ಮಂಗಳವಾರ, ಜೂನ್ 22, 2021
22 °C

ಮಹದೇಶ್ವರಬೆಟ್ಟ: ಮಹಾರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಳ್ಳೇಗಾಲ: ಮೈಲು ಉದ್ದದ ಸರದಿ ಸಾಲಿನಲ್ಲಿ ನಿಂತಿದ್ದ ಭಕ್ತಸಾಗರ. ವ್ಯವಸ್ಥಿತವಾಗಿ ಸಂಚರಿಸಿದ ಬಸ್‌ಗಳು. ಭರ್ಜರಿ ವ್ಯಾಪಾರ ಮಾಡಿದ ಅಂಗಡಿ ಮಾಲೀಕರು, ಮುಗಿಲು ಮಟ್ಟಿದ ಉಘೇ ಮಾದಪ್ಪ, ಉಘೇ ಮಾದೇಶ್ವರ ಎಂಬ ಘೋಷಣೆ. ಮಾದಪ್ಪನ ದರ್ಶನ ಮಾಡಿದ ಲಕ್ಷಾಂತರ ಭಕ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿದ ಮಹಾಶಿವರಾತ್ರಿ ಮಹಾರಥೋತ್ಸವ.ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮಲೆಮಹದೇಶ್ವರ ಬೆಟ್ಟದಲ್ಲಿ ಭಾನುವಾರ ಕಂಡು ಬಂದ ದೃಶ್ಯವಿದು. ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ಶಿವರಾತ್ರಿ ಮಹಾರಥೋತ್ಸವಕ್ಕೆ ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಹರಿದು ಬಂದಿತ್ತು ಜನಸಾಗರ.ತೇರಿಗೆ ಅಲಂಕರಿಸಿದ್ದ ಧ್ವಜಗಳು, ಪುಷ್ಪಗಳಿಂದ ಸಿಂಗರಿಸಿದ್ದ ರಥಕ್ಕೆ ಭಕ್ತರು ಹಣ್ಣು ಜವನ ಸೇರಿದಂತೆ ತಾವು ಬೆಳೆದಿದ್ದ ಭತ್ತ, ರಾಗಿ, ಜೋಳ ಸಮರ್ಪಿಸಿದರು. ಕೆಲವು ಭಕ್ತರು ಚಿಲ್ಲರೆ ಕಾಸನ್ನು ರಥಕ್ಕೆ ಎಸೆಯುವ ಮೂಲಕ ಸಂಭ್ರಮಿಸಿದರು.ಕಾವೇರಿ ನೀರು:  ಪ್ರತಿವರ್ಷ ಭಕ್ತರು ಜಾತ್ರೆಯಲ್ಲಿ ನೀರಿಗಾಗಿ ಪರದಾಡುತ್ತಿದ್ದರು. ಈ ವರ್ಷ ಭಕ್ತರಿಗೆ ಅಗತ್ಯ ಕಾವೇರಿ ನೀರು ಸಂಗ್ರಹಿಸಿದ್ದ ಪ್ರಯುಕ್ತ ಎಲ್ಲಾ ಭಕ್ತರು ನಿರಾಯಾಸವಾಗಿ ಕಾವೇರಿ ನೀರಿನಲ್ಲೇ ಸ್ನಾನ ಮಾಡಿ ಪುಳಕಿತರಾದರು. ಅಂತರ ಗಂಗೆಯಲ್ಲಿ ನಿಂತ ಕಲುಷಿತ ನೀರಿನಲ್ಲಿ ಸ್ನಾನಮಾಡುತ್ತಿದ್ದ ಭಕ್ತರಿಗೆ ಈ ವರ್ಷ ವಿಶೇಷವಾಗಿ ಅಂತರ ಗಂಗೆಯಲ್ಲೇ ಸ್ನಾನಕ್ಕೆ ಕಾರಂಜಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಾರಂಜಿಗಳ ಕೆಳಗೆ ನಿಂತು ಭಕ್ತರು ಸ್ನಾನಮಾಡಿ ಪುಳಕಿತರಾದರು.ಜಾತ್ರೆಯಲ್ಲಿ ಸ್ವಚ್ಛತೆಗೆ ಒತ್ತುನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರು ನೀಡಿದ ಸಲಹೆ ಮೇರೆಗೆ ದೇವಾಲಯದ ವತಿಯಿಂದ ಭಕ್ತರಿಗೆ ತಾತ್ಕಾಲಿಕ ಶೌಚಾಲಯ ನಿರ್ಮಿಸಲಾಗಿತ್ತು. ಕುಡಿಯುವ ನೀರು ಪೂರೈಕೆಗೆ ಮುಂಜಾಗ್ರತೆಯಾಗಿ ಕಾವೇರಿ ನೀರು ಸಂಗ್ರಹಿಸಲು ಕ್ರಮ ಕೈಗೊಂಡಿದ್ದ ಹಿನ್ನೆಲೆಯಲ್ಲಿ ಭಕ್ತರಿಗೆ ಸ್ನಾನಕ್ಕೆ ಹಾಗೂ ಕುಡಿಯುವ ನೀರಿಗೆ ತೊಂದರೆಯಾಗಲಿಲ್ಲ.ಅರವಟ್ಟಿಗೆ: ಮಹಾರಥೋತ್ಸವದಲ್ಲಿ ಪಾಲ್ಗೊಂಡ ಭಕ್ತರಿಗೆ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ ಹರಕೆ ಹೊತ್ತ ಹಾಗೂ ಪರಂಪರೆಯಾಗಿ ನಡೆಸಿಕೊಂಡು ಬಂದ ಭಕ್ತರು ಅಲ್ಲಲ್ಲಿ ಅರವಟ್ಟಿಗೆ ನಡೆಸಿ ಮಜ್ಜಿಗೆ, ಪಾನಕ ವಿತರಿಸಿ ಭಕ್ತಿಭಾವ ಮೆರೆದರು.ರಥೋತ್ಸವದ ಹಿನ್ನೆಲೆಯಲ್ಲಿ ಬೆಳಿಗ್ಗೆ ಸಾಲೂರು ಬೃಹನ್ಮಠದ ಗುರುಸ್ವಾಮೀಜಿ, ಇಮ್ಮಡಿ ಮಹದೇವಸ್ವಾಮೀಜಿ ಕಾರ್ಯನಿರ್ವಾಹಕ ಅಧಿಕಾರಿ ಎಚ್‌.ಎಸ್‌. ಸತೀಶ್‌ಬಾಬು, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ರಾಮಪ್ಪ ಅವರು ಉತ್ಸವಮೂರ್ತಿಗೆ ದೇವಾಲಯದ ಆವರಣದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ರಥದ ಶುದ್ಧೀಕರಣದ ನಂತರ ರಥೋತ್ಸವ ಸಾಗುವ ದೇವಾಲಯ ಪ್ರಾಂಗಣದಲ್ಲಿ ಶುದ್ಧೀಕರಣ ಪೂಜೆ ನೆರವೇರಿಸಲಾಯಿತು.ಕಾರ್ಯನಿರ್ವಾಹಕ ಅಧಿಕಾರಿ ಎಚ್‌.ಎಸ್‌. ಸತೀಶ್‌ಬಾಬು, ರಾಮಪ್ಪ, ದೇವಾಲಯ ವ್ಯವಸ್ಥಾಪಕ ಬಸವರಾಜು, ಮಾಧವರಾಜ್‌ ಅರಸ್‌, ರಮೇಶ್‌, ಮಹಾದೇವಸ್ವಾಮಿ ಹಾಗೂ ಅರ್ಚಕರು,  ಇನ್‌ಸ್ಪೆಕ್ಟರ್‌ ಮರಿಸಿದ್ದಶೆಟ್ಟಿ ಸೇರಿದಂತೆ ಇತರೆ ಗಣ್ಯರು ರಥೋತ್ಸವಕ್ಕೆ ಚಾಲನೆ ನೀಡಿದರು.ಹೆಚ್ಚುವರಿ ಬಸ್‌: ಮಹಾಶಿವರಾತ್ರಿ ರಥೋತ್ಸವದ ಅಂಗವಾಗಿ ಕೊಳ್ಳೇಗಾಲ, ಮಂಡ್ಯ, ಮೈಸೂರು, ಮಳವಳ್ಳಿ ಹಾಗೂ ಬೆಂಗಳೂರಿನಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಹೆಚ್ಚುವರಿ ಬಸ್‌ ಸೌಲಭ್ಯ ಕಲ್ಪಿಸಿತ್ತು. ಕೊಳ್ಳೇಗಾಲ ಡಿಪೋದಿಂದ 300ಕ್ಕೂ ಹೆಚ್ಚು ಬಸ್‌ಗಳು ಸೇರಿದಂತೆ ಖಾಸಗಿ ಬಸ್‌ಗಳೂ ಸಹ ಮಹದೇಶ್ವರ ಬೆಟ್ಟಕ್ಕೆ ಸಂಚರಿಸಿದವು.ಡಿ.ವೈ.ಎಸ್‌.ಪಿ ಚೆನ್ನಬಸವಣ್ಣ ಅವರ ನೇತೃತ್ವದಲ್ಲಿ ಬಿಗಿ ಭದ್ರತೆ ಏರ್ಪಡಿಸಿ ರಥೋತ್ಸವ ಶಾಂತಿಯುತವಾಗಿ ನೆರವೇರಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.