ಭಾನುವಾರ, ಮಾರ್ಚ್ 7, 2021
32 °C

ಮಹಾಪೂರದ ಮಹಾಸಂಕಟ

ಪ್ರವೀಣ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಮಹಾಪೂರದ ಮಹಾಸಂಕಟ

400 ವರ್ಷಗಳ ಹಿಂದೆ ಒಂಬತ್ತು ಲಕ್ಷದಷ್ಟಿದ್ದ ವಿಜಯಪುರದ ಜನಸಂಖ್ಯೆ ಈಗ ಮೂರೂವರೆ ಲಕ್ಷಕ್ಕೆ ಕುಸಿದಿದೆ. ಈ ವಿಲಕ್ಷಣ ವಿದ್ಯಮಾನದ ಹಿಂದೊಂದು ನೀರಿನ ಕಥೆ ಇದೆ.ಹೊರಭಾಗದಲ್ಲಿದ್ದ ‘ಬೇಗಂ ತಲಾಬ್‌’ (ಕೆರೆ) ಮೂಲಕ ಆ ನಗರಕ್ಕೆ ನೀರು ಪೂರೈಕೆ ಆಗುತ್ತಿತ್ತು. ಆದರೆ, ತ್ಯಾಜ್ಯದಿಂದ ರಾಜಕಾಲುವೆಯಲ್ಲಿ ಹೂಳು ತುಂಬಿದಾಗ ಒಂದೆಡೆ ನೀರಿನ ಜಾಡು ತಪ್ಪಿದರೆ, ಇನ್ನೊಂದೆಡೆ ಬಾವಡಿಗಳೆಲ್ಲ (ಮೆಟ್ಟಿಲು ಬಾವಿಗಳು) ಬರಿದಾಗಿ ನೀರಿನ ಹಾಹಾಕಾರ ಎದ್ದಿತು. ಬಳಿಕ ಆ ನಗರದಲ್ಲಿ ಸಂಭವಿಸಿದ ಅನಾಹುತಗಳಿಂದ ಕಂಗಾಲಾದ ಜನ ಅಲ್ಲಿಂದ ಕಾಲ್ಕಿತ್ತರು.‘ಇತಿಹಾಸ ಕೆದಕುತ್ತಾ ಹೊರಟರೆ ಇಂತಹ ಘಟನೆಗಳು ಲೆಕ್ಕವಿಲ್ಲದಷ್ಟು ಸಿಗುತ್ತವೆ. ಆದರೆ, ಅವುಗಳಿಂದ ನಾವು ಒಂದು ಚಿಕ್ಕ ಪಾಠವನ್ನೂ ಕಲಿತಿಲ್ಲ ಎನ್ನುವುದಕ್ಕೆ ದೇಶದ ಉದ್ದಗಲ ಸದ್ಯ ಕಾಣಿಸಿಕೊಂಡಿರುವ ‘ನಗರ ಮಹಾಪೂರ’ವೇ ಸಾಕ್ಷಿ’ ಎಂದು ಹೇಳುತ್ತಾರೆ ನಿವೃತ್ತ ಐಎಎಸ್‌ ಅಧಿಕಾರಿ ವಿ.ಬಾಲಸುಬ್ರಮಣಿಯನ್‌.ಹೌದು, ಬೇಸಿಗೆಯಲ್ಲಿ ಕುಡಿಯುವ ನೀರಿನ ಬವಣೆ ಅನುಭವಿಸುವುದು, ಮಳೆಗಾಲದಲ್ಲಿ ಮಹಾಪೂರ ಎದುರಿಸುವುದು ದೇಶದ ಮಹಾ ನಗರಗಳ ವಾರ್ಷಿಕ ವಿಧಿ ಆಗಿಬಿಟ್ಟಿದೆ. ಹವಾಮಾನ ವೈಪರೀತ್ಯದ ಈ ಕಾಲದಲ್ಲಿ ಯಾವ ಋತು ಎಂತಹ ಸಂಕಷ್ಟ ತರುವುದೋ ಗೊತ್ತಿಲ್ಲ.ಉದಾರೀಕರಣ ನಂತರದ ಅವಧಿಯಲ್ಲಿ ದೇಶದ ಬಹುತೇಕ ಮಹಾನಗರಗಳು ‘ಚೆನ್ನಾ  ಬತೂರ’ದಂತೆ ಬುರು ಬುರು ಉಬ್ಬಿವೆ. ಆ ಭರದಲ್ಲಿ ನದಿ, ಕೆರೆ, ರಾಜಕಾಲುವೆ, ಕೃಷಿ ಹಾಗೂ ಜವುಗು ಭೂಮಿ ಸೇರಿದಂತೆ ನೀರಿನ ನೆಲವನ್ನೆಲ್ಲ ಆಪೋಶನ ಪಡೆದಿವೆ. ಮಳೆ ನೀರಿನಿಂದ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತಿದ್ದ ನೈಸರ್ಗಿಕ ರಕ್ಷಾ ಕವಚವನ್ನು ಕಳಚಿಕೊಂಡು ಪ್ರವಾಹದ ಸುಳಿಯೊಳಗೆ ಬಿದ್ದುಬಿಟ್ಟಿವೆ.ದಖನ್‌ ಪ್ರಸ್ಥಭೂಮಿಯಲ್ಲಿ ನೆಲೆ ಕಂಡು ಕೊಂಡಿರುವ ಬೆಂಗಳೂರು, ಅದಕ್ಕೆ ಹತ್ತಿರದಲ್ಲೇ ಇರುವ ಚೆನ್ನೈ ಮಹಾನಗರಗಳು ಮೇಜಿನ ಮೇಲ್ಮೈನಂತಹ ಸಮತಟ್ಟಾದ ಭೌಗೋಳಿಕ ಹಿನ್ನೆಲೆ ಹೊಂದಿವೆ. ಇಂತಹ ಭೂಲಕ್ಷಣ ಇರುವ ಕಡೆಗಳಲ್ಲಿ ನೀರು ವಿಸ್ತಾರವಾಗಿ ಹರಡಿಕೊಳ್ಳುವುದೇ ಹೊರತು ಸುಲಭವಾಗಿ ಹರಿದುಹೋಗದು. ಆದ್ದರಿಂದಲೇ ಈ ನಗರಗಳ ನಿರ್ಮಾತೃಗಳು ಸರಪಳಿ ಕೆರೆಗಳ ವ್ಯವಸ್ಥೆ ಮಾಡಿದ್ದರು.ಒಂದು ಕೆರೆ ತುಂಬಿದೊಡನೆ ಮತ್ತೊಂದಕ್ಕೆ ರಾಜಕಾಲುವೆ ಮೂಲಕ ಗುರುತ್ವಾಕರ್ಷಣೆ ಬಲದಿಂದ ನೀರು ಸಾಗಿಸುತ್ತಾ ಹೋಗುವುದು ಈ ತಂತ್ರಜ್ಞಾನದ ಸೊಬಗು. ಯಾವುದೇ ಕೆರೆಯಲ್ಲಿ ನೀರಿನ ಪೂರೈಕೆ, ಸಂಗ್ರಹಣೆ ಹಾಗೂ ಹಂಚಿಕೆ– ಈ ಸಮತೋಲನದಲ್ಲಿ ತುಸು ಏರುಪೇರಾದರೂ ಅದರ ಪರಿಣಾಮ ಉಳಿದೆಲ್ಲ ಕೆರೆಗಳ ಪರಿಸರದಲ್ಲೂ ಗೋಚರಿಸುತ್ತಿತ್ತು. ಅಷ್ಟೊಂದು ಸೂಕ್ಷ್ಮವಾಗಿದ್ದ ವ್ಯವಸ್ಥೆ ಅದು. ಹೀಗಾಗಿ ಕೆರೆಗಳನ್ನು ದೇವತೆಗಳಂತೆ ಪೂಜಿಸಿ, ಜತನದಿಂದ ರಕ್ಷಣೆ ಮಾಡಲಾಗುತ್ತಿತ್ತು.ಕೆರೆಗಳು, ಅದರ ಸುತ್ತಲಿನ ಜವುಗು ಪ್ರದೇಶಗಳು, ಅದಕ್ಕೆ ಹೊಂದಿಕೊಂಡಿದ್ದ ಗದ್ದೆಗಳು, ಇವೆಲ್ಲವುಗಳ ಮಧ್ಯೆ ಮೈಚಾಚಿದ್ದ ಕಾಲುವೆಗಳು ಮಳೆ ನೀರನ್ನು ಸ್ಪಂಜಿನಂತೆ ಹೀರಿಕೊಳ್ಳುತ್ತಿದ್ದವು. ಹೆಚ್ಚಿನ ನೀರು ಹಳ್ಳಕೊಳ್ಳಗಳ ಮೂಲಕ ಹರಿದು ಹೋಗುತ್ತಿತ್ತು. ಶತಮಾನಗಳ ಇತಿಹಾಸ ಹೊಂದಿದ ಕೆರೆಗಳು ರಾತ್ರಿ ಬೆಳಗಾಗುವ ಹೊತ್ತಿಗೆ ಬಡಾವಣೆ ಗಳಾದರೆ, ರಾಜಕಾಲುವೆಗಳೂ ಅವುಗಳೊಟ್ಟಿಗೆ ಮಾಯವಾದವು.ಈ ನೆಲದಲ್ಲಿ ನೀರಿಗೂ ನೆಲೆ ಇರಬೇಕು ಎಂಬುದನ್ನು ನಗರ ಯೋಜನೆ ನೀತಿ ನಿರೂಪಕರು ಮರೆತುಬಿಟ್ಟರು. ನೀರಿನ ಮೌಲ್ಯ ಕಡೆಗಣಿಸಿ ಬರಿ ಭೂಮಿಗೆ ಬೆಲೆ ಕಟ್ಟಿದರು. ನಗರ ಯೋಜನೆಯಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಕುರಿತಾದ ಆತಂಕಗಳಿಗೆ ಯಾವುದೇ ಪರಿಹಾರ ಸಿಗಲಿಲ್ಲ. ನೀರು ಪೂರೈಕೆ, ಚರಂಡಿ ಹಾಗೂ ಮಳೆ ನೀರು ಕಾಲುವೆಗಳ ವಿನ್ಯಾಸ ಮಾಡುವಾಗ ನಗರದ ಪರಿಸರ ಮತ್ತು ಆರೋಗ್ಯದ ವಿಷಯವೇ ಮುಖ್ಯವಾಗಬೇಕು ಎನ್ನುವುದು ನಗರ ಯೋಜಕರ ತಲೆಗೆ ಹೋಗಲಿಲ್ಲ. ಅತ್ಯಂತ ಕ್ಷಿಪ್ರಗತಿಯಲ್ಲಿ ಭೂ ಪರಿವರ್ತನೆಗೆ ಅವಕಾಶ ಮಾಡಿಕೊಡಲಾಯಿತು.ಮೊದಲು ತಗ್ಗು ಪ್ರದೇಶದಲ್ಲಿ ಮಾತ್ರ ನಿಲ್ಲುತ್ತಿದ್ದ ಮಳೆ ನೀರು, ತನ್ನ ದಾರಿಗೆ ಅಡ್ಡಬರುವ ಪ್ರವೃತ್ತಿ ಹೆಚ್ಚಿದಂತೆ ನಗರವನ್ನೇ ಮುಳುಗಿಸತೊಡಗಿತು. ನಗರ ಯೋಜನೆಯಲ್ಲಿ ಆಗಿರುವ ವೈಫಲ್ಯವನ್ನು ಮತ್ತೆ ಮತ್ತೆ ಎತ್ತಿ ತೋರಿತು.‘ಸಾವಿರ ಕೆರೆಗಳ ನಾಡು’ ಎಂಬ ಖ್ಯಾತಿ ಹೊಂದಿದ್ದ ಬೆಂಗಳೂರು ಈಗ ಕೆರೆಗಳನ್ನೇ ಸಾಯಿ ಸಿದ ಬೀಡು. ಚೆನ್ನೈನಲ್ಲಿ ಐದು ಸಾವಿರ ಹೆಕ್ಟೇರ್‌ ನಷ್ಟು ಜಲಪ್ರದೇಶ ಕಾಣೆಯಾಗಿದೆ. ಅಲ್ಲಿನ ಮೂರು ನದಿಗಳು– ಕೋವಮ್‌, ಅಡ್ಯಾರ ಮತ್ತು ಕೊಸ ತಲೈಯಾರ್‌ ಮಳೆಗಾಲ ಹೊರತುಪಡಿಸಿ ಮಿಕ್ಕ ಸಮಯದಲ್ಲಿ ಕೊಳಚೆ ಸಾಗಿಸುವ ಮಹಾ ಚರಂಡಿ ಗಳಾಗಿವೆ, ಥೇಟ್‌ ನಮ್ಮ ವೃಷಭಾವತಿಯಂತೆ.ಮುಂಬೈನ ಮಿಥಿ ನದಿ ಪಾತ್ರದ ಮೇಲೇ ಅಲ್ಲಿನ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ ಮಾಡಲಾಗಿದೆ. ಕಡಲ ತೀರದ ಆ ಮಹಾನಗರದಲ್ಲಿ ಮಳೆನೀರಿನ ವೇಗದ ಓಟಕ್ಕೆ ತೊಡರುಗಾಲು ಹಾಕುತ್ತಿದ್ದ ಮಾವಿನ ತೋಪುಗಳು ರಿಯಲ್‌ ಎಸ್ಟೇಟ್‌ ಉದ್ಯಮದ ಹುಚ್ಚು ಕುಣಿತದಲ್ಲಿ ಅಪ್ಪಚ್ಚಿಯಾಗಿವೆ. ನವದೆಹಲಿ ಮತ್ತು ನೋಯಿಡಾ ನಗರಗಳ ಯಮುನಾ ತೀರದಲ್ಲಿ ಒಂದು ಸುತ್ತು ಹಾಕಿದರೆ, ಅಲ್ಲಿನ ಮಹಾಪೂರದ ಹಿಂದಿನ ಹಕೀಕತ್ತು ಗೊತ್ತಾಗುತ್ತದೆ. ಸದಾ ಪ್ರವಾಹದ ಭೀತಿಯಲ್ಲಿರುವ ಕೋಲ್ಕತ್ತ ಕೂಡ ಕೆರೆಗಳ ವಿಷಯದಲ್ಲಿ ದೇಶದ ಉಳಿದ ನಗರಗಳಂತೆಯೇ ಅಪರಾಧ ಎಸಗಿದೆ.ಕೆರೆ ಅಂಚಿನಿಂದ 75 ಮೀಟರ್‌ವರೆಗೆ, ರಾಜ ಕಾಲುವೆ ಅಂಚಿನಿಂದ 50 ಮೀಟರ್‌ವರೆಗೆ ಮೀಸಲು (ಬಫರ್‌) ಪ್ರದೇಶ ಬೀಡಬೇಕು ಎನ್ನುವ ಕಾನೂನು ಇದೆ. ಸರ್ವೇಯರ್‌ಗಳು ಮೀಟರ್‌ ಟೇಪ್‌ ಹಿಡಿದು ಅಳತೆ ಮಾಡಲು ಸ್ಥಳಕ್ಕೆ ಹೋದರೆ ಮೀಸಲು ಪ್ರದೇಶವಲ್ಲ, ಕೆರೆಯೇ ಸಿಗುವುದಿಲ್ಲ. ಕೆರೆ–ಕಟ್ಟೆ, ರಾಜಕಾಲುವೆಗಳನ್ನು ನಾವೀಗ ಕಂದಾಯ ನಕ್ಷೆಗಳಲ್ಲಿ ಮಾತ್ರ ನೋಡಲು ಸಾಧ್ಯ!ಡೆವಲಪರ್‌ ಹಾಗೂ ಬಿಲ್ಡರ್‌ಗಳೆಂಬ ಆಧುನಿಕ ಬಕಾಸುರರಿಗೆ ಕೈಗೆ ಸಿಕ್ಕಷ್ಟು ಬಾಚಿಕೊಳ್ಳುವ ಅವಸರ. ಜನಸಾಮಾನ್ಯರಿಗೆ ಸಾಧ್ಯವಾದಷ್ಟು ಕಡಿಮೆ ದುಡ್ಡಿನಲ್ಲಿ ನಿವೇಶನ ಖರೀದಿಸಿ ಮನೆಕಟ್ಟುವ ಆತುರ. ಇಬ್ಬರಿಗೂ ಅನುಕೂಲ ಮಾಡಿಕೊಡಲು ಹವಣಿಸುವ ಅಧಿಕಾರಿಗಳಿಗೆ ಬಡಿಯಿತು ಸಿರಿಗರ. ಕೆರೆ–ಕಾಲುವೆಗಳ ಮೇಲೇ ಮನೆಕಟ್ಟಿ ಮಹಾಪೂರದ ಕುರಿತು ದೂರಿದರೆ ಹೇಗೆ ಎಂಬ ಪ್ರಶ್ನೆಗೆ ಯಾರಲ್ಲೂ ಇಲ್ಲ ಉತ್ತರ!ಪ್ರತಿ ಮಹಾನಗರದಲ್ಲೂ ಸಂಕೀರ್ಣ ಆಡಳಿತ ವ್ಯವಸ್ಥೆ ಇದೆ. ಬಹುಸಂಖ್ಯೆಯಲ್ಲಿ ಇರುವ ಪ್ರಾಧಿ ಕಾರಗಳು ಒಂದಕ್ಕೊಂದು ವಿರುದ್ಧ ದಿಕ್ಕಿನಲ್ಲಿ ಯೋಜನೆ ರೂಪಿಸುವುದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಿದೆ. ಯೋಜನಾ ಪ್ರಾಧಿಕಾರಗಳು, ಆಡಳಿತ ಸಂಸ್ಥೆಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡು ವುದು ಬಲು ಅಪರೂಪವಾದರೆ, ಹೊಣೆಯನ್ನು ವರ್ಗಾಯಿಸುವುದು ಅಷ್ಟೇ ಸಾಮಾನ್ಯವಾಗಿದೆ.ಪ್ರತೀ ಮಳೆಗಾಲದ ಮುನ್ನ ಮಹಾನಗರ ಪಾಲಿಕೆಗಳು ಚರಂಡಿಗಳ ಹೂಳೆತ್ತುವ ವಿಷಯಕ್ಕೆ ಸಂಬಂಧಿಸಿದಂತೆ ಡಜನ್‌ಗಟ್ಟಲೆ ಪತ್ರಿಕಾ ಪ್ರಕಟಣೆಗಳನ್ನು ಹೊರಡಿಸುತ್ತವೆ.ಆದರೆ, ಟೆಂಡರ್‌ ಕರೆದು, ಗುತ್ತಿಗೆ ನೀಡಿ, ಹಣ ಬಿಡುಗಡೆ ಮಾಡಿದ್ದನ್ನು ಬಿಟ್ಟರೆ ಹೆಚ್ಚಿನ ಕೆಲಸವೇನೂ ನಡೆಯದು ಎಂಬುದನ್ನು ನಂತರ ಸುರಿಯುವ ಮಳೆ ಸಾರುತ್ತದೆ.ಕಾಂಕ್ರೀಟ್‌ ಬದಲು ಕಲ್ಲಿನ ಪುಡಿಯಿಂದ ಕಾಲುವೆ ದುರಸ್ತಿ ಮಾಡಿಸಿದ ಮೇಲಧಿಕಾರಿಗಳ ವಿರುದ್ಧ ಚೆನ್ನೈ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಎಂಜಿನಿಯರ್‌ ಒಬ್ಬರು ದೂರು ಬರೆದ ಘಟನೆ ಇನ್ನೂ ಹಸಿರಾಗಿದೆ. ಅಂತೆಯೇ ನಮ್ಮ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅಂತಹದ್ದೇ ಹುಳುಕು ಬಯಲಿಗೆಳೆದ ಆಯುಕ್ತರ ತಾಂತ್ರಿಕ ಜಾಗೃತಿ ಕೋಶದ (ಟಿವಿಸಿಸಿ) ಮುಖ್ಯ ಎಂಜಿನಿಯರ್‌್ ಸ್ವತಃ ರಾಜೀನಾಮೆ ಕೊಟ್ಟು ಮನೆಗೆ ಹೋಗ ಬೇಕಾಗಲಿಲ್ಲವೆ?ಬ್ಯೂರೊ ಆಫ್ ಇಂಡಿಯನ್‌ ಸ್ಟ್ಯಾಂಡರ್ಡ್ಸ್‌ (ಬಿಐಎಸ್‌) ನಿಯಮಾವಳಿ ಪ್ರಕಾರ, ಪ್ರವಾಹ ತಡೆಗಟ್ಟಲು ಮಳೆ ಆರಂಭಕ್ಕೆ ಮುಂಚಿತವಾಗಿಯೇ ಕೆರೆ–ಕಾಲುವೆಗಳ ಹೂಳು ಮೇಲೆತ್ತಬೇಕು. ಒಂದು ಅಂದಾಜಿನಂತೆ ಬೆಂಗಳೂರಿನ ಅಳಿದುಳಿದ ರಾಜಕಾಲುವೆಗಳಲ್ಲೇ ಸುಮಾರು ಹತ್ತುಸಾವಿರ ಟನ್‌ಗಳಷ್ಟು ಹೂಳು ತುಂಬಿದೆ. ಹೀಗಾಗಿ ನೀರು ಹರಿಯಲು ಜಾಗವಿಲ್ಲದೆ ರಸ್ತೆಗಳೇ ಈಗೀಗ ರಾಜಕಾಲುವೆಗಳ ಪಾತ್ರ ನಿರ್ವಹಿಸುತ್ತಿವೆ.‘ಕೊಳಚೆ ನೀರಿನ ಸಾಗಾಟಕ್ಕೆ ಪ್ರತ್ಯೇಕವಾದ ಚರಂಡಿ ವ್ಯವಸ್ಥೆ ಇರಬೇಕು. ಆದರೆ, ರಾಜಕಾಲುವೆಗಳಲ್ಲೇ ಕೊಳಚೆ ಸಾಗಿಸುವ ಪರಿಪಾಠ ಬೆಳೆದಿದೆ. ಅದರೊಟ್ಟಿಗೆ ನಗರ ಪ್ರದೇಶದಲ್ಲಿ ಹೆಚ್ಚಾಗಿರುವ ಘನತ್ಯಾಜ್ಯದಿಂದ ಜಲಮೂಲಗಳು ದೊಡ್ಡ ಗಂಡಾಂತರವನ್ನು ಎದುರಿಸುತ್ತಿವೆ. ಕಟ್ಟಡ ತ್ಯಾಜ್ಯ ತಂದು ಸುರಿಯುತ್ತಾ ಕೆರೆ ಪಾತ್ರವನ್ನು ಅತಿಕ್ರಮಿಸುವುದು ಭೂಗಳ್ಳರಿಗೆ ತುಂಬಾ ಸುಲಭವಾಗಿದೆ’ ಎಂದು ವಿಶ್ಲೇಷಿಸುತ್ತಾರೆ ಎನ್ವಿರಾನ್‌ಮೆಂಟ್‌ ಸಪೋರ್ಟ್‌ ಗ್ರೂಪ್‌ನ ಸಮನ್ವಯಾಧಿಕಾರಿ ಲಿಯೊ ಸಲ್ಡಾನಾ.ನಮ್ಮ ನಗರಗಳ ರಾಜಕಾಲುವೆಗಳು ಬ್ರಿಟಿಷರ ಕಾಲದಲ್ಲಿ ನಿರ್ಮಾಣ ಆದಂಥವು. ಸಾಮರ್ಥ್ಯ ಹೆಚ್ಚಿಸುವ ಬದಲು ಅವುಗಳ ಕತ್ತು ಹಿಸುಕುತ್ತ ಬರಲಾಗಿದೆ. ಹೆಚ್ಚೆಂದರೆ ಗಂಟೆಗೆ 25 ಮಿ.ಮೀ.ನಷ್ಟು ಮಳೆ ನೀರನ್ನು ಅವುಗಳು ಸಾಗಿಸಬಲ್ಲವು. ಆದರೆ, ಹವಾಮಾನ ವೈಪರೀತ್ಯದ ಪರಿಣಾಮ ಮಳೆಚಕ್ರದ ದಿಕ್ಕು ತಪ್ಪಿದ್ದು, ಕೆಲವು ಸಲ ಗಂಟೆಗೆ ನೂರು ಮಿ.ಮೀ.ಗೂ ಹೆಚ್ಚು ಮಳೆಯಾದ ಉದಾಹರಣೆ ಇದೆ. 2005ರ ಜುಲೈ 26ರಂದು ಮುಂಬೈನಲ್ಲಿ ಗಂಟೆಗೆ 190 ಮಿ.ಮೀ. ಪ್ರಮಾಣದಲ್ಲಿ ಮಳೆ ಸುರಿದಿತ್ತು.ಎಷ್ಟೇ ‘ಸ್ಮಾರ್ಟ್‌’ ಆಗಿ ಬೀಗುತ್ತಿರಬಹುದು; ಆದರೆ, ಅಭಿವೃದ್ಧಿ ಹೆಸರಿನಲ್ಲಿ ವಿಪತ್ತು ತಂದು ಕೊಂಡ ದಡ್ಡರು ನಾವು ಎನ್ನುವುದು ಸಾಬೀತಾಗಲು ಮಹಾಪೂರ ತಂದೊಡ್ಡುವ ವಿದ್ಯುತ್‌, ಸಾರಿಗೆ ಹಾಗೂ ದೂರಸಂಪರ್ಕ ಕಡಿತದಿಂದ ಅನು ಭವಿಸುವ ಪಡಿಪಾಟಲು ಒಂದೇ ಸಾಕು.ತಂತ್ರಜ್ಞಾನ ದಿಂದ ಎಲ್ಲವನ್ನೂ ಪಳಗಿಸಬಲ್ಲೆವು ಎಂದು ಮೆರೆದವರು ಮಹಾಪೂರದ ಮುಂದೆ ಮಂಡಿ ಯೂರಲೇಬೇಕು. ನಗರದ ಅರ್ಥವ್ಯವಸ್ಥೆ ಮೇಲೂ ಮಳೆಯ ಈ ವಿಪತ್ತು ಪ್ರತಿಕೂಲ ಪರಿಣಾಮ ಬೀರುತ್ತದೆ. ಬ್ಯಾಂಕಾಕ್‌ನಿಂದ ಬರುವ ಬಿಡಿಭಾಗಗಳ ಮೇಲೇ ಅವಲಂಬಿತವಾಗಿದ್ದ ಟೊಯೊಟಾ, ಹೋಂಡಾ ಕಂಪೆನಿಗಳು, ಆ ನಗರದಲ್ಲಿ ತಿಂಗಳ ಪರ್ಯಂತ ಪ್ರವಾಹದ ಪ್ರಹಾರ ನಡೆದಾಗ (2011) ಅಗತ್ಯ ಸಾಮಗ್ರಿ ಆಮದು ಮಾಡಿಕೊಳ್ಳಲಾಗದೆ ಉತ್ಪಾದನೆಯನ್ನೇ ಕಡಿತ ಮಾಡಬೇಕಾದ ಉದಾಹರಣೆ ಮುಂದೆಯೇ ಇದೆ.‘ಕೆರೆ–ಕಾಲುವೆಗಳ ನಿರ್ನಾಮವೇ ನಗರ ಪ್ರವಾಹಕ್ಕೆ ನೇರ ಕಾರಣ. ಮುಂದಿನ ದಿನಗಳಲ್ಲಿ ನೆಮ್ಮದಿಯಿಂದ ಬದುಕಬೇಕಾದರೆ ಕೆರೆಗಳನ್ನೇ ನಮ್ಮ ಆಧುನಿಕ ದೇವಾಲಯಗಳಂತೆ ಕಂಡು, ಪೂಜಿಸಬೇಕು. ಇದುವರೆಗಿನ ಅತಿಕ್ರಮಣವನ್ನೂ ತೆರವುಗೊಳಿಸಬೇಕು’ ಎಂದು ಖಡಾಖಂಡಿತವಾಗಿ ಹೇಳುತ್ತಾರೆ ನವದೆಹಲಿ ಮೂಲದ ಸೆಂಟರ್‌ ಫಾರ್‌ ಸೈನ್ಸ್‌ ಅಂಡ್‌ ಎನ್ವಿರಾನ್‌ಮೆಂಟ್‌ನ ಪ್ರಧಾನ ನಿರ್ದೇಶಕಿ ಸುನಿತಾ ನಾರಾಯಣ್‌.‘ರೇನ್‌ ರೇನ್‌ ಗೋ ಅವೇ (ಮಳೆ ಮಳೆ ಆಚೆ ಹೋಗು)’ ಎಂಬ ಶಿಶುಗೀತೆ ಹಾಡುತ್ತಾ ಕೂರುವ ಕಾಲ ಇದಲ್ಲ. ನಗರದ ‘ಉಷ್ಣದ್ವೀಪ’ಗಳ ಪ್ರಭಾವ ದಿಂದ ವೈಪರೀತ್ಯ ಹೆಚ್ಚಿದ್ದು ಯಾವಾಗ ಬೇಕಾದರೂ ಮಳೆ ಬರಬಹುದು. ಹೀಗಾಗಿ ಮಳೆ ನೀರಿನ ಜಾಡಿನಿಂದ ನಾವು ಹೊರ ಬರಬೇಕಾದ ಸಂದರ್ಭ ಇದು.‘ಕೆರೆ ಪಾತ್ರದಲ್ಲಿ ಮನೆಕಟ್ಟಿ ಅರಮನೆಯಲ್ಲಿದ್ದೇವೆ ಎಂದು ಸಂಭ್ರಮಿಸುವಲ್ಲಿ ಯಾವುದೇ ಅರ್ಥವಿಲ್ಲ. ಏಕೆಂದರೆ, ಅವುಗಳು ಒಂದಿಲ್ಲೊಂದು ದಿನ ಮುಳುಗುವ ಸಾಮ್ರಾಜ್ಯಗಳು’ ಎನ್ನುತ್ತಾರೆ ಸುನಿತಾ. ಅವರ ಈ ಮಾತು ನಗರದ ಹಾದಿ ಬೀದಿಗಳಲ್ಲಿ ಮತ್ತೆ ಮತ್ತೆ ಪ್ರತಿಧ್ವನಿಸಿ, ನೀರಿನ ಜಾಡು ಅಡೆತಡೆಗಳಿಂದ ಮುಕ್ತವಾಗಬಹುದೆ?

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.