ಸೋಮವಾರ, ಮಾರ್ಚ್ 27, 2023
21 °C

ಮಾಹಿತಿ ಹಕ್ಕಿನಡಿ ಸಚಿವರು ಉತ್ತರದಾಯಿಗಳು: ಸಿಐಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಹಿತಿ ಹಕ್ಕಿನಡಿ ಸಚಿವರು ಉತ್ತರದಾಯಿಗಳು: ಸಿಐಸಿ

ನವದೆಹಲಿ (ಪಿಟಿಐ): ಕೇಂದ್ರ ಹಾಗೂ ರಾಜ್ಯಗಳ ಸಂಪುಟದ ಸಚಿವರು ‘ಸಾರ್ವಜನಿಕ ಅಧಿಕಾರಿಗಳಾಗಿದ್ದು’, ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಜನರ ಪ್ರಶ್ನೆಗಳಿಗೆ ಅವರು ಉತ್ತರಿಸಬೇಕು ಎಂದು ಕೇಂದ್ರೀಯ ಮಾಹಿತಿ ಆಯೋಗ(ಸಿಐಸಿ) ಫರ್ಮಾನು ಹೊರಡಿಸಿದೆ.

ಸಿಐಸಿಯ ಈ ನಿರ್ದೇಶನದಿಂದಾಗಿ ಇನ್ಮುಂದೆ ಜನರು ಆರ್‌ಟಿಐ ಕಾಯ್ದೆ ಬಳಸಿಕೊಂಡು ಯಾವುದೇ ಸಚಿವರಿಗೆ ನೇರವಾಗಿ ಪ್ರಶ್ನೆಗಳನ್ನು ಕೇಳುಹಿಸಬಹುದು. ಆ ಪ್ರಶ್ನೆಗಳಿಗೆ ಸಚಿವರ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿ ಉತ್ತರಿಸಬೇಕು.

‘ಈ ಸಂಬಂಧ ಕೆಲ ಅಧಿಕಾರಿಗಳನ್ನು ಗೊತ್ತುಪಡಿಸಲು ಇಲ್ಲವೇ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ ಪ್ರಥಮ ಅಪೀಲು ಅಧಿಕಾರಿಗಳನ್ನು ನೇಮಿಸಿಕೊಳ್ಳವುದು ಸೇರಿದಂತೆ ಪ್ರತಿ ಸಚಿವರಿಗೆ ಕೇಂದ್ರ ಹಾಗೂ ರಾಜ್ಯಗಳು ಅಗತ್ಯ ಬೆಂಬಲ ನೀಡಬೇಕು ಎಂದು ಆಯೋಗವು ಬಲವಾಗಿ ಶಿಫಾರಸು ಮಾಡುತ್ತದೆ’ ಎಂದು ಮಾಹಿತಿ ಆಯುಕ್ತ ಶ್ರೀಧರ್ ಆಚಾರ್ಯಲು ಅವರು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

‘ಸಚಿವ ಏಕವ್ಯಕ್ತಿ ಕಚೇರಿಯಾಗಿದ್ದು, ಆರ್‌ಟಿಐ ಕಾಯ್ದೆ ಅಡಿಯ ಅರ್ಜಿಗಳಿಗೆ ಸ್ಪಂದಿಸಲು ಅಗತ್ಯ ಮೂಲಸೌಕರ್ಯಗಳಿಲ್ಲ. ಆದ್ದರಿಂದ ಸಾರ್ವಜನಿಕ ಅಧಿಕಾರಿ ಎನ್ನಲಾಗದು ಎಂದು ಹೇಳುವ ಮೂಲಕ ಸಚಿವರು ರಕ್ಷಣೆ ಪಡೆಯಲು ಸಾಧ್ಯವಿಲ್ಲ’ ಎಂದು ವಿಸ್ತೃತ ಆದೇಶದಲ್ಲಿ ಸಿಐಸಿ ಸ್ಪಷ್ಟಪಡಿಸಿದೆ.

‌ಇದೇ ವೇಳೆ, ಪ್ರಮಾಣ ವಚನದ ವೇಳೆ ಬಳಸುವ ‘ಗೌಪ್ಯತೆಯ ಪ್ರಮಾಣ‌’ ಪದದ ಬದಲಿಗೆ ‘ಪಾದರ್ಶಕತೆಯ ಪ್ರಮಾಣ’ ಪದ ಬಳಸುವಂತೆಯೂ ಮಾಹಿತಿ ಆಯುಕ್ತ ಸೂಚಿಸಿದ್ದಾರೆ. ಇದರಿಂದ ನಾಗರಿಕರ ಮಾಹಿತಿ ಹಕ್ಕನ್ನು ಸಚಿವರು ಗೌರವಿಸುವಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೇ, ಇದಕ್ಕಾಗಿ ರಾಮಾಯಣ ಉಲ್ಲೇಖ ಮಾಡಿರುವ ಅವರು, ‘ಶ್ರೀರಾಮಚಂದ್ರನ ಅವಧಿಯಲ್ಲಿ ಅರಮನೆ ಎದುರಿಗೆ ಗಂಟೆಯೊಂದು ಇರುತ್ತಿತ್ತು. ಯಾರೇ ಅದನ್ನು ಬಾರಿಸಿದರೂ ರಾಮನು ತನ್ನ ನಿವಾಸದಿಂದ ಹೊರಬಂದು ನಾಗರಿಕರ ಕಷ್ಟ ಆಲಿಸುತ್ತಿದ್ದ. ರಾಮ ರಾಜ್ಯದಲ್ಲಿ ಕುಂದುಕೊರತೆ ನಿವಾರಣಾ ವ್ಯವಸ್ಥೆಯ ಧ್ಯೋತಕ ಇದು’ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.