ಶುಕ್ರವಾರ, ಏಪ್ರಿಲ್ 23, 2021
24 °C

ಮುಗಿದ ಬಹಿರಂಗ ಚುನಾವಣಾ ಪ್ರಚಾರ; ಉತ್ತರ ಸಿಗದ ಜೀವಂತ ಸಮಸ್ಯೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬದಿಯಡ್ಕ: ಕೇರಳ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರ ಸೋಮವಾರ ಮುಕ್ತಾಯವಾಗಿದೆ. ಕೊನೆಯ ಹಂತದ ಚುನಾವಣಾ ಪ್ರಚಾರದಲ್ಲಿ ರಾಷ್ಟ್ರ ಹಾಗೂ ರಾಜ್ಯ ಮುಖಂಡರು ಜಿಲ್ಲಾ ಪ್ರತಿನಿಧಿಗಳ ಜತೆ ಹಳ್ಳಿಯ ಮನೆ ಮನೆಗಳಿಗೆ ಭೇಟಿ ನೀಡಿದ್ದಾರೆ.



ಎಂಡೋಸಲ್ಫಾನ್, ಬೆಲೆಯೇರಿಕೆ, ಗಡಿಸಮಸ್ಯೆಗಳು, ರಾಜಕೀಯ ಹಗರಣಗಳು, ರಾಜ್ಯ ಹಾಗೂ ರಾಷ್ಟ್ರೀಯ ಭ್ರಷ್ಟಾಚಾರ ಆರೋಪಗಳೇ ಪ್ರಚಾರದಲ್ಲಿತ್ತು. ಆದರೆ ಯಾವ ಪಕ್ಷಗಳೂ ಹಳ್ಳಿಯ ಜನರ ಪ್ರಾದೇಶಿಕ ಅಗತ್ಯಗಳ ಬಗ್ಗೆ ಪ್ರಸ್ತಾಪವನ್ನೇ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ.



ಅನೇಕ ಹಳ್ಳಿಗಳಲ್ಲಿ ಕುಡಿಯುವ ನೀರು, ರಸ್ತೆ ಸೌಲಭ್ಯ, ಶಿಕ್ಷಣ ವ್ಯವಸ್ಥೆ, ಕೃಷಿಗೆ ಕಾಡುಪ್ರಾಣಿಗಳ ಉಪಟಳ,   ಪ್ರಾಥಮಿಕ ಆರೋಗ್ಯ ಕೇಂದ್ರದ ಅನಾನುಕೂಲಗಳು, ಸಾರಿಗೆ ಅವ್ಯವಸ್ಥೆ, ಕೃಷಿಕರ ಸಮಸ್ಯೆಗಳು ಸೇರಿದಂತೆ ನೂರಾರು ಸಮಸ್ಯೆಗಳು ಜೀವಂತವಾಗಿದೆ. ಈ ಸಮಸ್ಯೆಗಳ ಪರಿಹಾರದ ಬಗ್ಗೆ ಯಾವ ಪಕ್ಷಗಳೂ ಸಮಾಧಾನಕರ ಪ್ರಣಾಳಿಕೆಯನ್ನು ಮತದಾರರ ಮುಂದಿಟ್ಟಿಲ್ಲ. ಎಲ್ಲಾ ಪಕ್ಷಗಳು ಪರಸ್ಪರ ಆರೋಪ- ಪ್ರತ್ಯಾರೋಪದ ಪಟ್ಟಿ ನೀಡುತ್ತಾ, ಮತ ಸಂಗ್ರಹವೇ ಮೂಲವಾಗಿರುವಂತೆ ವರ್ತಿಸಿದೆ ಎಂಬ ಮಾತು ಕೇಳಿಬಂದಿದೆ.



ಚುನಾವಣೆ ಬಹಿಷ್ಕರಿಸಲು ನಿರ್ಧಾರ: ಮುಳ್ಳೇರಿಯಾ- ಬದಿಯಡ್ಕ- ಕುಂಬಳೆ, ಬೆಳಿಂಜ- ಬದಿಯಡ್ಕ, ಮುಳ್ಳೇರಿಯ- ಬೆಳ್ಳೂರು ಪ್ರದೇಶದ ಅನೇಕ ಗ್ರಾಮೀಣ ರಸ್ತೆಗಳು ದುರಸ್ತಿಯಾಗದೆ ಇರುವುದರಿಂದ ಮುಂದಿನ ಮಳೆಗಾಲದಲ್ಲಿ ಸಂಚಾರವೇ ಅಸಾಧ್ಯವಾಗಬಹುದು. ಪೆರ್ಲ ಪರಿಸರದ ಬಾಕಿಲಪದವು- ನೇರೋಳು- ಪೆಲತ್ತಡ್ಕ, ಸೇರಾಜೆ-ಕುಕ್ಕಾಜೆ, ಪೂವನಡ್ಕ-ಮಾಣಿಲ ಹೊಳೆಗಳಿಗೆ ಸೇತುವೆ ನಿರ್ಮಾಣದ ಐತಿಹಾಸಿಕ ಬೇಡಿಕೆಯೂ ಈಡೇರಿಲ್ಲ. ಈ ಪೈಕಿ ಬೆಳಿಂಜ-ಬದಿಯಡ್ಕ ರಸ್ತೆ ಸಂಚಾರಿ ಮತದಾರರು ಈಗಾಗಲೇ ಮತದಾನ ಬಹಿಷ್ಕರಿಸಿದ್ದಾರೆ ಎನ್ನಲಾಗಿದೆ. ನೀರ್ಚಾಲು ಪರಿಸರದ ಬದಿಯಡ್ಕ ಗ್ರಾಪಂ ವ್ಯಾಪ್ತಿಯ 18ನೇ ವಾರ್ಡ್‌ನ ಕೆದಿಲ- ಕೋಡಿಂಗಾಲ್, ಗುಡ್ಡೆ ಪ್ರದೇಶದ ಸುಮಾರು 30 ಕುಟುಂಬಗಳು ನೀರಾವರಿ ಸಮಸ್ಯೆ ಪರಿಹಾರ ತನಕ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.



ಸರ್ಕಾರಿ ಅರಣ್ಯದ ಸರಹದ್ದಿನಲ್ಲಿರುವ ಅಡೂರು, ಪಾಂಡಿ, ಬೆಳ್ಳೆಚ್ಚೇರಿ, ಕಾರಡ್ಕ, ಮುಳಿಯಾರು ಪ್ರದೇಶದ ಅನೇಕ ಕಡೆಗಳಲ್ಲಿ ಕೃಷಿಭೂಮಿಗಳಿಗೆ ಕಾಡುಪ್ರಾಣಿಗಳ ಉಪಟಳವಿದೆ. ರೈತರು ಬೆಳೆದ ಬಹುತೇಕ ಬೆಳೆಗಳೂ ಕೂಡಾ ಕಾಡು ಪ್ರಾಣಿಗಳ ಪಾಲಾಗುತ್ತಿದೆ. ಕಾಡುಪ್ರಾಣಿಗಳನ್ನು ನಿಯಂತ್ರಿಸುವಂತೆ ಅರಣ್ಯ ಇಲಾಖೆಗೆ ನೀಡಿದ ಮನವಿಗಳು ಪರಿಣಾಮ ಬೀರಿಲ್ಲ. ಕಾರ್ಮಿಕರ ಕೊರತೆ ಕೃಷಿ ಕ್ಷೇತ್ರವನ್ನು ಬಿಡದೆ ಕಾಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಗದ್ದೆಗಳು ಬರಡಾಗಿದೆ. ಕೃಷಿ ಉತ್ಪನ್ನಗಳ ಮಾರುಕಟ್ಟೆ ಧಾರಣೆ ನೆಲಕಚ್ಚಿದೆ.



ಕೇರಳ ಸರ್ಕಾರ ಈ ಆರ್ಥಿಕ ವರ್ಷದಲ್ಲಿ ಜಿಲ್ಲೆಯ ಅಡಿಕೆ ಕೃಷಿಕರಿಗೆ ತೆಗೆದಿರಿಸಿದ 10 ಕೋಟಿ ಸಹಾಯಧನ ಇನ್ನೂ ವಿತರಣೆಯಾಗಿಲ್ಲ. ಈ ಬಗ್ಗೆ ಕೃಷಿಕರು ಮತ್ತು ಕೃಷಿಕ ಸಂಘಟನೆಗಳೂ ಮೌನವಾಗಿದೆ ಎಂಬ ಆಕ್ಷೇಪ ಕೇಳಿಬರುತ್ತಿದೆ. ಇಂತಹ ಕೆಲವು ಸಮಸ್ಯೆಗಳನ್ನು ಒಡಲಲ್ಲಿಟ್ಟುಕೊಂಡು ಮತದಾರ 13ರಂದು (ಬುಧವಾರ) ಮತ ಚಲಾಯಿಸಲಿದ್ದಾನೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.