ಮಂಗಳವಾರ, ಮಾರ್ಚ್ 28, 2023
33 °C

ಮಾರ್ಗ ಇನ್ನಿಷ್ಟು ಶಂಕೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆ. ಆರ್. ಬಸವರಾಜು ಅವರ ‘ಸಂಶೋಧನೆಯ ಲೇಖನಗಳಲ್ಲ, ತೀರ್ಪಿನ ಲೇಖನಗಳು’ (ಸಂಗತ ಡಿ. 15) ಬಗ್ಗೆ ಪೂರವಾಗಿ ನನ್ನ ಇನ್ನಿಷ್ಟು ಪ್ರತಿಕ್ರಿಯೆ.ಖ್ಯಾತ ಸಂಶೋಧಕರಾದ ಡಾ. ಎಂ. ಎಂ. ಕಲಬುರ್ಗಿಯವರ ನಾಲ್ಕು ದಶಕಗಳ ಸಂಶೋಧನೆಯ ಮಹಾತ್ವಾಂಕ್ಷಿ ‘ಮಾರ್ಗ’ ಆರು ಸಂಪುಟಗಳಲ್ಲಿಯ ಸಂಶೋಧನೆ ಲೇಖನಗಳ ನಿಖರತೆಯನ್ನು ಕೆ. ಆರ್. ಬಸವರಾಜು ತೆರದಿಡುವ ರೀತಿ ಅವರ ಸಂಶೋಧನೆಯ ಬಗ್ಗೆ ಸಂದೇಹ ಪಡುವಂತಿದೆ. ಡಾ. ಕಲಬುರ್ಗಿಯವರು ತಮ್ಮ ಸಂಶೋಧನೆಯಲ್ಲಿ ತೋರಿಸುವ ಅತ್ಯುತ್ಸಾಹ, ಅದಮ್ಯ ಆತ್ಮವಿಶ್ವಾಸ ಮತ್ತು ಅತಿಶಯ ಸಂಶಯಗಳು ಇಂತಹ ಸಂದೇಹಗಳಿಗೆ ಕಾರಣವಾಗಿರಬೇಕು. ಅವರ ಅದೆಷ್ಟೋ ಶೋಧಗಳು ಹಲವು ಬಾರಿ ಗೊಂದಲಕ್ಕೆ ಇಂಬುಕೊಟ್ಟ ನಿದರ್ಶನಗಳಿವೆ. ಅಂತಹ ಒಂದು ನಿದರ್ಶನ ಇಲ್ಲಿದೆ. ಇತ್ತೀಚಿನ ಒಂದು ಸಮಾರಂಭದಲ್ಲಿ ಡಾ. ಕಲಬುರ್ಗಿಯವರು ಹರಿಹರ ಕವಿಯನ್ನು ಕುರಿತು ಆತನ ಹೆಸರು ಹರಿಹರ ಅಲ್ಲ, ‘ಅರಿಯಾಲ’ ಎಂದು ಹೇಳಿ ಅಚ್ಚರಿಗೊಳಿಸಿದ್ದಾರೆ.ಇಲ್ಲಿಯವರೆಗೂ ಹರಿಹರ ಕವಿಯನ್ನು ಸ್ತುತಿಸಿದ ಕನ್ನಡ ಕವಿಗಳಾರೂ ತಪ್ಪಿಯೂ ‘ಅರಿಯಾಲ’ ಎಂದು ಹೆಸರಿಸಿಲ್ಲವೆಂಬುದು ಕನ್ನಡ ಸಾರಸ್ವತಲೋಕಕ್ಕೆ ತಿಳಿದ ಸಂಗತಿ. ಹದಿನೇಳನೆಯ ಶತಮಾನದ ನಂಜುಂಡ ಕವಿ ರಚಿಸಿದ ‘ಕುಮಾರ ರಾಮನ ಸಾಂಗತ್ಯ’ ಕಾವ್ಯದಲ್ಲಿ ಬರುವ ಕುಮಾರ ರಾಮನ ತಾಯಿ ‘ಅರಿಯಾಲ ದೇವಿ’ (ಹರಿಹರ ದೇವಿ) ಹೆಸರು ಅವರ ಶೋಧಕ್ಕೆ ಸ್ಫೂರ್ತಿ ನೀಡಿದೆ. ಅದೇ ಕಾಲದ ಮತ್ತೊಬ್ಬ ಕವಿ ಪಾಂಚಾಳಗಂಗ ಬರೆದ ‘ಕುಮಾರ ರಾಮ ಸಾಂಗತ್ಯ’ ಕಾವ್ಯದಲ್ಲಿ ಕುಮಾರ ರಾಮನ ತಾಯಿಯ ಹೆಸರು ‘ಹರಿಹರ ದೇವಿ’ ಎಂದಿದೆ.‘ಹರಿಹರ’ ಸಂಸ್ಕೃತ ಶಬ್ದ ಕನ್ನಡದಲ್ಲಿ ‘ಅರಿಯಾಲ’ ಎಂದು ತದ್ಬವವಾಗಿ ಜನಪದದಲ್ಲಿ ರೂಢಿಯಲ್ಲಿದೆ. ಕೊಪ್ಪಳ ಜಿಲ್ಲೆಯಲ್ಲಿ ‘ಹರ್ಲಾಪುರ’ (ಹರಲಾಪುರ) ಹೆಸರಿನ ಊರೊಂದಿದೆ. ಶಾಸನದಲ್ಲಿ ಅದನ್ನು ‘ಹರಿಹರಪುರ’ ಎಂದು ಉಲ್ಲೇಖಿಸಿದೆ. ಇಲ್ಲಿ ಹರಿಹರ ಪದ ತದ್ಭಬವಾಗಿ ‘ಅರಿಯಾಲ’ ಎಂದಾಗುತ್ತದೆಯೇ ಹೊರತು ’ಅರಿಯಾಲ’ ಪದ ‘ಹರಿಹರ’ ಎಂದಾಗುವುದಿಲ್ಲ ಎಂಬುದು ಸಾಮಾನ್ಯ ಭಾಷಾಜ್ಞಾನ. ಆದಾಗ್ಯೂ ಡಾ. ಕಲಬುರ್ಗಿಯವರ ಸಂಶೋಧನೆಗಳು ತೀರ್ಪುಗಳಾಗಿ ಪರಿಣಮಿಸುತ್ತಿರುವುದು ಈಗ ವಿದ್ವಾಂಸರಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.