ಬುಧವಾರ, ಮೇ 18, 2022
23 °C

ಮಹಿಳಾ ಸಹಾಯವಾಣಿ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: `ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಮೇಲೆ ನಿರಂತರ ಶೋಷಣೆ ನಡೆಯುತ್ತಿದೆ. ಹಾಗಾಗಿ ಮಹಿಳೆಯರಲ್ಲಿ ಆತ್ಮವಿಶ್ವಾಸ, ಮನೋಸ್ಥೈರ್ಯಗಳನ್ನು  ತುಂಬಲು ಮಹಿಳಾ ಸಹಾಯವಾಣಿ ಕೇಂದ್ರ ಸ್ಥಾಪನೆ ಮಹತ್ವದ್ದಾಗಿದೆ~ ಎಂದು ಶಾಸಕ ಜೆ.ನರಸಿಂಹಸ್ವಾಮಿ ಹೇಳಿದರು.ನಗರದ ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆಯಲ್ಲಿನ ಮಹಿಳಾ ಸಹಾಯ ವಾಣಿ (ಸಾಂತ್ವನ) ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ವರದಕ್ಷಿಣೆ ಪಿಡುಗು, ಕುಡಿದು ದಬ್ಬಾಳಿಕೆ ನಡೆಸುವುದು ಸಾಮಾನ್ಯವಾಗಿದೆ. ಆಕೆಗೆ ಸಹಾಯ ಮಾಡಲು ಸಹಾಯವಾಣಿಯ ಜೊತೆಗೆ ಪೊಲೀಸ್, ಕಾನೂನು ವ್ಯವಸ್ಥೆಗಳ ಸಹಕಾರ ಬೇಕಿದೆ. ಪತ್ನಿ ಮೇಲೆ ದಬ್ಬಾಳಿಕೆ ಮಾಡಿ ಜೈಲು ಸೇರಿದ ಚಿತ್ರನಟ ದರ್ಶನ್ ಉದಾಹರಣೆ ನಮ್ಮ ಕಣ್ಣ ಮುಂದೆ ಇದೆ. ಆದರೆ ಹಲವಾರು ಸಂದರ್ಭಗಳಲ್ಲಿ ಹೆಣ್ಣಿಗೆ ಹೆಣ್ಣೇ ಶತ್ರುವಾಗಿ ವರ್ತಿಸುತ್ತಿರುವುದು ವಿಷಾದಕರ. ಇಂತಹ ಸಂದರ್ಭಗಳಲ್ಲಿ ಮಹಿಳಾ ಸಹಾಯ ವಾಣಿ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿ ನೊಂದವರಿಗೆ ನ್ಯಾಯ ಒದಗಿಸಿಕೊಡಬೇಕಿದೆ~ ಎಂದರು.`ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆಯ ಕಾರ್ಯದರ್ಶಿ ಅಮಲಿನಾಯಕ್ ಮಾತನಾಡಿ, `ಸಂಸ್ಥೆಯು 2002 ರಿಂದಲೂ ಕಾರ್ಯ ನಿರ್ವಹಿಸುತ್ತಾ ಬಂದಿದೆ. 940 ಪ್ರಕರಣಗಳಲ್ಲಿ ಮಹಿಳೆಯರಿಗೆ ನ್ಯಾಯ ಒದಗಿಸಿ ಶೇ.90 ಕುಟುಂಬಗಳು ನೆಮ್ಮದಿಯಾಗಿ ಬದುಕು ನಡೆಸುವಲ್ಲಿ ಮಹತ್ತರವಾದ ಪಾತ್ರ ವಹಿಸಿದೆ.ಆದರೆ ಈಗ ಸರ್ಕಾರ ಕೌಟುಂಬಿಕ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ಸೇವಾ ಸೌಲಭ್ಯ, ಸಾಂತ್ವನ ನೀಡಲು ನಮ್ಮ ಸಂಸ್ಥೆಗೆ  ಸರ್ಕಾರದಿಂದ ಅಧಿಕೃತ ಮಾನ್ಯತೆ ನೀಡಲಾಗಿದೆ. ಮಹಿಳೆಯರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ದೂಡಿಕೊಳ್ಳಲು ಸಮಾಲೋಚನೆಗಳಿಗೆ  ವ್ಯವಸ್ಥೆ ಕಲ್ಪಿಸಲಾಗಿದೆ~ ಎಂದು ತಿಳಿಸಿದರು.ನಗರ ಸಭೆ ಅಧ್ಯಕ್ಷ ಎಂ.ಜಗದೀಶ್‌ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆ ಸಂಸ್ಥಾಪಕ ಗೋಪಾಲ್‌ನಾಯ್ಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಮಂಜುಳಾಕುಮಾರಿ, ತಾ.ಪಂ. ಇ.ಓ.ದ್ಯಾಮಪ್ಪ, ಸಿಡಿಪಿಓ ಪುಷ್ಪ, ಎಪಿಎಂಸಿ ಅಧ್ಯಕ್ಷ ಟಿ.ವಿ.ಲಕ್ಷ್ಮೀನಾರಾಯಣ್,ಶಿಶು ಅಭಿವೃದ್ದಿ ಯೋಜನಾಧಿಕಾರಿ ಜಯದೇವಿ, ನಗರ ಠಾಣೆ ಎಸ್.ಐ. ಶಿವಕುಮಾರ್ ಮತ್ತಿತರರು ಹಾಜರಿದ್ದರು.ಇದೇ ಸಂದರ್ಭದಲ್ಲಿ ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆ ವತಿಯಿಂದ ಅಂಗವಿಕಲ ಮಕ್ಕಳ ಆರೋಗ್ಯ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.