ಸೋಮವಾರ, ಮಾರ್ಚ್ 8, 2021
31 °C

ಮುಟ್ಟದ ಹಣಕ್ಕೆ ಜೀವ ಬಿಟ್ಟ ಡಿವೈಎಸ್ಪಿ ಹಂಡಿಬಾಗ್‌!

ಎಂ.ಸಿ.ಮಂಜುನಾಥ್ Updated:

ಅಕ್ಷರ ಗಾತ್ರ : | |

ಮುಟ್ಟದ ಹಣಕ್ಕೆ ಜೀವ ಬಿಟ್ಟ ಡಿವೈಎಸ್ಪಿ ಹಂಡಿಬಾಗ್‌!

ಬೆಂಗಳೂರು: ‘ಉದ್ಯಮಿ ತೇಜಸ್‌ಗೌಡನ ಸ್ನೇಹಿತನೊಬ್ಬ ₹ 10 ಲಕ್ಷ ಹಣವಿದ್ದ ಬ್ಯಾಗನ್ನು ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಅವರ ಮನೆಯ ಕಾಂಪೌಂಡ್ ಮೇಲೆ ಇಡುತ್ತಾನೆ. ಕೆಲವೇ ಕ್ಷಣಗಳಲ್ಲಿ ಪ್ರವೀಣ್ ಖಾಂಡ್ಯನ ಸಹಚರ ಬಂದು, ಆ ಬ್ಯಾಗ್ ತೆಗೆದುಕೊಂಡು ಹೋಗುತ್ತಾನೆ. ಈ ರೀತಿ  ಹಣ ವರ್ಗವಾದರೂ ಎಫ್‌ಐಆರ್‌ನಲ್ಲಿ ತಮ್ಮ ಹೆಸರು ಸೇರಿಸಿದ್ದರಿಂದ ನೊಂದು ಕಲ್ಲಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ...’ಇದು, ಸಿಐಡಿ ಅಧಿಕಾರಿಗಳು ಗೃಹ ಇಲಾಖೆಗೆ ಸಲ್ಲಿಸಿರುವ 14 ಪುಟಗಳ ಪ್ರಾಥಮಿಕ ವರದಿಯಲ್ಲಿರುವ ಪ್ರಮುಖ ಅಂಶ. ‘ಅದು ಅಪಹರಣದ ದುಡ್ಡು ಎಂಬುದನ್ನು ತಿಳಿಯದ ಕಲ್ಲಪ್ಪ, ಖಾಂಡ್ಯ ಪ್ರವೀಣ್‌ನ ಮಾತಿನಂತೆ ಅಪರಿಚಿತ ವ್ಯಕ್ತಿಯಿಂದ ಹಣದ ಬ್ಯಾಗ್ ಪಡೆಯಲು ಒಪ್ಪಿಕೊಂಡಿದ್ದರು’ ಎಂದು ಅಧಿಕಾರಿಗಳು ವರದಿಯಲ್ಲಿ ಹೇಳಿದ್ದಾರೆ.‘ವಿಶ್ವ ಹಿಂದೂ ಪರಿಷತ್‌ ಮುಖಂಡ ಪ್ರವೀಣ್‌ ಖಾಂಡ್ಯ ಹಾಗೂ ಕಲ್ಲಪ್ಪ ನಡುವೆ ಪರಿಚಯವಿತ್ತು. ಅದನ್ನೇ ದುರುಪಯೋಗ ಮಾಡಿಕೊಂಡ ಖಾಂಡ್ಯ, ಹಣಕಾಸಿನ ವ್ಯವಹಾರಕ್ಕೆ ಕಲ್ಲಪ್ಪ ಅವರನ್ನು ಬಳಸಿಕೊಂಡಿದ್ದಾನೆ. ಆದರೆ, ಅಪಹರಣಕ್ಕೂ ಡಿವೈಎಸ್ಪಿಗೂ ಯಾವುದೇ ಸಂಬಂಧವಿಲ್ಲ’ ಎಂದು ವರದಿಯಲ್ಲಿದೆ.ವರದಿಯಲ್ಲೇನಿದೆ: ‘ಕಲ್ಮನೆ ಚಿಟ್‌ಫಂಡ್‌ನ ನಟರಾಜ್‌ಗೆ ತೇಜಸ್‌ ಗೌಡ ₹ 25 ಲಕ್ಷ ಕೊಡಬೇಕಿತ್ತು. ಹಲವು ತಿಂಗಳಾದರೂ ಹಣ ಕೊಡದಿದ್ದಾಗ ಆತ ಡಿವೈಎಸ್ಪಿ ಕಲ್ಲಪ್ಪ ಅವರಿಗೆ ದೂರು ಕೊಟ್ಟಿದ್ದ. ಇದೇ ಮೇ ಮೊದಲ ವಾರದಲ್ಲಿ ಇಬ್ಬರನ್ನೂ ವಿಚಾರಣೆಗಾಗಿ ತಮ್ಮ ಕಚೇರಿಗೆ ಕರೆಸಿಕೊಂಡಿದ್ದ ಡಿವೈಎಸ್ಪಿ, ಆದಷ್ಟು ಬೇಗ ಹಣ ಕೊಡುವಂತೆ ತೇಜಸ್‌ಗೌಡನಿಗೆ ಹೇಳಿದ್ದರು. ಆಗ ಆತ ಒಂದು ತಿಂಗಳ ಕಾಲಾವಕಾಶ ಕೇಳಿದ್ದ.’‘ತಿಂಗಳು ಕಳೆದರೂ ಹಣ ಬಾರದಿದ್ದಾಗ ನಟರಾಜ್, ಖಾಂಡ್ಯನ ನೆರವು ಕೋರಿದ್ದ. ತೇಜಸ್‌ಗೌಡನನ್ನು ಅಪಹರಿಸಿ ಹಣ ವಸೂಲಿ ಮಾಡಲು ನಿರ್ಧರಿಸಿದ ಖಾಂಡ್ಯ, ಈ ಕೆಲಸಕ್ಕೆ ಐದು ವಿದ್ಯಾರ್ಥಿಗಳು, ಜಿಮ್‌ ತರಬೇತುದಾರ ಸೇರಿದಂತೆ ಎಂಟು ಮಂದಿಯ ತಂಡ ರಚಿಸಿದ್ದ. ಅದರಂತೆ ಜೂನ್ 27ರಂದು ಚಿಕ್ಕಮಗಳೂರಿನ ಅಯ್ಯನಕೆರೆ ಗ್ರಾಮದಿಂದಲೇ ಆತನನ್ನು ಅಪಹರಿಸಿದ್ದ ಆರೋಪಿಗಳು, ನಂತರ ಬೆಂಗಳೂರಿನ ಸಂಜಯ್‌ನಗರಕ್ಕೆ ಕರೆದುಕೊಂಡು ಬಂದಿದ್ದರು.’‘ಇಲ್ಲಿ ಖಾಂಡ್ಯನ ಆಪ್ತ ನವೀನ್‌ ಶೆಟ್ಟಿ ಒಡೆತನದ ನಾಯಿಗಳ ಸಾಕಾಣಿಕೆ ಕೇಂದ್ರದಲ್ಲಿರಿಸಿ ಇಡೀ ದಿನ ಚಿತ್ರಹಿಂಸೆ ಕೊಟ್ಟಿದ್ದರು. ನಂತರ ₹ 10 ಲಕ್ಷ ಕೊಡುವುದಾಗಿ ಒಪ್ಪಿಕೊಂಡ ತೇಜಸ್‌, ಚಿಕ್ಕಮಗಳೂರಿನಲ್ಲಿರುವ ಶಿವದತ್ತು ಎಂಬುವನಿಗೆ ಹಣ ಹೊಂದಿಸಲು ಹೇಳಿದ್ದ. ಮರುದಿನ ಹಣ ಹೊಂದಿಸಿದ ಆತ, ತೇಜಸ್‌ನ ಸೂಚನೆಯಂತೆ ಅದನ್ನು ಪವನ್‌ ಎಂಬಾತನ ಕೈಗೆ ಕೊಟ್ಟಿದ್ದ.’‘ಬಳಿಕ ಕಲ್ಲಪ್ಪ ಅವರಿಗೆ ಕರೆ ಮಾಡಿದ್ದ ಖಾಂಡ್ಯ, ‘ನಾನು ಊರಿನಲ್ಲಿಲ್ಲ. ಪವನ್ ಎಂಬಾತ ಬಂದು ಹಣ ಕೊಡುತ್ತಾನೆ. ಅದನ್ನು ನಿಮ್ಮ ಬಳಿಯೇ ಇಟ್ಟುಕೊಂಡಿರಿ. ನಮ್ಮ ಹುಡುಗ ಬಂದು ಸಂಗ್ರಹಿಸಿ ಕೊಂಡು ಹೋಗುತ್ತಾನೆ’ ಎಂದಿದ್ದ. ಅಂತೆಯೇ, ಜೂನ್ 28ರ ಮಧ್ಯಾಹ್ನ ಕಲ್ಲಪ್ಪ ಅವರ ಮನೆ ಹತ್ತಿರ ಹೋಗಿದ್ದ ಪವನ್, ಹಣದ ಬ್ಯಾಗನ್ನು ಕಾಂಪೌಂಡ್ ಮೇಲೆ ಇಟ್ಟಿದ್ದ.’‘ಕಲ್ಲಪ್ಪ ಅವರು ಅದನ್ನು ತೆಗೆದುಕೊಳ್ಳುವ ಮೊದಲೇ ಇನ್ನೊಂದು ರಸ್ತೆಯಿಂದ ಬಂದ ಪ್ರದೀಪ್, ‘ಸರ್, ಖಾಂಡ್ಯ ಪ್ರವೀಣ್ ಕಳುಹಿಸಿದ್ದಾರೆ’ ಎಂದು ಬ್ಯಾಗ್ ತೆಗೆದುಕೊಂಡು ಹೋಗಿದ್ದ. ತಮ್ಮ ವಿರುದ್ಧ ಎಫ್‌ಐಆರ್ ದಾಖಲಾಗುವವರೆಗೂ ಅದು ಅಪಹರಣದ ಹಣ ಎಂಬುದು ಕಲ್ಲಪ್ಪ ಅವರಿಗೆ ತಿಳಿದಂತಿರಲಿಲ್ಲ’ ಎಂದು ಅಧಿಕಾರಿಗಳು ವರದಿಯಲ್ಲಿ ವಿವರಿಸಿದ್ದಾರೆ.‘ಆ ದಿನ ಅರಸೀಕೆರೆಯಲ್ಲಿದ್ದ ಖಾಂಡ್ಯ, ರಾತ್ರಿಯೇ ಚಿಕ್ಕಮಗಳೂರಿಗೆ ತೆರಳಿ ಪ್ರದೀಪ್‌ನಿಂದ ₹ 5 ಲಕ್ಷ ಪಡೆದುಕೊಂಡಿದ್ದ. ‘ಉಳಿದ ಹಣವನ್ನು ಈ ಬ್ಯಾಂಕ್ ಖಾತೆಗೆ ಜಮಾ ಮಾಡು’ ಎಂದು ಬೆಂಗಳೂರಿನ ಗಾಯತ್ರಿನಗರ ನಿವಾಸಿ ಯಶಸ್‌ (ಆರೋಪಿ) ಎಂಬಾತನ ತಂದೆಯ ಖಾತೆ ಸಂಖ್ಯೆ ಕೊಟ್ಟಿದ್ದ. ನಿವೃತ್ತ ಪೊಲೀಸ್ ಅಧಿಕಾರಿಯಾಗಿರುವ ಯಶಸ್‌ನ ತಂದೆಗೆ, ಮಗನ ಅಕ್ರಮಗಳ ಬಗ್ಗೆ ಮಾಹಿತಿ ಇರಲಿಲ್ಲ.’ಯಶವಂತಪುರದಲ್ಲಿ ಮಾತುಕತೆ: ‘ಹೆಚ್ಚು ಹಣವಾದ ಕಾರಣ ಬ್ಯಾಂಕ್ ಅಧಿಕಾರಿಗಳು ಪ್ರದೀಪ್‌ನಿಂದ ದಾಖಲೆಗಳನ್ನು ಕೇಳಿದ್ದರು. ಆತ ದಾಖಲೆ ಕೊಡದಿದ್ದಾಗ, ತಾಂತ್ರಿಕ ಕಾರಣ ಹೇಳಿ ಕಟ್ಟಿಸಿಕೊಳ್ಳದೆ ವಾಪಸ್ ಕಳುಹಿಸಿದ್ದರು.  ಈ ವಿಷಯ ತಿಳಿದ ಖಾಂಡ್ಯ, ಯಶಸ್‌ಗೆ ಹಣ ತಲುಪಿಸುವ ಜವಾಬ್ದಾರಿಯನ್ನು ಸ್ನೇಹಿತರಾದ ಗೌತಮ್ ಹಾಗೂ ಮಧುಸೂದನ್‌ಗೆ ವಹಿಸಿದ್ದ.’‘ಜೂನ್ 29ರ ರಾತ್ರಿ ಚಿಕ್ಕಮಗಳೂರಿನಿಂದ ಬಸ್‌ನಲ್ಲಿ ಹೊರಟ ಅವರಿಬ್ಬರೂ, ಬೆಳಗಿನ ಜಾವ 3.30ಕ್ಕೆ  ಯಶವಂತಪುರದ ಗೋವರ್ಧನ್‌ ಚಿತ್ರಮಂದಿರದ ಬಳಿ ಇಳಿದುಕೊಂಡರು. ಸ್ಯಾಂಟ್ರೋ ಕಾರಿನಲ್ಲಿ ಅಲ್ಲಿಗೆ ಬಂದ ಯಶಸ್, ಇವರಿಂದ ₹ 2.5 ಲಕ್ಷ ಪಡೆದುಕೊಂಡಿದ್ದ. ಅಲ್ಲದೆ, ಅಪಹರಣದ ತಂಡದ ಸದಸ್ಯರಿಗೆ ತಲಾ ₹ 40 ಸಾವಿರ ಹಂಚುವಂತೆ ಉಳಿದ ₹ 2.5 ಲಕ್ಷವನ್ನು   ಅವರ ಬಳಿಯೇ ಉಳಿಸಿ ಹೋಗಿದ್ದ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.ಎಸ್ಪಿ ಹೇಳಿದ್ದೇನು?: ‘30ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವ ಖಾಂಡ್ಯ ಪ್ರವೀಣ್ ಜತೆ ಸ್ನೇಹವೇಕೆ ಎಂದು ಕಲ್ಲಪ್ಪ ಅವರನ್ನು ಪ್ರಶ್ನಿಸಿದ್ದೆ. ಅದಕ್ಕೆ ಅವರು, ರಂಜಾನ್ ಸೇರಿದಂತೆ ಇನ್ನಿತರೆ ಸಂದರ್ಭಗಳಲ್ಲಿ ಆತನನ್ನು ಕಚೇರಿಗೆ ಕರೆಸಿ ಶಾಂತಿ ಕದಡದಂತೆ ಎಚ್ಚರಿಕೆ ನೀಡುತ್ತಿದ್ದೆ. ಅಲ್ಲದೆ, ಪೊಲೀಸ್ ಮಾಹಿತಿದಾರನಂತೆ ಇಟ್ಟುಕೊಂಡಿದ್ದೆ. ಇಷ್ಟು ಬಿಟ್ಟರೆ, ಬೇರೆ ರೀತಿಯ ಒಡನಾಟ ಇರಲಿಲ್ಲವೆಂದು  ಹೇಳಿದ್ದರು’ ಎಂದು ಎಸ್ಪಿ ಸಂತೋಷ್ ಬಾಬು ಹೇಳಿಕೆ ಕೊಟ್ಟಿದ್ದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.

*

55 ಮಂದಿಯ ವಿಚಾರಣೆ

‘ಬಂಧಿತ ಆರೋಪಿಗಳು, ಚಿಕ್ಕಮಗಳೂರಿನ ಹಿಂದಿನ ಎಸ್ಪಿ ಸಂತೋಷ್ ಬಾಬು, ಹೆಚ್ಚುವರಿ ಎಸ್ಪಿ ಅಣ್ಣಪ್ಪ ನಾಯಕ್, ಚಿಕ್ಕಮಗಳೂರು ಗ್ರಾಮಾಂತರ ಠಾಣೆ ಎಸ್‌ಐ ರಾಕೇಶ್, ನಗರಸಭೆ ಸದಸ್ಯ ದೇವರಾಜ್‌ಶೆಟ್ಟಿ, ಶ್ರೀನಿವಾಸ್ ರಾವ್, ಪಿ.ಎಸ್. ರವಿಕುಮಾರ್, ಖಾಂಡ್ಯನ ಸ್ನೇಹಿತರಾದ ಗೌತಮ್, ಮಧುಸೂದನ್, ಕಲ್ಲಪ್ಪ ಅವರ ಕುಟುಂಬ ಸದಸ್ಯರು ಹಾಗೂ ಅವರ ಕಚೇರಿಯ ಸಿಬ್ಬಂದಿ ಸೇರಿ 55 ಮಂದಿಯನ್ನು ವಿಚಾರಣೆ ನಡೆಸಿದ್ದೇವೆ’ ಎಂದು ಸಿಐಡಿ ಅಧಿಕಾರಿಗಳು ವರದಿಯಲ್ಲಿ ತಿಳಿಸಿದ್ದಾರೆ.

ತಿಂಗಳ ಹಿಂದೆಯೇ ಸಂಚು

‘ತೇಜಸ್‌ಗೌಡನ ಅಪಹರಣಕ್ಕಾಗಿ ತಿಂಗಳ ಹಿಂದೆಯೇ ಸಂಚು ನಡೆದಿತ್ತು. ಈ ಕೆಲಸಕ್ಕೆ ಖಾಂಡ್ಯ ಹಾಗೂ ನವೀನ್‌ ಶೆಟ್ಟಿಗೆ ಸುಪಾರಿ ಕೊಟ್ಟಿದ್ದ ಕಲ್ಮನೆ ನಟರಾಜ್, ನವೀನ್‌ ಶೆಟ್ಟಿಯ ಪತ್ನಿ ಹೇಮಲತಾ ಅವರ ಬ್ಯಾಂಕ್‌ ಖಾತೆಗೆ ₹ 1.5 ಲಕ್ಷ ವರ್ಗಾಯಿಸಿದ್ದ’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.