ಶುಕ್ರವಾರ, ಮೇ 20, 2022
23 °C
ಇದು ವಲಸಿಗರ ಬೀಡು `ಬೀಡಗಾನಹಳ್ಳಿ' *ಕಾರ್ಮಿಕರ ಪಾಲಿನ `ಔಟ್ ಹೌಸ್'

ಮೂರು ಪೊಲೀಸ್ ಠಾಣೆಗಳ ಮುದ್ದಿನ ಗ್ರಾಮ!

ಪ್ರಜಾವಾಣಿ ವಾರ್ತೆ/ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ:  ಚಿಕ್ಕಬಳ್ಳಾಪುರ ಮತ್ತು ದೇವನಹಳ್ಳಿ ತಾಲ್ಲೂಕುಗಳ ಗಡಿಯಲ್ಲಿರುವ ನಂದಿ ಹೋಬಳಿಯ ಬೀಡಗಾನಹಳ್ಳಿ ಒಂದರ್ಥದಲ್ಲಿ ಮೂರು ಪೊಲೀಸ್ ಠಾಣೆಗಳ ಮುದ್ದಿನ ಗ್ರಾಮ!ಇಲ್ಲಿ ಯಾವುದೇ ಅಪಘಾತ ಸಂಭವಿಸಿದರೂ ಅಥವಾ ದುರ್ಘಟನೆ ನಡೆದರೂ ಒಮ್ಮೆಲೇ ಮೂರು ಕಡೆಯಿಂದ ಪೊಲೀಸರು ಧಾವಿಸುತ್ತಾರೆ. ಘಟನೆ ನಡೆದಿರುವ ಸ್ಥಳದ ಬಳಿ ನಿಂತು ಇದು ನಮ್ಮ ಠಾಣೆ ವ್ಯಾಪ್ತಿಗೆ ಬರುವುದೇ ಅಥವಾ ಇಲ್ಲವೇ ಮತ್ತು ಪ್ರಕರಣ ಏನೂ ಅಂತ ದಾಖಲಿಸಬೇಕು ಎಂದ್ಲ್ಲೆಲಾ ಸುದೀರ್ಘ ಚರ್ಚೆ ನಡೆಸುತ್ತಾರೆ. ಇದು ಯಾವಾಗ ತಮ್ಮ ಠಾಣೆ ವ್ಯಾಪ್ತಿಗೆ ಬರುವುದಿಲ್ಲ ಎಂಬುದು ಖಚಿತವಾಗುವುದೋ, ಆಗ ಕೊಂಚ ಸಮಾಧಾನಗೊಂಡು ಕೈಚೆಲ್ಲಿ ಮತ್ತೊಬ್ಬರನ್ನು ತೋರಿಸುತ್ತಾ ಸ್ಥಳದಿಂದ ತೆರಳುತ್ತಾರೆ. ಅಷ್ಟು ಹೊತ್ತಿಗೆ ದುರ್ಘಟನೆಯಲ್ಲಿ ನೊಂದವರಿಗೆ ಬದುಕಿನ ನರಕ ದರ್ಶನವಾಗಿರುತ್ತದೆ!!ಪೊಲೀಸರ ಮತ್ತು ಇತರೆ ಇಲಾಖೆಗಳ ಇಂತಹ ಮಾಮೂಲ ಪ್ರಕ್ರಿಯೆ ಇಲ್ಲಿ ಕೇವಲ ಇತ್ತೀಚಿನದ್ದಲ್ಲ, ಹಲವಾರು ವರ್ಷಗಳಿಂದಲೂ ನಡೆದುಕೊಂಡು ಬರುತ್ತಿರುವ ಅನೂಚಾನ ಪದ್ಧತಿ ಎಂಬಂತಾಗಿಬಿಟ್ಟಿದೆ.ಬೀಡಗಾನಹಳ್ಳಿಯು ಆಡಳಿತಾತ್ಮಕವಾಗಿ ಚಿಕ್ಕಬಳ್ಳಾಪುರ ತಾಲ್ಲೂಕಿಗೆ ಒಳಪಟ್ಟರೂ ಅಪರಾಧ ಪ್ರಕರಣ ಮತ್ತು ಇನ್ನಿತರ ಕಾರಣಗಳಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಹೋಬಳಿ ಹಾಗೂ ದೇವನಹಳ್ಳಿ ತಾಲ್ಲೂಕಿನೊಂದಿಗೆ ಬೆಸೆದುಕೊಂಡಿದೆ. ಜಿಲ್ಲೆಯ ಗಡಿಯಂಚಿನಲ್ಲಿರುವ ಕಾರಣ ಈ ಗ್ರಾಮದ ಸುತ್ತಮುತ್ತ ಯಾವುದೇ ಅಪಘಾತ ಅಥವಾ ಅಹಿತಕರ ಘಟನೆ ಜರುಗಿದರೂ ಗ್ರಾಮಸ್ಥರು ತಕ್ಷಣವೇ ಚಿಕ್ಕಬಳ್ಳಾಪುರ, ದೇವನಹಳ್ಳಿ ಮತ್ತು ವಿಜಯಪುರದ ಮೂರೂ ಪೊಲೀಸ್ ಠಾಣೆಗಳಿಗೆ ದೂರವಾಣಿ ಕರೆಗಳನ್ನು ಮಾಡುತ್ತಾರೆ. ಮೂರು ಕಡೆಯಿಂದ ಬರುವ ಪೊಲೀಸರು ಬಂದು ಸ್ಥಳ ಪರಿಶೀನೆ ಮಾಡುವವರೆಗೂ ಪ್ರಕರಣ ಅಲ್ಲೇ ಕೊಳೆಯುತ್ತಿರುತ್ತದೆ.`ನಮ್ಮ ಗ್ರಾಮವು ಮುದುಗುರ್ಕಿ ಹಾಗೂ ಹುರುಳುಗುರ್ಕಿ ಗೇಟ್‌ನಲ್ಲಿದ್ದು ಇದು ಎರಡು ಜಿಲ್ಲೆ, ಒಂದು ತಾಲ್ಲೂಕು ಮತ್ತು ಮೂರು ಪೊಲೀಸ್ ಠಾಣೆಗಳ ವ್ಯಾಪ್ತಿಗೆ ಹಂಚಿಕೆಯಾಗಿರುವುದೇ ವಿಶೇಷ. ಚಿಕ್ಕಬಳ್ಳಾಪುರ ಮತ್ತು ದೇವನಹಳ್ಳಿ ತಾಲ್ಲೂಕುಗಳಲ್ಲದೇ ವಿಜಯಪುರ ಹೋಬಳಿಯೂ ನಮಗೆ ಸಮಾನ ದೂರದಲ್ಲಿದೆ. ಏನೇ ದೂರಿದ್ದರೂ ನಾವು ಮೂರೂ ಕಡೆ ಹೋಗುತ್ತೇವೆ' ಎಂದು ಗ್ರಾಮಸ್ಥರು ಹೇಳುತ್ತಾರೆ.`ನಮ್ಮ ಗ್ರಾಮದಲ್ಲಿ ದ್ರಾಕ್ಷಿ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ಅಷ್ಟೇ ಪ್ರಮಾಣದಲ್ಲಿ ವಲಸೆ ಕೂಲಿ ಕಾರ್ಮಿಕರೂ ಇಲ್ಲಿ ನೆಲೆಸಿದ್ದಾರೆ. ಗ್ರಾಮದಲ್ಲಿ ವಾಸವಿದ್ದುಕೊಂಡು ಇಲ್ಲಿಂದ ಪ್ರತಿದಿನವೂ ಬೆಂಗಳೂರಿಗೆ ಕೆಲಸಕ್ಕೆ ಹೋಗುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬೆಳಿಗ್ಗೆ 5 ರಿಂದ 9 ಗಂಟೆಯವರೆಗಿನ ಸರ್ಕಾರಿ ಅಥವಾ ಖಾಸಗಿ ಬಸ್‌ಗಳಲ್ಲಿ ನಮ್ಮ ಗ್ರಾಮದ ಜನರೇ ಹೆಚ್ಚಿರುತ್ತಾರೆ. ಕೆಎಸ್‌ಆರ್‌ಟಿಸಿ ಸಂಸ್ಥೆಯಲ್ಲಿ ಉದ್ಯೋಗ ಮಾಡುವವರು, ಖಾಸಗಿ ಸಂಸ್ಥೆಗಳಲ್ಲಿ ದುಡಿಯುವವರು, ಗಾರೆ ಕಾರ್ಮಿಕರು ಮತ್ತು ಸಣ್ಣಪುಟ್ಟ ಕೆಲಸ ಮಾಡುವವರೆಲ್ಲ ಬೆಳಿಗ್ಗೆಯೇ ಮೊದಲ ಬಸ್ಸುಗಳಲ್ಲಿ   ಬೆಂಗಳೂರು ಕಡೆ ಮುಖ ಮಾಡಿರುತ್ತಾರೆ' ಎಂದು ಗ್ರಾಮದ ನಿವಾಸಿ ಆನಂದ್ `ಪ್ರಜಾವಾಣಿ'ಗೆ ತಿಳಿಸಿದರು.`ನಮ್ಮ ಗ್ರಾಮಸ್ಥರು ಕೆಲಸ ಹುಡುಕಿಕೊಂಡು ಬೆಂಗಳೂರು ಮತ್ತು ಸುತ್ತಮುತ್ತಲ ಊರುಗಳಿಗೆ ಹೋದರೆ, ಬೇರೆ ರಾಜ್ಯಗಳಿಂದ ಉದ್ಯೋಗ ಅರಿಸಿಕೊಂಡು ಬರುವವರು ನಮ್ಮ ಗ್ರಾಮಕ್ಕೆ ಬರುತ್ತಾರೆ. ಇಲ್ಲಿಯೇ ಟೆಂಟು, ಶೀಟುಗಳ ವ್ಯವಸ್ಥೆ ಮಾಡಿಕೊಂಡು ತಾತ್ಕಾಲಿಕ ಮನೆಗಳನ್ನು ನಿರ್ಮಿಸಿಕೊಳ್ಳುತ್ತಾರೆ. ಸಮೀಪದಲ್ಲಿ ಎಲ್ಲಿಯಾದರೂ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದರೆ, ಕೂಲಿ ಕಾರ್ಮಿಕರಾಗಿ ದುಡಿಯಲು ಇವರೆಲ್ಲಾ ಸದಾ ಸಿದ್ಧವಾಗಿರುತ್ತಾರೆ. ಆಂಧ್ರಪ್ರದೇಶದಿಂದ ವಲಸೆ ಬಂದಿರುವ ಕೂಲಿ ಕಾರ್ಮಿಕರು ಗ್ರಾಮದ ಹೊರವಲಯದಲ್ಲೇ ಸುಮಾರು ಹತ್ತು ವರ್ಷಗಳಿಂದ ವಾಸವಿದ್ದಾರೆ' ಎಂದು ಹೇಳಿದರು.`ಈ ಕೂಲಿ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದೇ ಇಲ್ಲಿ ಗುಡಾರದ ಟೆಂಟ್ ಶಾಲೆಯೊಂದನ್ನು ನಡೆಸಲಾಗುತ್ತಿದೆ. ಕೂಲಿ ಕೆಲಸಕ್ಕೆ ಹೋಗುವಾಗ ಪೋಷಕರು ತಮ್ಮ ಮಕ್ಕಳನ್ನು ಗುಡಾರ ಶಾಲೆಯಲ್ಲಿ ಬಿಟ್ಟು ಹೋಗುತ್ತಾರೆ. ಎರಡು-ಮೂರು ತಿಂಗಳಲ್ಲಿ ಗಾರೆ ಕೆಲಸ ಮುಗಿದುಬಿಟ್ಟರೆ, ಪೋಷಕರು ತಮ್ಮ ಮಕ್ಕಳೊಂದಿಗೆ ಮತ್ತೊಂದು ಊರಿಗೆ ಹೊರಡುತ್ತಾರೆ' ಎಂದರು.`ನಮ್ಮ ಗ್ರಾಮವು ಕೂಲಿಕಾರ್ಮಿಕರ ಪಾಲಿನ ಸ್ವರ್ಗ ಎಂಬಂತಾಗಿದೆ ಅಂತೆಯೇ ಬೆಂಗಳೂರಿನಲ್ಲಿ ಉದ್ಯೋಗ ಮಾಡುವವರಿಗೆ ಒಂದು ರೀತಿಯಲ್ಲಿ ಔಟ್‌ಹೌಸ್ ಇದ್ದಂತೆ' ಎಂದು ಅವರು ಬಣ್ಣಿಸುತ್ತಾರೆ.`ಗ್ರಾಮದ ಹೊರವಲಯದಲ್ಲಿ ಎಂಜಿನಿಯರಿಂಗ್ ಕಾಲೇಜು ಇರುವ ಕಾರಣ ಅಷ್ಟಿಷ್ಟುಆರ್ಥಿಕ ಚಟುವಟಿಕೆ ನಡೆಯುತ್ತವೆ. ದೇಶದ ಮೂಲೆಮೂಲೆಯಿಂದ ಇಲ್ಲಿಗೆ ಕಲಿಯಲು ಬರುವ ವಿದ್ಯಾರ್ಥಿಗಳು ಕಾಲೇಜಿನ ಹಾಸ್ಟೆಲ್‌ಗಳಲ್ಲಿ ವಾಸಿಸುತ್ತಾರೆ. ಹೀಗಾಗಿ ಇಲ್ಲೊಂದುಷ್ಟು ಡಬ್ಬಿ ಅಂಗಡಿಗಳ ವ್ಯಾಪಾರ ಚುರುಕಾಗಿರುತ್ತದೆ. ಇಲ್ಲಿರುವ ಮೇಲ್ಸೇತುವೆ ಮೇಲೆಯೇ  ಬಹುತೇಕ ವಾಹನಗಳು ಹಾದು ಹೋಗುವುದರಿಂದ ಇದು ಜನನಿಬಿಡತೆಯಿಂದ ಹೊರಗುಳಿದಿದೆ. ಆಟೊ ರಿಕ್ಷಾದವರು ಮತ್ತು ಕಾಲೇಜಿನ ವಿದ್ಯಾರ್ಥಿಗಳೇ ಇಲ್ಲಿನ ಡಬ್ಬಿ ಅಂಗಡಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಈ ಕಾಲೇಜು ಕೂಡ ಇರದಿದ್ದರೆ, ನಾವು ಕೂಡ ಬೆಂಗಳೂರಿಗೆ ಹೋಗಿ ಕೆಲಸ ಹುಡುಕುಬೇಕಾದಂತಹ ಪರಿಸ್ಥಿತಿ ಬರುತಿತ್ತು' ಎಂಬುದು ಇಲ್ಲಿನ ಚಹಾದಂಗಡಿ ಮಾಲೀಕನ ಉತ್ತರ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.