ಶನಿವಾರ, ಜೂಲೈ 11, 2020
22 °C

ಮೀನಿನ ಹೊಟ್ಟೆಯೊಳಗಿನ ಕುಚ್ಚುಗಳು

ಬಿ.ಎಸ್. ಶೈಲಜಾ Updated:

ಅಕ್ಷರ ಗಾತ್ರ : | |

ಮೀನಿನ ಹೊಟ್ಟೆಯೊಳಗಿನ ಕುಚ್ಚುಗಳು‘ಡಾಲ್ಫಿನ್’ ಎಂಬುದು ಅತ್ಯಂತ ಆಕರ್ಷಕ ಮೀನು. ಇದೇ ಹೆಸರನ್ನು ಒಂದು ನಕ್ಷತ್ರಪುಂಜಕ್ಕೂ ಇರಿಸಿದ್ದಾರೆ. ಇದು ‘ಡೆಲ್ಫಿನಿಸ್’ ಎಂಬ ಪುಟ್ಟ ಪುಂಜ -ಗರುಡ ಪುಂಜದ (ಅಕ್ವಿಲಾ) ಮೂರು ನಕ್ಷತ್ರಗಳ ಸಮೀಪವೇ ಇದೆ. (ಗರುಡದ ಮೂರು ನಕ್ಷತ್ರಗಳನ್ನು ಹುಡುಕುವುದು ಸುಲಭ; ಮಧ್ಯದ ಪ್ರಕಾಶಮಾನ ನಕ್ಷತ್ರವೇ ಶ್ರವಣ- ಆಲ್ಟೇರ್) ಬರಿಗಣ್ಣಿನಿಂದ ಕಾಣುತ್ತದೆ. ಮೀನಿನ ಆಕಾರವನ್ನೂ ಕಲ್ಪಿಸಿಕೊಳ್ಳಬಹುದು.ಗ್ರೀಕ್ ಪುರಾಣದ ಪ್ರಕಾರ ಮತ್ಸ್ಯ ಕನ್ಯೆಯೊಬ್ಬಳ ಮನ ಒಲಿಸಿ ಅವಳ ಪ್ರೇಮಿಗೆ ತಲುಪಿಸಿದ ಮೀನು ಇದು. ಆ ಕೃತಜ್ಞತೆಗೆ ಆ ದೇವ ಪೊಸೈಡನ್ ಆಕಾಶದಲ್ಲೊಂದು ಜಾಗ ಕಲ್ಪಿಸಿದ. ಈ ಪುಟ್ಟ ಪುಂಜದ ಎಲ್ಲೆಯೊಳಗೆ ದುರ್ಬೀನು ಅಥವಾ ದೂರದರ್ಶಕದಿಂದ ಕಣ್ಣಾಡಿಸಿದರೆ ನಕ್ಷತ್ರಗಳ ಗೋಳ ಗುಚ್ಛವೊಂದು ಕಾಣುತ್ತದೆ. ಇದನ್ನು ವಿಲಿಯಂ ಹರ್ಷೆಲ್ ಮೊದಲ ಬಾರಿಗೆ 1785ರಲ್ಲಿಯೇ ಗುರುತಿಸಿದ. ಈಗ ಇದಕ್ಕೆ ‘ಎನ್‌ಜಿಸಿ 6934’ ಎಂಬ ಗುರುತಿನ ಸಂಖ್ಯೆ ಇದೆ. ದೊಡ್ಡ ದೂರದರ್ಶಕಗಳಲ್ಲಿ ಗುಚ್ಛದ ನಕ್ಷತ್ರಗಳನ್ನು ಬಿಡಿಬಿಡಿಯಾಗಿ ಗುರುತಿಸಬಹುದು.ಸುಮಾರು ಒಂದು ಲಕ್ಷ ನಕ್ಷತ್ರಗಳು ಈ ಗುಚ್ಛದಲ್ಲಿ  ಅಡಗಿರಬಹುದು. ಆದ್ದರಿಂದ ಗೋಳದ ವಿಸ್ತಾರ ಸುಮಾರು 50 ಜ್ಯೋತಿರ್ವರ್ಷ ಇದ್ದೀತು. ಅಂದರೆ ನಕ್ಷತ್ರಗಳ ದಟ್ಟಣಿ ಬಹಳ ಹೆಚ್ಚು ಎಂದಾಯಿತು. ಗುರುತ್ವ ಶಕ್ತಿ ಈ ಎಲ್ಲ ನಕ್ಷತ್ರಗಳನ್ನು ಇಟ್ಟಿಗೆ ಹಿಡಿದಿಟ್ಟಿದೆ. ಹಳದಿ ನಕ್ಷತ್ರಗಳೇ ಹೆಚ್ಚಾಗಿ ಇರುವ ಈ ಗುಚ್ಛ ಸುಮಾರು 10 ಬಿಲಿಯನ್ ವರ್ಷಗಳ ಹಿಂದೆ ಸೃಷ್ಟಿಯಾಯಿತು. ನೀಲಿ ನಕ್ಷತ್ರಗಳೆಲ್ಲಾ ್ಲತಮ್ಮ ಜೀವನ ಚಕ್ರವನ್ನು ಮುಗಿಸಿವೆ. ಸುಮಾರು 50000 ಜ್ಯೋತಿವರ್ಷಗಳ ದೂರದಲ್ಲಿದೆ. ಆಕಾಶಗಂಗೆಯ ಕೇಂದ್ರದ ದಿಕ್ಕಿನಲ್ಲೇ ಇದೆ.ಡೆಲ್ಫಿನಿಸ್‌ನಲ್ಲಿ ಇನ್ನೂ ಒಂದು ಗೋಳ ಗುಚ್ಛವಿದೆ. ಇದು ದೊಡ್ಡ ದೂರದರ್ಶಕಗಳಿಗೆ ಚುಕ್ಕೆಯಂತೆ ಮಾತ್ರ ಕಾಣುತ್ತದೆ.180000 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವುದೇ ಇದಕ್ಕೆ ಕಾರಣ. ಇದಕ್ಕೆ ‘ಎನ್‌ಜಿಸಿ 7006’ ಎಂಬ ಸಂಖ್ಯೆ ಇದೆ.ಹೀಗೆ ಡೆಲ್ಫಿನಿಸ್ ಮೂಲಕ ಕಣ್ಣಾಡಿಸುವಾಗ ನಿಮಗೆ ಇನ್ನೂ ಒಂದು ಚುಕ್ಕೆಯಲ್ಲದ ಚುಕ್ಕೆ ಕಾಣಬಹುದು. ಅದು ನಕ್ಷತ್ರ ಗುಚ್ಚವಲ್ಲ.ಪ್ಲಾನೆಟರಿ ನೆಬ್ಯಲಾ. ಸೂರ್ಯನಂತಹ ನಕ್ಷತ್ರಗಳ ಅವಸಾನ ಹಂತ. ಇದಕ್ಕೆ ‘ಎನ್‌ಜಿಸಿ 6891’ ಎಂಬ ಸಂಖ್ಯೆ ಇದೆ. ಇದೂ ಕೂಡ ದೂರದರ್ಶಕಗಳಿಂದ ಮಾತ್ರ ಗೋಚರವಾಗುವಷ್ಟು ಕ್ಷೀಣವಾದುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.