ಶುಕ್ರವಾರ, ಮೇ 14, 2021
31 °C

ಮೈಸೂರಿನಲ್ಲಿ ಸ್ವಾಮಿ ವಿವೇಕಾನಂದ...

ಡಾ.ಆರ್. ಬಾಲಸುಬ್ರಹ್ಮಣ್ಯಂ Updated:

ಅಕ್ಷರ ಗಾತ್ರ : | |

ನಾನು ಕಂಡ ವಿವೇಕಾನಂದಸ್ವಾಮಿ ವಿವೇಕಾನಂದರ ಬದುಕು ಮತ್ತು ಗಳಿಗೆಯಲ್ಲಿ ಮೈಸೂರು ವಿಶೇಷ ಪ್ರಾಮುಖ್ಯತೆ ಹೊಂದಿದೆ. 1892ರ ನವೆಂಬರ್‌ನಲ್ಲಿ ಅವರ 3-4 ವಾರಗಳ ಭೇಟಿಯ ವಿಚಾರದಲ್ಲಿ ಮಾತ್ರವಲ್ಲದೆ, ಮೈಸೂರು ಸ್ವಾಮೀಜಿಗಳ ಸಂದೇಶದಿಂದ ಪ್ರೇರಿತವಾದ ಅನೇಕ ವ್ಯಕ್ತಿ ಮತ್ತು ಸಂಘ ಸಂಸ್ಥೆಗಳಿಗೆ ನೆಲೆ ಕಲ್ಪಿಸಿದೆ.ಮೈಸೂರಿನ ದಿವಾನರಾಗಿದ್ದ ಶೇಷಾದ್ರಿ ಅಯ್ಯರ್ ಯುವ ಸನ್ಯಾಸಿ ಸ್ವಾಮಿ ವಿವೇಕಾನಂದರ ವಿಚಾರಧಾರೆ ಕೇಳಿ ಅವರ ಬುದ್ಧಿಕೌಶಲ್ಯ ಮತ್ತು ಉಪನ್ಯಾಸದಿಂದ ಪ್ರೇರೇಪಣೆಗೊಂಡು ಮೈಸೂರು ಅರಸರ ಆಸ್ಥಾನಕ್ಕೆ ಅತಿಥಿಯಾಗಿ ಅವರನ್ನು ಆಹ್ವಾನಿಸಿದರು. ಆಗ ಮಹಾರಾಜರಾಗಿದ್ದ ಚಾಮರಾಜೇಂದ್ರ ಒಡೆಯರ್ ವಿವೇಕಾನಂದರನ್ನು ಭೇಟಿಯಾಗಲು ಉತ್ಸುಕರಾಗುತ್ತಾರೆ ಎಂದು ತಿಳಿದು ಶೇಷಾದ್ರಿ ಅಯ್ಯರ್ ಸ್ವಾಮೀಜಿ ಅವರನ್ನು ಮಹಾರಾಜರಿಗೆ ಪರಿಚಯ ಮಾಡಿಸಿದರು.ಮಹಾರಾಜರು ಹರ್ಷಚಿತ್ತರಾಗಿದ್ದರಲ್ಲದೆ ಸ್ವಾಮೀಜಿಯವರನ್ನು ಅರಮನೆಯಲ್ಲಿಯೇ ಉಳಿದುಕೊಳ್ಳುವಂತೆ ಒತ್ತಾಯಿಸಿದರು. ಅರಮನೆಯಲ್ಲಿ ವಾಸ್ತವ್ಯ ಹೂಡಿದ್ದ ಅವಧಿಯಲ್ಲಿ ಸ್ವಾಮೀಜಿ ಮಹಾರಾಜರೊಂದಿಗೆ ಅನೇಕ ಸಂವಾದ ನಡೆಸಿದ್ದು ಮಾತ್ರವಲ್ಲದೆ, ಅಲ್ಲಿನ ಪಂಡಿತರು, ಆಸ್ಟ್ರಿಯಾದ ಸಂಗೀತಗಾರ ಮತ್ತು ಇತರ ಗಣ್ಯ ವ್ಯಕ್ತಿಗಳೊಂದಿಗೆ ವೇದಾಂತ ಮತ್ತಿತರ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.`ವೇದಾಂತ ಕೇಸರಿ~ಯಲ್ಲಿನ ಲೇಖನವೊಂದು ಅವರು ಅಲ್ಲಿ ಇದ್ದಾಗ ನಡೆದ ಐತಿಹ್ಯವೊಂದರ ಬಗ್ಗೆ ಹೇಳುತ್ತದೆ. ಒಂದು ದಿನ ಸ್ವಾಮಿಯವರನ್ನು ಯುವರಾಜರ ವಾಸದ ಕೋಣೆಗೆ ಆಹ್ವಾನಿಸಲಾಯಿತು. ದಿವಾನರೂ ಅವರೊಟ್ಟಿಗೆ ಹೋದರು. ಮಹಾರಾಜರು `ಸ್ವಾಮೀಜಿ, ನಿಮಗೆ ನನ್ನಿಂದ ಏನು ಬೇಕು ಕೇಳಿ~ ಎಂದರು. ಅದಕ್ಕೆ ನೇರವಾಗಿ ಪ್ರತಿಕ್ರಿಯಿಸದ ಸ್ವಾಮೀಜಿ, ತಮ್ಮ ಪರಮ ಉದ್ದೇಶದ ಅಂಶಗಳನ್ನು ಎಳೆಎಳೆಯಾಗಿ ವಾಗ್ಝರಿಯಾಗಿ ಹರಿಬಿಟ್ಟರು.ಭಾರತದ ಸ್ಥಿತಿಗತಿಯ ಬಗ್ಗೆ ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ವಿಸ್ತಾರವಾಗಿ ಮಾತನಾಡಿದರು. ತತ್ವಶಾಸ್ತ್ರ ಮತ್ತು ಅಧ್ಯಾತ್ಮ ಭಾರತ ಹೊಂದಿರುವ ದೊಡ್ಡ ಸಂಪತ್ತು, ಅದಕ್ಕೆ ಆಧುನಿಕ ವೈಜ್ಞಾನಿಕ ಯೋಜನೆಗಳು ಮತ್ತು ಸಂಪೂರ್ಣ ಸಾಮಾಜಿಕ ಸುಧಾರಣೆಯ ಅಗತ್ಯವಿದೆ... ಮಹಾರಾಜರು ಮೂಕವಿಸ್ಮಿತರಾಗಿದ್ದರು.ಸ್ವಾಮೀಜಿ ಮಾತುಗಳನ್ನು ಮುಂದುವರಿಸಿ, ಭಾರತ ತಾನು ಹೊಂದಿರುವ ಸಂಪತ್ತನ್ನು ಪಾಶ್ಚಿಮಾತ್ಯ ಜನರಿಗೆ ಹಂಚಬೇಕೆನ್ನುವುದು ತಮ್ಮ ಅನಿಸಿಕೆ, ಮತ್ತು ವೇದಾಂತದ ವಿಚಾರಗಳನ್ನು ಪಶ್ಚಿಮದ ದೇಶಗಳಿಗೆ ತಿಳಿಸುವ ಸಲುವಾಗಿ ತಾವೇ ಅಮೆರಿಕಕ್ಕೆ ಹೋಗಿ ಪ್ರವಚನ ನೀಡಲು ಉದ್ದೇಶಿಸಿರುವುದನ್ನು ತಿಳಿಸಿದರು.`ಹಾಗೂ ನಾನು ಏನನ್ನು ಬಯಸಿದ್ದೇನೆಂದರೆ, ಈ ಪಾಶ್ಚಿಮಾತ್ಯ ರಾಷ್ಟ್ರಗಳು ನಮಗೆ ಕೃಷಿ, ಕೈಗಾರಿಕೆ ಮತ್ತು ಇತರ ತಾಂತ್ರಿಕ ವಿಜ್ಞಾನಗಳ ಆಧುನಿಕ ಸಾಲಿನಲ್ಲಿ ನಮ್ಮ ಜನರಿಗೆ ಶಿಕ್ಷಣ ಒದಗಿಸುವ ಮೂಲಕ ನಮ್ಮ ಭೌತಿಕ ಸ್ಥಿತಿಯನ್ನು ಸುಧಾರಿಸುವಲ್ಲಿ ಸಹಕಾರಿಯಾಗಬಲ್ಲವು~.ಅವರು ಹೆಚ್ಚು ಹೆಚ್ಚು ಮಾತನಾಡುತ್ತಾ ಹೋದಂತೆ ಮತ್ತಷ್ಟು ನಿರರ್ಗಳತೆ ಕಾಣಿಸತೊಡಗಿತು. ಅವರ ವಿದೇಶ ಪ್ರಯಾಣದ ವೆಚ್ಚವನ್ನು ಸಂಪೂರ್ಣವಾಗಿ ತಾವೇ ಭರಿಸುವುದಾಗಿ ಮಹಾರಾಜರು ಕೂಡಲೇ ಭರವಸೆ ನೀಡಿದರು.ಆದರೆ ತಮ್ಮ ವಿಶಿಷ್ಟ ಪ್ರಾಮಾಣಿಕ ವ್ಯಕ್ತಿತ್ವದಿಂದ ಹೆಸರಾಗಿರುವ ಸ್ವಾಮೀಜಿ, ಮಹಾರಾಜರ ಈ ಮಹತ್ತರ ಕೊಡುಗೆಯನ್ನು ನಿರಾಕರಿಸಿದರು. ರಾಷ್ಟ್ರೀಯ ಚೈತನ್ಯವನ್ನೇ ಮೈವೆತ್ತಿಕೊಂಡ, `ಭಾರತದ ವಿಮೋಚನೆಗೆ ಜನಿಸಿದ ಮಹಾನ್ ವ್ಯಕ್ತಿ~ ಎಂದು ಅವರನ್ನು ಮಹಾರಾಜರು ಮತ್ತು ದಿವಾನರು ಅಭಿನಂದಿಸಿದರು.ಸ್ವಾಮೀಜಿ ಅವರೊಂದಿಗೆ ಇದ್ದಷ್ಟೂ ಕಾಲ ಮಹಾರಾಜರು ಅವರನ್ನು ಕೊನೆ ಕೊನೆಗೆ ತೀವ್ರವಾಗಿ ಹಚ್ಚಿಕೊಂಡು ಗೌರವಿಸುತ್ತಿದ್ದರು. ಸ್ವಾಮೀಜಿಗಳು ತಾವು ಹೊರಡುವ ಬಗ್ಗೆ ಮಾತುಗಳನ್ನಾಡಿದಾಗ, ಅವರ ಕಣ್ಣಾಲಿಗಳು ತುಂಬಿ ಬಂದು ಇನ್ನಷ್ಟು ದಿನಗಳ ಕಾಲ ಅಲ್ಲಿಯೇ ಇರುವಂತೆ ಕೋರಿದರು.`ಸ್ವಾಮೀಜಿ, ನಿಮ್ಮ ವ್ಯಕ್ತಿತ್ವದೊಂದಿಗೆ ಕಳೆದ ಗಳಿಗೆಗಳ ನೆನಪಿಗಾಗಿ ನಾನು ಏನನ್ನಾದರೂ ಇಟ್ಟುಕೊಳ್ಳಬೇಕು. ಹೀಗಾಗಿ ದಯಮಾಡಿ ನಿಮ್ಮ ಮಾತುಗಳನ್ನು ಧ್ವನಿ ಮುದ್ರಿಸಿಕೊಳ್ಳಲು ಅನುಮತಿ ನೀಡಿ. ಧ್ವನಿಲೇಖ (ಫೋನೋಗ್ರಾಫ್)ನಲ್ಲಿ ನಿಮ್ಮ ಸ್ಫೂರ್ತಿದಾಯಕ ನುಡಿಗಳನ್ನಾಡಿ, ಅದನ್ನು ನನ್ನ ಜೊತೆ ಸದಾ ಇಟ್ಟುಕೊಳ್ಳಬಹುದು~.ಅದಕ್ಕೆ ಸ್ವಾಮೀಜಿ ಒಪ್ಪಿಗೆ ಸೂಚಿಸಿದರು. ಈ ಧ್ವನಿಮುದ್ರಿಕೆಗೆ ದೀರ್ಘಕಾಲವಾಗಿರುವುದರಿಂದ ಅಸ್ಪಷ್ಟವಾಗಿದ್ದರೂ ಇಂದಿಗೂ ಅರಮನೆಯಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ.ವಾಸ್ತವವಾಗಿ, ಸ್ವಾಮೀಜಿ ಅವರ ಮೇಲಿನ ಅತಿಯಾದ ಗೌರವದಿಂದ ಅವರ ಪಾದಪೂಜೆ ಮಾಡಲು ಮಹಾರಾಜರು ಅನುಮತಿ ಕೇಳಿದ್ದರು. ಅವರು ಗುರುಗಳನ್ನು ಪೂಜಿಸಿದಂತೆ ಅವರ ಪಾದಗಳನ್ನು ಪೂಜಿಸುವುದು ಅವರ ಬಯಕೆಯಾಗಿತ್ತು. ಆದರೆ ಸ್ವಾಮೀಜಿ ಅವರಿಗೆ ಅದಕ್ಕೆ ಅವಕಾಶ ನೀಡಲಿಲ್ಲ.ಷಿಕಾಗೊದಿಂದ ಮಹಾರಾಜರಿಗೆ ಕಳುಹಿಸಿದ ಪತ್ರದಲ್ಲಿ ಸ್ವಾಮೀಜಿ ಬರೆದಿರುವುದು... “ಭಾರತ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಮೂಲ ಬಡತನದ ಪರಿಸ್ಥಿತಿ. ಪಶ್ಚಿಮದಲ್ಲಿನ ಬಡವ ದೆವ್ವದಂತೆ, ಅವರಿಗೆ ಹೋಲಿಸಿದಾಗ ನಮ್ಮವರು ದೇವತೆಗಳು, ಹೀಗಾಗಿ ನಮ್ಮಲ್ಲಿನ ಬಡವರ ಉದ್ಧಾರ ಮಾಡುವುದು ಸುಲಭ.ಕಳೆದುಕೊಂಡಿರುವ ಅವರ ವ್ಯಕ್ತಿತ್ವವನ್ನು ಸುಧಾರಿಸಲು, ನೀಡಬೇಕಿರುವ ಒಂದೇ ಸೇವೆಯೆಂದರೆ ನಮ್ಮ ಕೆಳಮಟ್ಟದ ವರ್ಗಗಳಿಗೆ ಶಿಕ್ಷಣ ಒದಗಿಸುವುದು. ಅವರಿಗೆ ಬದುಕುವ ಉಪಾಯಗಳನ್ನು ನೀಡಿ- ಈ ಸಹಾಯವೊಂದೇ ಅವರಿಗೆ ಅಗತ್ಯವಿರುವುದು, ಉಳಿದೆದ್ದಲ್ಲವೂ ಅದರ ಪರಿಣಾಮದ ಬೆನ್ನನ್ನೇ ಹಿಂಬಾಲಿಸುತ್ತವೆ. ಪ್ರಕೃತಿಯ ನಿಯಮದಲ್ಲಿ ಸ್ಫಟಿಕೀಕರಣ ಇರುತ್ತದೆ.ನಮಗೆ ಈ ರಾಸಾಯನಿಕಗಳನ್ನು ಒಟ್ಟಿಗೆ ಬೆರೆಸುವುದಷ್ಟೆ ಕೆಲಸ. ನನ್ನ ಗೌರವಾನ್ವಿತ ಮಹಾರಾಜರೇ, ಬದುಕು ಅಲ್ಪಾವಧಿಯದು, ಪ್ರಪಂಚದ ನಿಸ್ಸಾರತೆ ನಶ್ವರ, ಆದರೆ ಬೇರೆಯವರಿಗಾಗಿ ಬದುಕುವವರು ಅವರೊಬ್ಬರೇ ಬದುಕುತ್ತಾರೆ, ಉಳಿದವರು ಬದುಕುವುದಕ್ಕಿಂತಲೂ ಹೆಚ್ಚು ಸಾಯುತ್ತಾರೆ”.ಅರಮನೆಯಲ್ಲಿ ಕ್ಷಣಕಾಲ ಕಳೆದ ಬಳಿಕ ಸ್ವಾಮೀಜಿ ದಿವಾನರ ಮನೆ ಸಮೀಪದ `ನಿರಂಜನ ಮಠ~ಕ್ಕೆ ತೆರಳಿದರು. ಅವರು ಅಲ್ಲಿ ಉಳಿದುಕೊಂಡದ್ದು ಮಾತ್ರವಲ್ಲ ಸಮೀಪದ ಸದ್ವಿದ್ಯ ಪಾಠಶಾಲಾದಲ್ಲಿ ಉಪನ್ಯಾಸ ನೀಡಿರುವುದಕ್ಕೂ ಪುರಾವೆಗಳಿವೆ.ಇತ್ತೀಚಿನ ದಿನಗಳವರೆಗೆ ಜೀರ್ಣಾವಸ್ಥೆಯಲ್ಲಿದ್ದ ನಿರಂಜನ ಮಠಕ್ಕೆ ರಾಮಕೃಷ್ಣ ಆಶ್ರಮ ಮತ್ತು ಮೈಸೂರು ನಗರ ಪಾಲಿಕೆ ಕಾಯಕಲ್ಪ ನೀಡಿವೆ. ಪುನರ್‌ನಿರ್ಮಾಣಗೊಂಡ ನಿರಂಜನ ಮಠವನ್ನು ಉಳಿಸಿಕೊಳ್ಳುವಾಗ ಸ್ವಾಮಿ ವಿವೇಕಾನಂದರ `ಸ್ಮಾರಕ~ ನಿರ್ಮಾಣದ ಯೋಜನೆಗಳೂ ಗರಿಗೆದರಿವೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.