ಮಂಗಳವಾರ, ಮೇ 18, 2021
22 °C

ಮಾವಿಗೆ ಅಂಟು ನೊಣದ ಹಾವಳಿ

ಪ್ರಜಾವಾಣಿ ವಾರ್ತೆ/ ವಿಶೇಷ ವರದಿ / - ಆರ್.ಚೌಡರೆಡ್ಡಿ Updated:

ಅಕ್ಷರ ಗಾತ್ರ : | |

ಮಾವಿಗೆ ಅಂಟು ನೊಣದ ಹಾವಳಿ

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಬೆಳೆದಿರುವ ಮಾವಿನ ಕಾಯಿಗೆ ಅಂಟು ನೊಣದ ಹಾವಳಿ ಹೆಚ್ಚಿದ್ದು, ಕಾಯಿ ನೊಣಗಳು ಸ್ರವಿಸುವ ಅಂಟಿನಿಂದ ಕಳೆಗುಂದುತ್ತಿದೆ. ಇದು ಈಗಾಗಲೆ ಬೆಲೆ ಕುಸಿತದಿಂದ ಬೇಸತ್ತಿರುವ ಬೆಳೆಗಾರರಿಗೆ ದೊಡ್ಡ ಹೊಡೆತವಾಗಿ ಪರಿಣಮಿಸಿದೆ.ಚಿಕ್ಕ ಗಾತ್ರದ ಮಿಡತೆ ಆಕಾರದ ಕೀಟಗಳು ಎಲೆಗಳ ಮೇಲೆ ನೆಲೆಸಿ, ಕಾಯಿಯ ಮೇಲೆ ಅಂಟು ಸುರಿಸುತ್ತಿವೆ. ಇದು ತುಂಬಾ ದಟ್ಟವಾಗಿದ್ದು, ಕಾಯಿ ಕೀಳಲೂ ಅಸಹ್ಯಪಡುವಂತಾಗಿದೆ.ಕಾಯಿ ಕಿತ್ತು ಕೆಳಗೆ ಹಾಕಿದರೆ ಮಣ್ಣು, ಕಸಕಡ್ಡಿ ಕಾಯಿಗೆ ಅಂಟಿಕೊಂಡು ಕಸದಂತೆ ಕಾಣುತ್ತದೆ. ಇಂಥ ಕಾಯಿಯನ್ನು ಮಾರುಕಟ್ಟೆಗೆ ಕೊಂಡೊಯ್ದರೆ, ವ್ಯಾಪಾರಿಗಳು ತೀರಾ ಕಡಿಮೆ ಬೆಲೆಗೆ ಕೇಳುತ್ತಾರೆ.ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾವಿನ ಕಾಯಿ ಬೆಲೆಯಲ್ಲಿ ತೀರಾ ಇಳಿತ ಉಂಟಾಗಿದೆ.ಸಾಲದ್ದಕ್ಕೆ ಅಂಟು ನೊಣದ ಹಾವಳಿ ಬೇರೆ. ಇದರಿಂದ ಮಾವು ಬೆಳೆಗಾರರ ಸ್ಥಿತಿ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ. ಈ ಹಿಂದೆ ಈ ಸಮಸ್ಯೆ ಹೂವಿನ ಹಂತದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿತ್ತು. ಆದರೆ ಕಳೆದ ವರ್ಷದಿಂದ ಈಚೆಗೆ ಮಾವು ಕಟಾವು ಕಾಲಕ್ಕೆ ಸರಿಯಾಗಿ ಈ ಅಂಟು ಕೀಟಗಳ ಬಾಧೆ ಹೆಚ್ಚಿದೆ.ಈಗ ಮಾವು ಬೆಳೆಗಾರರು ಮಾವಿನ ಕಾಯಿ ಇಳಿಸುವುದನ್ನು ಬಿಟ್ಟು ಅಂಟು ನೊಣಗಳ ನಿಯಂತ್ರಣಕ್ಕೆ ದುಬಾರಿ ಬೆಲೆಯ ಔಷಧಿ ಸಿಂಪಡಣೆ ಮಾಡುವ ಕಾಯಕದಲ್ಲಿ ತೊಡಗಿದ್ದಾರೆ. ಮೋಡ ಮುಸುಕಿದ ವಾತಾವರಣ ಹಾಗೂ ಆಗೊಮ್ಮೆ ಈಗೊಮ್ಮೆ ಹನಿಯುವ ತುಂತುರು ಮಳೆ ಔಷಧಿ ಸಿಂಪಡನೆಗೆ ಅಡ್ಡಿ ಉಂಟುಮಾಡಿದೆ. ಈ ಪರಿಸ್ಥಿತಿಯಲ್ಲಿ ರೈತರು ಏನು ಮಾಡಬೇಕೆಂದು ತೋಚದೆ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದಾರೆ.ಜ್ಯೂಸ್ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸುವ ತೋತಾಪುರಿ ಜಾತಿಯ ಮಾವು ಇನ್ನೂ ಪೂರ್ಣ ಪ್ರಮಾಣದಲ್ಲಿ ಕೊಯಿಲಿಗೆ ಬಂದಿಲ್ಲ. ದೊಡ್ಡ ಪ್ರಮಾಣದಲ್ಲಿ ಬೆಳೆಯುವ ನೀಲಂ ಜಾತಿಯ ಮಾವು ಕೊಯಿಲಿಗೆ ಬರಬೇಕಾದರೆ ಇನ್ನೂ ಕನಿಷ್ಟ 20 ದಿನ ಬೇಕು. ಈ ಹಂತದಲ್ಲಿ ಸಮಸ್ಯೆ ತಲೆದೋರಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.ಇದು ಸಾಲದೆಂಬಂತೆ ತೋಟಗಳಲ್ಲಿ ಕಪ್ಪು ಚುಕ್ಕೆ ರೋಗ ಹೆಚ್ಚಿದೆ. ಹೂಜಿ ನೊಣದ ಹಾವಳಿಯೂ ಹೆಚ್ಚಾಗಿದೆ. ಒಟ್ಟಾರೆ ಮಾವು ಬೆಳೆಗಾರರು ಬೇರೆ ಬೇರೆ ಸಮಸ್ಯೆಗಳ ಸುಳಿಗೆ ಸಿಕ್ಕಿ ನಲಗುವಂತಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.