ಭಾನುವಾರ, ಮಾರ್ಚ್ 7, 2021
27 °C
ಬಿತ್ತಿದ ಬೀಜವನ್ನು ತಿಂದು ಹಾಕುತ್ತಿರುವ ಇಲಿಗಳು, ಅನ್ನದಾತನ ಕಣ್ಣೀರು

ಮೂಷಿಕಗಳ ಹಾವಳಿ: ದಿಕ್ಕೆಟ್ಟ ರೈತರು

ಪ್ರಜಾವಾಣಿ ವಾರ್ತೆ/ ನಾಗರಾಜ ಎಸ್‌. ಹಣಗಿ Updated:

ಅಕ್ಷರ ಗಾತ್ರ : | |

ಮೂಷಿಕಗಳ ಹಾವಳಿ: ದಿಕ್ಕೆಟ್ಟ ರೈತರು

ಲಕ್ಷ್ಮೇಶ್ವರ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮುಂಗಾರು ಮಳೆ ಬಿತ್ತನೆಗೆ ಅನುಕೂಲವಾಗಿದ್ದು ರೈತರ ಮುಖದಲ್ಲಿಮಂದಹಾಸ ಮೂಡಿಸಿದೆ. ತಾಲ್ಲೂಕಿನ ರೈತರು ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಗೆಜ್ಜೆ ಶೇಂಗಾ, ಬಿಟಿ ಹತ್ತಿ ಬೀಜ, ಬಳ್ಳಿಶೇಂಗಾ ಬಿತ್ತನೆಯಲ್ಲಿ ನಿರತರಾಗಿದ್ದಾರೆ. ಆದರೆ ಹೊಲದಲ್ಲಿ ಸಾವಿರಾರು ಸಂಖ್ಯೆಯ­ಲ್ಲಿರುವ ಇಲಿಗಳು ಬಿತ್ತಿರುವ ಬೀಜಗಳನ್ನು ತಿಂದು ರೈತರ ನೆಮ್ಮದಿ ಕೆಡಿಸುತ್ತಿವೆ. ಇದರಿಂದ ಇಡೀ ರೈತ ಸಮುದಾಯ ಕಂಗೆಟ್ಟಿದೆ.ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಈಗಾಗಲೇ ಶೇಂಗಾ ಹಾಗೂ ಬಿಟಿ ಹತ್ತಿ ಬೀಜ ಬಿತ್ತನೆ ಮಾಡಲಾಗಿದೆ. ಆದರೆ ಇಲಿಗಳು ಬಿತ್ತಿದ ಬೀಜಗಳನ್ನು ತಿನ್ನುವ ಮೂಲಕ ರೈತರಿಗೆ ತಲೆ ನೋವು ತರಿಸಿವೆ. ಇಂದು ಬಿತ್ತಿದ ಬೀಜಗಳನ್ನು ರಾತ್ರಿ­ಯೊಳಗಾಗಿ ತಿಂದು ಮುಗಿಸುತ್ತಿರುವ ಇಲಿಗಳು ಮರುದಿನ ರೈತರು ಹೊಲಕ್ಕೆ ಹೋಗಿ ನೋಡಿದಾಗ ಕೇವಲ ಕಾಳಿನ ಮೇಲಿನ ಸಿಪ್ಪೆ ಕಂಡು ಬರುತ್ತವೆ. ಸಾವಿರಾರು ರೂಪಾಯಿ ಕಿಮ್ಮತ್ತಿನ ಬೀಜ ಇಲಿಗಳ ಹೊಟ್ಟೆ ಸೇರುತ್ತಿವೆ.‘ಹ್ವಾದ ವರ್ಷನೂ ಹಿಂಗ ಆಗಿತ್ರೀ. ಬಿತ್ತಿದ ಮರದಿನ ಇಲಿ ಎಲ್ಲ ಬೀಜ ತಿಂದು ಹಾಕಿದ್ದವು. ಎರಡ ಸಲಾ ಬೀಜ ಬಿತ್ತ­ಬೇಕಾತ್ರಿ. ಈ ಸಲಾನೂ ಇಲಿ ಗಂಟು ಬಿದ್ದಾವು. ಹಿಂಗಾದರ ರೈತ ಹ್ಯಾಂಗ ಉಳೀ­ಬೇಕ್ರಿ’ ಎಂದು ರಾಮಗಿರಿ ಗ್ರಾಮದ ಬಸಣ್ಣ ಬೆಟಗೇರಿ, ಶಿಗ್ಲಿಯ ಮೂಲಿಮನಿ ಪ್ರಶ್ನಿಸುತ್ತಾರೆ.ನೀರು ಹರಿಯುವಂತಹ ದೊಡ್ಡ ಮಳೆಯಾಗಿದ್ದರೆ ನೀರು ಬಿಲಗಳಲ್ಲಿ ಹೊಕ್ಕು ಇಲಿಗಳು ಸಾಯುತ್ತಿದ್ದವು. ಆದರೆ ಪ್ರಸ್ತುತ ವರ್ಷ ಅಂತ ಮಳೆ ಆಗಿಲ್ಲ. ಹೀಗಾಗಿ ಇಲಿಗಳ  ಕಾಟ ಶುರುವಾಗಿದೆ ಎನ್ನುತ್ತಾರೆ ರೈತರು. ಇಲಿಗಳ ಕಾಟ­ದಿಂದಾಗಿ ಬಿತ್ತನೆ ಬೀಜ, ಗೊಬ್ಬರ, ಆಳು­ಗಳಿಗೆ ರೈತರು ಖರ್ಚು ಮಾಡಿರುವ ಹಣ­ವನ್ನು ನೀರಿ­ನಲ್ಲಿ ಹೋಮ ಮಾಡ­­ದಂತಾ­ಗಿದೆ. ಮೂಷಿಕ­ಗಳನ್ನು ನಿಯಂತ್ರಿಸಲು ರೈತರು ಹರಸಾಹಸ ಮಾಡಬೇಕಾದ ಪರಿಸ್ಥಿತಿ ತಲೆದೋರಿದೆ. ವಿಷ ಹಾಕಿ ಇಲಿಗಳನ್ನು ಕೊಲ್ಲುವ ಪ್ರಯತ್ನಕ್ಕೆ ರೈತರು ಮುಂದಾ­ಗಿದ್ದರೂ ಸಹ ಅವರ ಪ್ರಯತ್ನ ಯಶಸ್ವಿ ಆಗುತ್ತಿಲ್ಲ.‘3–4 ದಿನಗಳ ಹಿಂದ ನಾವು ಬಿಟಿ ಹತ್ತಿ ಬೀಜ ಊರೇವಿ. ಆದರ ಎರಡ ದಿನದಾಗ ಇಲಿಗಳು ಬಹಳಷ್ಟು ಬೀಜ ತಿಂದು ಸಿಪ್ಪಿ ಮಾತ್ರ ಬಿಟ್ಟಾವು’ ಎಂದು ಗೊಜನೂರು ಗ್ರಾಮದ ರೈತ ಚೆನ್ನಪ್ಪ ಸೊರಟೂರ ಹೇಳುತ್ತಾರೆ.

‘ಇಲಿಗಳ ಸಮಗ್ರ ನಿಯಂತ್ರಣಕ್ಕೆ ಎಲ್ಲ ರೈತರು ಒಮ್ಮೆಲೆ ಪ್ರಯತ್ನಿಸಿದ್ದಲ್ಲಿ ಮಾತ್ರ ಅವುಗಳ ನಿಯಂತ್ರಣ ಸಾಧ್ಯ. ಇಲ್ಲದಿದ್ದರೆ ಅವು ಒಂದು ಹೊಲದಿಂದ ಮತ್ತೊಂದು ಹೊಲಕ್ಕ ನುಗ್ಗಿ ದಾಳಿ ಮಾಡಿ ಬೀಜ ಮತ್ತ ಬೆಳೀನ ನಾಶ ಮಾಡ್ತಾವು’ ಎಂದು ಲಕ್ಷ್ಮೇಶ್ವರದ ಕೃಷಿ ಸಹಾಯಕ ಅಧಿಕಾರಿ ಸೋಮು ಲಮಾಣಿ ಹೇಳುತ್ತಾರೆ.ಇಲಿಗಳ ಕಾಟ ಮತ್ತಷ್ಟು ಹೆಚ್ಚಾಗುವ ಮುನ್ನವೇ ಕೃಷಿ ಇಲಾಖೆ ಅಧಿಕಾರಿಗಳು ಅವುಗಳ ನಿಯಂತ್ರಣಕ್ಕೆ ಸೂಕ್ತ ಕ್ರಮಕೈಗೊಳ್ಳಬೇಕಾದ ಅಗತ್ಯ ಇದ್ದು ಈ ನಿಟ್ಟಿನಲ್ಲಿ ರೈತರನ್ನು ಜಾಗೃತರನ್ನಾಗಿ ಮಾಡಬೇಕಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.