ಮಂಗಳವಾರ, ಆಗಸ್ಟ್ 4, 2020
22 °C

ಮಾರುಕಟ್ಟೆಗೆ ಬಂತು ‘ಗುಮಟೆ ಪಾಂಗ್‌’

ಪಿ.ಕೆ. ರವಿಕುಮಾರ್‌ Updated:

ಅಕ್ಷರ ಗಾತ್ರ : | |

ಮಾರುಕಟ್ಟೆಗೆ ಬಂತು ‘ಗುಮಟೆ ಪಾಂಗ್‌’

ಕಾರವಾರ: ಗಣೇಶ ಚತುರ್ಥಿ ಸಂದರ್ಭದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗುಮಟೆ ಪಾಂಗ್‌ ವಾದ್ಯಕ್ಕೆ ವಿಶೇಷ ಪ್ರಾಶಸ್ತ್ಯವಿದೆ. ಚತುರ್ಥಿಗೆ ಕೆಲವೇ ದಿನಗಳಿದ್ದು, ಈಗಾಗಲೇ ವಾದ್ಯಗಳು ಹೆಚ್ಚಿನ ಸಂಖ್ಯೆ­ಯಲ್ಲಿ ನಗರದ ಮಾರುಕಟ್ಟೆಯನ್ನು ಪ್ರವೇಶಿಸಿವೆ.ಗುಮಟೆ ಪಾಂಗ್‌ ಹಾಲಕ್ಕಿ ಒಕ್ಕಲಿಗರ ನೆಚ್ಚಿನ ಸಾಂಸ್ಕೃತಿಕ ವಾದ್ಯ. ಅವರು ಜನಪದ ಹಾಡುಗಳನ್ನು ಹೇಳುವಾಗ ಈ ವಾದ್ಯವನ್ನು ಬಳಸು­ತ್ತಾರೆ. ಚತುರ್ಥಿಯ ಸಮಯದಲ್ಲೂ ಗಣೇಶನ ಆರಾಧನೆಗೆ ಈ ವಾದ್ಯವನ್ನು ಎಲ್ಲೆಡೆ ಬಳಸುವುದರಿಂದ ಇದಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ.ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡುವ ಸಂಘ ಸಂಸ್ಥೆಗಳು ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತವೆ. ಅದರಲ್ಲೂ ಪ್ರಮುಖ­ವಾಗಿ ಗುಮಟೆ ಪಾಂಗ್‌ ವಾದ್ಯ ಇದ್ದೇ ಇರುತ್ತದೆ. ಐದಾರು ಮಂದಿ ಕಲಾವಿದರ ತಂಡ ಈ ವಾದ್ಯವನ್ನು ಬಾರಿಸುತ್ತಾ ಗಣಪನನ್ನು ಸ್ಮರಿಸುವ ಹಾಡುಗಳನ್ನು ಹೇಳುತ್ತಾರೆ. ಕರಾವಳಿಯ ಗ್ರಾಮೀಣ ಭಾಗಗಳಲ್ಲಿ ಈ ವಾದ್ಯ ಹೆಚ್ಚಾಗಿ ಕಂಡುಬರುತ್ತದೆ.ವಾದ್ಯ ತಯಾರಿಕೆ: ವಾದ್ಯದ ತಯಾರಿಕೆಗೆ ಕುಂಬಾರರು ಮಣ್ಣಿನಿಂದ ವಿಶೇಷ ಮಡಿಕೆಗಳನ್ನು ತಯಾರಿಸು­ತ್ತಾರೆ. ಈ ಮಡಿಕೆಗೆ ಎರಡೂ ಕಡೆಗಳಲ್ಲಿ ಬಾಯಿ ಇರುತ್ತವೆ. ಒಂದು ಸ್ವಲ್ಪ ದೊಡ್ಡದಿದ್ದರೆ, ಇನ್ನೊಂದು ಸಣ್ಣ ಇರುತ್ತದೆ. ಹದ ಮಾಡಿದ ಉಡದ ಚರ್ಮವನ್ನು ಎರಡೂ ಕಡೆಗಳಲ್ಲೂ ಅಳವಡಿಸಿದರೆ ವಾದ್ಯ ಸಿದ್ಧ. ಇದನ್ನು ಬಾರಿಸಿದರೆ ಎರಡೂ ಕಡೆಗಳಿಂದ ವಿಶೇಷ ನಾದ ಹೊರಹೊಮ್ಮುತ್ತದೆ. ಈ ವಾದ್ಯಗಳು ಚತುರ್ಥಿ ಇನ್ನೇನು 15 ದಿನಗಳಿವೆ ಎನ್ನುವಾಗಲೇ ಮಾರುಕಟ್ಟೆಗೆ ದಾಂಗುಡಿ ಇಡುತ್ತವೆ.ದುಬಾರಿಯಾದ ವಾದ್ಯ: ಮಣ್ಣಿನ ಗುಮಟೆ ಪಾಂಗ್‌ ವಾದ್ಯ ಒಂದಕ್ಕೆ  ₹ 400 ರಿಂದ ₹ 850 ವರೆವಿಗೂ ದರವಿದೆ. ಆಕಸ್ಮಿಕವಾಗಿ ಕೈ ಜಾರಿದರೂ ಈ ವಾದ್ಯ ನುಜ್ಜುನೂರಾಗುತ್ತದೆ. ಹಾಗಾಗಿ ಇದನ್ನು ಎಚ್ಚರ ದಿಂದ ಕೊಂಡೊಯ್ಯ­ಬೇಕು. ಇದಕ್ಕೆ ಬಳಸುವ ಉಡದ ಚರ್ಮ ಸಿಗುತ್ತಿಲ್ಲವಾದ್ದರಿಂದ ವಾದ್ಯ ತಯಾರಿಕೆ ಕಡಿಮೆಯಾಗಿದೆ. ಚರ್ಮದ ಅಭಾವದಿಂದ ಮರದ ವಾದ್ಯಗಳು ಸಹ ಮಾರುಕಟ್ಟೆಗೆ ಬಂದಿವೆ.

ಅದರ ಬೆಲೆ ₹ 2 ಸಾವಿರದಿಂದ ₹ 2,500 ವರೆಗೆ ಇದೆ. ಇನ್ನೂ ಫೈಬರ್‌ ಹಾಳೆಯಿಂದ ಕಟ್ಟಿದ ವಾದ್ಯಗಳು ಮಾರುಕಟ್ಟೆಯಲ್ಲಿದ್ದು, ಇದರ ಬೆಲೆ ₹ 400 ಇದೆ.‘ವಾದ್ಯಕ್ಕೆ ಅಗತ್ಯವಾದ ಚರ್ಮವನ್ನು ಜೊಯಿಡಾ ತಾಲ್ಲೂಕಿನಿಂದ ತರಲಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಚರ್ಮ ಸಿಗದ ಕಾರಣ ಫೈಬರ್‌ ಹಾಳೆಯನ್ನು ಬಳಸಲಾಗುತ್ತಿದೆ. ಅಲ್ಲದೇ ಮಡಿಕೆಗಳು ಕೈ ಜಾರಿ ಬಿದ್ದು ಹಾಳಾಗುವ ಸಾಧ್ಯತೆ ಇರವುದರಿಂದ ಈ ವಾದ್ಯವನ್ನು ಹೆಚ್ಚಾಗಿ ತಯಾರಿಸಲಾಗುತ್ತಿಲ್ಲ. ವಾದ್ಯಗಳು ಸ್ವಲ್ಪ ದುಬಾರಿ ಎನಿಸಿದರೂ ಗ್ರಾಹಕರು ಖರೀದಿಸಲು ಮುಂದಾಗುತ್ತಿದ್ದಾರೆ’ ಎನ್ನುತ್ತಾರೆ ವ್ಯಾಪಾರಿ ಸಂದೇಶ್‌ ನಾಯ್ಕ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.