ಬುಧವಾರ, ಜುಲೈ 28, 2021
21 °C

ಮಾಧ್ಯಮ ತೀರ್ಪು ದೂರವಿಡಲು ನ್ಯಾಯಮೂರ್ತಿ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ‘ಮಾಧ್ಯಮಗಳು ನೀಡುವ ‘ತೀರ್ಪಿಗೆ’ ತಲೆಕೆಡಿಸಿಕೊಳ್ಳಬೇಡಿ. ಮಾಧ್ಯಮ  ಕೇಂದ್ರೀಕೃತ ಪ್ರಕರಣಗಳ ತೀರ್ಪನ್ನೂ ಸೂಕ್ತ ಸಾಕ್ಷ್ಯಾಧಾರಗಳಿಗೆ ಅನುಗುಣವಾಗಿಯೇ ನೀಡಿ’ ಎಂದು ನ್ಯಾಯಾಧೀಶರಿಗೆ ಹೇಳುವ ಮೂಲಕ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ಅವರು ಮಾಧ್ಯಮದಿಂದ ನ್ಯಾಯದಾನದ ಮೇಲೆ ಆಗುತ್ತಿರುವ ವ್ಯತಿರಿಕ್ತ ಪರಿಣಾಮದ ಕುರಿತು ತೀಕ್ಷ್ಣವಾಗಿ ನುಡಿದರು.‘ಯಾವುದೋ ಅಪರಾಧ ನಡೆದಾಗ ಮಾಧ್ಯಮಗಳು ಒಬ್ಬನನ್ನು ತಪ್ಪಿತಸ್ಥನನ್ನಾಗಿ ಬಿಂಬಿಸಿ ಆ ನಿಟ್ಟಿನಲ್ಲಿಯೇ ವರದಿ ಮಾಡುತ್ತವೆ. ಅಂತಹ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿದಾಗ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ಆ ವ್ಯಕ್ತಿಯನ್ನು ಬಿಡುಗಡೆ ಮಾಡಬೇಕಾಗಿ ಬರಬಹುದು. ಆ ಸಂದರ್ಭದಲ್ಲಿ ನ್ಯಾಯಾಲಯ ಹಾಗೂ ನ್ಯಾಯಾಧೀಶರನ್ನು ತಪ್ಪಿತಸ್ಥರನ್ನಾಗಿ ಬಿಂಬಿಸುವ ಕಾರ್ಯ ನಡೆಯುತ್ತದೆ. ಆದರೆ ಇದಕ್ಕೆ ತಲೆಕೆಡಿಸಿಕೊಳ್ಳಬೇಡಿ. ಕಾನೂನು ಬದ್ಧವಾಗಿಯೇ ತೀರ್ಪು ನೀಡಿ. ಮಾಧ್ಯಮಗಳಿಗೆ ಅವರ ಕೆಲಸ ಮಾಡಲು ಬಿಡಿ, ನೀವು ನಿಮ್ಮ ಕೆಲಸ ಮಾಡಿ’ ಎಂದರು.ನಗರದ ನ್ಯಾಯಾಂಗ ಅಕಾಡೆಮಿಯಲ್ಲಿ ಭಾನುವಾರ ನಡೆದ ‘ನ್ಯಾಯದಾನದ ಗುಣಮಟ್ಟ ಉತ್ತಮ ಪಡಿಸುವಿಕೆ’ ಕುರಿತ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಬಡವನಿಗೆ ನ್ಯಾಯ: ‘ಬಡವ ಕೋರ್ಟ್ ಮೆಟ್ಟಿಲೇರಿದರೆ ಅಂತಹ ಪ್ರಕರಣಗಳನ್ನು ಶೀಘ್ರದಲ್ಲಿ ಇತ್ಯರ್ಥಗೊಳಿಸಿ. ಉಚಿತ ಕಾನೂನು ನೆರವಿನ ಕುರಿತು ಆತನಿಗೆ ತಿಳಿ ಹೇಳಿ. ನ್ಯಾಯದಿಂದ ಅವನಿಗೆ ವಂಚನೆ ಮಾಡಿದರೆ ಅದು ಮಾನವ ಹಕ್ಕುಗಳ ಉಲ್ಲಂಘನೆಯಾದಂತೆ. ಬಡವನಿಗೆ ನ್ಯಾಯ ಸಿಗದೇ ಆತ ಹತಾಶನಾಗುವ ಕಾರಣದಿಂದಲೇ ಭಯೋತ್ಪಾದಕ ಕೃತ್ಯ ಹೆಚ್ಚುತ್ತಿದೆ’ ಎಂದರು.ಒಂದೇ ರೀತಿಯ ಪ್ರಕರಣದಲ್ಲಿ ಒಬ್ಬೊಬ್ಬ ನ್ಯಾಯಾಧೀಶರು ಒಂದೊಂದು ರೀತಿಯ ಆದೇಶ ಹೊರಡಿಸುವ ಕಾರಣ ಜನಸಾಮಾನ್ಯರು ಗೊಂದಲಕ್ಕೆ ಸಿಲುಕುವ ಪರಿಸ್ಥಿತಿ ಉಂಟಾಗಿದೆ.  ತಮ್ಮ  ಪ್ರಕರಣವನ್ನು ಕೋರ್ಟ್‌ಗೆ ತೆಗೆದುಕೊಂಡು ಹೋಗಬೇಕೋ ಬೇಡವೋ ಎಂದು ಅವರಿಗೆ ತಿಳಿಯದಾಗಿದೆ. ಈ ಹಿನ್ನೆಲೆಯಲ್ಲಿ ಒಂದು ಆದೇಶ ಹೊರಡಿಸುವ ಪೂರ್ವದಲ್ಲಿ ಆ ಕುರಿತ ಇನ್ನೊಂದು ಆದೇಶದ ಬಗ್ಗೆ ನ್ಯಾಯಾಧೀಶರು ಕೂಲಂಕಷವಾಗಿ ಅಧ್ಯಯನ ನಡೆಸುವುದು ಅನಿವಾರ್ಯವಾಗಿದೆ. ಎಷ್ಟು ಸುಂದರವಾದ ಶಬ್ದಗಳನ್ನು ಬಳಸಿ ಆದೇಶ ಹೊರಡಿಸುತ್ತೀರಿ ಎನ್ನುವುದು ಮುಖ್ಯವಲ್ಲ, ಬದಲಿಗೆ ನೀವು ನೀಡುವ ತೀರ್ಪು ಎಷ್ಟು ಮಂದಿಗೆ ನ್ಯಾಯ ದೊರಕಿಸಿದೆ ಎನ್ನುವುದು ಮುಖ್ಯ. ನ್ಯಾಯಾಧೀಶರು ಜನರಿಗಾಗಿ ಇರುವುದೇ ಹೊರತು ಜನರು ನ್ಯಾಯಾಧೀಶರಿಗಾಗಿ ಅಲ್ಲ ಎಂಬುದನ್ನು ತಿಳಿದುಕೊಳ್ಳಿ’ ಎಂದು ನ್ಯಾ. ರವೀಂದ್ರನ್ ನ್ಯಾಯಾಧೀಶರಿಗೆ ತಿಳಿಸಿದರು.ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್, ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಕೆ.ಎಸ್.ರಾಧಾಕೃಷ್ಣ, ನಿವೃತ್ತ ನ್ಯಾಯಮೂರ್ತಿ ಎಸ್.ಬಿ.ಸಿನ್ಹಾ, ಹೈಕೋರ್ಟ್ ನ್ಯಾಯಮೂರ್ತಿಗಳಾದ ಕೆ.ಶ್ರೀಧರರಾವ್, ಅರವಿಂದ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.