ಗುರುವಾರ , ಜೂಲೈ 2, 2020
22 °C

ಮೈಲಿಗೆ: ಮಹಿಳೆಗೆ ತಪ್ಪದ ಹೊರ ವಾಸ

ಉದಯ ಯು. / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಲಿಗೆ: ಮಹಿಳೆಗೆ ತಪ್ಪದ ಹೊರ ವಾಸ

ಹಾಸನ: ಜಿಲ್ಲೆಯ ಸುಮಾರು 40ಕ್ಕೂ ಹೆಚ್ಚು ಗೊಲ್ಲರ ಹಟ್ಟಿಗಳಲ್ಲಿ ಈಗಲೂ ಮೈಲಿಗೆಯ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದ್ದು, ಪ್ರತಿ ತಿಂಗಳು ಮೂರು ದಿನ ಮಹಿಳೆಯರು ಊರ ಹೊರಗೆ ನಿರ್ಮಿಸಿದ ಕೊಠಡಿಯಲ್ಲಿ ಕಾಲ ಕಳೆಯಬೇಕಾಗುತ್ತಿದೆ. ಈ ಸಂಪ್ರದಾಯವನ್ನು ಬಿಡಬೇಕು ಎಂದು ಗ್ರಾಮದ ಯುವಕರು, ಮಹಿಳೆಯರು ಬಯಸಿದರೂ ಹಿರಿಯರ ಒತ್ತಡ ಹಾಗೂ ದೇವರ ಭಯದಿಂದ ಪಾಲಿಸಲೇಬೇಕಾಗಿದೆ.ಯಾದವ ಜನಾಂಗಕ್ಕೆ ಸೇರಿದ ಈ ಜನರು ದಶಕಗಳಿಂದ ಈ   ಅನುಸರಿ ಸುತ್ತ ಬಂದಿದ್ದಾರೆ. ಮೈಲಿಗೆಯಾದ ಮಹಿಳೆಯರು ಊರೊಳಗೆ ಬಂದರೆ ದೇವರು ಸಿಟ್ಟಾಗುತ್ತಾನೆ ಎಂಬುದು ಇವರ ನಂಬಿಕೆ. ಈ ಕಾರಣಕ್ಕಾಗಿ ಮುಟ್ಟಾದ ಮಹಿಳೆಯರು ಮೂರು ದಿನ  ಊರಿನ ಹೊರಗೆ ನಿರ್ಮಿಸಿರುವ ಸಣ್ಣ ಗುಡಿಸಲಿನಲ್ಲಿ ವಾಸವಿದ್ದು, ಸ್ನಾನ ಮಾಡಿದ ಬಳಿಕ ಊರೊಳಗೆ ಬರ ಬೇಕು.

ಯಾವುದೋ ಕಾಲದಲ್ಲಿ ನಿರ್ಮಿಸಿರುವ ಈ ಗುಡಿಸಲುಗಳಲ್ಲಿ ಈಗಲೂ ವಿದ್ಯುತ್ ಇಲ್ಲ, ನೀರಿನ ವ್ಯವಸ್ಥೆ ಇಲ್ಲ, ಶೌಚಾಲಯವೂ ಇಲ್ಲ. ಕೆಲವು ಗುಡಿಸಲುಗಳು ಯಾವುದೇ ಕ್ಷಣದಲ್ಲಿ ಮುರಿದು ಬೀಳುವ ಹಂತದಲ್ಲಿವೆ. ಸುತ್ತ ಗಿಡಗಂಟಿಗಳು ಬೆಳೆದು ರಾತ್ರಿ ವೇಳೆಯಲ್ಲಿ ಹಾವುಗಳು-ಚೇಳು ಒಳಗೆ ಬಂದಿರುವ ನಿದರ್ಶನಗಳು ಇವೆ ಎಂದು ಮಹಿಳೆಯರು ನುಡಿಯುತ್ತಾರೆ.ಹಾಸನ ಜಿಲ್ಲೆಯಲ್ಲಿ 56 ಗೊಲ್ಲರ ಹಟ್ಟಿಗಳಿವೆ. ಬಹುತೇಕ ಎಲ್ಲ ಹಟ್ಟಿಗ ಳಲ್ಲೂ ಇದೇ ಸ್ಥಿತಿ. ಹಾಗೆಂದು ಊರಿನ ಮಹಿಳೆಯರು, ಯುವ ಜನತೆ ಈ ವ್ಯವ ಸ್ಥೆಯನ್ನು ಬೆಂಬಲಿಸುತ್ತಾರೆ ಎಂದಲ್ಲ, ಬದಲಾಗಬೇಕು ಎಂಬ ಬಯಕೆ ಹಲವರಲ್ಲಿದೆ. ಆದರೆ ಸಮುದಾಯದ ಹಿರಿಯರ ಒತ್ತಡ ಹಾಗೂ ಸ್ವಲ್ಪಮಟ್ಟಿಗೆ ದೇವರ ಭಯದಿಂದ ಇದನ್ನು ಅನುಸರಿಸುತ್ತಿದ್ದಾರೆ. ಸಮುದಾಯದ ವಿದ್ಯಾವಂತ ಕೆಲವು ಯುವಕರು ಸೇರಿಕೊಂಡು ಯಾದವ ಸಂಘವನ್ನು ಕಟ್ಟಿ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಸುಮಾರು 12 ಹಟ್ಟಿಗಳಲ್ಲಿ ಈ ಸಂಪ್ರದಾಯವನ್ನು ಕೈಬಿಡಲಾಗಿದೆ. ಇನ್ನೂ ಕೆಲವೆಡೆ ಈ ಸಂಪ್ರದಾಯವನ್ನು ಬಿಡುವಂತೆ ಮನವೊಲಿಸಿದವರೇ ಸಂಪ್ರದಾಯಕ್ಕೆ ಶರಣಾಗಿರುವುದು ವೈರುಧ್ಯವಾಗಿದೆ.ಅರಸೀಕೆರೆ ತಾಲ್ಲೂಕು ಜಾವಗಲ್ ಹೋಬಳಿಯ ಕೆ.ಗೊಲ್ಲರಹಟ್ಟಿ ಹಾಗೂ ಎನ್.ಗೊಲ್ಲರಹಟ್ಟಿಗಳು ಅಕ್ಕಪಕ್ಕದ ಊರುಗಳು. ಈ ಎರಡೂ ಊರುಗಳಲ್ಲಿ ದಶಕಗಳಿಂದ ಕಟ್ಟುನಿಟ್ಟಾಗಿ ಈ ಸಂಪ್ರದಾಯ ಅನುಸರಿಸಲಾಗುತ್ತಿದೆ. ತಾಲ್ಲೂಕು ಪಂಚಾಯಿತಿಯ ಮಾಜಿ ಸದಸ್ಯ ಜಿ. ಮಹಾಲಿಂಗಪ್ಪ ಎಂಬುವವರು ಈ ಅನಿಷ್ಟ ಪದ್ಧತಿಯನ್ನು ಹೋಗಲಾಡಿಸಲು ಶ್ರಮಿಸಿದ್ದರು. ಊರಿನಲ್ಲಿ ಸಭೆ ಆಯೋಜಿಸಿ, ಜನರ ಮನವೊಲಿಸುವ ಪ್ರಯತ್ನವನ್ನು ಹಲವುಬಾರಿ ಮಾಡಿದ್ದರು.

 

ಆದರೆ ಊರಿನ ಹಿರಿಯರು ಸಂಪ್ರದಾಯ ಬಿಡಲು ಒಪ್ಪಲಿಲ್ಲ. ಕೊನೆಗೆ ಮಹಿಳೆಯರಿಗೆ ಒಂದಿಷ್ಟು ಅನುಕೂಲವಾದರೂ ಆಗಲಿ ಎಂದು ಊರ ಹೊರಗಿದ್ದ ಗುಡಿಸಲನ್ನು ತೆಗೆದು ಹಲವರಿಂದ ಧನಸಹಾಯ ಪಡೆದು `ಮಹಿಳಾ ಸಮುದಾಯ ಭವನ~  ನಿರ್ಮಿಸಿದ್ದಾರೆ. ಈ ಭವನವನ್ನು ಮಹಿಳೆಯರು ಈ ಸಂದರ್ಭ ದಲ್ಲಿ ಮಾತ್ರ ಬಳಕೆ ಮಾಡುತ್ತಾರೆ.

 

ಕೋಳಗುಂದ ಗ್ರಾಮ  ಪಂಚಾಯಿತಿ ಅಧ್ಯಕ್ಷೆಯೂ ಆಗಿರುವ ಮಹಾಲಿಂಗಪ್ಪ ಅವರ ಪತ್ನಿ ಹೇಮಾವತಿ ಅವರೂ ಈ ಸಂಪ್ರದಾಯವನ್ನು ಒಪ್ಪಿಕೊಂಡು ತಿಂಗಳಿಳಲ್ಲಿ ಮೂರುದಿನಗಳನ್ನು ಊರ ಹೊರಗಿನ ಈ ಸಮುದಾಯಭವನದಲ್ಲಿ ಕಳೆಯುತ್ತಾರೆ. `ಸಮುದಾಯವನ್ನು ಬಿಟ್ಟು ಜೀವನ ಮಾಡೋಕಾಗಲ್ಲ. ಅದಕ್ಕಾಗಿ ಅನಿವಾರ್ಯವಾಗಿ ಸಂಪ್ರದಾಯವನ್ನು ಒಪ್ಪಿಕೊಂಡಿದ್ದೇವೆ. ಸಮುದಾಯದಲ್ಲಿ ಸುಶಿಕ್ಷಿತರು ಹೆಚ್ಚಾದಂತೆ ಈ ಸಂಪ್ರದಾಯ ಕೊನೆಗೊಳ್ಳುವುದೆಂಬ ವಿಶ್ವಾಸವಿದೆ~ ಎಂದು ಮಹಾಲಿಂಗಪ್ಪ ಹೇಳುತ್ತಾರೆ.ಹೆರಿಗೆಯ ಸಂದರ್ಭದಲ್ಲಿ ಮಹಿಳೆಯರು ಇದಕ್ಕಿಂತ ದೊಡ್ಡ ಕಷ್ಟ ಎದುರಿಸಬೇಕಾಗುತ್ತದೆ. ಹಿಂದೆ ಕನಿಷ್ಠ ಎರಡು ತಿಂಗಳು ಮಹಿಳೆ ನವಜಾತ ಶಿಶುವಿನೊಂದಿಗೆ ಊರ ಹೊರಗಿನ ಗುಡಿಸಲಿನಲ್ಲಿ ಕಳೆಯಬೇಕಿತ್ತು. ಈಗ ಈ ಸಂಪ್ರದಾಯ ಸ್ವಲ್ಪ ಸಡಿಲಿಕೆ ಯಾಗಿದೆ.ಆಸ್ಪತ್ರೆಗಳಲ್ಲೇ ಹೆರಿಗೆ ಮಾಡಿ ಸಬೇಕು ಎಂದು ಸರ್ಕಾರ ಕಡ್ಡಾಯ ಮಾಡಿದ ಬಳಿಕ ಸುಮಾರು ನಾಲ್ಕೈದು ದಿನ ಮಹಿಳೆಯರು ಅಲ್ಲಿರುತ್ತಾರೆ. ಆದರೆ ಊರಿಗೆ ಬಂದ ಬಳಿಕ 15ದಿನ ಮನೆಯೊಳಗೆ ಹೋಗುವಂತಿಲ್ಲ.ಮನೆ ಪಕ್ಕದಲ್ಲೇ ಗುಡಿಸಲು ಅಥವಾ ಕೊಠಡಿ ನಿರ್ಮಿಸಿ ಅದರಲ್ಲಿ ಉಳಿಯ ಬೇಕು. 15 ದಿನದ ಬಳಿಕ ಮಗುವಿನೊಂದಿಗೆ ಮನೆಯೊಳಗೆ ಪ್ರವೇಶಿಸಬೇಕು.`ನಾವು ಶ್ರೀಕೃಷ್ಣನ ಕುಲದವರು. ಮಡಿ ಮೈಲಿಗೆಯನ್ನು ಸರಿಯಾಗಿ ಪಾಲಿಸದಿದ್ದರೆ ಕುಲದೇವರಾದ ಕಂಬದ ನರಸಿಂಹ ಸ್ವಾಮಿ ಸಿಟ್ಟಾಗುತ್ತಾನೆ. ಊರೊಳಗೆ ಮೈಲಿಗೆ ಯಾಗಬಾರ ದೆಂಬ ಉದ್ದೇಶದಿಂದಲೇ ನಾವು ಇತರ ಜನರ ಮಧ್ಯದಲ್ಲಿ ವಾಸಿಸದೆ ನಮ್ಮದೇ ಕೇರಿಗಳನ್ನು ನಿರ್ಮಿಸುತ್ತೇವೆ~ ಎಂದು ಊರ ಹಿರಿಯರು ನುಡಿಯುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.