ಶುಕ್ರವಾರ, ಜೂಲೈ 10, 2020
23 °C

ಮೇಯರ್ ಅಧಿಕಾರಾವಧಿ ವಿಸ್ತರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೇಯರ್ ಅಧಿಕಾರಾವಧಿ ವಿಸ್ತರಿಸಿ

ಬೆಂಗಳೂರು: ‘ಮೇಯರ್ ಆಗಿ ನನ್ನ ಕಾರ್ಯ ನಿರ್ವಹಣೆ ವೈಯಕ್ತಿಕವಾಗಿ ತೃಪ್ತಿ ತಂದಿಲ್ಲ. ಆದರೆ 12 ತಿಂಗಳ ಅಲ್ಪಾವಧಿಯಲ್ಲಿ ಯಾವುದೇ ಬದಲಾವಣೆ ತರಲು ಸಾಧ್ಯವಿಲ್ಲ. ಹಾಗಾಗಿ ಮೇಯರ್ ಅಧಿಕಾರಾವಧಿ ವಿಸ್ತರಣೆ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸಬೇಕು’ ಎಂದು ಮೇಯರ್ ಎಸ್.ಕೆ.ನಟರಾಜ್ ಹೇಳಿದರು.ಬೆಂಗಳೂರು ಪ್ರೆಸ್‌ಕ್ಲಬ್ ಹಾಗೂ ವರದಿಗಾರರ ಕೂಟವು ಜಂಟಿಯಾಗಿ ಸೋಮವಾರ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.‘ಮೂರೂವರೆ ವರ್ಷಗಳ ಬಳಿಕ ಅಸ್ತಿತ್ವಕ್ಕೆ ಬಂದ ಜನಪ್ರತಿನಿಧಿಗಳ ಆಡಳಿತದ ಬಗ್ಗೆ ಜನತೆಯಲ್ಲಿ ಸಾಕಷ್ಟು ನಿರೀಕ್ಷೆ ಇರುವುದು ಸಹಜ. ಆದರೆ ಸ್ಥಾಯಿ ಸಮಿತಿಗಳ ರಚನೆ ವಿಳಂಬವಾಯಿತು. ಬಜೆಟ್ ಮಂಡನೆ ಕೂಡ ತಡವಾದ ಕಾರಣ ತುಸು ತೊಂದರೆಯಾಯಿತು. ಆದರೂ ಎಲ್ಲ ವಾರ್ಡ್‌ಗಳ ಅಭಿವೃದ್ಧಿಗೆ ಉತ್ತಮ ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ಈಗಾಗಲೇ ಕಾಮಗಾರಿಗಳು ಆರಂಭವಾಗುತ್ತಿವೆ’ ಎಂಂದು ಹೇಳಿದರು.‘ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರುಗಳಿಗೆ 20 ತಿಂಗಳ ಅಧಿಕಾರಾವಧಿ ನೀಡಲಾಗಿದೆ. ಆದರೆ ಬಿಬಿಎಂಪಿ ವ್ಯಾಪ್ತಿ ಸಾಕಷ್ಟು ವಿಸ್ತರಣೆಯಾಗಿದ್ದರೂ ಮೇಯರ್ ಅಧಿಕಾರಾವಧಿಯನ್ನು ಕೇವಲ 12 ತಿಂಗಳಿಗೆ ಸೀಮಿತಗೊಳಿಸಲಾಗಿದೆ. ಇಷ್ಟು ಕಡಿಮೆ ಅವಧಿಯಲ್ಲಿ ದಿಢೀರ್ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಾಧ್ಯವಿಲ್ಲ’ ಎಂದರು.

ಎರಡೂವರೆ ವರ್ಷ ಅಗತ್ಯ: ‘ಆ ಹಿನ್ನೆಲೆಯಲ್ಲಿ ಬಿಬಿಎಂಪಿ ಮೇಯರ್ ಅಧಿಕಾರಾವಧಿಯನ್ನು ಕನಿಷ್ಠ ಎರಡೂವರೆ ವರ್ಷಗಳಿಗೆ ವಿಸ್ತರಿಸಿದರೆ ಸಮಗ್ರ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಲು ನೆರವಾಗುತ್ತದೆ. ಪಾಲಿಕೆಗೆ ಪ್ರತ್ಯೇಕ ಕಾಯ್ದೆ ಜಾರಿಗೊಳಿಸಲು ಸರ್ಕಾರ ಚಿಂತಿಸಿದ್ದು, ಈ ಅಂಶವನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಹೇಳಿದರು.ಕಾನೂನುಬಾಹಿರ ಘಟಕ: ‘ಪಾಲಿಕೆಯ ಕಾನೂನು ಘಟಕವು ಕಾನೂನುಬಾಹಿರ ಘಟಕದಂತಾಗಿತ್ತು. ಪಾಲಿಕೆ ಆಸ್ತಿಗಳನ್ನು ಸಂರಕ್ಷಿಸುವ ಬದಲಿಗೆ ಆಸ್ತಿಗಳು ಕೈತಪ್ಪಿ ಹೋಗುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಪ್ರಕರಣಗಳಿಗೆ ಸಂಬಂಧಪಟ್ಟಂತೆ ಕಾನೂನು ಘಟಕವು ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸುತ್ತಿರಲಿಲ್ಲ. ನಾನು ಅಧಿಕಾರಕ್ಕೆ ಬಂದ ನಂತರ ಈ ಘಟಕದಲ್ಲಿ ಸಾಕಷ್ಟು ಬದಲಾವಣೆ ತರಲಾಗಿದೆ. ದಕ್ಷ ಕಾನೂನು ತಜ್ಞರ ಸೇವೆ ಬಳಸಿಕೊಳ್ಳಲಾಗುತ್ತಿದೆ’ ಎಂದು ಮೇಯರ್ ಹೇಳಿದರು.‘ನಾನು ಡಮ್ಮಿ ಅಲ್ಲ’: ‘ತಮ್ಮ ಮೃದು ಧೋರಣೆಯನ್ನು ದುರುಪಯೋಗಪಡಿಸಿಕೊಂಡ ಕೆಲ ಸಚಿವರು ತಾವೇ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ನಿಮ್ಮನ್ನು ನಿರ್ಲಕ್ಷಿಸಲಿಲ್ಲವೇ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನಾನು ಡಮ್ಮಿ ಅಲ್ಲ. ನಾನು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಹಾಗೂ ನಿರ್ಧಾರ ತೆಗೆದುಕೊಳ್ಳಲು ಪಕ್ಷ ಹಾಗೂ ಸಚಿವರು ಅವಕಾಶ ನೀಡಿದ್ದರು. ಆ ರೀತಿಯ ಯಾವುದೇ ಒತ್ತಡವಾಗಲಿ, ನಿರ್ಲಕ್ಷ್ಯವನ್ನಾಗಲಿ ತೋರಿಲ್ಲ’ ಎಂದರು.‘ನಾನು ಆದೇಶ ನೀಡಿದ ನಂತರೂ ಕೆಲವು ಅಧಿಕಾರಿಗಳು ಬಹುಮಹಡಿ ಕಟ್ಟಡಗಳಿಗೆ ಸ್ವಾಧೀನ ಪತ್ರ ವಿತರಿಸಿರುವುದು ಗಮನಕ್ಕೆ ಬಂದಿದ್ದು, ಆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ಸೂಚಿಸಲಾಗಿದೆ. ಬಿಡಿಎ ಬದಲಿಗೆ ಪಾಲಿಕೆ ವತಿಯಿಂದಲೇ ಸ್ವಾಧೀನಪತ್ರ ವಿತರಿಸುವ ಅಧಿಕಾರವನ್ನು ಸದ್ಯದಲ್ಲೇ ಪಡೆಯಲಾಗುವುದು’ ಎಂದು ಪ್ರತಿಕ್ರಿಯಿಸಿದರು.‘2010-11ನೇ ಸಾಲಿನ ಪಾಲಿಕೆ ಬಜೆಟ್‌ನಲ್ಲಿ ಸರ್ಕಾರದಿಂದ 1,300 ಕೋಟಿ ರೂಪಾಯಿ ಅನುದಾನ ನಿರೀಕ್ಷಿಸಲಾಗಿತ್ತು. ಮುಖ್ಯಮಂತ್ರಿಗಳೇ ಪಾಲಿಕೆ ಸಭೆಗೆ ಬಂದು ಅನುದಾನ ಘೋಷಿಸುತ್ತಾರೆ ಎಂಬುದಾಗಿ ಹೇಳಿದ್ದು ನಿಜ. ಆದರೆ ಸಮಯದ ಅಭಾವದಿಂದ ಅವರು ಬರಲಿಲ್ಲ. ಅನುದಾನವನ್ನೂ ನೀಡಲಿಲ್ಲ. ಈ ಬಾರಿಯ ರಾಜ್ಯ ಬಜೆಟ್‌ನಲ್ಲೂ ಪಾಲಿಕೆಗೆ ಹೆಚ್ಚಿನ ಅನುದಾನ ನೀಡಿಲ್ಲ. ಆದರೆ ಮುಂದಿನ ದಿನಗಳಲ್ಲಿ ವಿಶೇಷ ಅನುದಾನ ನೀಡಲಿದ್ದಾರೆ ಎಂಬ ವಿಶ್ವಾಸವಿದೆ’ ಎಂದು ಹೇಳಿದರು.‘ಪಾಲಿಕೆ ಇತಿಹಾಸದಲ್ಲಿಯೇ ದಾಖಲೆ ಎನ್ನಬಹುದಾದ ಹ ಕೋಟಿ ರೂಪಾಯಿ ಆಸ್ತಿ ತೆರಿಗೆಯನ್ನು 2010-11ನೇ ಸಾಲಿನಲ್ಲಿ ಸಂಗ್ರಹಿಸಲಾಗಿದೆ. ತೆರಿಗೆ ವ್ಯಾಪ್ತಿಯಿಂದ ದೂರ ಉಳಿದಿದ್ದ ಮೂರು ಲಕ್ಷ ಆಸ್ತಿದಾರರನ್ನು ಪತ್ತೆ ಹಚ್ಚಿ ತೆರಿಗೆ ವಸೂಲಿ ಮಾಡಲಾಗಿದೆ. ಕಸಮುಕ್ತ ನಗರವನ್ನಾಗಿ ಮಾಡುವ ಉದ್ದೇಶದಿಂದ ಮುಂಬೈನ ಬಾಬಾ ಅಟೊಮಿಕ್ ಸಂಶೋಧನಾ ಕೇಂದ್ರದ ತಂತ್ರಜ್ಞಾನವನ್ನು ಬಳಸಿಕೊಂಡು ಹಸಿ ತ್ಯಾಜ್ಯದಿಂದ ಬಯೊಮೆಥನೈಜೇಷನ್ ಘಟಕವನ್ನು 16 ಕಡೆಗಳಲ್ಲಿ ತೆರೆಯಲು ಟೆಂಡರ್ ಆಹ್ವಾನಿಸಲಾಗಿದೆ’ ಎಂದರು.‘ಕಟ್ಟಡ ಮಾಲೀಕರ ಒಪ್ಪಿಗೆ ಪಡೆದ ಬಳಿಕವಷ್ಟೇ ರಸ್ತೆ ವಿಸ್ತರಣೆ ಕಾರ್ಯ ಕೈಗೊಳ್ಳಲಾಗುತ್ತಿದೆ. ಇದರಿಂದ ಜನರು ನಿರಾಳರಾಗಿದ್ದಾರೆ ಎಂದು ಭಾವಿಸಿದ್ದೇನೆ. ಒಟ್ಟಿನಲ್ಲಿ 11 ತಿಂಗಳ ಅವಧಿಯಲ್ಲಿ ಸಾಧ್ಯವಾದ ಮಟ್ಟಿಗೆ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೊಳಿಸಲು ಪ್ರಯತ್ನಿಸಿದ್ದೇನೆ. ಈ ಬಗ್ಗೆ ಜನತೆಯೇ ಮೌಲ್ಯಮಾಪನ ಮಾಡಲಿ. ಅವರೇ ಅಂಕ ನೀಡಲಿ’ ಎಂದು ಪ್ರತಿಕ್ರಿಯೆ ನೀಡಿದರು.ಪಾಲಿಕೆ ಆಡಳಿತ ಪಕ್ಷದ ನಾಯಕ ಬಿ.ಎಸ್.ಸತ್ಯನಾರಾಯಣ, ಬೆಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಎಂ.ಎ.ಪೊನ್ನಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಸದಾಶಿವ ಶೆಣೈ, ಬೆಂಗಳೂರು ವರದಿಗಾರರ ಕೂಟದ ಅಧ್ಯಕ್ಷ ಕೆ.ವಿ.ಪ್ರಭಾಕರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.