ಭಾನುವಾರ, ನವೆಂಬರ್ 17, 2019
29 °C

ಮುಖ್ಯಮಂತ್ರಿಗೆ ಮನವಿಗಳ ಮಹಾಪೂರ

Published:
Updated:

ಹುಬ್ಬಳ್ಳಿ: ಧಾರವಾಡ ನಗರ ಹಾಗೂ ವಿವಿಧ ತಾಲ್ಲೂಕುಗಳಲ್ಲಿ ಶನಿವಾರ ನಡೆದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ್ದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಭಾನುವಾರ ಬೆಳಿಗ್ಗೆ ಬೆಂಗಳೂರಿಗೆ ವಾಪಸಾದರು.

ಮುಂಜಾನೆ 5.30ಕ್ಕೆ ಎದ್ದ ಅವರು ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ 9.30ಕ್ಕೆ ವಿಶೇಷ ವಿಮಾನದಲ್ಲಿ ಪ್ರಯಾಣ ಬೆಳೆಸಿದರು ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿಗಳು ತಮ್ಮ ನಿವಾಸದಲ್ಲಿರುವುದು ತಿಳಿದ ನೂರಾರು ಮಂದಿ ವಿವಿಧ ವಿಷಯಗಳಿಗೆ ಸಂಬಂಧಪಟ್ಟ ಮನವಿ ಪತ್ರಗಳ ಜೊತೆಗೆ ಆಗಮಿಸಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಕೆಲವು ಸಂಘಟನೆಗಳ ಪ್ರತಿನಿಧಿಗಳು ಕೂಡ ಮನವಿ ನೀಡಿದರು.

ಈ ಮಧ್ಯೆ ಬಿಡುವು ಮಾಡಿಕೊಂಡ ಮುಖ್ಯಮಂತ್ರಿಗಳು ನಗರದ ಆರ್‌ಎಸ್‌ಎಸ್ ಕಚೇರಿಗೆ ಭೇಟಿ ನೀಡಿ ಮುಖಂಡರ ಜೊತೆ ಮಾತನಾಡಿ ವಾಪಸಾದರು ಎಂದು ಬಿಜೆಪಿಯ ಹಿರಿಯ ಮುಖಂಡರು ತಿಳಿಸಿದ್ದಾರೆ.

ತೆರಿಗೆ ವಿನಾಯಿತಿ ನೀಡಿ: ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ವಾಯವ್ಯ ಸಾರಿಗೆ ಮಜ್ದೂರ್ ಸಂಘದ ಸದಸ್ಯರು ಮೋಟಾರ್ ವಾಹನ ತೆರಿಗೆ ವಿನಾಯಿತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಗುಲ್ಬರ್ಗದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿರುವಂತೆ ತೆರಿಗೆ ವಿನಾಯಿತಿ ನೀಡಬೇಕು, ವಾಯವ್ಯ ಸಾರಿಗೆ ಮಜ್ದೂರ್ ಸಂಘಕ್ಕೆ ವಿಶೇಷ ಅನುದಾನ ನೀಡಬೇಕು, ಕಾರ್ಮಿಕರ ವೇತನ ಪರಿಷ್ಕರಣೆಗೆ ಮುಂದಾಗಬೇಕು, ಸಂಘದ ಮಾನ್ಯತೆಗಾಗಿ ಚುನಾವಣೆ ನಡೆಸಲು ಅವಕಾಶ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಡಲಾಯಿತು.

ಸಂಘದ ಕಾರ್ಯಾಧ್ಯಕ್ಷ ಎಚ್.ಜಿ.ಕೊಪ್ಪದ, ಪ್ರಧಾನ ಕಾರ್ಯದರ್ಶಿ ಹನಮಂತಪ್ಪ ಎಸ್. ಇಟಗಿ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)