ಮಂಗಳವಾರ, ಮೇ 17, 2022
26 °C

ಮೂಲ್ಕಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಜಾಗರಣೆ ಪರ್ವ!

ಪ್ರಜಾವಾಣಿ ವಾರ್ತೆ/ ನರೇಂದ್ರ ಕೆರೆಕಾಡು Updated:

ಅಕ್ಷರ ಗಾತ್ರ : | |

ಮೂಲ್ಕಿ: ಇಲ್ಲಿನ ಮೂಲ್ಕಿ ಮತ್ತು ಉಡುಪಿಯ ಕಾಪು ಹೋಬಳಿಯ ಸುಮಾರು 54 ಗ್ರಾಮಗಳ ಕಂದಾಯ ದಾಖಲೀಕರಣ, ಮದುವೆ, ಜಮೀನು ರಿಜಿಸ್ಟರ್, ಜಮೀನು ಪಾಲು, ಅಡಮಾನ ಪತ್ರ, ಬ್ಯಾಂಕ್‌ನ ಮೋರ್ಟ್ ಗೇಜ್ ಹೀಗೆ ಹಲವಾರು ಜಮೀನು ಸಂಬಂಧಿತ ಕೆಲಸ ಕಾರ್ಯಗಳನ್ನು ಮಾಡುವ ಮೂಲ್ಕಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ದಾಖಲೀಕರಣ ಮಾಡಬೇಕಾದರೆ ರಾತ್ರಿ ಜಾಗರಣೆ ಮಾಡಲೇಬೇಕು!ಆಶ್ಚರ್ಯವಾದರೂ ಇದು ಕಳೆದ ಆರೇಳು ತಿಂಗಳಿನಿಂದ ನಡೆದುಕೊಂಡು ಬರುತ್ತಿರುವ ಸಂಪ್ರದಾಯವಾಗಿದೆ. ಕಚೇರಿಯಲ್ಲಿ ಕೆಲಸ ಕಾರ್ಯಗಳು ಆಮೆನಡಿಗೆಯಲ್ಲಿ ನಡೆಯುತ್ತಿದೆ ಎಂಬ ಅಪವಾದದೊಂದಿಗೆ ಈಗ ಪ್ರತಿಯೊಂದು ಕಡತಕ್ಕೂ ಟೋಕನ್ ವ್ಯವಸ್ಥೆ ಮಾಡಿರುವುದರಿಂದ ಗ್ರಾಹಕರು ಎಷ್ಟು ಬೇಗ ಇಲ್ಲಿಗೆ ಬರುತ್ತಾರೊ ಅವರ ಕಡತ ಮೊದಲು ಪರಿಶೀಲನೆಗೆ ಬರುತ್ತದೆ. ಅದಕ್ಕಾಗಿ ಇಲ್ಲಿನ ದಸ್ತಾವೇಜು ಬರಹಗಾರರು ಮತ್ತು ವಕೀಲರು ಅನಿವಾರ್ಯವಾಗಿ ಜಾಗರಣೆ ಮಾಡುವ ಬಾಡಿಗೆ ಗ್ರಾಹಕ ಯುವಕರನ್ನು ನಿಯೋಜಿಸಿದ್ದಾರೆ.ಒಂದೇ ಕಂಪ್ಯೂಟರ್ ದಾಖಲೆಯಿಂದ ದಿನಕ್ಕೆ 30 ರಿಂದ 40 ಕಡತಗಳು ಮಾತ್ರ ಇಲ್ಲಿ ನೊಂದಾವಣೆ ಆಗುತ್ತಿದ್ದು ಅದಕ್ಕಾಗಿ ಟೋಕನ್ ಪಡೆಯುವ ವ್ಯವಸ್ಥೆಗೆ ಸ್ಥಳೀಯರು ತಮ್ಮದೇ ಸ್ವಯಂ ಕಟ್ಟುಪಾಡು ಮಾಡಿಕೊಂಡಿದ್ದಾರೆ.ಹಿಂದಿನ ರಾತ್ರಿ 11 ಗಂಟೆಗೆ ಬಂದು ಕಡತವನ್ನು ಬಾಗಿಲ ಬಳಿ ಇಡುವುದರಿಂದ ಹಿಡಿದು ಮುಂಜಾನೆ 5ರ ಒಳಗೆ 30 ಕಡತಗಳು ಬಂದಲ್ಲಿ ಆನಂತರ ಬಂದ ಕಡತಗಳಿಗೆ ಮೂರು ದಿನಗಳ ನಂತರವೇ ಅವಕಾಶ ನೀಡಲಾಗುತ್ತದೆ.  ಮಂಗಳೂರಿನಿಂದ ಬಂದ ಗ್ರಾಹಕರು ಎರಡು ದಿನ ಕಾಯಲೇ ಬೇಕು. ಇಲ್ಲದಿದ್ದರೆ ಮೂಲ್ಕಿಯಲ್ಲಿನ ಬಾಡಿಗೆ ಜಾಗರಣೆದಾರರೊಂದಿಗೆ ಹೊಂದಾಣಿಕೆ ಮಾಡಿಕೊಂಡರೆ ಬೇಗ ಕೆಲಸ ಆಗುತ್ತದೆ ಎಂಬ ಅಲಿಖಿತ ನಿಯಮ ಜಾರಿಯಲ್ಲಿದೆ.ಈ ಬಗ್ಗೆ `ಪ್ರಜಾವಾಣಿ~ ಹಿಂದಿನ ರಾತ್ರಿ 12 ಗಂಟೆಗೆ ಮತ್ತು ಮುಂಜಾನೆ 5 ಗಂಟೆಗೆ ತೆರಳಿ ಪರಿಶೀಲಿಸಿದಾಗ ಕಡತಗಳನ್ನು ಹೊತ್ತ ಬಾಡಿಗೆ ಜಾಗರಣೆದಾರರು ಮಾಹಿತಿಯನ್ನು ವಿವರವಾಗಿ ನೀಡಿದ್ದಾರೆ (ಬಾಕ್ಸ್ ನೋಡಿ), ಇರುವ ಒಂದೇ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುತ್ತಿದ್ದು ಹೆಚ್ಚುವರಿಯಾಗಿ ಕೆಲಸ ನಿರ್ವಹಿಸಲು ಕಂಪ್ಯೂಟರ್ ಅವಶ್ಯಕತೆಯಿದ್ದು ಇದಕ್ಕೆ ಸಿಬ್ಬಂದಿ ಕೊರತೆ ಇದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.ಕಚೇರಿಗೆ ಯಾವುದೇ ರೀತಿಯ ಭದ್ರತಾ ವ್ಯವಸ್ಥೆ ಇಲ್ಲದಿರುವುದರಿಂದ ಅಪರಿಚಿತ ವ್ಯಕ್ತಿಗಳು ರಿಜಿಸ್ಟ್ರಾರ್ ಕಚೇರಿಯ ಒಳ ಆವರಣದಲ್ಲಿ ಕಾರುಗಳಲ್ಲಿ ಬಂದು ರಾತ್ರಿಯಿಂದ ಬೆಳಿಗ್ಗೆಯವರೆಗೆ ಜಾಗರಣೆ ಮಾಡುವ ಸಮಯದಲ್ಲಿ ಕಚೇರಿಯಲ್ಲಿನ ಕಡತವನ್ನು ಕಳವು ಮಾಡಿದಲ್ಲಿ ಇದಕ್ಕೆ ಹೊಣೆ ಯಾರು ಎಂಬ ಪ್ರಶ್ನೆಯನ್ನು ಮೂಲ್ಕಿಯ ವಕೀಲರೊಬ್ಬರು ಮುಂದಿಟ್ಟಿದ್ದಾರೆ.ಇಲ್ಲಿನ ತಾತ್ಕಾಲಿಕ ಸಿಬ್ಬಂದಿಗೆ ತಿಂಗಳಿಗೆ 2 ಸಾವಿರ ರೂಪಾಯಿ ಮಾತ್ರ ಸಂಬಳ ಸಿಕ್ಕರೂ ದಿನಕ್ಕೆ ಒಂದು ಕಡತಕ್ಕೆ ಕಮಿಷನ್ ರೂಪದಲ್ಲಿಯೇ ಸಾವಿರಾರು ರೂಪಾಯಿ ಹಣ ಸಿಗುವುದರಿಂದ ಇಂತಹವರು ಕಳೆದ ಅರೇಳು ವರ್ಷಗಳಿಂದಲೂ ತಾತ್ಕಾಲಿಕ ನೆಲೆಯಲ್ಲಿಯೇ ಕೆಲಸದಲ್ಲಿದ್ದಾರೆ ಎಂಬ ಆರೋಪ ಕೇಳಿಬಂದಿದೆ.ಸಬ್ ರಿಜಿಸ್ಟ್ರಾರ್ ಹೇಳಿಕೆ

ಈ ಸಮಸ್ಯೆ ಬಗ್ಗೆ ಸಬ್ ರಿಜಿಸ್ಟ್ರಾರ್ ರಘುರಾಮ್ ಅವರ ಪ್ರತಿಕ್ರಿಯೆ ಕೇಳಿದಾಗ `ದಿನಾ ಬೆಳಿಗ್ಗೆ 10ಕ್ಕೆ ನಾವು  ಟೋಕನ್ ನೀಡುತ್ತೇವೆ. ಆದರೆ ಜಾಗರಣೆ ಮಾಡುವ ವಿಷಯ ನಮಗೆ ತಿಳಿದಿಲ್ಲ, ಕೆಲವೊಮ್ಮೆ ಕಡತಗಳನ್ನು ಪರಿಶೀಲಿಸುವಾಗ ಕೆಲಸ ನಿಧಾನ ಆಗುವುದು ಸಹಜ.

 

ಮೂಲ್ಕಿ ಪೇಟೆಯಲ್ಲಿ ಟೌನ್ ಪ್ಲಾನ್ ಹೆಚ್ಚಾಗಿರುವುದರಿಂದ ಒಬ್ಬರಿಗೆ ಇಂತಿಷ್ಟೇ ಕಡತಗಳನ್ನು ತರಲು ಸೂಚನೆ ನೀಡಿದ್ದೇನೆ. ಸಂಜೆ 5ರವರೆಗೆ ಸರ್ವರ್ ಇರುವವರೆಗೆ ಕಡತವನ್ನು ಪರಿಶೀಲಿಸುತ್ತೇನೆ. ಸೆಕ್ಯೂರಿಟಿ ಹಾಗೂ ರಾತ್ರಿ ಜಾಗರಣೆಯ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳುವೆ~ ಎಂದು ಸ್ಪಷ್ಟನೆ ನೀಡಿದರು. ಕೇಂದ್ರದಲ್ಲಿ ಕಚೇರಿ ಕೆಲಸಕ್ಕೆ ಒತ್ತಡ ಹೆಚ್ಚಿದ್ದು ಸಿಬಂದಿಗಳ ಕೊರತೆ ಇದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.