ಸೋಮವಾರ, ಜನವರಿ 20, 2020
26 °C

ಮಾತಿಗೆ ಸಿಕ್ಕ ಚಿತ್ರಗಳು

ಡಿ.ಕೆ.ರಮೇಶ್ Updated:

ಅಕ್ಷರ ಗಾತ್ರ : | |

ನಗರವೆಂದರೆ ಹಾಗೆಯೇ ಬಗೆದಷ್ಟೂ ನಿಗೂಢ. ಸುಮ್ಮನಿದ್ದಷ್ಟೂ ದಕ್ಕುವ ಆಗರ. ಇಲ್ಲಿನ ಬದುಕು ಉರುಳುವ ಗಾಲಿ. ಎಂದೆಂದೂ ನಿಲ್ಲದ ಗಾಲಿ. ಆ ಗಾಲಿಯ ಎದುರು ನಿಂತಾಗ ಅನೇಕ ಚಿತ್ರಗಳು ಸಿಕ್ಕವು; ಮಾತಿಗಿಳಿದವು...

ಸರ್ಕಲ್ಲಿನ ಒಂದು ಮೂಲೆಯಲ್ಲಿ ಪುಟ್ಟ ಕೈದೋಟ. ಎಲ್ಲಿಂದಲೋ ಬಂದ ನೀರಿನ ಗಾಡಿ. ಅದರ ಮೇಲೆ ನಿಂತವನು ಅಲ್ಲಿಂದಲೇ ಗಿಡಗಳಿಗೆ ನೀರು ಹಾಯಿಸುತ್ತಿದ್ದಾನೆ. ಎಲೆಗಳ ಮೇಲೆ ಹನಿ ಬೀಳುತ್ತಿದ್ದಂತೆ ಗಿಡಗಳು ಕುಣಿಯುತ್ತಿವೆ. `ಅಮ್ಮಾ ಸಾಕು ಚಳಿ ಚಳಿ~ ಎಂದು ಮಕ್ಕಳು ಚಡಿ ಹಿಡಿದಂತೆ. ಆ ಗಾಡಿಯ ಮೇಲೆ ಆಸ್ಪತ್ರೆಯೊಂದರ ಹೆಸರಿದೆ.

ರೊಯ್ಯನೆ ಬೆಳಕು. ಹೊಗೆಯುಗುಳುತ್ತ, ಪೋಂ ಪೋಂ ಸದ್ದು ಮಾಡುತ್ತ ತಮ್ಮ ಪಾಡಿಗೆ ತಾವು ಚಕ್ರಗಳು ಉರುಳುತ್ತಿವೆ. ಹಠಾತ್ತನೆ ರಸ್ತೆ ಮಧ್ಯೆ ಆಕೃತಿಯೊಂದು ಪ್ರತ್ಯಕ್ಷ. ಸೊಂಟದ ಕೆಳಗೆ ಬಟ್ಟೆಯಿಲ್ಲ. ಹರಿದ ಅಂಗಿ. ಅವನ ಕೈಯಲ್ಲಿ `ಡೇಂಜರ್~ ಫಲಕ. `ಲೋ ಮೆಂಟಲ್ ದಾರಿ ಬಿಡೋ~ ಹಿಂದಿನಿಂದ ಸದ್ದು ಕೇಳುತ್ತಿದೆ. ಆತ ದಾರಿ ಬಿಡಲೊಲ್ಲ. ಪಕ್ಕದಿಂದ ಸರಿದು ಹೋಗಿ ಎಂದು ಸಾವಧಾನವಾಗಿ ಸಂಜ್ಞೆ ಮಾಡುತ್ತಿದ್ದಾನೆ. ಅವನ ಸಮೀಪವೇ ರಸ್ತೆಯಲ್ಲಿ ಆಳವಾದ ಗುಂಡಿ. ಹಾಗೆ ಕೂಗಿದವರು ಒಂದು ಕ್ಷಣ ಬಿಟ್ಟು `ಥ್ಯಾಂಕ್ಸ್~ ಎನ್ನುತ್ತಿದ್ದಾರೆ. ಆ ಮಾಸಿದ ಕೈಗಳಿಗೆ ಫಲಕ ಕೊಟ್ಟವರಾರು? ಅವನು ನಿಜಕ್ಕೂ ಹುಚ್ಚನೆ? ನಿಜವಾಗಿಯೂ ಹುಚ್ಚರು ಯಾರು?

ಗ್ಯಾರೇಜು ಹುಡುಗ ಚಕಚಕನೆ ಕೆಲಸ ಮಾಡುತ್ತಿದ್ದಾನೆ. ಅಲ್ಲಿ ಕೆಲಸ ಮಾಡುವ ಮತ್ತೊಬ್ಬ ಎರಡು ಸಿನಿಮಾ ಟಿಕೆಟ್ ತಂದಿದ್ದಾನೆ. ಅವನ ಬಾಯಲ್ಲಿ ಸಿನಿಮಾದ್ದೇ ಮಾತು. ಬೈಕೊಂದು ಆಗಲೇ ಸ್ನಾನ ಮುಗಿಸಿ ನಿಂತಿದೆ. ಅಂತಹುವೇ ಹತ್ತು ಸಾಲಲ್ಲಿ ನಿಂತಿವೆ. ಬಕೀಟಿನ ನೊರೆ ಈ ಹುಡುಗನ ಕಣ್ಣಿಗೆ ಅಕಸ್ಮಾತಾಗಿ.

ಮಾರ್ಕೆಟ್ಟಿನಿಂದ ಹೊರಟಿದೆ ಬಸ್ಸು. ಸೀಟಿನ ಮೇಲೆ ಮುದುಕಿಯೊಬ್ಬಳು ಹೂ ಕಟ್ಟುತ್ತಿದ್ದಾಳೆ. ಟಿಕೆಟ್ ಹರಿಯುತ್ತಿರುವ ಕಂಡಕ್ಟರ್. `ಅಜ್ಜೀ ಎಲ್ಲಿಗೆ?~ ಪ್ರಶ್ನೆ. ಸರ್ಜಾಪುರಕ್ಕೆ ಎನ್ನುತ್ತ ಸಂಚಿಗೆ ಕೈ ಹಾಕುತ್ತಾಳೆ. ದುಡ್ಡೇ ಇಲ್ಲ. ಗಾಬರಿ. ಇಟ್ಟಿದ್ದ ನೂರೈವತ್ತು ರೂಪಾಯಿ ಎತ್ತ ಹೋಯಿತು ಎಂಬ ದಿಗಿಲು. ಪಕ್ಕದಲ್ಲೇ ಇದ್ದ ಕಾಲೇಜು ಹುಡುಗನೊಬ್ಬ ಅಜ್ಜಿಗೆ ಟಿಕೆಟ್ ತೆಗೆದುಕೊಡುತ್ತಾನೆ. ಹೂ ಕಟ್ಟಿದ್ದು ಮುಗಿದ ಮೇಲೆ ಆಕೆ ಹುಡುಗನಿಗೆ ಕಟ್ಟಿದ ಹೂವನ್ನೂ, ಸಂಚಿಯಲ್ಲಿದ್ದ ಎಲೆಯನ್ನೂ ಕೊಡುತ್ತಾಳೆ. ಅವನು ನಕ್ಕು ಒಲ್ಲೆ ಎನ್ನುತ್ತಾನೆ. ಅಜ್ಜಿ ಬಿಡದೆ ಅವನ ಬ್ಯಾಗಿಗೆ ಕೈಯಲ್ಲಿರುವುದನ್ನು ತುರುಕುತ್ತಿದ್ದಾಳೆ.

ಬೆಳ್ಳಂಬೆಳಿಗ್ಗೆ. ನಿನ್ನೆಯಿದ್ದ ಗುಂಡಿ ರಸ್ತೆ ಮಟಾಮಾಯ. `ಕಡುಗಪ್ಪು ಚೆಲುವೆ~ ಮೈ ಮರೆತು ಮಲಗಿದ್ದಾಳೆ.  `ಡಾಂಬರು ಬಂದುದು~ ಎಲ್ಲೆಲ್ಲೂ ರಾಚುತ್ತಿದೆ. ರಾತ್ರಿ ಗ್ಯಾಂಗ್‌ಮನ್ ಮರೆತುಹೋದ ಮಫ್ಲರ್ ಡಿವೈಡರಿನ ಮೇಲೆ.  

ಸಂಕ್ರಾಂತಿಯ ದಿನ ಬಣ್ಣದ ಪಟ ಹಿಡಿದು ತನ್ನ ಪ್ಯಾಂಟ್ ಎತ್ತಿ ಓಡುತ್ತಿದ್ದಾನೆ. ಓಡಿದಷ್ಟೂ ಪಟ ಆಕಾಶಕ್ಕೆ ಚಿಮ್ಮುತ್ತಿದೆ. ಜೋರು ಗಾಳಿಯೊಂದಕ್ಕೆ ಕಾಯುತ್ತಿರುವಂತೆ ಅಲ್ಲಿ, ಆ ಕಟ್ಟಡದ ಮೇಲೆ ಆಂಟೆನಾಗೆ ಸಿಕ್ಕ ಪಟವೊಂದು ಅತ್ತಿಂದಿತ್ತ ಇತ್ತಿಂದತ್ತ ಹುಯ್ದಾಡುತ್ತಿದೆ.

ಆಟೊದವನ ಟೇಪ್‌ರೆಕಾರ್ಡರ್ ಇದ್ದಕ್ಕಿದ್ದಂತೆ ಹಾಡುವುದನ್ನು ನಿಲ್ಲಿಸಿದೆ. ಆತ ರಸ್ತೆ ಪಕ್ಕಕ್ಕೆ ಸರಿದು ಅದನ್ನು ಬಡಿದು ಪರೀಕ್ಷಿಸುತ್ತಿದ್ದಾನೆ. ಪೆನ್ನು ಬಳಸಿ ಕ್ಯಾಸೆಟ್ ಹೊರಗೆಳೆಯುವ ಯತ್ನ ಫಲಿಸಲಿಲ್ಲ. ಟೇಪ್‌ರೆಕಾರ್ಡರಿನ ಹಲ್ಲಿಗೆ ಸಿಕ್ಕು ಹಾಡುಗಳೆಲ್ಲಾ ಹರಿದು ಹೋಗಿವೆ.

ಅದು ಬಸ್ಸು ರೈಲುಗಳು ಓಡಾಡುವ ಜಾಗ. ಕಾಲು ಬಳಸಿ ನಡೆದಾಡುವವರಿಗೆಂದೇ ಸೇತುವೆಯೊಂದು ತಲೆ ಎತ್ತಿದೆ. ಅದಕ್ಕೆ ಅಂಟಿಕೊಂಡಂತೆ ಒಂದು ಲೈಟು ಕಂಬ. ಅದರ ಮೇಲೆ ಹಕ್ಕಿಗೂಡು. ಅಮ್ಮ ಹಕ್ಕಿಯ ಬಾಯಲ್ಲಿ ನೂಲಿನ ಎಳೆ. ಎಷ್ಟು ಮರಿಗಳಿವೆ ಗೂಡಿನಲ್ಲಿ?

ಇದೆಲ್ಲವೂ ಬೆಂಗಳೂರು. ಬೆಂಗಳೂರೆಂದರೆ ಅದಷ್ಟೇ ಅಲ್ಲ. ಎಲ್ಲ ಊರುಗಳೂ ಈ ಕನ್ನಡಿಯಲ್ಲಿ ಇಣುಕುತ್ತವೆ. ಒಮ್ಮೆ ಯೋಚಿಸಿ ನಮ್ಮೂರು, ನಿಮ್ಮೂರು ಎಲ್ಲವೂ ಇದರೊಳಗೆ ಇವೆ. ಹಾಗೆಯೇ ಇಂಥ ಒಂದೊಂದು ಊರಿನಲ್ಲೂ ಸಾವಿರಾರು ಚಿತ್ರಗಳು ದಕ್ಕುತ್ತವೆ. ಆ ಊರಿನವು ಈ ಊರಿನವು ಎಲ್ಲ ಊರಿನವು... 

ಪ್ರತಿಕ್ರಿಯಿಸಿ (+)