ಬುಧವಾರ, ಮೇ 12, 2021
26 °C

ಮೂರು ಆಯಾಮ; ಸಿನಿಮಾ ಮರ್ಮ

ಎನ್ವಿ Updated:

ಅಕ್ಷರ ಗಾತ್ರ : | |

ಸುಸಜ್ಜಿತ ಚಿತ್ರಮಂದಿರ. ಆಧುನಿಕ ಸೌಕರ್ಯ. ಸಿನಿಮಾ 3ಡಿಯಲ್ಲೂ ಲಭ್ಯ; ಟಿಕೆಟ್ ದರ ದುಬಾರಿ. ಕನ್ನಡಕ ಹಾಕಿಕೊಂಡು, ಅತ್ತಿತ್ತ ಮಿಸುಕಾಡದಂತೆ ಸಿನಿಮಾ ನೋಡುತ್ತಿದ್ದರೆ, ಕಾಡಿನ ನಡುವೆಯೇ ನೀವೂ ಇರುವಂತೆ ಭಾಸವಾಗುತ್ತದೆ.

 

ಧಿಗ್ಗನೆದ್ದು ಬರುವ ಹಾವು ನಿಮ್ಮನ್ನು ಬೆಚ್ಚಿಬೀಳಿಸುತ್ತದೆ. ಖಳನಾಯಕನತ್ತ ನಾಯಕ ತೋರುವ ಬಂದೂಕಿನ ನಳಿಕೆ ನಿಮ್ಮತ್ತಲೇ ಗುರಿಮಾಡಿದಂತೆ ಭಾಸವಾಗುತ್ತದೆ. ಇದು `3ಡಿ~ ಕಾಲ. ಒಂದು ಚಿತ್ರದ ಅಷ್ಟೂ ದೃಶ್ಯಗಳನ್ನು ಮೂರು ಆಯಾಮದಲ್ಲಿ ತೋರಿಸುವ ಚಳಕಕ್ಕೀಗ ಸುವರ್ಣ ಕಾಲ. ಇನ್ನು ಐದು ವರ್ಷ ಕಳೆದರಂತೂ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗ ಕೂಡ ಅದನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಬೇಕಾಗುತ್ತದೆ ಎಂಬ ಮಾತಿದೆ.ವಾಟ್‌ಸ್ಟೋನ್ `ಸ್ಟೀರಿಯೋಸ್ಕೋಪ್~ ಅಭಿವೃದ್ಧಿಪಡಿಸಿದ ಕಾಲದಿಂದಲೂ ಈ `3ಡಿ~ ತಂತ್ರಜ್ಞಾನ ಇದೆ. ಸ್ಥಾಯಿ ಚಿತ್ರಗಳನ್ನು ಮೂರು ಆಯಾಮದಲ್ಲಿ ನೋಡಲು `ಸ್ಟೀರಿಯೋಸ್ಕೋಪ್~ ಬಳಕೆಯಾಗುತ್ತಿತ್ತು. ಈಗ `3 ಡಿ~ ಸಿನಿಮಾ ನೋಡಲು ಕನ್ನಡಕಗಳುಂಟು.ಮನುಷ್ಯನ ಕಣ್ಣು ಸುಮಾರು 50 ಮಿಲಿಮೀಟರ್‌ನಿಂದ 75 ಮಿಲಿ ಮೀಟರ್‌ನಷ್ಟು ಅಗಲವಾಗಬಲ್ಲದು. ವಿಶ್ವದ ವಿವಿಧ ದೇಶಗಳ ಭೌಗೋಳಿಕ ಲಕ್ಷಣಗಳಿಗೆ ಅನುಗುಣವಾಗಿ ಕಣ್ಣು ಅಗಲಗೊಳ್ಳುವ ಈ ಅಳತೆಯಲ್ಲಿ ತುಸು ವ್ಯತ್ಯಾಸವಿರಬಹುದಷ್ಟೆ.ನೋಡುವ ವಸ್ತುಗಳನ್ನೇ ಸ್ವಲ್ಪ ಕಣ್ಕಟ್ಟು ಮಾಡಿಕೊಂಡು ನೋಡಲೆತ್ನಿಸಿ ಅರ್ಥಾತ್ ಒಂದು ಕಣ್ಣನ್ನು ಮುಚ್ಚಿಕೊಂಡು ಕೈಯಲ್ಲೊಂದು ಪೆನ್ಸಿಲ್ ಹಿಡಿದು ಸೂಕ್ಷ್ಮವಾಗಿ ಗಮನಿಸಿ. ಎರಡು ಕಣ್ಣಿನಿಂದ ನೋಡುವುದಕ್ಕಿಂತ ಅದು ಭಿನ್ನವಾಗಿ ಕಾಣುತ್ತದೆ.

ಒಂದೇ ಚಿತ್ರವನ್ನು ಎರಡು ಆಯಾಮಗಳಲ್ಲಿ ದರ್ಶನ ಮಾಡಿಸಿದಾಗ, ಅದರ ಪರಿಣಾಮ ಮೆದುಳಿನ ಮೇಲೆ ಬೇರೆ ರೀತಿಯಾಗಿ, ಮೆದುಳಿನಲ್ಲಿಯೇ ಒಂದು ಕಲ್ಪನೆ ಸೃಷ್ಟಿಯಾಗುತ್ತದೆ. ಅದನ್ನೇ `3ಡಿ~ ಎಂದು ಪರಿಣತರು ಬಿಡಿಸಿ ಹೇಳುತ್ತಾರೆ. ಇದು ತುಂಬಾ ಸಂಕೀರ್ಣವಾದ ಸಂಗತಿ. ತಾಂತ್ರಿಕ ಪರಿಭಾಷೆಯಲ್ಲಿ ಈ ಪರಿಣಾಮ ಉಂಟಾಗುವ ಬಗೆಯನ್ನು ಕನ್ನಡದಲ್ಲಿ ಬಣ್ಣಿಸುವುದು ಕಷ್ಟವೇ ಸರಿ.ಒಂದೇ ಚಿತ್ರವನ್ನು ತಾಂತ್ರಿಕ ವ್ಯತ್ಯಾಸಗಳೊಂದಿಗೆ ಎರಡು ಬಗೆಯಲ್ಲಿ ತೋರಿದಾಗ ಅದು ಮೂಡಿಸುವ ಪರಿಣಾಮ ಇನ್ನೊಂದು `ಚಿತ್ರಕ ಶಕ್ತಿ~ಗೆ ಕಾರಣವಾಗುತ್ತದೆ. ಕೆಂಪು, ನೀಲಿ ಗ್ಲಾಸುಗಳಿರುವ ಕನ್ನಡಕ ಹಾಕಿಕೊಂಡು ಹೀಗೆ ಎರಡು ಬಗೆಯಲ್ಲಿ ಚಿತ್ರಿತವಾಗಿರುವ ಸಮ್ಮಿಳಿತ ದೃಶ್ಯಗಳನ್ನು ಕಂಡಾಗ ಮನಸ್ಸಿನಲ್ಲಿ ಮೂಡುವ ನಮ್ಮದೇ ಕಲ್ಪನೆಯ ಸಿನಿಮಾಗೆ `3ಡಿ~ ಎನ್ನಬಹುದು.1950ರ ದಶಕದಿಂದಲೇ ಬಗೆಬಗೆಯ ಪ್ರಯೋಗಗಳು ನಡೆಯುತ್ತಿದ್ದರೂ `3ಡಿ~ ಸಿನಿಮಾ ಚಿತ್ರೀಕರಣ ಮೊದಮೊದಲು ಕಷ್ಟವಿತ್ತು. ಒಂದೇ ದೃಶ್ಯವನ್ನು ಎರಡು ಸಲ ಚಿತ್ರೀಕರಿಸಬೇಕಾದದ್ದು ಇದರಲ್ಲಿ ಅನಿವಾರ್ಯ.ಆಗ ಶಾಟ್ ಇಡುವ ರೀತಿ, ಪಾತ್ರ ಅಥವಾ ತೋರುವ ವಸ್ತು ಕ್ಯಾಮೆರಾದಿಂದ ಇರುವ ದೂರ, ದೃಶ್ಯವನ್ನು ಕ್ಯಾಮೆರಾ ದಾಖಲಿಸಿಕೊಳ್ಳುವ ವೇಗ ಎಲ್ಲವೂ ಎರಡೂ ಸಲ ಏಕಪ್ರಕಾರವಾಗಿರಬೇಕಿತ್ತು. ಈ ಹೊಂದಾಣಿಕೆ ಹೆಚ್ಚು ದೈಹಿಕ ಶ್ರಮ ಬೇಡುವಂಥದ್ದು. ಈಗ ಬೋಲ್ಟ್‌ಗಳನ್ನು ಹಾಕಿ ಎರಡೂ ಕ್ಯಾಮೆರಾಗಳನ್ನು ನಿಗದಿತ ಸ್ಥಳದಲ್ಲಿ ನೆಲೆಗೊಳ್ಳುವಂತೆ ಮಾಡುವ ವ್ಯವಸ್ಥೆ ಇದೆ.  ಕನ್ನಡದಲ್ಲಿ `ಜೋಗಯ್ಯ~ ಚಿತ್ರದ ಕೆಲವು ದೃಶ್ಯಗಳನ್ನು `3ಡಿ~ ಮಾಡಿರುವುದಾಗಿ ನಿರ್ದೇಶಕ ಪ್ರೇಮ್ ಹೇಳಿಕೊಂಡಿದ್ದರು. ಆದರೆ, ತಾಂತ್ರಿಕ ವೈಫಲ್ಯದಿಂದಾಗಿ ಅವರಿಗೆ ಹೇಳಿದ್ದನ್ನು ಮಾಡಿ ತೋರಿಸಲು ಆಗಲಿಲ್ಲ. ಈಗ `ಕಠಾರಿವೀರ ಸುರಸುಂದರಾಂಗಿ~ ಚಿತ್ರವು `3ಡಿ~ ರೂಪದಲ್ಲಿ ಬರುತ್ತಿದೆ. ಕನ್ನಡದಲ್ಲಿ ಇದು ಮೊಟ್ಟಮೊದಲ ಸಂಪೂರ್ಣ `3ಡಿ~ ಚಿತ್ರವಂತೆ. ಹಾಗೆಂದು ನಿರ್ದೇಶಕ ಸುರೇಶ್ ಕೃಷ್ಣ ಹೇಳಿಕೊಂಡಿದ್ದಾರೆ.ಚಿತ್ರಕ್ಕೆ ಕ್ಯಾಮೆರಾ ಹಿಡಿದು ಕೆಲಸ ಮಾಡಿರುವ ಛಾಯಾಗ್ರಾಹಕ ವೇಣು ಕೂಡ `3ಡಿ~ ತಂತ್ರಜ್ಞಾನವನ್ನು ಸಲೀಸಾಗಿ ಮನದಟ್ಟು ಮಾಡಿಸಲು ಹೆಣಗಾಡಿದರು. `2ಡಿ ತಂತ್ರಜ್ಞಾನದಲ್ಲಿ ಹೆಚ್ಚು ಕಟ್ ಶಾಟ್‌ಗಳಿದ್ದರೂ ತೊಂದರೆಯಿಲ್ಲ. ಆದರೆ, 3ಡಿಯಲ್ಲಿ ಹಾಗೆ ಮಾಡಿದರೆ ಆಮೇಲೆ ಹೊಂದಾಣಿಕೆ ತುಂಬಾ ಕಷ್ಟ.ಚಿತ್ರೀಕರಿಸಿದ ಶಾಟ್‌ಗಳು ಸ್ವಲ್ಪ ತಾಳ್ಮೆ ಕಳೆದುಕೊಂಡರೂ ಜಂಕ್ ಆಗಿಬಿಡುವ ಆತಂಕವಿದೆ~ ಅಂತಾರೆ ವೇಣು.ಛಾಯಾಗ್ರಾಹಣದಲ್ಲಿ ಹೇಳಿಕೊಳ್ಳುವಂಥ ಹಿನ್ನೆಲೆಯಿಲ್ಲದ ವೇಣು `ಎ~ ಚಿತ್ರಕ್ಕೆ ಮೊದಲು ಕೆಲಸ ಮಾಡಿದಾಗ ಅನೇಕರಲ್ಲಿ ಪ್ರಶ್ನೆಯಿತ್ತು. ಆದರೆ, ಆ ಚಿತ್ರ ತಾಂತ್ರಿಕವಾಗಿ ಕೂಡ ಮೆಚ್ಚುಗೆಗೆ ಪಾತ್ರವಾಯಿತು. ಈಗ `ಕಠಾರಿ...~ಯ `3ಡಿ~ ತಂತ್ರಜ್ಞಾನದಲ್ಲಿ ಭಾಗಿಯಾಗುವ ಅವಕಾಶ ಅವರದ್ದಾಗಿದೆ.`ನಾವು 2ಡಿ ಹಾಗೂ 3ಡಿ ಎರಡರಲ್ಲೂ ಚಿತ್ರೀಕರಣ ನಡೆಸಿದ್ದೇವೆ. ಹಾಗಾಗಿ ದೈಹಿಕ ಶ್ರಮ ಜಾಸ್ತಿಯಾಯಿತು. ಪ್ರತಿ ಶಾಟ್ ಚಿತ್ರೀಕರಣವಾದ ಕೂಡಲೇ ಅದನ್ನು ತಂತ್ರಜ್ಞಾನಕ್ಕೆ ಒಗ್ಗಿಸುವ, ಬಗ್ಗಿಸುವ ಕೆಲಸವೂ ನಡೆಯುತ್ತದೆ. ಬಜೆಟ್ ದೃಷ್ಟಿಯಿಂದ 3ಡಿ ಸಿನಿಮಾ ತೆಗೆಯುವುದು ಅಗ್ಗವೇನೂ ಅಲ್ಲ.

 

2ಡಿ ಚಿತ್ರ ತೆಗೆಯುವ ಬಜೆಟ್‌ಗಿಂತ ಮೂರ‌್ನಾಲ್ಕು ಪಟ್ಟು ಹೆಚ್ಚಾದರೂ ಅಚ್ಚರಿಯಿಲ್ಲ~ ಎನ್ನುವ ವೇಣು ಪ್ರಕಾರ, ಇನ್ನು ಐದಾರು ವರ್ಷಗಳಲ್ಲಿ ಎಲ್ಲಾ ಚಿತ್ರೋದ್ಯಮಗಳೂ `3ಡಿ~ ತಂತ್ರಜ್ಞಾನವನ್ನು ಒಪ್ಪಿಕೊಳ್ಳಲೇಬೇಕು.`ಕಠಾರಿವೀರ ಸುರಸುಂದರಾಂಗಿ~ ಇನ್ನು ಕೆಲವೇ ದಿನಗಳಲ್ಲಿ ತೆರೆಕಾಣಲಿದೆ. ಕನ್ನಡದಲ್ಲಿ 3ಡಿ ಹೇಗಿರುತ್ತದೋ ನೋಡಬೇಕು. 

 

`ಮೈ ಡಿಯರ್ ಕುಟ್ಟಿ ಚಾತನ್~

ಎರಡು ದಶಕಗಳ ಹಿಂದೆ ಮಲಯಾಳಂ ಸಿನಿಮಾ ರಂಗ `ಮೈ ಡಿಯರ್ ಕುಟ್ಟಿ ಚಾತನ್~ ಹೆಸರಿನಲ್ಲಿ 3ಡಿ ಸಿನಿಮಾ ರೂಪಿಸಿತ್ತು(ಇದೇ ಸಿನಿಮಾ `ಚೋಟಾ ಚೇತನ್~ ಹೆಸರಿನಲ್ಲಿ ಕನ್ನಡಕ್ಕೆ ಡಬ್ ಆಗಿತ್ತು). ಭಾರತೀಯ ಚಿತ್ರರಂಗದ ಮಟ್ಟಿಗೆ ಅದು ಮೊದಲ 3ಡಿ ಸಿನಿಮಾ ಎನ್ನಲಾಗಿತ್ತು.ಕೆಲವ ವರ್ಷಗಳ ಹಿಂದೆ ಮಕ್ಕಳನ್ನು ಆಕರ್ಷಿಸಲು ಕಾಮಿಕ್ ಚಿತ್ರ-ಕಥೆಗಳ ಪುಸ್ತಕಗಳನ್ನೂ 3ಡಿ ತಂತ್ರದಲ್ಲಿ ರೂಪಿಸಲಾಗಿತ್ತು. ಬರಿಗಣ್ಣಿಗೆ ಮಸುಕು ಮಸುಕಾಗಿ ಕಾಣುತ್ತಿದ್ದ ಈ ಕಾಮಿಕ್ ಕಥಾ ಸರಣಿಯ ಪುಟಗಳನ್ನು ಮಕ್ಕಳು 3ಡಿ ಕನ್ನಡ ಹಾಕಿಕೊಂಡೇ ಓದಬೇಕಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.