ಶುಕ್ರವಾರ, ಜೂನ್ 18, 2021
27 °C

ಮಾಜಿ ಸಚಿವ ವಸಂತ ಸಾಲ್ಯಾನ್ ಬಿಜೆಪಿಗೆ ?

ಪ್ರಜಾವಾಣಿ ವಾರ್ತೆ/ ಹಮೀದ್ ಪಡುಬಿದ್ರಿ Updated:

ಅಕ್ಷರ ಗಾತ್ರ : | |

ಪಡುಬಿದ್ರಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿ ಟಿಕೆಟ್ ಸಿಗದೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಸಚಿವ ವಸಂತ ವಿ.ಸಾಲ್ಯಾನ್ ಇದೀಗ ಬಿಜೆಪಿಗೆ ಸೇರ್ಪಡೆಗೊಳ್ಳುವ ವದಂತಿಗಳು ಕೇಳಿಬರುತ್ತಿವೆ.ಕಾಂಗ್ರೆಸ್‌ನಲ್ಲಿ ಆರಂಭ: ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ಆರಂಭಿಸಿದ ಸಾಲ್ಯಾನ್, 5 ಬಾರಿ ಶಾಸಕರಾಗಿ ಎರಡು ಬಾರಿ ಸಚಿವರಾಗಿ ಆಯ್ಕೆಯಾಗಿದ್ದರು. 1979ರಲ್ಲಿ ರಾಜಕೀಯಕ್ಕೆ ಧುಮುಕಿದರು. ಉಡುಪಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಇದೇ ವೇಳೆ ಕಾಪುವಿನಲ್ಲಿ ಪ್ರಬಲವಾಗಿದ್ದ ಪಿಎಸ್‌ಪಿಯಲ್ಲಿ ಸುಮಾರು 5 ಬಾರಿ ಸೋಲಿಲ್ಲದ ಸರದಾರರಾಗಿದ್ದ ಭಾಸ್ಕರ್ ಶೆಟ್ಟಿ ಶಾಸಕರಾಗಿದ್ದರು.ಇವರನ್ನು 1983ರಲ್ಲಿ ಪ್ರಥಮ ಬಾರಿಗೆ ಭಾಸ್ಕರ್ ಶೆಟ್ಟಿ ಅವರನ್ನು ಮಣಿಸುವ ಮೂಲಕ ಗಮನ ಸೆಳೆದಿದ್ದರು. ಆ ಬಳಿಕ ಅವಿರತ 5 ಬಾರಿ ಶಾಸಕರಾಗಿ ಆಯ್ಕೆಯಾದ ಸಾಲ್ಯಾನ್ ಎರಡು ಬಾರಿ ಸಚಿವರಾಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಆಯ್ಕೆಯಾಗಿದ್ದರು.2004ರಲ್ಲಿ ಅಲ್ಪಮತದ ಅಂತರದಲ್ಲಿ ಮೊದಲ ಬಾರಿಗೆ ಬಿಜೆಪಿಯ ಲಾಲಾಜಿ ಮೆಂಡನ್ ಅವರ ಎದುರು ಸೋಲು ಕಂಡ ಸಾಲ್ಯಾನ್ 2009ರಲ್ಲೂ ಅಲ್ಪಮತದ ಸೋಲು ಕಂಡಿದ್ದರು. 2013ರ ವಿಧಾನ ಸಭಾ ಚುನಾವಣೆಯ ವೇಳೆ ಕಾಂಗ್ರೆಸ್‌ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕಾಪುವಿನಲ್ಲಿ ಸಾಲ್ಯಾನ್ ಬದಲು ವಿನಯಕುಮಾರ್ ಸೊರಕೆ ಅವರನ್ನು ಚುನಾವಣಾ ಕಣಕ್ಕೆ ಇಳಿಸಿದರು. ಬೇಸತ್ತ ಸಾಲ್ಯಾನ್ ಜೆಡಿಎಸ್ ಸೇರ್ಪಡೆಗೊಂಡರು.ಜೆಡಿಎಸ್‌ನಲ್ಲಿ ಕಾಪುವಿನಲ್ಲಿ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿದು ಕಾಂಗ್ರೆಸ್ ವಿರುದ್ಧ ಪ್ರಬಲ ಪೈಪೋಟಿ ನೀಡುವಲ್ಲಿ ಅಸಮರ್ಥರಾದರು. ಆಗೊಮ್ಮೆ ಈಗೊಮ್ಮೆ ಜೆಡಿಎಸ್ ಪಕ್ಷದ ಸಭೆಗೆ ಹಾಜರಾಗುತಿದ್ದ ಸಾಲ್ಯಾನ್ ಹೆಚ್ಚಾಗಿ ಗುರುತಿಸಕೊಳ್ಳುತ್ತಿರಲಿಲ್ಲ. ಜೆಡಿಎಸ್ ಲೋಕಸಭಾ ಅಭ್ಯರ್ಥಿ ಯಾರೆಂದು ಕೂಡಾ ಇದುವರೆಗೂ ಪಕ್ಷದ ಮುಖಂಡರು ಸಾಲ್ಯಾನ್ ಅವರೊಂದಿಗೆ ಚರ್ಚಿಸಲಿಲ್ಲ ಎಂಬ ಮಾತು ಅವರ ಆಪ್ತವಲಯದಿಂದ ಕೇಳಿಬರುತ್ತಿದೆ.ಬಿಜೆಪಿ ಪ್ರಮುಖರು ಸಾಲ್ಯಾನ್ ಮನೆಗೆ: ಕಳೆದ ವಾರ ಸಾಲ್ಯಾನ್ ಮನೆಗೆ ಭೇಟಿ ನೀಡುವ ಮೂಲಕ ಸಾಲ್ಯಾನ್ ಬಿಜೆಪಿ ಸೇರ್ಪಡೆಗೊಳ್ಳುತ್ತಾರೆ ಎಂಬ ಮಾತಿಗೆ ಪುಷ್ಠಿ ನೀಡಿದೆ. ಉಡುಪಿ -ಚಿಕ್ಕಮಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ, ಶಿವಮೊಗ್ಗ ಅಭ್ಯರ್ಥಿ ಯಡಿಯೂರಪ್ಪ ಹಾಗೂ ಇತರ ಜಿಲ್ಲಾ ಮುಖಂಡರು ಸಾಲ್ಯಾನ್ ಅವರ ಮನೆಗೆ ತೆರಳಿ ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಅಲ್ಲದೆ ಅಭ್ಯರ್ಥಿಗಳಿಗೆ ಬೆಂಬಲ ನೀಡುವಂತೆಯೂ ವಿನಂತಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.ಇನ್ನೂ ನಿರ್ಧರಿಸಿಲ್ಲ: ಬಿಜೆಪಿ ಮುಖಂಡರು ಮನೆಗೆ ಬಂದಿದ್ದು ನಿಜ. ಆದರೆ ನಾನು ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಜೆಡಿಎಸ್‌ನಲ್ಲಿ ನಾನು ಯಾವುದೇ ಆಕಾಂಕ್ಷೆಯಿಂದ ತೆರಳಲಿಲ್ಲ. ಲೋಕಸಭಾ ಚುನಾವಣೆಯ ಅಭ್ಯರ್ಥಿ ಆಕಾಂಕ್ಷಿಯೂ ನಾನಾಗಿರಲಿಲ್ಲ. ಒಂದು ದಿನ ಕಾದು ನೋಡಿ ನಾನು ನನ್ನ ತೀರ್ಮಾಣಕೈಗೊಳ್ಳುತ್ತೇನೆ ಎಂದು ಸಾಲ್ಯಾನ್ ‘ಪ್ರಜಾವಾಣಿ’ಗೆ ತಿಳಿಸಿದರು.ಜೆಡಿಎಸ್ ತೊರೆಯುವುದಿಲ್ಲ: ಸಾಲ್ಯಾನ್ ಅವರು ಜಿಲ್ಲೆಯ ಹಿರಿಯ ನಾಯಕರು. ಐದು ಬಾರಿ ಶಾಸಕರಾಗಿ ಎರಡು ಬಾರಿ ಸಚಿವರಾಗಿದ್ದರು. ಅನುಭವಿ ರಾಜಕಾರಣಿ. ಜಾತ್ಯಾತೀತ ಸಿದ್ದಾಂತದಡಿ ರಾಜಕಾರಣ ಮಾಡಿದ ಉತ್ತಮ ರಾಜಕಾರಣಿ. ಅವರು ಕೋಮುವಾದಿ ಪಕ್ಷ ಬಿಜೆಪಿಯೊಂದಿಗೆ ಸೇರ್ಪಡೆಯಾಗುವುದು ಅದು ಕನಸು. ಸಾಲ್ಯಾನ್ ಅವರಿಗೆ ಕಾಂಗ್ರೆಸ್ ದ್ರೋಹ ಮಾಡಿದಾಗ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ರಾತ್ರೋರಾತ್ರಿ ಅವರಿಗೆ ಟಿಕೆಟ್ ನೀಡಿದ್ದಾರೆ. ಅವರಿಗೆ ನಮ್ಮ ಪಕ್ಷ ಗೌರವಯುತವಾಗಿ ನಡೆದುಕೊಂಡಿದೆ. ಸ್ವತಃ ಅವರಿಗೆ ನಾನು ನನ್ನ ಜಿಲ್ಲಾಧ್ಯಕ್ಷ ಸ್ಥಾನ ನೀಡಲು ಬದ್ಧನಿದ್ದೆ. ಅವರಿಗೆ ವಿಧಾನ ಪರಿಷತ್ ಸದಸ್ಯತ್ವ ನೀಡಬೇಕು. ರಾಜ್ಯ ನಾಯಕತ್ವ ನೀಡಬೇಕು ಎಂದು ಜಿಲ್ಲಾ ಘಟಕ ಆಗ್ರಹವಾಗಿತ್ತು. ಅವರು ಜೆಡಿಎಸ್ ತೊರೆಯುವುದಿಲ್ಲ ಎಂಬ ವಿಶ್ವಾಸ ತಮಗಿದೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.