಯಕಲಾಪ ಆರಂಭವಾಗುವುದರೊಂದಿಗೆ ಕಾವೇರಿ, ಕೃಷ್ಣಾದ ಸಾಲಿಗೆ ಮಹಾದಾಯಿ ನ್ಯಾಯಮಂಡಳಿ ಸೇರಿದಂತಾಗಿದೆ. ಕಾವೇರಿ ನ್ಯಾಯಮಂಡಳಿ ಅಂತಿಮ ತೀರ್ಪು ಪ್ರಶ್ನಿಸಿ ಕರ್ನಾಟಕ ಒಳಗೊಂಡಂತೆ ಸಂಬಂಧಪಟ್ಟ ರಾಜ್ಯಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿವೆ.ಕೃಷ್ಣಾ ನ್ಯಾಯಮಂಡಳಿ ಅಂತಿಮ ತೀರ್ಪು ಕುರಿತು ಕೆಲವು ಸ್ಪಷ್ಟೀಕರಣ ಕೇಳಿರುವ ಹಿನ್ನೆಲೆಯಲ್ಲಿ ಎರಡನೇ ಕಂತಿನ ಕಲಾಪ ಆರಂಭವಾಗಿದೆ. ಮಾರ್ಚ್‌ನಲ್ಲಿ ಕಲಾಪ ಅಂತ್ಯಗೊಳ್ಳಲಿದ್ದು ಅಷ್ಟರೊಳಗೆ ವರದಿ ಕೊಡಬಹುದು. ಇಲ್ಲವೆ ಮತ್ತೆ ಕಾಲಾವಕಾಶ ವಿಸ್ತರಿಸಬಹುದು.

 

ಪ್ರತಿಕ್ರಿಯಿಸಿ (+)