ಗುರುವಾರ , ಮೇ 19, 2022
23 °C

ಮುಂಬೈನ ಹೊಸ ಜಾತಕ! (ಚಿತ್ರ: ಮೈ ಫ್ರೆಂಡ್ ಪಿಂಟೋ)

ಅಮಿತ್ ಎಂ.ಎಸ್. Updated:

ಅಕ್ಷರ ಗಾತ್ರ : | |

ಮುಂಬೈನ ಹೊಸ ಜಾತಕ! (ಚಿತ್ರ: ಮೈ ಫ್ರೆಂಡ್ ಪಿಂಟೋ)

ಪ್ರೀತಿ, ಪ್ರೇಮ, ಪ್ರಣಯ, ಹೊಡೆದಾಟ, ಹಾಸ್ಯ ಹೀಗೆ ಬಾಲಿವುಡ್ ಅಂಗಳದಲ್ಲಿ ಪುನಾವರ್ತನೆ ಯಾಗುತ್ತಿರುವ ಚಿತ್ರಗಳ ಮಾದರಿಯಲ್ಲಿ ಅಪರೂಪ ವೆನ್ನಬಹುದಾದ ಚಿತ್ರ `ಮೈ ಫ್ರೆಂಡ್ ಪಿಂಟೋ~. ಹಳ್ಳಿಯ ಮುಗ್ಧನೊಬ್ಬ ಮುಂಬೈಗೆ ಬಂದಾಗ ನಡೆಯುವ ಘಟನೆಗಳ ಹೂರಣವೇ `ಮೈ ಫ್ರೆಂಡ್ ಪಿಂಟೋ~ದ ಕಥಾವಸ್ತು.ಚಿತ್ರದಲ್ಲಿ ಜೀವನಶೈಲಿಯ ಕಟ್ಟುಪಾಡುಗಳಿಗೆ ಸಿಲುಕಿ ಬದಲಾಗುವ ಸ್ನೇಹಿತನ ಮನೋಭಾವದ ಚಿತ್ರಣವಿದೆ. ದೃಶ್ಯಗಳನ್ನು ಬೆಸೆಯುವಲ್ಲಿ ನವಿರುತನವಿದೆ. ಎಲ್ಲರಿಗೂ ಆಪ್ತವಾಗುತ್ತಾ ಹೋಗುವ ಪಾತ್ರವನ್ನು ಸ್ನೇಹ ಬಾಂಧವ್ಯದ ಹೆಸರಿನಲ್ಲಿ ಅತಿಯಾಗಿಸುವ ಗೋಜಿಗೆ ನಿರ್ದೇಶಕರು ಹೋಗುವುದಿಲ್ಲ. ಬದಲಾಗಿ ಹೊಸತೇನನ್ನೋ ಹೇಳುವ ತರಾತುರಿಗೆ ಒಳಗಾಗದೆ ಕಥಾಹಂದರದ ಚೌಕಟ್ಟಿನಲ್ಲೇ ಚಿತ್ರಕ್ಕೊಂದು ರೂಪ ನೀಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ರಾಘವ್ ಧರ್.

 

ಆದರೆ ಈ ಚೌಕಟ್ಟೇ ಅದರ ದೊಡ್ಡ ಮಿತಿ. ಸ್ನೇಹವನ್ನು ವಿಜೃಂಭಿಸದಂತೆ ತಡೆಯುವ ಭರದಲ್ಲಿ ಅತಿರೇಕ ಸನ್ನಿವೇಶಗಳನ್ನು ಯಥೇಚ್ಛ ಸೃಷ್ಟಿಸಿದ್ದಾರೆ. ಅಲ್ಲಲ್ಲಿ ಭಾವನೆಗಳನ್ನು ಕಟ್ಟಿಕೊಡುವ ಸಲುವಾಗಿ ಸನ್ನಿವೇಶಗಳ ಮಧ್ಯೆ ಸೃಷ್ಟಿಸಿರುವ ಮೌನ ಗಾಢವಾಗಿದ್ದರೂ ಆಪ್ತ ವಾಗುವುದಿಲ್ಲ. ಇಂಥ ಹಲವು ಮಿತಿಗಳ ನಡುವೆಯೂ ಮನರಂಜನೆಯನ್ನು ನೀಡುವಲ್ಲಿ ಚಿತ್ರ ಸಫಲವಾಗುತ್ತದೆ.ಮೈಕಲ್ ಪಿಂಟೋ (ಪ್ರತೀಕ್ ಬಬ್ಬರ್) ಆಧುನಿಕ ಪ್ರಪಂಚವನ್ನು ಅರಿಯದ ಮುಗ್ಧ. ಆತನಲ್ಲಿ ಕನಸುಗಳೇ ಇರುವುದಿಲ್ಲ. ತನ್ನಲ್ಲಿ ಅಡಗಿರುವ ಸಂಗೀತದ ಮಹತ್ವದ ಅರಿವೂ ಆತನಿಗಿಲ್ಲ. ತನ್ನನ್ನು ಅತಿಯಾಗಿ ಪ್ರೀತಿಸುವ ತಾಯಿಯ ಹೊರತಾಗಿ ಆತನಿಗೆ ಆಪ್ತರಾದವರು ಚರ್ಚ್‌ನ ಪಾದ್ರಿ ಮತ್ತು ಅವನ ಬಾಲ್ಯ ಸ್ನೇಹಿತ ಸಮೀರ್ (ಅರ್ಜುನ್ ಮಾಥುರ್) ಮಾತ್ರ. ತಾಯಿಯ ಸಾವಿನ ಬಳಿಕ ಮುಂಬೈಗೆ ಪಿಂಟೋ ಬಂದ ನಂತರ ಒಂದೇ ದಿನದಲ್ಲಿ ನಡೆಯುವ ಘಟನಾವಳಿಗಳ ಸುತ್ತ ಇಡೀ ಚಿತ್ರ ಸುತ್ತುತ್ತದೆ.ಒಂದು ರಾತ್ರಿ ಕಳೆಯುವುದರೊಳಗೆ ಅಪರಿಚಿತ ಮಾಯಾ ನಗರಿಯಲ್ಲಿ ಪಿಂಟೋ ಹತ್ತಾರು ಜನರನ್ನು ಭೇಟಿ ಮಾಡುತ್ತಾನೆ. ನೂರಾರು ಜನ ಆತನ ಸ್ನೇಹಿತರಾಗುತ್ತಾರೆ. ಕಥೆಗೆ ಪೂರಕವಾಗಿ ಬರುವ ಕೆಲವು ಪಾತ್ರಗಳು ಅಸಂಗತ ವೆನಿಸುತ್ತವೆ. ಚಿತ್ರವಿಚಿತ್ರವಾಗಿ ವರ್ತಿಸುವ ಡಾನ್ (ಮಕರಂದ್ ದೇಶ್‌ಪಾಂಡೆ), ಆತನ ಗೆಳತಿ ರೇಷ್ಮಾ (ದಿವ್ಯಾ ದತ್ತ), ಡಾನ್‌ನ ಸಹಾಯಕರು ಚಿತ್ರದಲ್ಲಿನ ಹಾಸ್ಯದ ನೆಪದ ಹಾಸ್ಯಾಸ್ಪದ ಪಾತ್ರಗಳು.ಇಡೀ ಚಿತ್ರವನ್ನು ಪ್ರತೀಕ್ ಆವರಿಸಿಕೊಳ್ಳುತ್ತಾರೆ. ಅವರ ನಟನೆ ಕಳಾಹೀನ ಸನ್ನಿವೇಶಗಳಿಗೂ ಜೀವ ತುಂಬುತ್ತದೆ. ಆದರೆ ಅವರ ಹೊರತಾಗಿ ಉಳಿದಾವ ಪಾತ್ರಗಳೂ ಮಹತ್ವ ಪಡೆದುಕೊಳ್ಳುವುದಿಲ್ಲ. ಪಿಂಟೋನ ಮನಸಿಗೆ ಹತ್ತಿರವಾಗುವ ಮ್ಯಾಗಿ (ಕಲ್ಕಿ ಕೊಯೆಚ್ಲಿನ್) ಪಾತ್ರ ಚಿತ್ರದಲ್ಲಿ ಬಂದು ಹೋಗುವ ಹತ್ತಾರು ಪಾತ್ರಗಳ ಮಧ್ಯೆ ಕಳೆದುಹೋಗುತ್ತದೆ. ನೃತ್ಯಗಾತಿಯಾಗಬೇಕೆಂಬ ಹಂಬಲದಿಂದ ಮುಂಬೈಗೆ ಬರುವ ಆಕೆಯ ಪಾತ್ರ ಮೂರು ದೃಶ್ಯಗಳಿಗೆ ಮಾತ್ರ ಸೀಮಿತ. ಗೆಳೆಯನ ಪತ್ನಿ ಸುಹಾನಿ (ಶ್ರುತಿ ಸೇಥ್) ನಟನೆಯಲ್ಲಿ ಚುರುಕುತನವಿಲ್ಲ. ರಾಜೇಂದ್ರನಾಥ್ ಜುಟ್ಷಿ, ಮನೀಶಾ ಕೊಯಿರಾಲಾ, ನಾಸಿರುದ್ದೀನ್ ಷಾ, ಶಕೀಲ್ ಖಾನ್, ಅಸೀಮ್, ಫೈಸಲ್ ರಶೀದ್, ಶಿಖಾ ತಿಲ್ಸಾನಿಯಾ ಒಂದಾದ ಮೇಲೊಂದರಂತೆ ಬರುವ ಪಾತ್ರಗಳು ಪ್ರೇಕ್ಷಕನನ್ನು ಗೊಂದಲದಲ್ಲಿ ಮುಳುಗಿಸುತ್ತವೆ.ಹೊಸ ವರ್ಷಕ್ಕೆ ಕಾಲಿಡುವ ಮುಂಬೈನ ಸಂಭ್ರಮವನ್ನು ಛಾಯಾಗ್ರಾಹಕ ಗಾರ್ಜಿ ತ್ರಿವೇದಿ ವರ್ಣರಂಜಿತವಾಗಿ ಮೂಡಿಸಿದ್ದಾರೆ. ಅಜಯ್- ಅತುಲ್ ಸಂಗೀತದಲ್ಲಿ ಹೊಸತನ ವಿಲ್ಲ. ಪ್ರತೀಕ್‌ಗೆ ಹೊಸ ಇಮೇಜ್ ನೀಡಬಲ್ಲ ಈ ಚಿತ್ರಕ್ಕೆ ಅವರ ನಟನೆಯೇ ಜೀವಾಳ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.