ಗುರುವಾರ , ಮೇ 13, 2021
40 °C

ಮಾಲಿನ್ಯ ತಡೆಗೆ ಕಾನೂನು: ಉದಾಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಶೀಘ್ರವೇ ಕಾನೂನು ರಚಿಸುವ ಕುರಿತು ಚಿಂತನೆ ನಡೆಸಲಾಗುತ್ತಿದ್ದು, ಸರ್ಕಾರ ಕೆಲವೇ ದಿನಗಳಲ್ಲಿ ಕ್ರಮ ಕೈಗೊಳ್ಳಲಿದೆ. ಪರಿಸರ ರಕ್ಷಣೆಗಾಗಿ ಕಠಿಣ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ~ ಎಂದು ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ತಿಳಿಸಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಶುಕ್ರವಾರ ನಡೆದ `ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿ~ ಕುರಿತ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, `ಈಗಾಗಲೇ ಅಮೂಲ್ಯ ನೈಸರ್ಗಿಕ ಸಂಪತ್ತು ನಶಿಸಿದ್ದು, ಪ್ರಾಣಿ, ಪಕ್ಷಿ ಮತ್ತು ಜಲಚರಗಳಿಗೆ ತೊಂದರೆಯಾಗಿದೆ. ಕಾನೂನು ರಚಿಸಿದ್ದಲ್ಲಿ ಪರಿಸರ ಮಾಲಿನ್ಯವನ್ನು ನಿಯಂತ್ರಿಸಬಹುದು~ ಎಂದರು.`ದುರಾಸೆ ಮತ್ತು ಅಕ್ರಮ ಚಟುವಟಿಕೆಗಳಿಂದ ಪರಿಸರಕ್ಕೆ ಹಾನಿ ಮಾಡಿದಷ್ಟು, ಮುಂದಿನ ದಿನಗಳಲ್ಲಿ ಗಂಭೀರ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನೈಸರ್ಗಿಕ ಸಂಪನ್ಮೂಲಗಳು ನಶಿಸಿ ಹೋಗಿ ಭಾರಿ ಸಮಸ್ಯೆ-ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ~ ಎಂದು ಅವರು ತಿಳಿಸಿದರು.`ಯೋಜನೆರಹಿತ ಅಭಿವೃದ್ಧಿ, ಅರಣ್ಯ ನಾಶ ಮುಂತಾದ ಕಾರಣಗಳಿಂದ ಪರಿಸರ ಅಸಮತೋಲನ ಉಂಟಾ ಗುತ್ತಿದೆ. ಮರಳು ಗಣಿಗಾರಿಕೆ ವ್ಯಾಪಕ ವಾಗಿ ನಡೆಯುತ್ತಿದ್ದು, ಕೆರೆಗಳು ಬತ್ತು ತ್ತಿವೆ. ಅಂತರ್ಜಲ ಕುಸಿಯುತ್ತಿದ್ದು, ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಈ ಎಲ್ಲ ಕಾರಣಗಳಿಂದ ಪರಿಸರವು ಇನ್ನಷ್ಟು ಹದಗೆಡಲಿದೆ~ ಎಂದು ಅವರು ತಿಳಿಸಿದರು.`ವಿಶ್ವದ ಸುತ್ತಮುತ್ತಲ ಶೇ 70ರಷ್ಟು ನೀರು ಆವರಿಸಿದ್ದು, 0.07ರಷ್ಟು ನೀರು ಮಾತ್ರ ಕುಡಿಯಲು ಯೋಗ್ಯವಿದೆ. ಕಡಿಮೆ ಪ್ರಮಾಣದಲ್ಲಿ ರುವ ಶುದ್ಧ ನೀರನ್ನು ಉಳಿಸಿ ಕೊಳ್ಳ ದಿದ್ದರೆ, ಶುದ್ಧ ನೀರು ಸಿಗುವ ಸಾಧ್ಯತೆ  ಕಡಿಮೆಯಾಗುತ್ತಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಪರಿಸರದ ಬಗ್ಗೆ ಜಾಗೃತಿ ಮೂಡಿಸಿ ಕೊಳ್ಳಬೇಕು~ ಎಂದು ತಿಳಿಸಿದರು.`ಅಂತರ್ಜಲದ ಪ್ರಮಾಣ ಕುಸಿಯುತ್ತಿದ್ದು, ಒಂದರಿಂದ ಎರಡು ಸಾವಿರ ಅಡಿಯಷ್ಟು ಕೊಳವೆಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಒಂದು ವೇಳೆ ನೀರು ಸಿಕ್ಕರೂ ವಿಷಕಾರಿ ಫ್ಲೋರೈಡ್ ಅಂಶಗಳಿಂದ ಕೂಡಿರು ತ್ತದೆ. ಆದ ನೀರನ್ನು ಸೇವಿಸಿ ಮಕ್ಕಳು ಸೇರಿದಂತೆ ಹಿರಿಯರು ಅನಾರೋಗ್ಯಕ್ಕೀಡಾಗಿದ್ದಾರೆ~ ಎಂದು ಅವರು ತಿಳಿಸಿದರು.ಶಾಸಕ ಕೆ.ಪಿ.ಬಚ್ಚೇಗೌಡ ಮಾತನಾಡಿ, `ಪರಿಸರ ರಕ್ಷಣೆಗೆ ಸಂಬಂಧಿಸಿದಂತೆ ಜನರು ಬೇಗನೇ ಎಚ್ಚೆತ್ತುಕೊಳ್ಳದಿದ್ದರೆ, ಪರಿಸ್ಥಿತಿಯು ಕೈಮೀರಿ ಹೋಗುತ್ತದೆ. ವಿದ್ಯಾರ್ಥಿಗಳು, ಯುವಕರು ಮತ್ತು ಹಿರಿಯರು ಎಲ್ಲರೂ ಜೊತೆಗೂಡಿ ಕೆಲಸ ಮಾಡಿದ್ದಲ್ಲಿ, ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ತಡೆಗಟ್ಟಬಹುದು~ ಎಂದರು.ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ. ಟಿ.ವಿ.ರಾಮಚಂದ್ರ ಮಾತನಾಡಿ, `ಹತ್ತು ವರ್ಷಗಳ ಹಿಂದೆ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದಾಗ, ಪ್ರದೇಶವು ಕೆಲವೇ ವರ್ಷಗಳಲ್ಲಿ ರಾಜಸ್ತಾನದ ಮರುಭೂಮಿ ಸ್ವರೂಪ ಪಡೆಯಲಿದೆ. ನೀರು ಸಿಗಲಾರದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಲಾಗುತಿತ್ತು. ಕಾಡು ಪ್ರದೇಶ ನಶಿಸುತ್ತಿರುವುದು, ಬೆಟ್ಟಗುಡ್ಡಗಳ ಬರಡಾಗುತ್ತಿರುವುದು ಕಂಡರೆ, ಈ ಪ್ರದೇಶಕ್ಕೆ ಖಂಡಿತವಾಗಿಯು ಗಂಭೀರ ಸಮಸ್ಯೆ ತಲೆದೋರಲಿದೆ~ ಎಂದರು.ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಂಪನ್ಮೂಲ ವ್ಯಕ್ತಿ ರಮೇಶ್‌ಕುಮಾರ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ. ಬಿ.ವಿ.ಕೃಷ್ಣಪ್ಪ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.