ಗುರುವಾರ , ಜೂನ್ 17, 2021
23 °C
ಹೈಕೋರ್ಟ್‌

ಮಾಲಿನ್ಯ ನಿಯಂತ್ರಣ ಮಂಡಳಿಗೆ ಹೈಕೋರ್ಟ್‌ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಶಬ್ದ ಮಾಲಿನ್ಯಕ್ಕೆ ಸಂಬಂಧಿ­ಸಿದಂತೆ ಐದು ವರ್ಷಗಳಲ್ಲಿ ಎಷ್ಟು ಪ್ರಕರಣ ದಾಖಲಿ­ಸಿಕೊಂಡಿದೆ? ಮಂಡಳಿಯು ಅಧಿಕಾರಿಗಳಿಗೆ ಏಕೆ ಸಂಬಳ ನೀಡುತ್ತಿದೆ? ಮಂಡಳಿಯನ್ನು ಮುಚ್ಚಿಬಿಡಿ. ಸಾರ್ವಜನಿಕರ ದುಡ್ಡು ಉಳಿಯುತ್ತದೆ.’ಮಲ್ಲೇಶ್ವರ ನಿವಾಸಿಗಳ ಅಭಿವೃದ್ಧಿ ಸಂಘ ಸಲ್ಲಿಸಿ­ರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆ­ಸುತ್ತಿರುವ ಮುಖ್ಯ  ನ್ಯಾಯಮೂರ್ತಿ ಡಿ.ಎಚ್‌. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ಪೀಠ ಕೆಎಸ್‌ಪಿಸಿಬಿಯನ್ನು ಶುಕ್ರವಾರ ಮೌಖಿಕವಾಗಿ ತರಾಟೆಗೆ ತೆಗೆದುಕೊಂಡ ಪರಿ ಇದು.ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ಕಾನೂನು­ಗಳನ್ನು ಅನುಷ್ಠಾನಕ್ಕೆ ತಾರದಿರುವುದು, ಕಾನೂನನ್ನು ಅಣಕಿಸುವುದಕ್ಕೆ ಸಮ ಎಂದು ವಿಭಾಗೀಯ ಪೀಠ ಮೌಖಿಕವಾಗಿ ಅಸಮಾಧಾನ ವ್ಯಕ್ತಪಡಿಸಿತು.ಉಭಯ ವೇದಾಂತ ಪ್ರವರ್ತನಾ ಸಂಘಕ್ಕೆ ಮೈಸೂರಿನ ಮಹಾರಾಜರು ನಗರದ ಮಲ್ಲೇಶ್ವರದಲ್ಲಿ 1947ರಲ್ಲಿ ಉಚಿತವಾಗಿ ಜಾಗ ನೀಡಿದ್ದರು. ಆದರೆ ಸಂಘ ನಿಯಮಗಳನ್ನು ಉಲ್ಲಂಘಿಸಿದೆ. ತನ್ನ ಕಟ್ಟಡ­ದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಿದೆ. ಇದ­ರಿಂದ ಆ ಭಾಗದಲ್ಲಿ ವಾಹನ ನಿಲುಗಡೆ ಸಮಸ್ಯೆ, ಶಬ್ದ ಮಾಲಿನ್ಯ ಉಂಟಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.‘ಸಮರ್ಥನೆ ಬೇಡ’: ಶಬ್ದ ಮಾಲಿನ್ಯ ನಿಯಂತ್ರಣ ವಿಚಾರ­ದಲ್ಲಿ ಮಂಡಳಿಯ ನಿಷ್ಕ್ರಿಯತೆಯನ್ನು ಸಮ­ರ್ಥಿಸಿ­ಕೊಳ್ಳುವುದು ಬೇಡ. ಅದರಿಂದ ಯಾವುದೇ ಪ್ರಯೋಜನ ಇಲ್ಲ. ಮಾಲಿನ್ಯ ನಿಯಂತ್ರಣ ವಿಚಾರ­ದಲ್ಲಿ ತಳಮಟ್ಟದಲ್ಲಿ ಕೆಲಸ ಆಗಬೇಕು. ಕೇವಲ ಸಭೆ ನಡೆಸು­ವುದು, ಚರ್ಚಿಸುವುದರಿಂದ ಸಮಸ್ಯೆ ಪರಿಹಾರ ಆಗುವುದಿಲ್ಲ ಎಂದು ಪೀಠ ಮಂಡಳಿಗೆ ಕಿವಿಮಾತು ಹೇಳಿತು.ರಸ್ತೆಯಲ್ಲಿ ಅನವಶ್ಯಕವಾಗಿ ಹಾರ್ನ್‌ ಮಾಡು­ವವರು, ಶಬ್ದ ಮಾಲಿನ್ಯ ನಿಯಂತ್ರಿಸಬೇಕಿರುವ ಅಧಿಕಾರಿಗಳು ಮತ್ತು ಅದರಿಂದ ತೊಂದರೆ ಅನು­ಭವಿಸುತ್ತಿರುವವರು ಸಮಸ್ಯೆಯ ಕುರಿತು ಚಿಂತಿತ­ರಾಗಿರುವಂತೆ ಕಾಣುತ್ತಿಲ್ಲ. ಸರ್ಕಾರ ಮತ್ತು ಮಂಡಳಿಯ ನಡುವೆ ಸಹಕಾರ ಇದ್ದಂತಿಲ್ಲ. ಎಲ್ಲ ಕಡೆ ಶಬ್ದ ಮಾಲಿನ್ಯ ಪ್ರಮಾಣ ಹೆಚ್ಚಿದೆ. ಆದರೆ ಯಾರ ವಿರು­ದ್ಧವೂ ಪ್ರಕರಣ ದಾಖಲಿಸಿಲ್ಲ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.ಶಬ್ದ ಮಾಲಿನ್ಯದಿಂದ ಚಿಕ್ಕ ಮಕ್ಕಳು, ರೋಗಿಗಳು, ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಬೆಂಗ­ಳೂರಿನಲ್ಲೇ ಹೀಗಾದರೆ, ಇತರ ನಗರಗಳಲ್ಲಿ ಪರಿಸ್ಥಿತಿ ಹೇಗಾಗಿ­ರಬೇಕು ಎಂದು ಕಳವಳ ವ್ಯಕ್ತಪಡಿಸಿತು. ಸರ್ಕಾರದ ಪರ ಹೇಳಿಕೆ ಸಲ್ಲಿಸಿದ ಅಡ್ವೊಕೇಟ್‌ ಜನರಲ್‌ ಪ್ರೊ. ರವಿವರ್ಮ ಕುಮಾರ್‌, ‘ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಜೊತೆ ಮಾತುಕತೆ ನಡೆಸಲಾಗಿದೆ. ಚುನಾವಣೆ ಮುಗಿದ ತಕ್ಷಣ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತದೆ’ ಎಂದು ಪೀಠಕ್ಕೆ ಭರವಸೆ ನೀಡಿದರು.ಉಭಯ ವೇದಾಂತ ಸಂಘ ಕೆಲವು ನಿಯಮಗಳನ್ನು ಉಲ್ಲಂಘಿಸಿದೆ. ಸಂಘದ ಕಟ್ಟಡಕ್ಕೆ ನೀಡಿರುವ ವಿದ್ಯುತ್‌ ಮತ್ತು ನೀರಿನ ಸಂಪರ್ಕ ಕಡಿತಗೊಳಿಸುವಂತೆ ಸೂಚಿಸಲಾಗಿದೆ ಎಂದು ಕೆಎಸ್‌ಪಿಸಿಬಿ ವಿವರಣೆ ನೀಡಿತು. ವಿಚಾರಣೆಯನ್ನು ಮಾರ್ಚ್‌ 28ಕ್ಕೆ ಮುಂದೂಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.