ಸರೋಜಿನಿ ನಾಯ್ಡು ಗಾಂಧೀಜಿಗೊಂದು ಅಡ್ಡ ಹೆಸರಿಟ್ಟಿದ್ದರು-ಮಿಕಿಮೌಸ್. ಮಹಾತ್ಮರನ್ನು ಪ್ರೀತಿಯಿಂದ ಸಂಬೋಧಿಸುವಾಗಲೆಲ್ಲಾ ಅವರು ಬಳಸುತ್ತಿದ್ದುದು `ಮಿಕಿ ಮೌಸ್~ ಎಂಬ ಅಡ್ಡ ಹೆಸರನ್ನೇ.

ಒಂದಕ್ಕೊಂದು ಸಂಬಂಧವಿಲ್ಲದಂತೆ ಕಾಣುವ ಈ ಇತಿಹಾಸದ ವೈಚಿತ್ರ್ಯವನ್ನು ಜೋಡಿಸಲು ಹೊರಟರೆ ಕಾಪಿರೈಟ್, ಮಿಕಿ ಮೌಸ್ ಮತ್ತು ಮಹಾತ್ಮಾ ಗಾಂಧಿಯವರು ಒಳಗೊಂಡಿರುವ ಚರಿತ್ರೆಯೊಂದು ಅನಾವರಣಗೊಳ್ಳುತ್ತದೆ.
ಮಹಾತ್ಮಾ ಗಾಂಧಿ ಹುತಾತ್ಮರಾಗಿ ಅರವತ್ತು ವರ್ಷ ತುಂಬುವ

ಹೊತ್ತಿಗೆ ಪತ್ರಿಕೆಯೊಂದು `ಇನ್ನು ಮುಂದೆ ಮಹಾತ್ಮಾಗಾಂಧಿಯವರ ಕೃತಿಗಳ ಸ್ವಾಮ್ಯ ಜನರದ್ದು~ ಎಂಬ ವರದಿಯೊಂದನ್ನು ಪ್ರಕಟಿಸಿತು.

ಇದರ ಹಿಂದೆಯೇ ಗಾಂಧೀಜಿಯ ಕೃತಿಗಳ ಕಾಪಿರೈಟ್ ನಿಯಂತ್ರಿಸುತ್ತಿದ್ದ ನವಜೀವನ ಟ್ರಸ್ಟ್ `ಸ್ವತಃ ಗಾಂಧೀಜಿಯೇ ತಮ್ಮ ಕೃತಿಗಳಿಗೆ ಕಾಪಿರೈಟ್ ಇರಬೇಕೆಂದು ಭಾವಿಸಿರಲಿಲ್ಲ. ನಾವು ಇಷ್ಟೂ ಕಾಲವೂ ಈ ಹಕ್ಕುಗಳನ್ನು ಇಟ್ಟುಕೊಂಡಿದ್ದೆವಷ್ಟೇ. ಇನ್ನು ಮುಂದೆ ಅದನ್ನು ಮುಂದುವರಿಸುವ ಅಪೇಕ್ಷೆ ತನಗಿಲ್ಲ~ ಎಂದು ಘೋಷಿಸಿತು.

ನವಜೀವನ ಟ್ರಸ್ಟ್ ಈ ನಿಲುವಿಗೆ ಬಂದದ್ದಕ್ಕೆ ಬೆಂಬಲವಾಗಿ 1940ರಲ್ಲಿ ಸತೀಶ್ ಕೇಳ್ಕರ್ಗೆ ಗಾಂಧೀಜಿ ಬರೆದಿದ್ದ ಪತ್ರವೊಂದನ್ನು ಉಲ್ಲೇಖಿಸಿತ್ತು. ಸತೀಶ್ ಕೇಳ್ಕರ್ ಅವರು ಗಾಂಧೀಜಿ ತಮ್ಮ ಕೃತಿಗಳ ಕಾಪಿರೈಟ್ ಬಗ್ಗೆ ಕಟ್ಟುನಿಟ್ಟಾಗಿರಬೇಕೆಂದು ಸೂಚಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಗಾಂಧೀಜಿ `ಯುವ ಕೇಳ್ಕರ್ ಹೇಳುವುದರಲ್ಲಿ ಔಚಿತ್ಯವಿದೆ.

ಅನೇಕ ಸಂದರ್ಭಗಳಲ್ಲಿ ಸಂಕ್ಷೇಪಗೊಳಿಸುವ ಪ್ರಯತ್ನಗಳಿಂದ ನನ್ನ ಬರೆಹಗಳು ಬಳಲಿರುವುದು ನಿಜ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಅನೇಕ ವೇಳೆ ಅವು ನಾನು ಯಾವತ್ತೂ ಉದ್ದೇಶಿಸಿದ ಅರ್ಥಗಳನ್ನು ನೀಡಿರುವುದೂ ಹೌದು. ನನ್ನ ವರದಿಗಾರ ಉಲ್ಲೇಖಿಸಿರುವ ಅಜ್ಮೀರ್ ಇಲ್ಲಸ್ಟ್ರೇಷನ್ ಇದಕ್ಕೆ ಸಂಶಯಾತೀತವಾದ ಸಾಕ್ಷ್ಯವನ್ನೂ ಒದಗಿಸುತ್ತದೆ.

ಆದರೂ ನಾನು ನನ್ನ ಬರೆಹಗಳನ್ನು ಕಾಪಿರೈಟ್ಗೆ ಒಳಪಡಿಸುವುದಕ್ಕೆ ಸಿದ್ಧನಿಲ್ಲ. ಇದರಿಂದ ಹಣಕಾಸಿನ ನಷ್ಟವಿದೆ ಎಂಬುದು ಗೊತ್ತು. `ಹರಿಜನ~ವನ್ನು ನಾನು ಲಾಭಕ್ಕಾಗಿ ಪ್ರಕಟಿಸುತ್ತಿರಲಿಲ್ಲ- ನಷ್ಟವಾಗದೇ ಇರುವ ತನಕ ತೊಂದರೆ ಇಲ್ಲ ಎಂಬುದು ನನ್ನ ಭಾವನೆ. ನನ್ನ ಸ್ವಾರ್ಥ ತ್ಯಾಗವು ಅಂತಿಮವಾಗಿ ಸತ್ಯಾಗ್ರಹದ ಉದ್ದೇಶಕ್ಕೆ ಪೂರಕವಾಗಿರಬೇಕೆಂಬ ನಂಬಿಕೆ ನನಗೆ ಇರಬೇಕು~.

ಕಾಪಿರೈಟ್ ಕುರಿತು ಗಾಂಧೀಜಿಯ ಈ ನಿಲುವು ಮಾಲೀಕತ್ವ ಎಂಬ ಸಂಕುಚಿತ ಪರಿಕಲ್ಪನೆಗೆ ಪರ್ಯಾಯವಾಗಿ ಅವರು ಪ್ರತಿಪಾದಿಸುತ್ತಿದ್ದ ಧರ್ಮದರ್ಶಿತ್ವ (ಠ್ಟ್ಠಿಠಿಛಿಛಿಜಿ) ಪರಿಕಲ್ಪನೆಗೆ ಪೂರಕವಾಗಿತ್ತು.

1991ರಲ್ಲಿ ರವೀಂದ್ರನಾಥ ಟ್ಯಾಗೋರ್ ಅವರ ಕೃತಿಗಳ ಕಾಪಿರೈಟ್ ಅವಧಿ ಮುಗಿದಾಗ ಸಂಭವಿಸಿದ್ದು ಸಂಪೂರ್ಣ ಭಿನ್ನವಾದ ಘಟನಾವಳಿಗಳು. ಕೃತಿಕಾರನ ಸಾವಿನ ಐವತ್ತು ವರ್ಷಗಳ ನಂತರ ಆತನ ಕೃತಿಗಳು ಕಾಪಿರೈಟ್ನಿಂದ ಮುಕ್ತವಾಗುತ್ತವೆ. ಇದರಂತೆ 1991ರಲ್ಲಿ ಟ್ಯಾಗೋರ್ ಕೃತಿಗಳ ಹಕ್ಕೂ ಜನರಿಗೆ ಸೇರಬೇಕಾಗಿತ್ತು.

ಆದರೆ ಕಾಪಿರೈಟ್ ಹೊಂದಿದ್ದ ವಿಶ್ವಭಾರತಿ ಈ ಅವಧಿಯನ್ನು ಇನ್ನೂ ಹತ್ತು ವರ್ಷಗಳ ಕಾಲ ವಿಸ್ತರಿಸುವಂತೆ ಕೇಳಿಕೊಂಡಿತು. ಪರಿಣಾಮವಾಗಿ ಸರ್ಕಾರ ಸಂಸತ್ತಿನಲ್ಲಿ ಒಂದು ತಿದ್ದುಪಡಿ ಮಸೂದೆಯನ್ನು ಮಂಡಿಸಿ ಕಾಪಿರೈಟ್ ಅವಧಿಯನ್ನು ಅರವತ್ತು ವರ್ಷಗಳಿಗೆ ಹೆಚ್ಚಿಸಿತು. ಈಗ ಕೃತಿಕಾರನ ಮರಣದ ನಂತರದ ಅರವತ್ತು ವರ್ಷಗಳ ತನಕ ಕಾಪಿರೈಟ್ ಇರುತ್ತದೆ.

ತದ್ವಿರುದ್ಧವಾಗಿರುವ ಮೇಲಿನ ಎರಡೂ ಉದಾಹರಣೆಗಳು ಕಾಪಿರೈಟ್, ಸೃಜನಶೀಲತೆಗೆ ನೀಡುವ ಪ್ರೋತ್ಸಾಹ ಮತ್ತು ಸಾರ್ವಜನಿಕ ಆಸ್ತಿಯ ಪರಿಕಲ್ಪನೆಯನ್ನು ನಾವು ಹೇಗೆ ಗ್ರಹಿಸುತ್ತೇವೆ ಎಂಬುದನ್ನು ವಿವರಿಸುತ್ತವೆ. ಇತ್ತೀಚಿನ ವರ್ಷಗಳಲ್ಲಿ ಕಾಪಿರೈಟ್ ಎಂಬುದು ಯಾರಿಗೂ ಅರ್ಥವಾಗದ ಕಾನೂನಿನ ಪರಿಭಾಷೆಯಾಗಿಯಷ್ಟೇ ಉಳಿದಿಲ್ಲ; ಈಗ ಕಾಪಿರೈಟ್ ಎಂಬುದು ಒಂದು ವಾಸ್ತವ.

ಇದರ ಪರಿಣಾಮ ಕಲಾವಿದರು, ಸಂಗೀತಗಾರರು, ಬರೆಹಗಾರರು, ವಿನ್ಯಾಸಕಾರರು, ವಿದ್ಯಾರ್ಥಿಗಳು ಅಷ್ಟೇಕೆ ಸಾಮಾನ್ಯ ಗ್ರಾಹಕನ ಮೇಲೂ ಆಗುತ್ತಿರುತ್ತದೆ. ಒಟ್ಟಿನಲ್ಲಿ ಸೃಜನಶೀಲ ಸಾಂಸ್ಕೃತಿಕ ಉತ್ಪನ್ನ ಎಂದು ಕರೆಯಬಹುದಾದ ಎಲ್ಲವುಗಳ ಮೇಲೂ ಕಾಪಿರೈಟ್ನ ಪರಿಣಾಮ ಇದ್ದೇ ಇರುತ್ತದೆ.

ಕಾಪಿರೈಟ್ ವ್ಯವಸ್ಥೆ ಆರಂಭಗೊಂಡದ್ದು ಬರೆಹವೂ ಸೇರಿದಂತೆ ವಿವಿಧ ಲಲಿತ ಕಲೆಗಳ ಕ್ಷೇತ್ರದಲ್ಲಿ ದುಡಿಯುವವರನ್ನು ಪ್ರೋತ್ಸಾಹಿಸುವುದಕ್ಕಾಗಿ. ಈ ವ್ಯವಸ್ಥೆಯಲ್ಲಿ ಕೃತಿಕಾರನಿಗೆ ಅಥವಾ ನಿರ್ದಿಷ್ಟ ಕಲಾ ಪ್ರಕಾರದಲ್ಲಿ ತೊಡಗಿಕೊಳ್ಳುವ ರಚನೆಕಾರನಿಗೆ ಅವನ ರಚನೆಯ/ಸೃಷ್ಟಿಯ ಹಕ್ಕನ್ನು ನೀಡುವಂತೆಯೇ ಈ ರಚನೆಗಳು ಸಾರ್ವಜನಿಕವಾಗಿ ದೊರೆತು ಅದನ್ನು ಆಧಾರವಾಗಿಟ್ಟುಕೊಂಡು ಪುನರ್ಸೃಷ್ಟಿಸುವ ಅವಕಾಶವೂ ಇತ್ತು. ಉದಾಹರಣೆಗೆ ಸಾರ್ವಜನಿಕ ಗ್ರಂಥಾಲಯಗಳು. ಇವು ಪುಸ್ತಕಗಳನ್ನು ವಾಣಿಜ್ಯೇತರವಾಗಿ ವಿತರಿಸುವುದನ್ನು ಯಾವ ಕಾಪಿರೈಟ್ ಕಾಯ್ದೆಯೂ ತಡೆಯೊಡ್ಡಿಲ್ಲ.

ಆದರೆ ಕೆಲಕಾಲದಿಂದ ಸಾಂಸ್ಕೃತಿಕ ಉತ್ಪನ್ನ ಎಂದು ಕರೆಯಬಹುದಾದ ರಚನೆಯೊಂದು ಕಾಪಿರೈಟ್ಗೆ ಒಳಪಟ್ಟು ಸಾರ್ವಜನಿಕವಾಗಿಯೂ ಲಭ್ಯವಿರಬಹುದಾದ ಸಾಧ್ಯತೆಯೊಂದು ಇಲ್ಲವಾಗುತ್ತಿದೆ. ಅಂದರೆ ಕಾಪಿರೈಟ್ ಕಾಯ್ದೆಯೆಂಬುದು ನಿಧಾನವಾಗಿ ಕೃತಿಯ ಮಾಲೀಕತ್ವವನ್ನು ಹೊಂದಿರುವ ದೊಡ್ಡ ದೊಡ್ಡ ಪ್ರಕಾಶಕರು ಮತ್ತು ಮಾಧ್ಯಮ ಸಂಸ್ಥೆಗಳಿಗೆ ಅನುಕೂಲ ಕಲ್ಪಿಸುವ ಕಾಯ್ದೆಯಾಗಿ ಬದಲಾಗುತ್ತಿದೆ.

ಪರಿಣಾಮವಾಗಿ ಕಾಪಿರೈಟ್ ಎಂಬ ಹಕ್ಕು ಸೃಜನಶೀಲತೆಗೆ ಬೇಲಿ ಕಟ್ಟುವ ಉಪಕರಣವಾಗಿ ಬದಲಾಗಿಬಿಟ್ಟಿದೆ. ಆದ್ದರಿಂದ ಸೃಜನಶೀಲತೆಯನ್ನು ಮತ್ತೆ ಕಲಾವಿದ, ಬರೆಹಗಾರ ಮತ್ತು ಸಹೃದಯ ಕೇಂದ್ರಿತವಾಗಿಸುವುದಕ್ಕಾಗಿ ಕಾಪಿರೈಟ್ನ ಬಲೆಯಿಂದ ಸಾಂಸ್ಕೃತಿಕ ರಂಗ ಮುಕ್ತವಾಗುವುದು ಅಗತ್ಯವೂ ಆಗಿಬಿಟ್ಟಿದೆ.

ಕೃತಿರಚನೆಕಾರ ಸಹಜವಾಗಿಯೇ ತನ್ನ ಬೌದ್ಧಿಕ ಶ್ರಮದ ಮೂಲದ ಸೃಷ್ಟಿಸಿದ ಕೃತಿಯ ಹಕ್ಕುದಾರನಾಗಿರುತ್ತಾನೆ ಎಂಬುದು ಕಾಪಿರೈಟ್ ಪರಿಕಲ್ಪನೆಯ ಮೂಲಭೂತ ನೆಲೆಗಟ್ಟು. ಕೃತಿಕಾರನಿಗೆ ಸಹಜವಾಗಿ ಲಭ್ಯವಾಗುವ ಈ ಸ್ವಾಮ್ಯತೆಯನ್ನು ಆತ ತನ್ನ ಇಷ್ಟದಂತೆ ವಿನಿಮಯ ಮಾಡಿಕೊಳ್ಳಬಹುದು.

ಹಾಗಾಗಿ ಕಾಪಿರೈಟ್ನ ರಕ್ಷಣೆ ಎಂಬುದು ಕೃತಿ ರಚಿಸಿದವನನ್ನು ಪ್ರೋತ್ಸಾಹಿಸುವ ಒಂದು ಕ್ರಮ. ಇಂಥದ್ದೊಂದು ವ್ಯವಸ್ಥೆ ಇಲ್ಲದೇ ಇದ್ದಲ್ಲಿ ಕೃತಿಕಾರ ಸೃಜನಶೀಲ ರಚನೆಯೊಂದಕ್ಕೆ ಅಗತ್ಯವಿರುವ ಬೌದ್ಧಿಕ ಶ್ರಮದಲ್ಲಿ ತೊಡಗಿಕೊಳ್ಳುವ ಆಸಕ್ತಿ ತೋರಿಸುವುದಿಲ್ಲ. ಪರಿಣಾಮವಾಗಿ ಕಲೆ, ಸಾಹಿತ್ಯದಂಥ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೃಜನಶೀಲತೆ ಕುಸಿತಕ್ಕೆ ಗುರಿಯಾಗುತ್ತದೆ.

ಮೊದಲೇ ಹೇಳಿದಂತೆ ಈ ವ್ಯವಸ್ಥೆ ಒಂದು ಬಗೆಯಲ್ಲಿ ಕೃತಿಕಾರನಿಗೆ ಕೃತಿಯ ಮೇಲಿರುವ ಹಕ್ಕು ಹಾಗೂ ಅದನ್ನು ಓದುವ ಅಥವಾ ಆಸ್ವಾದಿಸುವ ಸಹೃದಯರಿಗೆ ಇರಬೇಕಾದ ಹಕ್ಕುಗಳೆರಡರ ನಡುವೆ ಒಂದು ಸಮತೋಲನವನ್ನು ಸಾಧಿಸಿತ್ತು. ಈ ಕಾರಣದಿಂದಾಗಿಯೇ ಕಥೆಗಾರನಿಗೆ ಇರುವ ಕಾಪಿರೈಟ್ ನಿರ್ದಿಷ್ಟ ಕಥೆಗೆ ಸೀಮಿತವಾಗಿರುತ್ತದೆಯೇ ಹೊರತು ಕಥೆಯಲ್ಲಿ ಮಂಡಿತವಾಗಿರುವ ಯಾವುದೇ ಪರಿಕಲ್ಪನೆಗಲ್ಲ.

ಒಟ್ಟರ್ಥದಲ್ಲಿ ಕಾಪಿರೈಟ್ ಎಂದರೆ ಕೃತಿಕಾರನ ಸೃಜನಶೀಲತೆಯನ್ನು ಗೌರವಿಸುವ ಮತ್ತು ಆತನಿಗೆ ಇನ್ನಷ್ಟು ಕೃತಿಗಳನ್ನು ರಚಿಸಲು ಬೇಕಾದ ಪ್ರೋತ್ಸಾಹವನ್ನು ಸಂಭಾವನೆಯ ಮೂಲಕ ಗಳಿಸಿಕೊಡುವ ಒಂದು ವಿಧಾನ ಎಂದಾಯಿತು.

ಈ ವಿವರಗಳನ್ನು ಮುಂದಿಟ್ಟುಕೊಂಡು ಕಾಪಿರೈಟ್ನ ಅವಧಿಗೆ ಸಂಬಂಧಿಸಿದ ಪ್ರಶ್ನೆಯನ್ನು ವಿಶ್ಲೇಷಿಸಲು ಪ್ರಯತ್ನಿಸಿದರೆ ಈ ಅವಧಿಯನ್ನು ಹಿಗ್ಗಿಸುತ್ತಲೇ ಹೋಗಿರುವುದು ತಮಾಷೆಯೆನಿಸುತ್ತದೆ. ಕೃತಿಕಾರ ತೀರಿಕೊಂಡ ಅರವತ್ತು ವರ್ಷದ ನಂತರವೂ ಕಾಪಿರೈಟ್ ಆತನ ವಾರಸುದಾರರ ಬಳಿ ಇದ್ದರೆ ಅದು ಯಾವ ಬಗೆಯಲ್ಲಿ ಕೃತಿಕಾರನ ಸೃಜನಶೀಲತೆಯನ್ನು ಪ್ರೋತ್ಸಾಹಿಸುತ್ತದೆ?

ಈ ಅತಾರ್ಕಿಕ ಕಾಪಿರೈಟ್ ಅವಧಿ ವಿಸ್ತರಣೆಯ ಹಿಂದೆ ಬಹುರಾಷ್ಟ್ರೀಯ ಕಂಪೆನಿಗಳ ಬಹುಕಾಲದ ಒತ್ತಡವಿದೆ. ಕಾಪಿರೈಟ್ ಪರಿಕಲ್ಪನೆ ಮೊದಲು ಜಾರಿಗೆ ಬಂದಾಗ ಇದರ ಅವಧಿ ಬಹಳ ಚಿಕ್ಕದಿತ್ತು. ಆದರೆ ಮಿಕಿ ಮೌಸ್ನಂಥ ಲಾಭದಾಯಕ `ಪಾತ್ರ~ಗಳ ಮಾಲೀಕತ್ವ ಇದ್ದ ಡಿಸ್ನಿ ಕಾರ್ಪೊರೇಷನ್ ಈ `ಪಾತ್ರ~ದಿಂದ ದೊರೆಯುವ ಲಾಭ ತನಗೆ ಸೀಮಿತವಾಗಿರಲಿ ಎಂಬ ಕಾರಣಕ್ಕೆ ನಡೆಸಿದ ಲಾಬಿಯಿಂದ ಕಾಪಿರೈಟ್ ಅವಧಿ ವಿಸ್ತರಣೆಗೊಳ್ಳುತ್ತಲೇ ಹೋಯಿತು.

ಅಮೆರಿಕದ ಮನರಂಜನಾ ಉದ್ಯಮದ ಲಾಬಿ ಮಾಡುವ ಶಕ್ತಿಯಿಂದಾಗಿ ವಿಶ್ವಾದ್ಯಂತ ಕಾಪಿರೈಟ್ ಕಾನೂನುಗಳು ಅತಾರ್ಕಿಕ ಎನಿಸುವಷ್ಟರ ಮಟ್ಟಿಗೆ ಮಾಲೀಕ ಕೇಂದ್ರಿತವಾಗಿಬಿಟ್ಟವು.

ಕಾಪಿರೈಟ್ ಎಂಬುದು ಕೃತಿಕಾರನ ಲಾಭಕ್ಕಾಗಿರುವುದು ಎಂದು ಈ ಕಾಲದಲ್ಲಿ ಹೇಳುವುದಕ್ಕೆ ಹೆಚ್ಚಿನ ಅರ್ಥವಿಲ್ಲ. ಏಕೆಂದರೆ ಈಗ ಕೃತಿಗಳ ಸ್ವಾಮ್ಯವಿರುವುದು ಬೃಹತ್ ಪ್ರಕಾಶಕರು, ಬೃಹತ್ ಮನರಂಜನಾ ಉದ್ದಿಮೆದಾರರ ಬಳಿ.

ಸೃಜನಶೀಲ ಕೃತಿಗಳು ಅವರ ಮಟ್ಟಿಗೆ ಒಂದು ಲಾಭದಾಯಕ ಉತ್ಪನ್ನ ಮಾತ್ರ. ಈ ಉತ್ಪನ್ನದ ಮೇಲಿನ ತಮ್ಮ ಹಿಡಿತವನ್ನು ಬಿಟ್ಟುಕೊಡದೇ ಇರುವುದಕ್ಕಾಗಿ ಅವರು ಕಾಪಿರೈಟ್ ಎಂಬ ಪರಿಕಲ್ಪನೆಯನ್ನು ತಮಗೆ ಬೇಕಾದಂತೆ ವಿಸ್ತರಿಸಿಕೊಳ್ಳಲು ಬೇಕಾದ ಎಲ್ಲವನ್ನೂ ಮಾಡಲು ಸಿದ್ಧರಿದ್ದರು.

ಇದರ ಪರಿಣಾಮವಾಗಿ ಕಾಪಿರೈಟ್ ಅವಧಿ ಹೆಚ್ಚುತ್ತಾ ಹೋಯಿತು. ಹಾಗೆಯೇ ಕಾಪಿರೈಟ್ನ ವ್ಯಾಪ್ತಿಯೊಳಕ್ಕೆ ಸಾಫ್ಟ್ವೇರ್ನಂಥ ಉತ್ಪನ್ನಗಳೂ ಸೇರಿಕೊಳ್ಳುತ್ತಾ ಹೋದವು. ಈಗಂತೂ ಕಾಪಿರೈಟ್ ನಿರ್ವಹಿಸುವ ಹಕ್ಕುಗಳ ಪ್ರಮಾಣವೂ ಹೆಚ್ಚಾಗಿದೆ.

ಕಾಪಿರೈಟ್ ಮೂಲಕ ಕೃತಿಯ ಮಾಲೀಕನಿಗೆ ದತ್ತವಾಗುವ ಹಕ್ಕುಗಳ ಪ್ರಮಾಣ ಹೆಚ್ಚುತ್ತಾ ಹೋದುದರ ಪರಿಣಾಮವಾಗಿ ಒಂದು ಕೃತಿಗಿರುವ ಸಾರ್ವಜನಿಕ ಆಯಾಮ ಅಥವಾ ಸಾಂಸ್ಕೃತಿಕ ಉತ್ಪನ್ನವೊಂದರ ಮೇಲಿರುವ ಸಹೃದಯನ ಹಕ್ಕುಗಳ ಪ್ರಮಾಣ ಕುಸಿಯಿತು. ಬಹುಶಃ ಇದು ಕಾಪಿರೈಟ್ಗೆ ಪರ್ಯಾಯವನ್ನು ಹುಡುಕುವ ಅಗತ್ಯವೊಂದನ್ನು ಹುಟ್ಟುಹಾಕಿತು.

ಮಿಕಿ ಮೌಸ್ನ ಹಕ್ಕನ್ನು ಸದಾ ತನ್ನಲ್ಲಿಯೇ ಉಳಿಸಿಕೊಳ್ಳುವ ಡಿಸ್ನಿ ಕಾರ್ಪೋರೇಷನ್ನ ಮಾಲೀಕತ್ವದ ಕಾಪಿರೈಟ್ ಮಾದರಿ ಲಾಭದ ವಿಸ್ತರಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡಿದೆ. ಆದರೆ ಗಾಂಧೀಜಿ ಪ್ರತಿಪಾದಿಸಿದ ಧರ್ಮದರ್ಶಿತ್ವದ ಮಾದರಿಯನ್ನು ಅಳವಡಿಸಿಕೊಳ್ಳುವುದಷ್ಟೇ ಅರಿವಿನ ವಿಸ್ತರಣೆ ಮತ್ತು ಸಂಸ್ಕೃತಿಯ ಬಹುತ್ವದ ಪ್ರತೀಕವಾಗಿದೆ.

ಸ್ವತಂತ್ರ ಮತ್ತು ಮುಕ್ತ ತಂತ್ರಾಂಶ ಆಂದೋಲನ ಸಾಫ್ಟ್ವೇರ್ ಕ್ಷೇತ್ರದಲ್ಲಿ ಇದನ್ನು ಸಾಧಿಸುತ್ತಿದ್ದರೆ ಮುಕ್ತ ಕೃತಿಗಳ ಪರಿಕಲ್ಪನೆ ಸೃಜನಶೀಲ ಸಾಂಸ್ಕೃತಿಕ ಉತ್ಪನ್ನಗಳೆಂದು ಕರೆಯಬಹುದಾದ ಸಂಗೀತ, ಕಲೆ ಮತ್ತು ಸಾಹಿತ್ಯಗಳನ್ನು ಸಹೃದಯನಿಗೆ ಹೆಚ್ಚು ಹತ್ತಿರವಾಗಿಸಿ ಈ ಕ್ಷೇತ್ರಗಳಲ್ಲಿ ಸಾರ್ವಜನಿಕ ಆಸ್ತಿಯನ್ನು ಶ್ರೀಮಂತಗೊಳಿಸುತ್ತಿವೆ.

ಜನರು ಸಾಫ್ಟ್ವೇರ್ ಉತ್ಪನ್ನಗಳ ಬಳಸುವುದನ್ನು ನಿಯಂತ್ರಿಸಲು ಹೊರಟಾಗ ಮಾಲೀಕತ್ವದ ತಂತ್ರಾಂಶಗಳು ಸ್ವತಂತ್ರ ತಂತ್ರಾಂಶ ಆಂದೋಲನ ಸಾಫ್ಟ್ವೇರ್ ಬಳಕೆಗೆ ಮುಕ್ತ ಅವಕಾಶ ಕಲ್ಪಿಸಿದವು. ಸ್ವತಂತ್ರ ತಂತ್ರಾಂಶವೊಂದನ್ನು ಯಾರು ಬೇಕಾದರೂ ತಮ್ಮ ಅಗತ್ಯಕ್ಕೆ ಬೇಕಾದಂತೆ ಮಾರ್ಪಡಿಸಿಕೊಳ್ಳಬಹುದು ಹಾಗೆಯೇ ತಮಗಿಷ್ಟ ಬಂದಂತೆ ಹಂಚಲೂ ಬಹುದು.

ಈ ಆಂದೋಲನ ಉತ್ಪಾದಕ ಮತ್ತು ಬಳಕೆದಾರ ಸಂಬಂಧದ ವ್ಯಾಖ್ಯೆಯನ್ನೇ ಬದಲಾಯಿಸಿತು. ಮಾಲೀಕತ್ವದ ತಂತ್ರಾಂಶಗಳಲ್ಲಿ ಮಾಲೀಕರು ಉತ್ಪಾದಕರು ಮಾತ್ರ. ಹಾಗೆಯೇ ಬಳಕೆದಾರರಿಗೆ ಉತ್ಪನ್ನಗಳನ್ನು ತಮಗೆ ಬೇಕಾದಂತೆ ಬದಲಾಯಿಸಿಕೊಳ್ಳುವ ಅವಕಾಶವೂ ಇರಲಿಲ್ಲ. ಅವರು ಕೇವಲ ಬಳಕೆದಾರರು ಮಾತ್ರ.

ಆದರೆ ಸ್ವತಂತ್ರ ತಂತ್ರಾಂಶಗಳ ಬಳಕೆದಾರನಿಗೆ ಅದರ ಆಕರ ಸಂಕೇತಗಳೂ ಉತ್ಪನ್ನದ ಜೊತೆಗೇ ದೊರೆಯುವುದರಿಂದ ತಂತ್ರಾಂಶವನ್ನು ತನ್ನ ಅಗತ್ಯಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬಹುದು. ಹೀಗೆ ಬದಲಾಯಿಸಿಕೊಂಡದ್ದನ್ನು ತನ್ನಂಥ ಮತ್ತೊಬ್ಬ ಬಳಕೆದಾರನಿಗೆ ಮಾರಲೂಬಹುದು.

ಈ ಸಂದರ್ಭದಲ್ಲಿ ಬಳಕೆದಾರನೂ ಉತ್ಪಾದಕನಾಗಿಬಿಡುತ್ತಾನೆ. ಎಲ್ಲಾ ಡಿಜಿಟಲ್ ಉತ್ಪನ್ನಗಳಿಗೂ ಈ ಬಗೆಯ ಗುಣವಿದೆ. ಸಾಮಾನ್ಯ ಮಟ್ಟದ ಕಂಪ್ಯೂಟರ್ ಜ್ಞಾನವುಳ್ಳ ಯಾರೊಬ್ಬ ಕೂಡಾ ಬಳಕೆದಾರ-ಉತ್ಪಾದಕನಾಗಲು ಸಾಧ್ಯವಿದೆ. ಈ ಪರಿಕಲ್ಪನೆ ನಮ್ಮ ಸಾಂಪ್ರದಾಯಿಕ ಕಾಪಿರೈಟ್ ಕಾಯ್ದೆಯ ಮೂಲ ನೆಲೆಗಟ್ಟನ್ನೇ ಅಲುಗಾಡಿಸುತ್ತಿದೆ.

ಹಾಗೆಯೇ `ಕೃತಿಕಾರ~ ಎಂಬ ಪರಿಕಲ್ಪನೆಯನ್ನೇ ಮರು ವ್ಯಾಖ್ಯಾನಿಸುತ್ತಿರುವ ಈ ಪ್ರಕ್ರಿಯೆ ಪ್ರತಿಯೊಂದು ಕೃತಿಯೂ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಗಳ ಮರುಜೋಡಣೆಯ ಅಥವಾ ಪುನರ್ ನಿರೂಪಣೆಯ ಮೂಲಕವೇ ಸೃಷ್ಟಿಯಾಗುತ್ತದೆಯೇ ಹೊರತು ಕೃತಿಕಾರ ಎಲ್ಲೋ ಕುಳಿತು `ಸ್ವಂತವಾದ~ ಒಂದನ್ನು ಸೃಷ್ಟಿಸುವುದಿಲ್ಲ ಎಂದು ವಾದಿಸುತ್ತಿದೆ.

ಅಂದರೆ ಈ ಪ್ರಕ್ರಿಯೆಯಲ್ಲಿ ಸಾಮುದಾಯಿಕ ಪಾಲ್ಗೊಳ್ಳುವಿಕೆಯ ಮೂಲಕ ಸೃಷ್ಟಿಯಾಗುವ ಉತ್ಪನ್ನಗಳಿಗೆ ಹೆಚ್ಚಿನ ಮಹತ್ವ ದೊರೆಯುತ್ತಿದೆಯೇ ಹೊರತು ಎಲ್ಲೋ ಕುಳಿತು ಯಾರೋ ಒಬ್ಬ ಅಥವಾ ಯಾವುದೋ ಒಂದು ಕಂಪೆನಿ ಮಾತ್ರ ಉತ್ಪಾದಿಸುವ ಉತ್ಪನ್ನಕ್ಕಲ್ಲ.

ಈ ಸಾಮುದಾಯಿಕ ಪಾಲ್ಗೊಳ್ಳುವಿಕೆಯ ಮೂಲಕ ಸೃಷ್ಟಿಯಾಗುವ ಉತ್ಪನ್ನಗಳು ಹೊಸ ಪರಿಕಲ್ಪನೆಯೇನಲ್ಲ. ನಮ್ಮ ಸಾಂಸ್ಕೃತಿಕ ಇತಿಹಾಸವೇ ಈ ಬಗೆಯ ಸಾಮುದಾಯಿಕ ಪಾಲ್ಗೊಳ್ಳುವಿಕೆಯಿಂದ ಸೃಷ್ಟಿಯಾಗಿರುವ ಕೃತಿಗಳಿಂದ ತುಂಬಿಕೊಂಡಿದೆ. ಮನುಕುಲದ ಬಹುಮುಖ್ಯ ಸಾಧನೆಗಳೆಲ್ಲವೂ ಹೀಗೆ ಸಮುದಾಯದ ಉತ್ಪನ್ನಗಳೇ.

ಉದಾಹರಣೆಗೆ ಆಕ್ಸ್ಫರ್ಡ್ ಇಂಗ್ಲಿಷ್ ನಿಘಂಟು ಯಾರಾದರೂ ಒಬ್ಬನಿಂದ ಅಥವಾ ಒಂದು ದೊಡ್ಡ ಕಂಪೆನಿಯಿಂದಷ್ಟೇ ಸಾಧ್ಯವೇ? ಕಾಪಿರೈಟ್ನ ಪ್ರತಿಪಾದಕರ ಧ್ವನಿಗಳೇ ದೊಡ್ಡದಾಗಿ ಕೇಳಿಸುತ್ತಿರುವ ಹೊತ್ತಿನಲ್ಲಿ ಆಕ್ಸ್ಫರ್ಡ್ ನಿಘಂಟು ಪ್ರಕಟವಾಗುತ್ತಿರುವುದರಿಂದ ಇದಕ್ಕೆ `ಮುಕ್ತತೆ~ಯ ಹಣೆಪಟ್ಟಿ ಇಲ್ಲ. ವಾಸ್ತವದಲ್ಲಿ ಈ ನಿಘಂಟು ಸಾಧ್ಯವಾಗಿರುವುದು ವಿಶ್ವದ ಹಲವೆಡೆ ಇರುವ ಸಾವಿರಾರು ಆಸಕ್ತರಿಂದ.

ನಮ್ಮ ರಾಮಾಯಣ ಮತ್ತು ಮಹಾಭಾರತಗಳಂತೂ ಈ ಬಗೆಯ ಸಾಮುದಾಯಿಕ ಸಾಂಸ್ಕೃತಿಕ ಉತ್ಪನ್ನಕ್ಕೆ ಬಹುದೊಡ್ಡ ಸಾಕ್ಷಿ. ವ್ಯಾಸ ಮತ್ತು ವಾಲ್ಮೀಕಿ ಸಾಂಕೇತಿಕವಾಗಿ ಈ ಕೃತಿಗಳ ಮೂಲಕ ಲೇಖಕರಾದರೂ ಅದು ಭಿನ್ನ ಸಂಸ್ಕೃತಿಗಳಲ್ಲಿ ಭಿನ್ನ ರೂಪಗಳಲ್ಲಿ ಹರಡಿರುವುದು ಕೇವಲ ಮೂಲದಿಂದಷ್ಟೇ ಅಲ್ಲ.

ರಾಮಾಯಣ, ಮಹಾಭಾರತಗಳಿಂದ ಆಕ್ಸ್ಫರ್ಡ್ ನಿಘಂಟಿನ ತನಕದ ಉದಾಹರಣೆಗಳು ನಮ್ಮ ಮುಂದಿದ್ದರೂ ಈ ಬಗೆಯ ಮುಕ್ತ ಕೃತಿಗಳ ಮಾದರಿಯಿಂದ ಜನರಿಗೇನು ಉಪಯೋಗ ಎಂಬ ಪ್ರಶ್ನೆಯಂತೂ ಎಲ್ಲರ ಮನಸ್ಸಿನಲ್ಲೂ ಹುಟ್ಟಿಕೊಳ್ಳುತ್ತದೆ. ಸಾಂಪ್ರದಾಯಿಕ ಕಾಪಿರೈಟ್ನ ಬದಲಿಗೆ ಈ ಮುಕ್ತ ಲೈಸನ್ಸಿಂಗನ್ನು ಏಕೆ ಅಳವಡಿಸಿಕೊಳ್ಳಬೇಕು ಎಂಬುದಕ್ಕೆ ಕೆಲವು ಕಾರಣಗಳನ್ನಿಲ್ಲಿ ಪಟ್ಟಿ ಮಾಡಿದ್ದೇನೆ:

* ಉದಯೋನ್ಮುಖ ಬರೆಹಗಾರರು, ಸಂಗೀತಗಾರರು, ಕಲಾವಿದರು ಮತ್ತು ವಿನ್ಯಾಸಕಾರರಿಗೆ ಸಹೃದಯರನ್ನು ತಲುಪಲು ಇರುವ ಸುಲಭ ವಿಧಾನ ಇದು. ಇವರ ಕೃತಿಗಳನ್ನು ಹೆಚ್ಚು ಹೆಚ್ಚು ಸಹೃದಯರು ಆಸ್ವಾದಿಸಿದಂತೆ ಅವರ ಕೃತಿಗಳ ಮೌಲ್ಯ ಹೆಚ್ಚುತ್ತದೆ. ಅವರ ಪ್ರತಿಭೆ ಬೆಳಕಿಗೆ ಬರುತ್ತದೆ.

ಮುಕ್ತ ಲೈಸೆನ್ಸಿಂಗ್ ಅಳವಡಿಸಿಕೊಳ್ಳುವುದರಿಂದ ಮರುಬಳಕೆಯ, ಪುನರ್ನಿರೂಪಣೆಯ ಸಾಧ್ಯತೆಗಳೂ ಹೆಚ್ಚಾಗುವುದರಿಂದ ಈ ಕಲಾವಿದರು ಮತ್ತು ಬರೆಹಗಾರರಿಗೆ ತಮ್ಮ ಕ್ಷೇತ್ರದಲ್ಲೊಂದು ಅನನ್ಯತೆಯೂ ದೊರೆಯುತ್ತದೆ.

* ಮುಕ್ತ ಕೃತಿ ಮಾದರಿಯಲ್ಲಿ ವಿತರಣೆಗೆ ಪ್ರಕಾಶಕ, ಗ್ಯಾಲರಿ ಅಥವಾ ಯಾವುದೇ ಬಗೆಯ ಮಧ್ಯವರ್ತಿಯನ್ನು ಅವಲಂಬಿಸುವ ಅವಶ್ಯಕತೆಯಿಲ್ಲ. ಒಬ್ಬ ಸಹೃದಯ ತನ್ನಂಥ ಇತರ ಆಸಕ್ತರಿಗೆ ಹಂಚುತ್ತಾ ಹೋಗುತ್ತಾನೆ. ಹಾಗಾಗಿ ಇಲ್ಲಿ ವಿತರಣೆಯ ಖರ್ಚು ಕೃತಿಕಾರನ ಮೇಲೂ ಇರುವುದಿಲ್ಲ.

* ಕಲೆಯ ಅಥವಾ ಸಾಹಿತ್ಯದಂಥ ಸೃಜನಶೀಲ ಚಟುವಟಿಕೆಯಲ್ಲಿ ತೊಡಗಿಕೊಳ್ಳುವವರು ಅದರಿಂದ ಹಣಕಾಸು ಲಾಭವನ್ನಷ್ಟೇ ನಿರೀಕ್ಷಿಸುವವರಲ್ಲ. ಅದಕ್ಕಿಂತ ಹೆಚ್ಚಾಗಿ ಅಲ್ಲಿ ಕಲಾತ್ಮಕ ಅಭಿವ್ಯಕ್ತಿಗೆ ಹೆಚ್ಚಿನ ಮಹತ್ವ ಇರುತ್ತದೆ. ಅಭಿವ್ಯಕ್ತಿ ಎಂಬ ಪದವೇ ಹೇಳುತ್ತಿರುವಂತೆ ಅದೊಂದು ಸಂವಹನದ ಮಾದರಿ ಅಂದರೆ ತನ್ನ ಅನಿಸಿಕೆಯನ್ನು ಇತರರೊಂದಿಗೆ ಹಂಚಿಕೊಳ್ಳುವ ಕ್ರಿಯೆ.

ಸಹೃದಯನಿಲ್ಲದಿದ್ದರೆ ಕವಿ ಎಲ್ಲಿ? ಕವಿತೆ, ಕಥೆ, ಕಾದಂಬರಿ ಅಥವಾ ಕಲಾಕೃತಿಯೊಂದು ಹೆಚ್ಚು ಜನರಿಗೆ ತಲುಪುವುದು ಸಹೃದಯರು ಇತರರೊಂದಿಗೆ ಹಂಚಿಕೊಳ್ಳುವ ಮೂಲಕ. ಹೀಗೆ ಹಂಚಿಕೊಳ್ಳುವ ಕ್ರಿಯೆಗೆ ಕಾಪಿರೈಟ್ ಅಡ್ಡಿಪಡಿಸುವುದಿಲ್ಲ ಎಂದಾದರೆ ಹಂಚಿಕೆಯ ತೀವ್ರತೆ ಮತ್ತು ಪ್ರಮಾಣಗಳೆರಡೂ ಹೆಚ್ಚುತ್ತವೆ.

* ಈ ಪರೋಪಕಾರಗಳನ್ನೆಲ್ಲಾ ಬದಿಗಿಟ್ಟು ನೋಡಿದರೂ ಮುಕ್ತ ಕೃತಿ ಮಾದರಿಯಲ್ಲಿ ಲಾಭಗಳಿವೆ. ಯಾವುದಾದರೂ ಒಂದು ಹಂತದಲ್ಲಿ ಕೃತಿಕಾರ ತನ್ನ ಕೃತಿಯನ್ನು ಮಾರಾಟ ಮಾಡಲು ನಿರ್ಧರಿಸಿದರೆ ಅದಕ್ಕೆ ಯಾವ ನಿರ್ಬಂಧವೂ ಇಲ್ಲ.

ಹಾಗೆಯೇ ಕೃತಿಯನ್ನು ಉಚಿತವಾಗಿ ಬಳಸಿಕೊಳ್ಳುವುದಕ್ಕೆ ಬೇಕಾದ ಷರತ್ತುಗಳನ್ನು ವಿಧಿಸುವ ಅನುಕೂಲವೂ ಇಲ್ಲಿದೆ. ಅಂದರೆ ಕೃತಿಯೊಂದನ್ನು ಶೈಕ್ಷಣಿಕ ಅಥವಾ ವಾಣಿಜ್ಯೇತರ ಉದ್ದೇಶಗಳಿಗೆ ಮುಕ್ತವಾಗಿಟ್ಟು ವಾಣಿಜ್ಯ ಉದ್ದೇಶಗಳಿಗೆ ಬಳಸುವಾಗ ನಿರ್ದಿಷ್ಟ ಶುಲ್ಕ ವಿಧಿಸಬಹುದು.

* ಈ ಮುಕ್ತ ಕೃತಿಗಳ ಕ್ಷೇತ್ರದಲ್ಲಿ `ಕ್ರಿಯೇಟಿವ್ ಕಾಮನ್ಸ್~ ಬಹಳ ಕಡಿಮೆ ಅವಧಿಯಲ್ಲಿ ಜನಪ್ರಿಯವಾದ ಲೈಸೆನ್ಸಿಂಗ್ ವ್ಯವಸ್ಥೆ. ಕಾನೂನಿನ ದೃಷ್ಟಿಯಿಂದಲೂ ಬಹಳ ಗಟ್ಟಿಯಾದ ಲೈಸೆನ್ಸಿಂಗ್ ವ್ಯವಸ್ಥೆಯಾಗಿರುವ ಇದನ್ನು ಅಳವಡಿಸಿಕೊಳ್ಳುವುದೂ ಬಹಳ ಸುಲಭ.

ಕ್ರಿಯೇಟಿವ್ ಕಾಮನ್ಸ್ನ ಜಾಲತಾಣವನ್ನೊಮ್ಮೆ ಪ್ರವೇಶಿಸಿದರೆ ಈ ಲೈಸನ್ಸ್ನ ಸರಳತೆ ಅರ್ಥವಾಗುತ್ತದೆ. ಹಾಗೆಯೇ ಕೃತಿಕಾರನ ಎಲ್ಲಾ ಅಗತ್ಯಗಳನ್ನು ಪೂರೈಸುವ ವ್ಯವಸ್ಥೆಯೂ ಇದರೊಳಗಿದೆ.

ನಿರ್ದಿಷ್ಟ ಷರತ್ತುಗಳಿಗೆ ಅನುಗುಣವಾದ ಲೈಸೆನ್ಸ್ಗಳಂತೆಯೇ ನಿರ್ದಿಷ್ಟ ದೇಶಗಳಿಗೆ ಅನ್ವಯಿಸುವ ಲೈಸನ್ಸ್ಗಳೂ ಇವೆ. ಎಲ್ಲಾ ಬಗೆಯ ಜ್ಞಾನವೂ ವಸಾಹತೀಕರಣಕ್ಕೆ ಒಳಗಾಗುತ್ತಿರುವ ಹೊತ್ತಿನಲ್ಲಿ ಕಾಪಿರೈಟ್ ಕುರಿತ ಗಾಂಧೀಜಿಯ ನಿಲುವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾಗಿದೆ.

ಒಂದು ವೇಳೆ ಅವರೀಗ ಬದುಕಿದ್ದರೆ ತಮ್ಮ ಕೃತಿಗಳಿಗೆ ಖಂಡಿತವಾಗಿಯೂ ಸಾಂಪ್ರದಾಯಿಕ ಕಾಪಿರೈಟ್ ಬದಲಿಗೆ ಕ್ರಿಯೇಟಿವ್ ಕಾಮನ್ಸ್ ಅನ್ನು ಅಳವಡಿಸಿಕೊಳ್ಳುತ್ತಿದ್ದರು ಎಂಬುದರಲ್ಲಿ ನನಗೆ ಯಾವ ಸಂಶಯವೂ ಇಲ್ಲ.

(ಲೇಖಕರು ಆಲ್ಟರ್ನೇಟಿವ್ ಲಾ ಫೋರಂನ ಸ್ಥಾಪಕರಲ್ಲಿ ಒಬ್ಬರು ಹಾಗೂ ಮುಕ್ತ ಮಾದರಿಗಳನ್ನು ಸಾಂಸ್ಕೃತಿಕ ಕ್ಷೇತ್ರಕ್ಕೆ ಅಳವಡಿಸಲು ಕೆಲಸ ಮಾಡುತ್ತಿರುವ ಸಂಶೋಧಕ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.