ನನ್ನ ಕಥೆ: ಶಶಾಂಕ್

ಸಿನಿಮಾ ಎಂಬುದರ ಪರಿಕಲ್ಪನೆಯೂ ಮೂಡಲು ಸಾಧ್ಯವಾಗದ ವಯಸ್ಸು ಅದು. ಆಗಿನ್ನೂ ಒಂದು ವರ್ಷದ ಮಗು ನಾನು. ಅಮ್ಮ ನನ್ನನ್ನೆತ್ತಿಕೊಂಡು ಸಿನಿಮಾಕ್ಕೆ ಹೋಗುತ್ತಿದ್ದಳು. ಕೂರುತ್ತಿದ್ದದ್ದು ಗಾಂಧಿ ಕ್ಲಾಸ್ನಲ್ಲಿ. ಗಾಂಧಿ ಕ್ಲಾಸ್ ಎಂದರೆ ಗೊತ್ತಲ್ಲ ಸಿನಿಮಾ ಪರದೆ ನಮ್ಮ ಮೇಲೆಯೇ ಬೀಳುತ್ತದೆಯೇನೋ ಎನ್ನುವಷ್ಟು ಹತ್ತಿರ.

ಬಹುಶಃ ಆಗಲೇ ಇರಬೇಕೇನೋ ಸಿನಿಮಾ ನನ್ನ ಕಣ್ಣು, ಮನಸು, ನರ ನಾಡಿಗಳೆಲ್ಲದರಲ್ಲೂ ಹೊಕ್ಕಿದ್ದು. ನಾನು ಮುಂದೆ ಹೀಗೆ `ಹಾಳಾಗುತ್ತೇನೆ~ ಎಂದು ಗೊತ್ತಿದ್ದರೆ ಅಮ್ಮ ಅಪ್ಪಿತಪ್ಪಿಯೂ ಚಿತ್ರಮಂದಿರಕ್ಕೆ ಕಾಲಿಡುತ್ತಿರಲಿಲ್ಲವೇನೋ!

ಅಮ್ಮ ಎಂದರೆ ಹೆತ್ತಮ್ಮಳಲ್ಲ. ನಾನು ಅವಳಿಗೆ ದತ್ತುಪುತ್ರ. ನನ್ನ ಹೆತ್ತಮ್ಮನಿಗೆ ನಾನು ಮೂರನೇ ಮಗ. ಅಕ್ಕ, ಅಣ್ಣ, ನಾನು ಬಳಿಕ ನನ್ನ ತಂಗಿ. ಅಮ್ಮನ ತಂಗಿ ಅಂದರೆ ಚಿಕ್ಕಮ್ಮನಿಗೆ ಮಕ್ಕಳಿರಲಿಲ್ಲ. ನಾನು ಒಂದು ವರ್ಷದ ಮಗುವಾಗಿದ್ದಾಗ ಅವರು ನನ್ನನ್ನು ದತ್ತುಪಡೆದಿದ್ದು. ನನ್ನೆಲ್ಲಾ ತುಂಟತನ, ಹುಚ್ಚುತನಗಳನ್ನು ಸಹಿಸಿಕೊಂಡು ಪ್ರೀತಿಯಿಂದ ಬೆಳೆಸಿದರು. ನನ್ನ ಹುಟ್ಟೂರು ಭದ್ರಾವತಿ.

ತಂದೆ ಕೆಲಸ ಮಾಡುತ್ತಿದ್ದದ್ದು ಉಕ್ಕಿನ ಕಾರ್ಖಾನೆಯಲ್ಲಿ. ಬೆಳಿಗ್ಗೆ ಹೋದರೆ ಬರುವುದು ಸಂಜೆ. ಆಗ ಟೀವಿಯಂತಹ ಮನರಂಜನೆ ಸಾಧನಗಳಿರಲಿಲ್ಲ. ಕಾಲ ಕಳೆಯಲು ಇದ್ದದ್ದು ಸಿನಿಮಾ ಮಾತ್ರ. ಮನೆ ಪಕ್ಕದಲ್ಲೇ ಜಯಶ್ರೀ ಥಿಯೇಟರ್ ಇತ್ತು. ಮನೆ ಕೆಲಸ ಮುಗಿದ ಬಳಿಕ ಅಮ್ಮ ನನ್ನನ್ನು ಎತ್ತಿಕೊಂಡು ಸಿನಿಮಾಕ್ಕೆ ಹೋಗುತ್ತಿದ್ದಳು. ಪ್ರತಿ ಹೊಸ ಸಿನಿಮಾಗಳನ್ನೂ ನೋಡುತ್ತಿದ್ದಳು.

ಹೈಸ್ಕೂಲಿನವರೆಗೂ ನನ್ನ ಓದು ಭದ್ರಾವತಿಯಲ್ಲೇ ಸಾಗಿತು. ಆಗಲೇ ಸಿನಿಮಾ ನಿರ್ದೇಶಕನಾಗಬೇಕೆಂಬ ಹಂಬಲ ಚಿಗುರತೊಡಗಿದ್ದು. ಹಂಸಲೇಖ-ರವಿಚಂದ್ರನ್ ಜೋಡಿ ಮೋಡಿ ಮಾಡಿದ ಕಾಲಘಟ್ಟವದು. ಇಬ್ಬರೂ ನನಗೆ ಆರಾಧ್ಯ ದೈವರು. ರವಿಚಂದ್ರನ್ರಂತೆ ಸಿನಿಮಾ ಮಾಡಬೇಕೆಂಬುದು ನನ್ನ ಆಗಿನ ಗುರಿ.

ಚಿಕ್ಕಮಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮಾ ಮಾಡಿದೆ. ಓದೇನೋ ಮುಗಿಯುತು. ಕೆಲಸ ಹುಡುಕಬೇಕಲ್ಲ? ನನ್ನೊಳಗಿನ ಸಿನಿಮಾ ನಿರ್ದೇಶಕನಿಗೆ ಬೇರೆ ಕೆಲಸಗಳತ್ತ ನಾನು ಮುಖಮಾಡುವುದು ಇಷ್ಟವಿರಲಿಲ್ಲ. ಮನೆಯಲ್ಲಿ ಸಿನಿಮಾ ಪ್ರವೇಶಕ್ಕೆ ವಿರೋಧವಿತ್ತು. ಆದರೆ ಗೆಳೆಯರ ಪ್ರೋತ್ಸಾಹ ಜೊತೆಗಿತ್ತು. ಅವರೆಲ್ಲಾ ಬೆಂಗಳೂರಲ್ಲಿ ಕೆಲಸ ಹಿಡಿದಿದ್ದರು. ನೀನೂ ಬಾ ಇಲ್ಲಿಗೆ ಎಂದರು.

ನಿರ್ದೇಶಕನಾಗಬೇಕೆಂದರೆ ಬೆಂಗಳೂರಿಗೆ ಬರಬೇಕು. ಸರಿ. ಮನೆಯಲ್ಲಿ ಕೆಲಸ ಹುಡುಕುತ್ತೇನೆಂದು ಸುಳ್ಳು ಹೇಳಿ ಬೆಂಗಳೂರಿಗೆ 1992ರಲ್ಲಿ ಕಾಲಿಟ್ಟೆ. ಚಿತ್ರರಂಗ ಪ್ರವೇಶಿಸುವ ದಾರಿ ಗೊತ್ತಿರಲಿಲ್ಲ. ಪೂನಾ, ಚೆನ್ನೈ, ಬಾಂಬೆಯಂತಹ ಜಾಗಗಳಿಗೆ ಹೋಗಿ ಸಿನಿಮಾ ಅಧ್ಯಯನ ಮಾಡುವ ಸಾಮರ್ಥ್ಯವೂ ಇರಲಿಲ್ಲ.

ಆರು ತಿಂಗಳು ಅಲೆದಾಡಿ ಅನಿವಾರ್ಯವಾಗಿ ಕೊನೆಗೆ ಕಂಪೆನಿಯೊಂದರಲ್ಲಿ ಸೈಟ್ ಎಂಜಿನಿಯರ್ ಕೆಲಸಕ್ಕೆ ಸೇರಿಕೊಂಡೆ. ಆಗ 600 ರೂ ಸಂಬಳ. ಸಿನಿಮಾರಂಗದ ಕದ ತಟ್ಟುವ ಪ್ರಯತ್ನ ಮುಂದುವರಿಸಿದ್ದೆ. ಟೈಗರ್ ಪ್ರಭಾಕರ್ ಮನೆಗೆ ಹೋಗಿದ್ದೆ. `ಈಗ ಆಗೊಲ್ಲ ಮರಿ. ಮುಂದಿನ ಚಿತ್ರದಲ್ಲಿ ನೋಡೋಣ~ ಎಂದು ಕಳುಹಿಸಿದರು.

ಎ.ಟಿ.ರಘು ಅವರನ್ನೂ ಭೇಟಿ ಮಾಡಿದ್ದೆ. ಸಿನಿಮಾ ಹುಚ್ಚು ತೀವ್ರವಾಯಿತು. ಒಂದು ವರ್ಷಕ್ಕೇ ಕೆಲಸ ಬಿಟ್ಟೆ. ಮತ್ತೆ ಪೂರ್ಣಾವಧಿ ಅಲೆದಾಟ ಶುರು. ಆಗ ಕೈ ಹಿಡಿದವರು ಸ್ನೇಹಿತರು. ಬೆಂಗಳೂರಲ್ಲಿ ಬ್ಯಾಚುಲರ್ಗಳು ತಿಂಗಳಿಗೆ 300 ರೂ ಇದ್ದರೂ ಆರಾಮಾಗಿ ಬದುಕಬಹುದಾಗಿದ್ದ ಕಾಲವದು. ಊಟ, ವಸತಿಯ ಎಲ್ಲಾ ಖರ್ಚನ್ನೂ ಅವರೇ ನೋಡಿಕೊಂಡರು. ಒಂದು ವರ್ಷ ಮತ್ತೆ ಹುಡುಕಾಟ. ಹೋಗದ ನಿರ್ದೇಶಕರ ಮನೆಯಿಲ್ಲ. ಕಾಣದ ನಿರ್ಮಾಪಕರ ಮುಖವಿಲ್ಲ.

ಸ್ನೇಹಿತನೊಬ್ಬನ ತಂದೆ `ಬೇವು ಬೆಲ್ಲ~ ಚಿತ್ರದ ನಿರ್ಮಾಪಕ ದೇವದಾಸ್ಗೆ ನನ್ನನ್ನು ಪರಿಚಯಿಸಿದರು. ಅವರಿಂದ ಎಸ್.ಮಹೇಂದರ್ ಬಳಿ ಸೇರಿಕೊಂಡೆ. `ಮಾಮರವೆಲ್ಲೋ ಕೋಗಿಲೆಯೆಲ್ಲೋ~ ನಾನು ಕೆಲಸ ಮಾಡಿದ ಮೊದಲ ಸಿನಿಮಾ. ಆದರೆ ಅದು ಅರ್ಧದಲ್ಲೇ ನಿಂತುಹೋಯಿತು.

ಆಗ ಹೆಚ್ಚು ಓದಿದವರು ಸಿನಿಮಾಕ್ಕೆ ಬರುತ್ತಿರಲಿಲ್ಲ. ಡಿಪ್ಲೊಮಾ ಮಾಡಿ ಸಿನಿಮಾಕ್ಕೆ ಬಂದಿದ್ದಾನೆ ಎಂದು ಎಲ್ಲರೂ ನಗುತ್ತಿದ್ದರು. `ಏ ಎಂಜಿನಿಯರ್, ಸರಿಯಾಗಿ ಕ್ಲಾಪ್ ಮಾಡಪ್ಪಾ~ ಎಂದು ಎಸ್.ಮಹೇಂದರ್ ತಮಾಷೆ ಮಾಡುತ್ತಿದ್ದರು. ಅವರ ಬಳಿ ಹಲವು ಸಿನಿಮಾಗಳಿಗೆ ಕೆಲಸ ಮಾಡಿದೆ.

ಬಳಿಕ ಹಂಸಲೇಖ ಪರಿಚಯವಾಯಿತು. ಆಗಲೇ ಹತ್ತಾರು ಸಿನಿಮಾಗಳಲ್ಲಿ ಕೆಲಸ ಮಾಡಿದ್ದೆ. ಅವರ `ಸುಗ್ಗಿ~ಯಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದೆ. ನನ್ನ ಪಾಲಿನ ಮರೆಯಲಾಗದ ದಿನಗಳವು. ರವಿಚಂದ್ರನ್ ಆ ಚಿತ್ರದ ಹಾಡೊಂದನ್ನು ನಿರ್ದೇಶಿಸಿದರು. ಕೆಲವೇ ಗಂಟೆಗಳು ಅವರೊಟ್ಟಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಜಗತ್ತನ್ನೇ ಗೆದ್ದ ಸಂಭ್ರಮ ನನ್ನದು.

ಸಿನಿಮಾ ಪ್ರವೇಶದ ಕನಸೇನೋ ನನಸಾಯಿತು. ಬದುಕು ಸಾಗಿಸಲು ನೆಲೆಯೂ ಸಿಕ್ಕಿತು. ಆದರೆ ಸ್ವತಂತ್ರ ನಿರ್ದೇಶಕನಾಗಬೇಕೆಂಬ ತುಡಿತ ತೀವ್ರವಾಯಿತು. ಆಗ ಹೊಸಬರಿಗೆ ಪ್ರೋತ್ಸಾಹವಿರಲಿಲ್ಲ. ಆ ಹೊತ್ತಿಗಾಗಲೇ ನನ್ನ ಬಳಿ ಒಂದಷ್ಟು ಕಥೆಗಳು ಸಿದ್ಧವಾಗಿದ್ದವು. ಆದರೆ ಅವಕಾಶ? ಆ ಹೊತ್ತಿಗಾಗಲೇ ಮದುವೆಯಾಗಿ ಮಗುವೂ ಆಗಿತ್ತು. ಅವಕಾಶ ಇರಲೇ ಇಲ್ಲವೆಂದಲ್ಲ. ಆದರೆ ಬಂದದ್ದು ರಿಮೇಕ್ ಸಿನಿಮಾಗಳಿಗೆ ನಿರ್ದೇಶಕನಾಗುವ ಅವಕಾಶ.

ರಿಮೇಕ್ ಮಾಡುವುದು ಕಷ್ಟವೇನಲ್ಲ. ನಾನು ರಿಮೇಕ್ನ ಕಟ್ಟಾ ವಿರೋಧಿ. ನನ್ನತನದ ನನ್ನದೇ ಸಿನಿಮಾ ಮಾಡುವುದು ಗುರಿಯಾಗಿತ್ತು. 1998ರಲ್ಲಿ ನಿರ್ಮಾಪಕರನ್ನು ಹುಡುಕಲು ಶುರುಮಾಡಿದಾಗ ಎರಡು ವರ್ಷದಲ್ಲಿ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುತ್ತೇನೆ ನೋಡುತ್ತಿರಿ ಎಂದು ಗೆಳೆಯರ ಬಳಿ ಹೇಳಿಕೊಂಡಿದ್ದೆ.

ಆದರೆ ಅದು ಸಾಧ್ಯವಾಗಿದ್ದು ಏಳು ವರ್ಷದ ನಂತರ. 14 ವರ್ಷದ ಸಿನಿಮಾ ವನವಾಸ ನನ್ನದು. ಅದಕ್ಕೆ ಮುಕ್ತಿ ಸಿಕ್ಕಿದ್ದು 2006ರಲ್ಲಿ. ಉಷಾಕಿರಣ್ ಮೂವೀಸ್ನವರು `ಸಿಕ್ಸರ್~ ನಿರ್ಮಿಸಲು ಒಪ್ಪಿಕೊಂಡರು. ಸ್ವತಃ ನಿರ್ಮಾಪಕ ರಾಮೋಜಿರಾವ್ಗೆ ಕಥೆ ವಿವರಿಸಿದ್ದು ರೋಮಾಂಚನಕಾರಿ ಕ್ಷಣ. ಸಿನಿಮಾ ಹೆಸರು ಮಾಡಿತು.

ನನ್ನನ್ನು ಕನ್ನಡ ಚಿತ್ರರಂಗ ಗುರುತಿಸುವಂತೆ ಮಾಡಿದ್ದು `ಮೊಗ್ಗಿನ ಮನಸ್ಸು~. ಟೀನೇಜ್ನಲ್ಲಿದ್ದಾಗ ಗೆಳೆಯ/ಗೆಳತಿಯರ ಬಳಗ, ಸ್ವ ಅನುಭವಗಳನ್ನು ಒತ್ತೊಟ್ಟಿಗಿಟ್ಟುಕೊಂಡು ಕಥೆ ಹೆಣೆದಿದ್ದೆ. ಹಲವು ನಿರ್ಮಾಪಕರಿಗೆ ಕಥೆ ಹೇಳಿದ್ದೆ. 2001ರಲ್ಲಿಯೇ ಉಷಾಕಿರಣ್ ಮೂವೀಸ್ಗೆ ಈ ಕಥೆ ಮೊದಲೇ ಹೇಳಿದ್ದೆ.

ಹೆಚ್ಚು ಬಜೆಟ್ ಬಯಸುವ, ಹೊಸ ಕಲಾವಿದರನ್ನು ಹಾಕಿಕೊಂಡು ಮಾಡಬೇಕಿದ್ದ ಸಿನಿಮಾವದು. ಹುಡುಗಿಯರನ್ನೇ ಪ್ರಧಾನವಾಗಿಟ್ಟುಕೊಂಡು ಸಿನಿಮಾ ಮಾಡುತ್ತೇನೆ ಎಂದರೆ ಯಾವ ನಿರ್ಮಾಪಕ ಹಣ ಹೂಡುತ್ತಾನೆ. ಯಾರೂ ಮುಂದೆ ಬರಲಿಲ್ಲ. ಕಥೆ ಕೇಳಿ ಸಿನಿಮಾ ಮಾಡೋಣ, ಒಳ್ಳೆಯ ಸಂದೇಶ ಚಿತ್ರದಲ್ಲಿದೆ ಎಂದು ಬೆನ್ನುತಟ್ಟಿದವರು ನಿರ್ಮಾಪಕ ಇ.ಕೃಷ್ಣಪ್ಪ.

ಅವರು ಅಂದು ಕಥೆ ಒಪ್ಪದಿದ್ದರೆ ಇಂದಿಗೂ `ಮೊಗ್ಗಿನ ಮನಸ್ಸು~ ಮೂಲೆಯಲ್ಲಿ ಧೂಳು ತಿನ್ನುತ್ತಾ ಬಿದ್ದಿರುತ್ತಿತ್ತೇನೋ... ಹದಿಹರೆಯದವರ ಸಂವೇದನೆಗಳನ್ನು ಬಿಂಬಿಸುವ ಚಿತ್ರ ಎಂದು ವ್ಯಾಪಕ ಪ್ರಶಂಸೆ ವ್ಯಕ್ತವಾಯಿತು. `ಕೃಷ್ಣನ್ ಲವ್ ಸ್ಟೋರಿ~ಯೂ ಗೆಲುವಿನ ಖುಷಿ ಕೊಟ್ಟಿತು. ನಿರ್ದೇಶಕ ಒಂದು ಇಮೇಜ್ಗೆ ಅಂಟಿಕೊಳ್ಳಬಾರದು.

`ಮೊಗ್ಗಿನ ಮನಸ್ಸು~, `....ಲವ್ ಸ್ಟೋರಿ~ ಚಿತ್ರಗಳಿಂದ ಜನರ ಮನಸ್ಸಲ್ಲಿ ಭಾವನಾತ್ಮಕ ಚಿತ್ರಗಳಿಗೇ ಲಾಯಕ್ಕು ಎಂದು ಸೀಮಿತವಾಗುತ್ತೇನೆ ಎಂಬ ಭಯ ಕಾಡಿತು. ಉದ್ದೇಶಪೂರ್ವಕವಾಗಿಯೇ ಹಿಂಸೆಗೆ ಒತ್ತು ನೀಡುವ `ಜರಾಸಂಧ~ ಮಾಡಿದೆ. ಆದರೆ ಅದು ನೀಡಿದ ಫಲಿತಾಂಶ ಮಾತ್ರ ನಿರಾಶಾದಾಯಕ.

ಆದರೆ ಜನ ಇನ್ನು ಮುಂದೆ ನನ್ನನ್ನು `ಮೊಗ್ಗಿನ..~ ಇಮೇಜಿನ ಭೂತಕನ್ನಡಿಯಲ್ಲಿ ನೋಡುವುದಿಲ್ಲ ಎಂಬ ನೆಮ್ಮದಿಯೂ ಆಯಿತು.ಮುಂದೆ ಸುದೀಪ್ ಅಭಿನಯದ `ಬಚ್ಚನ್~ ಸಿದ್ಧವಾಗುತ್ತಿದೆ. ವಿಭಿನ್ನವಾದ ಕಥೆ, ನಿರೂಪಣೆ ಇದೆ. ಜನ ಇಷ್ಟಪಡುತ್ತಾರೆ ಎಂಬ ಭರವಸೆ ನನ್ನದು.

ಚಿತ್ರದ ಕೆಲವು ಹಾಡುಗಳನ್ನು ಸನ್ನಿವೇಶಕ್ಕೆ ಪೂರಕವಾಗಿ ಚಿತ್ರಸಾಹಿತಿಗಳಿಗೆ ಮನದಟ್ಟಾಗುವಂತೆ ವಿವರಿಸಿ, ಹಾಡು ಬರೆಸುವುದು ಕಷ್ಟದ ಕೆಲಸ. ನನ್ನ ಸಿನಿಮಾ ದೃಶ್ಯಗಳ ಅರಿವು ನನಗಿರುವುದರಿಂದ ಇಂತಹ ಸನ್ನಿವೇಶಗಳ ಹಾಡಿಗೆ ನಾನೇ ಸಾಹಿತ್ಯ ರಚಿಸುತ್ತೇನೆ. ಗೀತೆ ರಚಿಸುತ್ತೇನೆಂದರೆ ನಾನು ಕವಿಯಲ್ಲ.

ಆದರೂ ನಾನು ಪದ್ಯ ರಚನೆ ಬರೆಯಲು ಪ್ರಾರಂಭಿಸಿದ್ದನ್ನು ನಿಮಗೆ ಹೇಳಲೇ ಬೇಕು. ನನ್ನದು ಆರೇಂಜ್ ಕಂ ಲವ್ ಮ್ಯಾರೇಜ್! ನಿರ್ದೇಶಕನಾಗುತ್ತೇನೆ ಎಂಬ ಹುಂಬತನದಿಂದ ಎಲ್ಲಾ ಕೆಲಸಗಳನ್ನು ಬಿಟ್ಟುಕೊಂಡು ಖಾಲಿ ಕೈಯಲ್ಲಿ ಕುಳಿತಿದ್ದಾಗಲೇ ಮನೆಯಲ್ಲಿ ಮದುವೆ ಪ್ರಸ್ತಾಪವಾಯಿತು. ಹುಡುಗಿಯನ್ನೂ ನೋಡಿದ್ದಾಯಿತು.

ಹುಡುಗಿಯ ಮನೆಯವರಿಗೆ ನಾನು ಇಷ್ಟವಾಗಲಿಲ್ಲ. ನನ್ನ ಮನೆಯವರಿಗೆ ಹುಡುಗಿ ಹಿಡಿಸಲಿಲ್ಲ. ಆದರೇನು, ನಾವಿಬ್ಬರೂ ಆಗಲೇ ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದೆವು. ಆಕೆಯ ಮನಸ್ಸನ್ನು ನನ್ನತ್ತ ಗಟ್ಟಿಗೊಳಿಸಿಕೊಳ್ಳಲು ಓಲೈಕೆ ಮಾಡುವುದು ಅನಿವಾರ್ಯವಾಗಿತ್ತು. ಮೆಚ್ಚಿಸಬೇಕು ಎಂದರೆ ಆಕೆಗೆ ಇಷ್ಟವಾಗುವ ಉಡುಗೊರೆ ಕೊಡಬೇಕು! ಕೆಲಸವಿಲ್ಲದ ನನ್ನ ಬಳಿ ಎಲ್ಲಿದೆ ಉಡುಗೊರೆ ಕೊಳ್ಳಲು ಹಣ? ಆಗ ಕೈಗೆತ್ತಿಕೊಂಡಿದ್ದು ಲೇಖನಿಯನ್ನು.

ಗೊತ್ತಲ್ಲ ಪ್ರೀತಿಯಲ್ಲಿ ಬಿದ್ದಾಗ ಕವಿತೆಗೆ ಪದಗಳು ಹೇಗೆ ಸುಂದರ ಜಲಪಾತದಂತೆ ಧುಮುಕುತ್ತದೆಯಂತ? ಅವಳನ್ನು ಮೆಚ್ಚಿಸಲು ಬರೆದ ಕವಿತೆಗಳೆಷ್ಟೋ. ಆಗಿನ ಹುಡುಗಿಯರು ಈಗಿನವರಂತಲ್ಲ. ಈಗಾಗಿದ್ದರೆ ನನ್ನಿಂದ ಅವಳನ್ನು ಮೆಚ್ಚಿಸಲು ಸಾಧ್ಯವಿರಲಿಲ್ಲವೇನೋ. ಒಂದೆರಡು ವರ್ಷ ಇಬ್ಬರೂ ಮನೆಯವರನ್ನು ಒಪ್ಪಿಸಲು ಹೆಣಗಾಡಿದೆವು. ಕೊನೆಗೂ ನಮ್ಮ ಪ್ರೇಮ ಪ್ರಕರಣ ಶುಭಂ!

ಸಿನಿಮಾಗಳೆಂದರೆ ನನ್ನ ಪಾಲಿಗೆ ದೃಶ್ಯಕಾವ್ಯ. ಅದರ ಪ್ರತಿ ಸನ್ನಿವೇಶದಲ್ಲೂ ಕಾವ್ಯದ ಸ್ಪರ್ಶವಿರಬೇಕು. ಪುಟ್ಟಣ್ಣ ಕಣಗಾಲ್, ಸಿದ್ದಲಿಂಗಯ್ಯನವರ ಕಾಲದಲ್ಲಿ ದೊಡ್ಡ ಚಿತ್ರಗಳನ್ನು ಮಾಡಿದ ಬೇರೆ ನಿರ್ದೇಶಕರಿದ್ದರೂ ಇವರನ್ನು ಇಂದಿಗೂ ನೆನೆಸಿಕೊಳ್ಳಲು ಅವರ ಚಿತ್ರಗಳಲ್ಲಿನ ಕಲಾತ್ಮಕತೆಯೇ ಕಾರಣ. ನನ್ನ ಚಿತ್ರಗಳಲ್ಲೂ ಅದನ್ನು ಅಳವಡಿಸುವ ಪ್ರಯತ್ನಗಳನ್ನು ನಡೆಸಿದ್ದೇನೆ.

ಸಿನಿಮಾ ಬಿಟ್ಟು ಬೇರೆ ಗೊತ್ತಿಲ್ಲ. ಸಿನಿಮಾವೇ ನನ್ನ ಬದುಕು. ಸ್ವಂತ ಪ್ರೊಡಕ್ಷನ್ ಹೌಸ್ ಸ್ಥಾಪಿಸುವ ಬಯಕೆ ಇದೆ. ಅದು ಶೀಘ್ರವೇ ಈಡೇರಲಿದೆ. ಚಿತ್ರರಂಗಕ್ಕೆ ಬರುವ ಹೊಸ ನಿರ್ದೇಶಕರನ್ನು ಗುರುತಿಸಿ ಅವರಿಗೆ ಅವಕಾಶ ನೀಡುವುದು ಅದರ ಉದ್ದೇಶ. ನನ್ನಂತೆ ಹೊಸಬರು ಕಷ್ಟಪಡಬಾರದು. ಚಿತ್ರರಂಗ ಬೆಳೆಯಬೇಕು. ಅದಕ್ಕೆ ನನ್ನಿಂದಾಗುವ ಕೊಡುಗೆ ನೀಡುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.