ಭಾನುವಾರ, ಜೂನ್ 20, 2021
25 °C

ಮಾತಿನ ಚತುರೆ ಆಫ್ರೀನ್‌ಜನ್ನತ್

ಬಾಲಶೇಖರ ಬಂದಿ Updated:

ಅಕ್ಷರ ಗಾತ್ರ : | |

ಮೂಡಲಗಿಯ ಕೆ.ಎಚ್. ಸೋನವಾಲ್ಕರ್ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿನಿ ಆಫ್ರೀನ್‌ಜನ್ನತ್ ತಾಂಬೋಳಿ ವೇದಿಕೆ ಮೇಲೆ ನಿಂತು ಭಾಷಣ ಮಾಡುತ್ತಿದ್ದರೆ, ಸೇರಿದ ಜನ ಸಮೂಹವೆಲ್ಲ ತಲೆದೂಗಬೇಕು.14 ವರ್ಷದ ಈ ಬಾಲೆ ನಿರರ್ಗಳವಾಗಿ ಮಾತಾಡುವ ಶೈಲಿ, ವಿಷಯವನ್ನು ಮಂಡಿಸುವ ಪರಿ ಮತ್ತು ವಿಷಯಕ್ಕೆ ತಕ್ಕಂತೆ ಅವಳ ಹಾವಭಾವವು ಕೇಳುಗರನ್ನು ಮೋಡಿ ಮಾಡುವುದು. ಅಂತೆಯೇ ಗೋಕಾಕದಲ್ಲಿ ಪ್ರತಿ ವರ್ಷವೂ `ಸಾಂಸ್ಕೃತಿಕ ಹಬ್ಬ~ ಎನಿಸಿಕೊಂಡಿರುವ ಸತೀಶ ಶುಗರ್ಸ್‌ ಆವಾರ್ಡ್ಸ್‌ದಲ್ಲಿ ಕಳೆದ ವರ್ಷ ಮತ್ತು ಪ್ರಸಕ್ತ ವರ್ಷದ ಭಾಷಣ ಸ್ಪರ್ಧೆಯಲ್ಲಿ ಮೊದಲ ಸ್ಥಾನವನ್ನು ಗಿಟ್ಟಿಸಿ ತನ್ನ ಪ್ರತಿಭೆಯನ್ನು ಮೆರೆದಿದ್ದಾಳೆ. ಅಷ್ಟೇ ಅಲ್ಲ ಕಾರ್ಯಕ್ರಮದ ರೂವಾರಿ ಶಾಸಕ ಸತೀಶ ಜಾರಕಿಹೊಳಿ ಅವರು ಈ ವರ್ಷದ ಆವಾರ್ಡ್ಸ್ ಕಾರ್ಯಕ್ರಮವನ್ನು ಆಫ್ರೀನ್‌ಜನ್ನತ್ ಕೈಯಿಂದ ಉದ್ಘಾಟಿಸುವ ಮೂಲಕ ಅರಳುವ ಪ್ರತಿಭೆಗೆ ಗೌರವಿಸಿ, ಪ್ರೋತ್ಸಾಹಿಸಿದ್ದಾರೆ.ಕಳೆದ ವರ್ಷ  ಬೆಳಗಾವಿಯಲ್ಲಿ ಜರುಗಿದ ವಿಶ್ವ ಕನ್ನಡ ಸಮ್ಮೇಳನ ಸೇರಿದಂತೆ ವಿವಿಧೆಡೆ ಜರುಗಿರುವ ಹತ್ತು ಹಲವಾರು ಸಮಾವೇಶ, ಭಾಷಣ ಸ್ಪರ್ಧೆಗಳಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿ ಎಲ್ಲರಿಂದ ಭೇಷ ಎನಿಸಿಕೊಂಡಿದ್ದಾಳೆ. ಕನ್ನಡ ಭಾಷೆ, ಸಂಸ್ಕೃತಿ, ಯುವ ಶಕ್ತಿ, ದೇಶದ ಸವಾಲುಗಳು, ಶಿಕ್ಷಣ ಹೀಗೆ ಹಲವಾರು ವಿಷಯಗಳ ಬಗ್ಗೆ ಕರಾರುವಕ್ಕಾಗಿ ಮಾತಾಡುವ ಅದ್ಭುತ ಜ್ಞಾಪಕ ಶಕ್ತಿ ಈ ಬಾಲೆಯದು. ಕೇವಲ ಭಾಷಣ ಅಷ್ಟೇ ಅಲ್ಲ; ಓದಿನಲ್ಲೂ ಮುಂದು.`ಪ್ರತಿಭೆ ಯಾರದೆ ಸ್ವತ್ತು ಅಲ್ಲ~ ಎನ್ನುವ ಮಾತು ಆಫ್ರೀನ್‌ಜನ್ನತ್‌ಳಿಗೆ ಸರಿಹೊಂದುತ್ತದೆ. ಏಕೆಂದರೆ ಆಫ್ರೀನಜನ್ನತ್  ತಂದೆ ರಾಜಾಸಾಬ ತಾಂಬೋಳಿ ಹಮಾಲಿ ಕೆಲಸ ಮಾಡಿ ತನ್ನ ಸಂಸಾರ ಬಂಡಿಯನ್ನು ಸಾಗಿಸುತ್ತಿದ್ದಾರೆ. ಚಿಕ್ಕದಾದ ಬಾಡಿಗೆ ಮನೆಯೊಂದರಲ್ಲಿ ಅವರ ಬದುಕು. ಆದರೆ ಮಗಳ ಸಾಧನೆ, ಕೀರ್ತಿ ಅವರಲ್ಲಿ ಹೆಮ್ಮೆ, ಖುಷಿ ತಂದಿದೆ.  ಅಫ್ರೀನಜನ್ನತಳ ಪ್ರತಿಭೆ ಮತ್ತು ಸಾಧನೆಯ ಬಗ್ಗೆ  ಅವಳಿಗೆ ಮಾರ್ಗದರ್ಶನ ನೀಡಿರುವ ಶಿಕ್ಷಕ ಎ.ಕೆ. ಸುಣಧೋಳಿ ಮತ್ತು ಶಾಲೆಯ ಎಲ್ಲ ಶಿಕ್ಷಕರೆಲ್ಲರೂ ಹೆಮ್ಮೆ ಪಡುತ್ತಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.