ಶುಕ್ರವಾರ, ಮಾರ್ಚ್ 5, 2021
25 °C

ಮಾಜಿ ರಾಜ್ಯಪಾಲ ಖುರ್ಷಿದ್ ಆಲಂ ಖಾನ್ ಇನ್ನಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಜಿ ರಾಜ್ಯಪಾಲ ಖುರ್ಷಿದ್ ಆಲಂ ಖಾನ್ ಇನ್ನಿಲ್ಲ

ನವದೆಹಲಿ: ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಅವರ ತಂದೆ ಹಾಗೂ ಕರ್ನಾಟಕದ ಮಾಜಿ ರಾಜ್ಯಪಾಲ ಖುರ್ಷಿದ್ ಆಲಂ ಖಾನ್ (95) ಶನಿವಾರ ಇಲ್ಲಿ ನಿಧನರಾದರು.ಎದೆನೋವಿನಿಂದ ಬಳಲುತ್ತಿದ್ದ ಅವರನ್ನು ಆರು ದಿನಗಳ ಹಿಂದೆ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. `ಇದಕ್ಕೂ ಮೊದಲೇ ಅವರು ಹೃದಯ ನಾಳಗಳ ತೊಂದರೆಯಿಂದ ಬಳಲುತ್ತಿದ್ದರು. ಶನಿವಾರ ನಸುಕಿನ ಜಾವ ಅವರು ಕೊನೆಯುಸಿರು ಎಳೆದರು' ಎಂದು ಎಸ್ಕಾರ್ಟ್ ಆಸ್ಪತ್ರೆ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಟಿ.ಎಸ್.ಕ್ಲೇರ್ ತಿಳಿಸಿದರು.1991ರಿಂದ 99ರವರೆಗೆ ಎಂಟು ವರ್ಷಗಳಷ್ಟು ದೀರ್ಘ ಕಾಲ ಖಾನ್ ಅವರು ಕರ್ನಾಟಕದ ರಾಜ್ಯಪಾಲ ರಾಗಿದ್ದರು. 1974ರಿಂದ 84ರವರೆಗೆ ರಾಜ್ಯಸಭೆ ಸದಸ್ಯರಾಗಿದ್ದ ಖಾನ್, ಉತ್ತರ ಪ್ರದೇಶದ ಫರೂಕಾಬಾದ್ ಕ್ಷೇತ್ರದಿಂದ 1984ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದರು. ಬಳಿಕ 1989ರಲ್ಲಿ ಅವರನ್ನು ಗೋವಾ ರಾಜ್ಯಪಾಲ ರನ್ನಾಗಿ ನೇಮಿಸಲಾಗಿತ್ತು.ಮಾಜಿ ರಾಷ್ಟ್ರಪತಿ

ದಿವಂಗತ ಝಾಕೀರ್ ಹುಸೇನ್ ಅವರ ಅಳಿಯರಾಗಿದ್ದ ಖಾನ್, ಇಂದಿರಾ ಗಾಂಧಿ ಹಾಗೂ ರಾಜೀವ ಗಾಂಧಿ ಸಂಪುಟದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.ಸಂಸತ್ತಿನಲ್ಲಿ ಕಾನೂನು ರೂಪಿಸುವ ಮೂಲಕ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯವನ್ನು ಪ್ರತ್ಯೇಕ ವಿಶ್ವವಿದ್ಯಾಲಯಯನ್ನಾಗಿ ಮಾಡಲು ಶ್ರಮಿಸಿದ್ದರು. ಬಳಿಕ ಆ ವಿಶ್ವವಿದ್ಯಾಲಯದಕುಲಪತಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.ಪ್ರವಾಸ ರದ್ದು: ತಂದೆಯ ನಿಧನದ ಹಿನ್ನೆಲೆಯಲ್ಲಿ, ಉದ್ದೇಶಿತ ಟರ್ಕಿ ಪ್ರವಾಸವನ್ನು ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ರದ್ದುಪಡಿಸಿದ್ದಾರೆ. ಪೂರ್ವ ನಿರ್ಧಾರಿತ ಕಾರ್ಯ ಕ್ರಮದಂತೆ ಸಲ್ಮಾನ್ ಖುರ್ಷಿದ್ ಅವರು ಜುಲೈ 20ರಿಂದ 22ರವರೆಗೆ ಟರ್ಕಿಗೆ ಭೇಟಿ ನೀಡಬೇಕಿತ್ತು.ಸಂತಾಪ: ಪ್ರಧಾನಿ ಮನಮೋಹನ್ ಸಿಂಗ್  ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.`ಮಾನವೀಯತೆ ತುಂಬಿದ ವ್ಯಕ್ತಿತ್ವ'

ನಾನು ಕಂಡಂತೆ ಖುರ್ಷಿದ್ ಆಲಂ ಖಾನ್ ಅವರದು ಮಾನವೀಯತೆ ತುಂಬಿದ ವ್ಯಕ್ತಿತ್ವ. ನಾನು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನನಗೆ ಆಡಳಿತ ವಿಚಾರದಲ್ಲಿ ಎಲ್ಲ ರೀತಿಯ ಸಹಕಾರ ನೀಡಿದ್ದರು.ಭೂಸುಧಾರಣಾ ಕಾಯ್ದೆಗೆ ಕೆಲವು ತಿದ್ದುಪಡಿಗಳನ್ನು ತರಲು ನಾನು ಮುಂದಾದಾಗ, ಅದಕ್ಕೆ ಸಂಪೂರ್ಣ ಸಹಕಾರ ನೀಡಿದ್ದರು ಅವರು. ಆ ತಿದ್ದುಪಡಿ ತಾರದಿದ್ದರೆ, ಇವತ್ತು ಯಾವುದೇ ಕೈಗಾರಿಕೆಗೂ ಒಂದು ತುಂಡೂ ಭೂಮಿ ನೀಡಲು ಆಗುತ್ತಿರಲಿಲ್ಲ. ಭೂಸುಧಾರಣಾ ಕಾಯ್ದೆಗೆ ನಾನು ತಂದ ತಿದ್ದುಪಡಿಗೆ ಅವರು ಸಹಿ ಹಾಕದಿದ್ದರೆ, ಇಂದು ಮಾಹಿತಿ ತಂತ್ರಜ್ಞಾನ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಇಷ್ಟು ಬೆಳವಣಿಗೆ ಸಾಧ್ಯವಾಗುತ್ತಿರಲಿಲ್ಲ. ನಾನು ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ಸಂದರ್ಭದಲ್ಲಿ ಅವರನ್ನು ಕಡೆಯ ಬಾರಿ ನಾನು ಭೇಟಿ ಮಾಡಿದ್ದೆ. ನನ್ನ ಮನೆಗೇ ಅವರು ಆಗ ಬಂದಿದ್ದರು.1994ರ ಚುನಾವಣೆಯಲ್ಲಿ ಜನತಾ ದಳ ಬಹುಮತ ಗಳಿಸಿದಾಗ ಸರ್ಕಾರ ರಚಿಸುವಂತೆ ಆಹ್ವಾನ ನೀಡಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದ 18 ತಿಂಗಳ ಅವಧಿಯಲ್ಲಿ ಸಂಪೂರ್ಣ ಸಹಕಾರ ನೀಡಿದರು. ಆಡಳಿತದಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡಲಿಲ್ಲ. ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ಅವರು ಪ್ರತಿ ಹಂತದಲ್ಲಿ ಬೆಂಬಲ ನೀಡಿದರು.

- ಎಚ್.ಡಿ. ದೇವೇಗೌಡ,  ಮಾಜಿ ಪ್ರಧಾನಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.