ಬುಧವಾರ, ಮೇ 18, 2022
23 °C

ಮೊಕದ್ದಮೆಗೆ ತಡೆ ನೀಡದ ಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಲ್ಲೆ, ಹಾನಿ ಮತ್ತಿತರ ಆರೋಪಗಳಿಗೆ ಸಂಬಂಧಿಸಿದಂತೆ ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಗೆ ಈ ಹಂತದಲ್ಲಿ ತಡೆ ನೀಡಲು ಹೈಕೋರ್ಟ್ ಬುಧವಾರ ನಿರಾಕರಿಸಿತು.ವಿಚಾರಣೆಯನ್ನು ಶುಕ್ರವಾರಕ್ಕೆ (ಜೂನ್ 15) ಮುಂದೂಡಿದ ನ್ಯಾಯಮೂರ್ತಿ ಸುಭಾಷ್ ಬಿ. ಅಡಿ, ಸ್ವಾಮೀಜಿ ಅವರ ಅರ್ಜಿಗೆ ಆಕ್ಷೇಪಣಾ ಹೇಳಿಕೆ ಸಲ್ಲಿಸಲು ಸರ್ಕಾರಕ್ಕೆ ಸೂಚಿಸಿದರು.  ಕಳೆದ ವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸುದ್ದಿ ಮಾಧ್ಯಮದ ಕೆಲವು ವರದಿಗಾರರ ಮೇಲೆ ಹಲ್ಲೆ ನಡೆಸಿರುವ ಆರೋಪ ನಿತ್ಯಾನಂದ ಅವರ ಮೇಲಿದೆ.ಈ ಹಿನ್ನೆಲೆಯಲ್ಲಿ ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ದೂರಿಗೆ ಸಂಬಂಧಿಸಿದಂತೆ ಹೂಡಲಾದ ಮೊಕದ್ದಮೆಯ ರದ್ದತಿಗೆ ಕೋರಿ ಸ್ವಾಮೀಜಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸುತ್ತಿದ್ದಾರೆ.ಮೊಕದ್ದಮೆಗೆ ತಡೆ ನೀಡುವಂತೆ ಸ್ವಾಮಿಯ ಪರ ವಕೀಲ ಸಿ.ವಿ. ನಾಗೇಶ್ ಅವರು ನ್ಯಾಯಮೂರ್ತಿಗಳನ್ನು ಕೋರಿಕೊಂಡರು. ಗುಂಪು ಕಟ್ಟಿ ಹಲ್ಲೆಗೆ ಪ್ರಯತ್ನ, ನಿರ್ಬಂಧಿತ ಪ್ರದೇಶದಲ್ಲಿ ಕಾನೂನುಬಾಹಿರ ಪ್ರವೇಶ,  ಉದ್ದೇಶಪೂರ್ವಕವಾಗಿ ಶಾಂತಿಭಂಗ ಮುಂತಾದ ಆರೋಪಗಳನ್ನು ಇವರ ಮೇಲೆ ಹೊರಿಸಲಾಗಿದೆ. ಆದರೆ, ಈ ಆರೋಪಗಳಲ್ಲಿ ಹುರುಳಿಲ್ಲ. ಮೊಕದ್ದಮೆ ರದ್ದು ಮಾಡದೇ ಹೋದರೆ ಅವರ ಘನತೆಗೆ ಧಕ್ಕೆ ಬರುತ್ತದೆ ಎಂದು ಅವರು ತಿಳಿಸಿದರು.ಆದರೆ ಇದಕ್ಕೆ ಸರ್ಕಾರದ ಪರ ವಕೀಲ  ಪಿ.ಎಂ.ನವಾಜ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸ್ವಾಮೀಜಿ ಮೇಲೆ ಹೊರಿಸಲಾಗಿರುವ ಆರೋಪಗಳು ಗಂಭೀರ ಸ್ವರೂಪದ್ದಾಗಿವೆ. ಆದುದರಿಂದ ಅರ್ಜಿ ವಜಾ ಮಾಡಬೇಕು ಎಂದು ಕೋರಿದರು. ಈ ಹಂತದಲ್ಲಿ ಮೊಕದ್ದಮೆಗೆ ತಡೆ ನೀಡಲು ನ್ಯಾಯಮೂರ್ತಿಗಳು ನಿರಾಕರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.