ಗುರುವಾರ , ಮೇ 13, 2021
18 °C

ಮೇಯರ್ ಆಯ್ಕೆ ಸಮಿತಿ ಕೈಬಿಟ್ಟ ಬಿಜೆಪಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಮಿತಿ ರಚಿಸುವ ತೀರ್ಮಾನದಿಂದ ಬಿಜೆಪಿ ಹಿಂದೆ ಸರಿದಿದೆ. ಬದಲಿಗೆ, ನಗರದ ಶಾಸಕರು ಮತ್ತು ಪಕ್ಷದ ಮುಖಂಡರ ತೀರ್ಮಾನದಂತೆಯೇ ಮೇಯರ್ ಆಯ್ಕೆ ಮಾಡಲು ನಿರ್ಧರಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಸಮಿತಿ ರಚನೆ ಮಾಡಿ, ಅದು ನೀಡುವ ಶಿಫಾರಸಿನ ಪ್ರಕಾರ ಮೇಯರ್, ಉಪ ಮೇಯರ್ ಆಯ್ಕೆ ಮಾಡಲು ಪಕ್ಷ ಈ ಮೊದಲು ತೀರ್ಮಾನಿಸಿತ್ತು. ಆದರೆ, ಇದಕ್ಕೆ ನಗರದ ಬಹುತೇಕ ಶಾಸಕರು ವಿರೋಧ ವ್ಯಕ್ತಪಡಿಸಿದ್ದರಿಂದ ಅದನ್ನು ಕೈಬಿಡಲಾಗಿದೆ. ಈ ಕಾರಣದಿಂದಲೇ ಶನಿವಾರ ಮೇಯರ್ ಆಯ್ಕೆ ಕುರಿತು ಯಾವ ಚರ್ಚೆಯೂ ನಡೆಯಲಿಲ್ಲ; ಸಮಿತಿ ರಚನೆಯೂ ಆಗಲಿಲ್ಲ.ಗೃಹ ಸಚಿವ ಆರ್.ಅಶೋಕ ನೇತೃತ್ವದಲ್ಲಿ ಇದೇ 24ರಂದು ನಗರದ ಎಲ್ಲ ಶಾಸಕರು ಸಭೆ ಸೇರಲು ತೀರ್ಮಾನಿಸಿದ್ದು, ಅಲ್ಲಿಯೇ ಮೇಯರ್ ಆಯ್ಕೆ ಅಂತಿಮವಾಗಲಿದೆ. ಅದರ ನಂತರ ಆ ಕುರಿತು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರ ಜತೆ ಚರ್ಚೆ ನಡೆಸಲಿದ್ದಾರೆ ಎಂದು ಗೊತ್ತಾಗಿದೆ.

ನಾಯಕತ್ವ ಬಲಗೊಳ್ಳಲಿ

ಮೇಯರ್ ಚುನಾವಣೆ ಮತ್ತೆ ಬಂದಿದೆ. ಆದರೆ, ನನ್ನ ಪ್ರಕಾರ ಇದೊಂದು ಚುನಾವಣೆ ಎನ್ನುವುದಕ್ಕಿಂತ ನೇಮಕ ಎಂದು ಕರೆದರೆ ತಪ್ಪಾಗಲಾರದು. ಏಕೆಂದರೆ ಪ್ರಜೆಗಳು ನೇರವಾಗಿ ಮೇಯರ್ ಆಯ್ಕೆ ಮಾಡುವುದಿಲ್ಲ. ಬದಲಿಗೆ, ಕೆಲ ದಿನಗಳ ಮೊದಲು ನೇಮಕಕ್ಕೆ ಆಯ್ಕೆ ಪ್ರಕ್ರಿಯೆ ಅತ್ಯಂತ ಗೋಪ್ಯವಾಗಿ ನಡೆಯಲಿದೆ. ಹೀಗಾಗಿ, ಯಾರು ಪ್ರಬಲ ಆಕಾಂಕ್ಷಿಗಳು ಹಾಗೂ ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಅವರ ದೃಷ್ಟಿಕೋನವೇನು ಎಂಬುದೇ ಗೊತ್ತಾಗುವುದಿಲ್ಲ.ಮೇಯರ್ ಆಯ್ಕೆ ಎಂಬುದು ಆಡಳಿತಾರೂಢ ಪಕ್ಷದ ಆಂತರಿಕ ನಿರ್ಧಾರ. ಹಿರಿತನ, ಶಾಸಕರ ಕೃಪಾಕಟಾಕ್ಷ ಮೇಯರ್ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇದು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತ ಅಲ್ಲ. ಬೇರೆ ನಗರಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮೇಯರ್‌ಗೆ ಬೆಂಗಳೂರಿನ ಬಗ್ಗೆ ದೂರದೃಷ್ಟಿ ಇರಬೇಕು ಎಂದೆನಿಸುವುದಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಹಾಲಿ ಮೇಯರ್‌ಗೂ ಆ ಹುದ್ದೆಗೆ ಏರುವವರೆಗೆ ಹೊರಗಿನ ಶೆಟ್ಟಿಹಳ್ಳಿ ಬಗ್ಗೆ ಗೊತ್ತಿರಲಿಲ್ಲ ಎಂದೆನಿಸುತ್ತದೆ. ಯಾವುದೇ ಪ್ರಕರಣವಿರಲಿ, ದೂರದೃಷ್ಟಿಯಿದ್ದರೆ ಮಾತ್ರ ಅಂತಹವರು ಕೆಲಸ ಮಾಡಲು ಸಾಧ್ಯವೆನಿಸುತ್ತದೆ.ಭಾರತದಲ್ಲಿಯೇ ಅನೇಕ ರಾಜ್ಯಗಳಲ್ಲಿ ಪೂರ್ಣಾವಧಿ ಮೇಯರ್ ಆಯ್ಕೆ ನೇರವಾಗಿ ನಡೆಯುತ್ತಿದೆ. ಆದರೆ, ಕರ್ನಾಟಕದಲ್ಲಿ ನಮ್ಮ ರಾಜ್ಯಮಟ್ಟದ ನಾಯಕರಿಗೆ ನಗರ ಮಟ್ಟದ ನಾಯಕತ್ವ ಬಲಗೊಳ್ಳುವುದು ಇಷ್ಟವಿಲ್ಲದಂತೆ ಕಾಣುತ್ತದೆ. `ಮ್ಯಾಜಿಕ್ ಚೇರ್~ನಂತಿರುವ ಪ್ರಸ್ತುತ ವ್ಯವಸ್ಥೆಯನ್ನೇ ನಮ್ಮ ನಾಯಕರು ಅಪ್ಪಿಕೊಳ್ಳುತ್ತಿರುವುದರಿಂದ ಯಾವುದೇ ಪಾಲಿಕೆ ಸದಸ್ಯ ರಾಜಕೀಯವಾಗಿ ಬೆಳೆಯುವುದು ಕಷ್ಟವಾಗುತ್ತಿದೆ. ಇದರ ಫಲ ನಗರ ಅನುಭವಿಸುತ್ತಿದೆ.ವಿಶ್ವದ ಬೇರೆ ನಗರಗಳಲ್ಲಿ ಮೇಯರ್ ಆದವರು ಜಾಗತಿಕ ಮಟ್ಟದಲ್ಲಿ ಆಯಾ ನಗರದ ಬೆಳವಣಿಗೆಗೆ ಪೂರಕವಾಗಿ ಕೆಲಸ ನಿರ್ವಹಿಸಲಿದ್ದಾರೆ. ವಿಶ್ವದ ಬದಲಾವಣೆಗೆ ಪೂರಕವಾಗಿ ಸುಧಾರಣೆ ತರಲು ತಮ್ಮನ್ನು ತಾವು ಸಮರ್ಪಿಸಿಕೊಂಡು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲಿದ್ದಾರೆ. ಆದರೆ, ನಮ್ಮಲ್ಲಿ ನೀಡುವ ಭರವಸೆಗಳು ಭರವಸೆಗಳಾಗಿಯೇ ಉಳಿಯುತ್ತಿವೆ.ಚುನಾವಣೆಗೂ ಮುನ್ನ ಬೆಂಗಳೂರಿನ ಅಭಿವೃದ್ಧಿ ಕುರಿತು ಬಿಜೆಪಿ ನೀಡಿದ ಭರವಸೆಗಳು ಏನಾಗಿವೆ. ಅದು 2008ರ ವಿಧಾನಸಭಾ ಚುನಾವಣೆ, 2009ರ ಲೋಕಸಭೆ ಚುನಾವಣೆ ಹಾಗೂ 2010ರ ಪಾಲಿಕೆ ಚುನಾವಣೆಯೇ ಇರಬಹುದು. ಚುನಾವಣೆಗಳು ಮಾತ್ರ ಒಂದರ ಹಿಂದೊಂದರಂತೆ ಬರುತ್ತಲೇ ಇವೆ. ಆದೇ ರೀತಿ ಭರವಸೆಗಳು ಕೂಡ ಪ್ರತಿ ಚುನಾವಣೆಯಲ್ಲಿಯೂ ಪುನರಾವರ್ತನೆಗೊಳ್ಳುತ್ತಿವೆ.

- ಡಾ. ಅಶ್ವಿನ್ ಮಹೇಶ್,

ಸದಸ್ಯರು, ಬೆಂಗಳೂರು ಅಭಿವೃದ್ಧಿ ಕಾರ್ಯಪಡೆ

ದಕ್ಷರು ಆಯ್ಕೆಯಾಗಲಿ

ಮೇಯರ್ ಆಯ್ಕೆ ಸಂದರ್ಭದಲ್ಲಿ ಪ್ರಾಮಾಣಿಕ, ದಕ್ಷ, ದೂರದೃಷ್ಟಿಯುಳ್ಳ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ವ್ಯಕ್ತಿಯನ್ನು ಆಯ್ಕೆ ಮಾಡುವುದು ಜನಪ್ರತಿನಿಧಿಗಳ ಆದ್ಯ ಕರ್ತವ್ಯ ಆಗಬೇಕು. ಇದನ್ನು ಮರೆತು ಜಾತಿ, ಧರ್ಮ, ಹಣ ಹಾಗೂ ಲಾಬಿಗಳಿಗೆ ಒತ್ತು ಕೊಟ್ಟು ಆರಿಸಿದರೆ ಅಂತವರಿಂದ ಉತ್ತಮ ಕೆಲಸ ನಿರೀಕ್ಷಿಸುವುದಾದರೂ ಹೇಗೆ? ಅವರ ಮೇಲೆ ಇಡೀ ನಗರದ ಜವಾಬ್ದಾರಿ ಇರುತ್ತದೆ. ಜನರಿಂದ ಮೇಯರ್ ನೇರವಾಗಿ ಆಯ್ಕೆಯಾಗುವುದು ಸರಿಯಲ್ಲ. ಬಹಳಷ್ಟು ಮತದಾರರಿಗೆ ತಮ್ಮ ಪ್ರತಿನಿಧಿ ಹೇಗಿರಬೇಕು ಎಂಬ ಪರಿಕಲ್ಪನೆ ಇರುವುದಿಲ್ಲ. ಆ ಸ್ಥಾನದ ಜವಾಬ್ದಾರಿ ಬಗ್ಗೆ ಅರಿವಿಲ್ಲ. ಕ್ಷಣಿಕ ಆಮಿಷಗಳಿಗೆ ಮಾರು ಹೋಗಿ ಅಪ್ರಮಾಣಿಕ, ಅದಕ್ಷರನ್ನು ಆಯ್ಕೆ ಮಾಡುವ ಸಂದರ್ಭ ಹೆಚ್ಚಿರುತ್ತದೆ. ಮೇಯರ್ ಅಧಿಕಾರಾವಧಿ ಒಂದು ವರ್ಷ. ಹೊಸದಾಗಿ ಆಯ್ಕೆಯಾದ ಮೇಯರ್ ಆ ಸ್ಥಾನಮಾನಕ್ಕೆ ಹೊಂದಿಕೊಳ್ಳುವುದರೊಳಗೆ ಅವರ ಅಧಿಕಾರಾವಧಿ ಮುಗಿದು ಹೋಗುತ್ತದೆ. ಮತದಾರ ಹಾಗೂ ಜನಪ್ರತಿನಿಧಿ ಜಾಗೃತಿಯಾಗದ ಹೊರತು ಬೇರೆ ಮಾರ್ಗ ಇಲ್ಲ.

-ಪ್ರೊ.ಟಿ. ನಾರಾಯಣಪ್ಪ, ಪ್ರಾಂಶುಪಾಲರು,

ಬಿ.ಇ.ಎಸ್. ಕಾಲೇಜು, ಜಯನಗರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.