ಮಂಗಳವಾರ, ಜನವರಿ 28, 2020
18 °C

ಮಾಜಿ ಸಚಿವ ಜಾಫರ್ ಷರೀಫ್ ಮೇಲಿನ ಉಗ್ರ ಪ್ರೀತಿ: ವೇದಿಕೆಯಲ್ಲಿ ಶಾಸಕ ಜಮೀರ್ ಗದ್ದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅತಿಥಿಗಳನ್ನು ಸ್ವಾಗತಿಸುವಾಗ ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್ ಅವರ ಹೆಸರನ್ನು ಮೊದಲು ಹೇಳಲಿಲ್ಲ ಎಂದು ಕೋಪಗೊಂಡು ಶಾಸಕ ಬಿ.ಜೆಡ್.ಜಮೀರ್ ಅಹಮ್ಮದ್ ಖಾನ್ ಅವರು ವೇದಿಕೆಯಲ್ಲೇ ಗದ್ದಲ ನಡೆಸಿದ ಘಟನೆ ಭಾನುವಾರ `ಹಜ್ ಘರ್~ ಶಂಕುಸ್ಥಾಪನೆ ಸಮಾರಂಭದಲ್ಲಿ ನಡೆಯಿತು.ಹೆಗಡೆ ನಗರ ಸಮೀಪದ ತಿರುಮೇನಹಳ್ಳಿಯಲ್ಲಿ ನಡೆದ ಸಮಾರಂಭದಲ್ಲಿ ಆರಂಭದಲ್ಲೇ ಗದ್ದಲ ನಡೆಯಿತು. ಜಮೀರ್ ಅವರ ವರ್ತನೆಯಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಸ್ವತಃ ಜಾಫರ್ ಷರೀಫ್ ಅವರೇ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು.ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ತಿರುಮೇನಹಳ್ಳಿಯಲ್ಲಿ `ಹಜ್ ಘರ್~ ನಿರ್ಮಿಸಲಾಗುತ್ತಿದೆ. ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಗೃಹ ಸಚಿವ ಆರ್.ಅಶೋಕ, ಜಾಫರ್ ಷರೀಫ್ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು. ಶಾಸಕ ಜಮೀರ್ ಅಹಮ್ಮದ್ ಗೃಹ ಸಚಿವರ ಪಕ್ಕದಲ್ಲೇ ಕುಳಿತಿದ್ದರು.ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಸೈಯದ್ ಜಮೀರ್ ಪಾಷಾ ಅವರು, ಅತಿಥಿಗಳನ್ನು ಸ್ವಾಗತಿಸತೊಡಗಿದರು. ಶಿಷ್ಟಾಚಾರದಂತೆ ಮುಖ್ಯಮಂತ್ರಿ, ಸಚಿವರು, ಸಂಸದರು, ಶಾಸಕರ ಹೆಸರುಗಳನ್ನು ಅವರು ಉಲ್ಲೇಖಿಸಿದರು. ಆದರೆ, ಕೆಲ ಶಾಸಕರನ್ನು ಸ್ವಾಗತಿಸುತ್ತಿದ್ದಂತೆ ಜಾಫರ್ ಷರೀಫ್ ಅವರ ಹೆಸರನ್ನು ತಕ್ಷಣವೇ ಉಲ್ಲೇಖಿಸುವಂತೆ ಜಮೀರ್ ಅಹಮ್ಮದ್ ಅವರು ಪಾಷಾ ಅವರಿಗೆ ಸೂಚಿಸಿದರು.ಜಮೀರ್ ಅಹಮ್ಮದ್ ಅವರ ಕೋರಿಕೆಯನ್ನು ಮಾನ್ಯ ಮಾಡದ ಪಾಷಾ, ಶಾಸಕರನ್ನು ಸ್ವಾಗತಿಸುವುದನ್ನು ಮುಂದುವರಿಸಿದರು. ಸಿಟ್ಟಿಗೆದ್ದ ಜಮೀರ್ ಅಹಮ್ಮದ್ ವೇದಿಕೆಯಲ್ಲಿನ ಟೀಪಾಯಿ ಮೇಲಿದ್ದ ಗಾಜಿನ ಲೋಟವನ್ನು ಒಡೆದು ಹಾಕಿದರು. ಟೀಪಾಯಿಯನ್ನೇ ಎತ್ತಿ ಉರುಳಿಸಿ ಐಎಎಸ್ ಅಧಿಕಾರಿಯ ವಿರುದ್ಧ ಕೋಪ ಪ್ರದರ್ಶಿಸಿದರು. `ನಮ್ಮ ಸಮುದಾಯದ ಹಿರಿಯ ನಾಯಕ ಜಾಫರ್ ಷರೀಫ್ ಅವರಿಗೆ ಗೌರವ ಸಿಗುತ್ತಿಲ್ಲ~ ಎಂದು ವೇದಿಕೆಯಲ್ಲೇ ಕೂಗತೊಡಗಿದರು.ಆಗ, ಜಮೀರ್ ಅಹಮ್ಮದ್ ಬೆಂಬಲಿಗರು, ಜಾಫರ್ ಷರೀಫ್ ಅಭಿಮಾನಿಗಳು ವೇದಿಕೆಯತ್ತ ನುಗ್ಗಲು ಪ್ರಯತ್ನಿಸಿದರು. ಸ್ಥಳದಲ್ಲಿದ್ದ ಡಿಸಿಪಿ ಬಿ.ಆರ್.ರವಿಕಾಂತೇಗೌಡ ಅವರು ಜನರನ್ನು ನಿಯಂತ್ರಿಸಿದರು. ಅಷ್ಟರಲ್ಲೇ ಧ್ವನಿವರ್ಧಕದ ಬಳಿ ಬಂದ ಜಮೀರ್ ಅಹಮ್ಮದ್, ರೋಷದಿಂದ ಮಾತನಾಡತೊಡಗಿದರು. ನಂತರ ಸಚಿವ ಅಶೋಕ ಅವರು ಎಲ್ಲರೂ ಸಮಾಧಾನದಿಂದ ಇರುವಂತೆ ಮನವಿ ಮಾಡಿದರು.ಬಳಿಕ ಮಾತನಾಡಿದ ಜಾಫರ್ ಷರೀಫ್, `ಜಮೀರ್ ಅಹಮ್ಮದ್‌ಗೆ ನನ್ನ ಮೇಲೆ ಪ್ರೀತಿ ಜಾಸ್ತಿ. ಅದಕ್ಕೆ ಹೀಗೆ ವರ್ತಿಸಿದ್ದಾರೆ. ಇಂತಹ ಸಮಾರಂಭಗಳಲ್ಲಿ ಹೀಗೆ ವರ್ತಿಸುವುದು ಸರಿಯಲ್ಲ. ಯಾರೇ ಹೀಗೆ ಮಾಡಿದರೂ ತಪ್ಪು. ಜಮೀರ್ ಅವರ ವರ್ತನೆಯ ಬಗ್ಗೆ ನಾನು ಕ್ಷಮೆ ಕೇಳುತ್ತೇನೆ. ಇದು ನಮ್ಮ ಸಮುದಾಯಕ್ಕೆ ಸಂಭ್ರಮದ ಕ್ಷಣ. ಎಲ್ಲರೂ ಶಾಂತಚಿತ್ತರಾಗಿ ವರ್ತಿಸಿ~ ಎಂದು ಕೋರಿದರು.ಶಿಷ್ಟಾಚಾರ ಪಾಲನೆ: ಇಷ್ಟೆಲ್ಲ ಆದ ಬಳಿಕ ಸ್ವಾಗತಿಸುವುದನ್ನು ಮುಂದುವರಿಸಿದ ಜಮೀರ್ ಪಾಷಾ, `ಜಾಫರ್ ಷರೀಫ್ ಅವರು ಸಮುದಾಯದ ದೊಡ್ಡ ನಾಯಕರು. ಅವರ ಬಗ್ಗೆ ನನಗೆ ಗೌರವವಿದೆ. ಆದರೆ, ಇಲ್ಲಿ ನಾನು ಅಧಿಕಾರಿ. ಶಿಷ್ಟಾಚಾರ ಉಲ್ಲಂಘಿಸುವಂತಿಲ್ಲ. ಹಾಗೆ ಮಾಡಿದರೆ ಸೇವೆಯಿಂದಲೇ ಅಮಾನತು ಆಗಬೇಕಾಗುತ್ತದೆ. ಕೆಲವರು ಪ್ರಚಾರಕ್ಕಾಗಿ ಹೀಗೆ ಮಾಡುತ್ತಾರೆ~ ಎಂದು ಸಮಜಾಯಿಷಿ ನೀಡಿದರು.ಶಂಕುಸ್ಥಾಪನೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿ ಕೂಡ ಜಮೀರ್ ಅಹಮ್ಮದ್ ಅವರ ವರ್ತನೆಯನ್ನು ಖಂಡಿಸಿದರು. `ಈ ಘಟನೆಯಿಂದ ನನ್ನ ಮನಸ್ಸಿಗೆ ನೋವಾಗಿದೆ. ಇಂತಹ ಘಟನೆಗಳು ಎಲ್ಲಿಯೂ ನಡೆಯಬಾರದು. ಶಾಂತಿಯನ್ನು ಸಾರುವ ಧರ್ಮದಿಂದ ಬಂದ ನಾವು ಹೀಗೆ ಮಾಡುವುದು ಸರಿಯೇ~ ಎಂದು ಪ್ರಶ್ನಿಸಿದರು.`ಕೆಲ ದಿನಗಳಲ್ಲಿ ಬಜೆಟ್‌ಪೂರ್ವ ಸಿದ್ಧತೆ ಕುರಿತು ಅಲ್ಪಸಂಖ್ಯಾತ ಸಮುದಾಯದ ಶಾಸಕರು, ಸಂಸದರ ಜೊತೆ ಸಭೆ ನಡೆಸುತ್ತೇನೆ. ಅಲ್ಲಿ ಜಮೀರ್ ಅಹಮ್ಮದ್ ಅವರು ಹೀಗೆ ಕೋಪ ಪ್ರದರ್ಶಿಸಿದರೆ ಹೊರಕ್ಕೆ ಕಳುಹಿಸುತ್ತೇನೆ~ ಎಂದು ಕಟುವಾಗಿಯೇ ಎಚ್ಚರಿಕೆ ನೀಡಿದರು.

 

ಪ್ರತಿಕ್ರಿಯಿಸಿ (+)