ಮಂಗಳವಾರ, ಮೇ 17, 2022
25 °C

ಮುಂಗಾರು ಮಳೆ ಪ್ರವೇಶ; ಕೃಷಿ ಕೆಲಸ ಚುರುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಗಾರು ಮಳೆ ಪ್ರವೇಶ; ಕೃಷಿ ಕೆಲಸ ಚುರುಕು

ಸಕಲೇಶಪುರ: ಈ ಬಾರಿ ಸುಮಾರು 20 ದಿನಗಳು ತಡವಾಗಿ ಮಲೆನಾಡಿನಲ್ಲಿ `ಮುಂಗಾರು ಮಳೆ~ ಭಾನುವಾರ ಸಂಜೆಯಿಂದ ಪ್ರವೇಶವಾಗಿದೆ.ಪಶ್ಚಿಮಘಟ್ಟದ 5600 ಅಡಿ ಎತ್ತರದ ಪುಷ್ಪಗಿರಿ ಬೆಟ್ಟ, 3700 ಅಡಿ ಎತ್ತರದ ಕುಮಾರ ಪರ್ವತ, ಹೊಸಹಳ್ಳಿ ಬೆಟ್ಟ, ಪಟ್ಲ ಬೆಟ್ಟ ಸೇರಿದಂತೆ ಬಿಸಿಲೆ, ಕೆಂಪುಹೊಳೆ, ಬಾಜೇಮನೆ, ಮೂರುಕಣ್ಣುಗುಡ್ಡ, ಕಾಡಮನೆ ರಕ್ಷಿತ ಅರಣ್ಯಗಳಿಗೆ ಹೊಂದಿಕೊಂಡಿರುವ ಬೆಟ್ಟಗಳು ಮಂಜಿನ ಮುಸುಕು ಹೊದ್ದುಕೊಂಡಿವೆ. ಭಾನುವಾರ ಮಧ್ಯಾಹ್ನದ ನಂತರ ಮಂಜಿನಿಂದ ಮುಚ್ಚಲ್ಪಟ್ಟಿದ್ದ ಬೆಟ್ಟಗಳ ತುದಿಗಳು ಮಳೆ ಮೋಡಗಳೊಂದಿಗೆ ವಿಲೀನಗೊಂಡಂತಾಗಿದ್ದವು. ಕಾಫಿ, ಏಲಕ್ಕಿ ತೋಟಗಳು ಹಾಗೂ ಕಾಡಿನಲ್ಲಿ ಕೆಲವು ಕೀಟಗಳು, ಕಪ್ಪೆಗಳು ಕೂಗುವ ಶಬ್ದ, ಸಂಜೆಯಾಗುತ್ತಲೇ ತಾಲ್ಲೂಕಿನಾದ್ಯಂತ ಗಾಳಿಯ ವೇಗ ಹೆಚ್ಚಾಗುತ್ತಿರುವುದು ಮುಂಗಾರು ಪ್ರವೇಶದ ಸೂಚನೆಗಳು ಎಂಬುದು ಪರಿಸರ ಪ್ರೇಮಿ ಗೊದ್ದು ಉಮೇಶ್ ಅಭಿಪ್ರಾಯ.ಕೃಷಿ ಚಟುವಟಿಕೆ ಕುಂಠಿತ: ವಾಡಿಕೆಯಂತೆ ಮಲೆನಾಡಿನಲ್ಲಿ ರೇವತಿ ಮಳೆ ಮೇ ಎರಡನೇ ವಾರದಿಂದ ಶುರುವಾಗಬೇಕು. ಜೂನ್ ತಿಂಗಳ ಪೂರ್ತಿ ಸಾರಾಸರಿ 600 ಮಿ.ಮೀ. ಮಳೆಯಾಗಬೇಕು. ಕಳೆದ ವರ್ಷ ಜೂನ್ 7ರಂದು ಮುಂಗಾರು ಶುರುವಾಗಿ ಇಡೀ ತಿಂಗಳು ಉತ್ತಮ ಮಳೆಯಾಗಿತ್ತು. ಆದರೆ ಈ ಬಾರಿ ಸುಮಾರು 20 ದಿನಗಳ ತಡವಾಗಿ ಮುಂಗಾರು ಶುರುವಾಗುತ್ತಿರುವುದರಿಂದ ಕೃಷಿ ಚಟುವಟೆಕೆಗಳೆಲ್ಲಾ ಕುಂಠಿತಗೊಂಡಿವೆ.ಪ್ರಸಕ್ತ ಹಂಗಾಮಿನಲ್ಲಿ ಜೂನ್ ಒಂದರಂದು ಮುಂಗಾರು ಆರಂಭಗೊಂಡಂತೆ ಕಂಡು ಬಂದರೂ ಕೆಲವೇ ಗಂಟೆಗಳ ಕಾಲ ಮಳೆ ಸುರಿದು ಹೋಯಿತು. ತಾಲ್ಲೂಕಿನಲ್ಲಿ ಮೇ ಕೊನೆಯ ವಾರದಲ್ಲಿ ಮುಂಗಾರು ಆರಂಭಗೊಂಡು, ಜೂನ್ ಮೊದಲ ವಾರದಲ್ಲಿ ಭತ್ತದ ದೀರ್ಘಾವಳಿ ತಳಿಗಳಾದ ಇಂಟಾನ್, ತುಂಗಾ, ರಾಜಮುಡಿ, ಚಿಪ್ಪುಗ ಇವುಗಳನ್ನು ಬಿತ್ತಿ ಸಸಿ ಮಡಿ ಸಿದ್ದಗೊಳಿಸಬೇಕು.

 

ಜುಲೈ ಮೊದಲನೇ ವಾರದಲ್ಲಿ ನಾಟಿ ಮಾಡಬೇಕಾಗಿರುವುದು ವಾಡಿಕೆ.  ಆದರೆ ಪ್ರಸಕ್ತ ಹಂಗಾಮಿನಲ್ಲಿ ಜೂನ್ 16 ಕಳೆದರೂ ನೀರಿನ ವ್ಯವಸ್ಥೆ ಇರುವ ಕೆಲವೇ ರೈತರನ್ನು ಬಿಟ್ಟು, ಉಳಿತ ರೈತರು ಸಸಿ ಮಡಿಯನ್ನು ಇನ್ನೂ ಸಹ ಸಿದ್ದಗೊಳಿಸಿಲ್ಲ. ಮಳೆ ಶುರುವಾಗಿ ಜೂನ್ ಕೊನೆಯ ವಾರದಲ್ಲಿ ಸಸಿ ಮಡಿ ಸಿದ್ದಗೊಳಿಸಿದರೂ ನಾಟಿ ಕಾರ್ಯ ಒಂದು ತಿಂಗಳು ತಡವಾಗುತ್ತದೆ. ನವೆಂಬರ್‌ನಲ್ಲಿ ಅತಿಯಾದ ಚಳಿ ಇರುವುದರಿಂದ ಕಾಳುಕಟ್ಟುವ ಭತ್ತದಲ್ಲಿ ಜೆಳ್ಳು ಹೆಚ್ಚಾಗಿ ಇಳುವರಿ ಕುಂಠಿಗೊಳ್ಳುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕ ಜಿ.ಎಚ್.ಯೋಗೀಶ್ `ಪ್ರಜಾವಾಣಿ~ಗೆ ಹೇಳುತ್ತಾರೆ.ಏಪ್ರಿಲ್ ಎರಡನೇ ವಾರದಲ್ಲಿ ಉತ್ತಮ ಮಳೆಯಾಗಿದ್ದರಿಂದ ತಾಲ್ಲೂಕಿನಲ್ಲಿ 500 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಸೆಣಬು ಬೆಳೆಯಲಾಗಿದೆ. ಮೇ ಹಾಗೂ ಜೂನ್ ತಿಂಗಳಲ್ಲಿ ಮಳೆ ಕೈಕೊಟ್ಟಿದ್ದರಿಂದ ಹಲವು ರೈತರ ಗದ್ದೆಗಳಲ್ಲಿ ಸೆಣಬು ಬೆಳೆ ಕುಂಠಿತಗೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.