ಗುರುವಾರ , ಏಪ್ರಿಲ್ 15, 2021
26 °C

ಮುಸ್ಲಿಮರ ಅಭಿವೃದ್ಧಿ,ಉದ್ಯೋಗ ಮೀಸಲಾತಿಗೆ ಒತ್ತು:ಎಚ್‌ಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: `ಜಾತ್ಯತೀತ ಜನತಾದಳ ಅಲ್ಪಸಂಖ್ಯಾತ ಮುಸಲ್ಮಾನ ಸಮುದಾಯದಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯ ಮಾಡಿದೆ. ಬರಿಯ ಬಾಯಿ ಮಾತಿನ ಸಾಂತ್ವನ ನೀಡದೆ ಅವರ ಅಭಿವೃದ್ಧಿಗಾಗಿಯೇ ಹಲವು ಯೋಜನೆಗಳನ್ನು ರೂಪಿಸಿದೆ. ಅವರಿಗೆ ಉದ್ಯೋಗದಲ್ಲಿ ಶೇ 4.20ರಷ್ಟು ಮೀಸಲಾತಿ ನೀಡಬೇಕು ಎಂದು ಪ್ರತಿಪಾದಿಸುತ್ತ ಬಂದಿದೆ~ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ನುಡಿದರು.ಜುಲೈ 15ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ಅಲ್ಪಸಂಖ್ಯಾತರ ಸಮಾವೇಶದ ಬಗ್ಗೆ ಚರ್ಚಿಸಲು ಹಾಸನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ದೇಶದಲ್ಲಿ ಯಾವ ರಾಜ್ಯದಲ್ಲೂ ಇಲ್ಲದಷ್ಟು ಸೌಲಭ್ಯಗಳನ್ನು ಮುಸ್ಲಿಂ ಸಮುದಾಯಕ್ಕೆ ಜೆಡಿಎಸ್ ಅವಧಿಯಲ್ಲಿ ನೀಡಲಾಗಿದೆ. ಮುಸಲ್ಮಾನ ಭಾಂದವರು ಇದನ್ನು ಮರೆಯುವಂತ್ತಿಲ್ಲ. ಉತ್ತರ ಪ್ರದೇಶದ ಚುನಾವಣೆ ಸಂದರ್ಭದಲ್ಲಿ ಮುಸಲ್ಮಾನರಿಗೆ ಶೇ 9ರ ಮಿಸಲಾತಿ ಜಾರಿಗೆ ತರುವುದಾಗಿ ಆಶ್ವಾಸನೆ ನೀಡಿದ್ದ ಕಾಂಗ್ರೆಸ್, ನಂತರ ತನ್ನ ಮಾತು ಉಳಿಸಿಕೊಳ್ಳಲಿಲ್ಲ~ ಎಂದು ಟೀಕಿಸಿದರು.ಬೆಂಗಳೂರಿನಲ್ಲಿ ಜುಲೈ 15ರಂದು ಹಮ್ಮಿಕೊಂಡಿರುವ ಅಲ್ಪಸಂಖ್ಯಾತರ (ಮುಸಲ್ಮಾನ) ರಾಜ್ಯ ಸಮಾವೇಶವನ್ನು ಯಶಸ್ವಿಗೊಳಿಸುವ ಮೂಲಕ ರಾಷ್ಟ್ರೀಯ ಪಕ್ಷಗಳಿಗೆ ಸ್ಪಷ್ಟ ಸಂದೇಶ ರವಾನಿಸಬೇಕು ಎಂದು ಕುಮಾರಸ್ವಾಮಿ ಕರೆ ನೀಡಿದರು.ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ 5 ಮುರಾರ್ಜಿ ಶಾಲೆಗಳನ್ನು  ಅರಂಭಿಸಿದ್ದರು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಬಜೆಟ್‌ನಲ್ಲಿ ಕೇವಲ ರೂ. 20 ಕೋಟಿ ಮೀಸಲಿಟ್ಟಿತ್ತು. ಆದರೆ ಜೆಡಿಎಸ್ 130 ಕೋಟಿ ಮೀಸಲಿಟ್ಟು ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿತು ಎಂದು ಅವರು ನುಡಿದರು.ಜೆಡಿಎಸ್ ಮುಖಂಡ ಜಮೀರ್ ಆಹಮದ್ ಮಾತನಾಡಿ, `ಮುಸಲ್ಮಾನರನ್ನು ಮತದಾನದ ಸಂದರ್ಭದಲ್ಲಿ ಮಾತ್ರ ಬಳಸಿಕೊಂಡು ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದಿದೆ. ರಾಜ್ಯ ಕಾಂಗ್ರಸ್ ಸಹ ಅದೇ ದಾರಿ ಹಿಡಿದಿದ್ದು, ಈಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಇದು ಸ್ಪಷ್ಟವಾಗಿದೆ. ಮುಸಲ್ಮಾನ ಸಮುದಾಯಕ್ಕೆ ಸೇರಿದವರು ಎಂಬ ಒಂದೇ ಕಾರಣಕ್ಕೆ ಕಾಂಗ್ರೆಸ್‌ನವು ಸಿ.ಎಂ. ಇಬ್ರಾಹಿಂ ಅವರನ್ನು ಅಭ್ಯರ್ಥಿಯಾಗಿಸಿಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಮನವಿ ಮಾಡಿದರು.ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ,  `ಜೆಡಿಎಸ್ ಅಧಿಕಾರಾವಧಿಯಲ್ಲಿ ಪುರಸಭೆ, ಜಿಲ್ಲಾ ಪಂಚಾಯಿತಿ ಸೇರಿದಂತೆ ವಿವಿಧ ನಿಗಮ ಮಂಡಳಿಗಳಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗೆ ಅಧಿಕಾರ ನೀಡಿತ್ತು~ ಎಂದರು.

ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ ಇಬ್ರಾಹಿಂ ಈಗ ಶೈತ್ಯಾಗಾರದಲ್ಲಿರುವ ಸ್ಥಿತಿ ಅನುಭವಿಸುತ್ತಿದ್ದಾರೆ. ಜಾಫರ್ ಶರೀಫ್‌ರ ಅವರ ಸ್ಥಿತಿಯೂ ಇದೇ ಆಗಿದೆ ಎಂದು ವ್ಯಾಂಗ್ಯವಾಡಿದರು.ಜೆ ಡಿ ಎಸ್ ಜಿಲ್ಲಾ ಘಟಕದ ಅಧಕ್ಷ ಎಚ್.ಕೆ.ಜವರೇಗೌಡ, ಶಾಸಕ ಎಚ್.ಎಸ್.ಪ್ರಕಾಶ್, ಎ.ಟಿ.ರಾಮಸ್ವಾಮಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಆರ್.ಸತ್ಯನಾರಾಯಣ, ಶಾಸಕ ಎಚ್.ಕೆ.ಕುಮಾರಸ್ವಾಮಿ, ಜಾಫರುಲ್ಲಾ ಖಾನ್, ನಗರಸಭೆ ಅಧ್ಯಕ್ಷ ಸಿ.ಆರ್.ಶಂಕರ್, ಮಾಜಿ ಶಾಸಕ ವಿಶ್ವನಾಥ್ ಮತ್ತಿತರರು ಸಭೆಯಲ್ಲಿದ್ದರು.

ಬಿಜೆಪಿಗೆ ರಾಜ್ಯದ ಅಭಿವೃದ್ಧಿ ಬೇಕಿಲ್ಲ: ಆರೋಪ

ಸಭೆಗೂ ಮೊದಲು ಪತ್ರಕರ್ತರೊಡನೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, `ಬಿಜೆಪಿಯವರು ಯಾರನ್ನು ಮುಖ್ಯಮಂತ್ರಿ ಮಾಡಿದರೂ ರಾಜ್ಯದ ಸ್ಥಿತಿಯಲ್ಲಿ ಸುಧಾರಣೆಯಾಗುವುದಿಲ್ಲ. ಸುಧಾರಣೆ ಆಗಬೇಕು ಎಂಬ ಉದ್ದೇಶದಿಂದ ಅವರು ಮುಖ್ಯಮಂತ್ರಿ ಬದಲಾವಣೆಯ ಹೋರಾಟ ಮಾಡುತ್ತಿಲ್ಲ~ ಎಂದರು.ರಾಜ್ಯದಲ್ಲಿ ಭೀಕರ ಬರ ಇದೆ. ಹಲವು ಸಮಸ್ಯೆಗಳು ತಾಂಡವವಾಡುತ್ತಿವೆ. ಮುಖ್ಯಮಂತ್ರಿ ಸದಾನಂದಗೌಡ ಅವರು ಇದನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಮುಖಂಡರು ನಾಯಕತ್ವ ಬದಲಾವಣೆಯ ಒತ್ತಾಯ ಮಾಡುತ್ತಿಲ್ಲ. ತಮಗೆ ಬರಬೇಕಾದ ಪರ್ಸೆಂಟೇಜ್‌ಗೆ ಅಡ್ಡಗಾಲು ಹಾಕಿದ್ದಾರೆ ಎಂಬ ಕಾರಣಕ್ಕೆ ಬದಲಾವಣೆ ಮಾಡಿಸುತ್ತಿದ್ದಾರೆ~ ಎಂದು ಆರೋಪಿಸಿದರು.ಮೂರು ಕಿ.ಮೀ. ರಸ್ತೆ ಕಾಮಗಾರಿಯನ್ನು 120 ಮಂದಿಗೆ ಟೆಂಡರ್ ನೀಡಿರುವ ಉದಾಹರಣೆ ಈ ರಾಜ್ಯದಲ್ಲಿ ಎಂದೂ ಕಾಣಿಸುವುದಿಲ್ಲ. ಆದರೆ ಬಿಜೆಪಿ ಅವಧಿಯಲ್ಲಿ ಇದು ಸಾಧ್ಯವಾಗಿದೆ. ಇಂಥ ಚಾರಿತ್ರಿಕ ಲೋಕೋಪಯೋಗಿ ಸಚಿವರು ಈ ರಾಜ್ಯಕ್ಕೆ ಸಿಕ್ಕಿದ್ದಾರೆ. ನೀರಾವರಿ ಇಲಾಖೆಯಲ್ಲೂ ಇಂಥ ಪ್ರಕರಣಗಳಿವೆ. ಈ ಸಚಿವರು ಸ್ವತಃ ಸಾಕಷ್ಟು ನಿಸ್ಸೀಮರಾಗಿರುವುದರಿಂದ ಇವರಿಗೆ ಬೇರೆಯವರ ಬೆಂಬಲದ ಅಗತ್ಯವೇ ಬಿದ್ದಿಲ್ಲ~ ಎಂದು ಕುಮಾರಸ್ವಾಮಿ ಟೀಕಿಸಿದರು.ಹಗರಣಗಳಿಗೆ ಸಂಬಂಧಿಸಿದ ಅನೇಕ ದಾಖಲೆಗಳು ನನ್ನ ಬಳಿ ಇವೆ. ಮಾಹಿತಿ ಹಕ್ಕು ಕಾಯ್ದೆಯಡಿ ಇನ್ನಷ್ಟು ದಾಖಲೆ ಕೇಳಿದ್ದರಿಂದ ಸಚಿವರು ಬೆಚ್ಚಿ ಬಿದ್ದಿದ್ದಾರೆ, ದಾಖಲೆಗಳನ್ನು ನೀಡದಂತೆ ಅಧಿಕಾರಿಗಳಿಗೆ ತಡೆ ಒಡ್ಡುತ್ತಿದ್ದಾರೆ ಎಂದೂ ಅವರು ಆರೋಪಿಸಿದರು.ಭೂಮಿ ಮರಳಿಸಲು ರೇವಣ್ಣ ಆಕ್ಷೇಪ

ಹಾಸನ:`ಐಐಟಿ ಸ್ಥಾಪನೆಗಾಗಿ 2007ರಲ್ಲಿ ತಾಲ್ಲೂಕಿನ ಏಳು ಗ್ರಾಮಗಳ ರೈತರಿಂದ ವಶಪಡಿಸಿಕೊಂಡಿರುವ 1054 ಎಕರೆ ಭೂಮಿಯನ್ನು ರೈತರಿಗೆ ಮರಳಿಸಬಾರದು~ ಎಂದು ರೇವಣ್ಣ ನುಡಿದಿದ್ದಾರೆ. ಆ ಮೂಲಕ ಜೆಡಿಎಸ್ ಮುಖಂಡರೇ ಎರಡು ವಿರುದ್ಧ ಹೇಳಿಕೆಗಳನ್ನು ನೀಡಿದಂತಾಗಿದೆ.ಹಾಸನದ ಶಾಸಕ ಎಚ್.ಎಸ್. ಪ್ರಕಾಶ್ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ, `ಐಐಟಿಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಬೇರೆ ಯಾವುದೇ ಉದ್ದೇಶಕ್ಕೆ ಬಳಸಬಾರದು, ಹಾಸನಕ್ಕೆ ಐಐಟಿ ಬರುವುದಿಲ್ಲ ಎಂಬುದು ಈಗ ಖಚಿತವಾಗಿರುವುದರಿಂದ ಭೂಮಿಯನ್ನು ರೈತರಿಗೆ ಮರಳಿಸಲೇಬೇಕು. ಇಲ್ಲದಿದ್ದಲ್ಲಿ ವಿಧಾನಸಭೆಯೊಳಗೆ ಹಾಗೂ ಹೊರಗೆ ಹೋರಾಟ ನಡೆಸುತ್ತೇವೆ~ ಎಂದಿದ್ದರು.ಈ ಬಗ್ಗೆ ಬುಧವಾರ ರೇವಣ್ಣ ಅವರನ್ನು ಕೇಳಿದರೆ, `ಐಐಟಿಗೆ ಸ್ವಾಧೀನಪಡಿಸಿದ್ದ ಭೂಮಿಯನ್ನು ಆ ಉದ್ದೇಶಕ್ಕೇ ಬಳಸಬೇಕು. ಐಐಟಿ ಈಗ ರದ್ದಾಗಿದ್ದರೂ, ಕೆಲವು ವರ್ಷಗಳ ಬಳಿಕವಾದರೂ ಬರಬಹುದು, ಆದ್ದರಿಂದ ಆ ಭೂಮಿಯನ್ನು ಐಐಟಿಗಾಗಿ ಕಾಯ್ದಿರಿಸಬೇಕು. ಕೊನೆಗೂ ಐಐಟಿ ಬಾರದಿದ್ದಲ್ಲಿ ಬೇರೆ ಶೈಕ್ಷಣಿಕ ಉದ್ದೇಶಕ್ಕೇ ಈ ಭೂಮಿಯನ್ನು ಬಳಸಬೇಕು. ರೈತರಿಗೆ ಕೂಡಲೇ ಪರಿಹಾರ ಹಣ ನೀಡಬೇಕು~ ಎಂದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.