ಗುರುವಾರ , ಜೂನ್ 24, 2021
29 °C

ಮೊದಲ ಓದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊದಲ ಓದು

ಪತ್ರಕರ್ತ, ಸಿನಿಮಾ ನಿರ್ದೇಶಕ, ವ್ಯಂಗ್ಯಚಿತ್ರಕಾರ- ಹೀಗೆ, ಬಹು ಆಸಕ್ತಿಗಳ ಎನ್.ಎಸ್.ಶಂಕರ್, ಒಳ ನೋಟಗಳುಳ್ಳ ಬರಹಗಾರರು ಕೂಡ ಹೌದೆನ್ನುವುದಕ್ಕೆ `ಹುಡುಕಾಟ~ ಕೃತಿ ಉದಾಹರಣೆಯಂತಿದೆ.ತಮ್ಮ `ಹುಡುಕಾಟ~ವನ್ನು ಸಮಕಾಲೀನ ಬರಹಗಳು ಎಂದು ಶಂಕರ್ ಕರೆದುಕೊಂಡಿರುವುದು ಸರಿಯಾಗಿಯೇ ಇದೆ. ಸಮಾಜ, ಸಂಸ್ಕೃತಿ,  ಸಿನಿಮಾ, ರಾಜಕಾರಣ, ಕೃಷಿ- ಹೀಗೆ ಹಲವು ಬಗೆಯ ಹುಡುಕಾಟಗಳು ಇಲ್ಲಿವೆ.

 

ಇವು ಪತ್ರಿಕೆಗಳಿಗೆ ಬರೆದ ಲೇಖನಗಳಾದುದರಿಂದ ಗಾತ್ರದಲ್ಲಿ ಚಿಕ್ಕದಾಗಿಯೇ ಇವೆ. ಆದರೆ, ಪುಟ್ಟ ಆಕೃತಿಯಲ್ಲೇ ಅನೇಕ ಹೊಳಹುಗಳನ್ನು ಇಡಿಕಿರಿಯುವಂತೆ ಹೊಂದಿಸುವುದು ಲೇಖಕರಿಗೆ ಸಾಧ್ಯವಾಗಿದೆ.ಸಮಕಾಲೀನ ಸಂಗತಿಗಳ ಬಗ್ಗೆ ಸೂಕ್ಷ್ಮ ಮನಸ್ಸಿನ ಬರಹಗಾರನ ಅನಿಸಿಕೆಗಳಂತೆ ಇಲ್ಲಿನ ಬಹುತೇಕ ಬರಹಗಳು ಕಾಣಿಸುತ್ತವೆ. ಶಂಕರ್ ಅವರ `ಹುಡುಕಾಟ~ದ ಬರಹಗಳನ್ನು ಪ್ರತಿಕ್ರಿಯೆ, ವಿಶ್ಲೇಷಣೆ, ಚಿಂತನೆ ಎಂದು ವಿಂಗಡಿಸಬಹುದು. ಆದರೆ, ಇಂಥ ಬರಹಗಳ ನಡುವೆ ಪ್ರಬಂಧದ ಮಾದರಿಯ ಬರಹಗಳೂ ಸೇರಿಕೊಂಡು ಪುಸ್ತಕದ ರುಚಿಯನ್ನು ಹೆಚ್ಚಿಸಿದೆ. `ಬಂದೂಕಿನ ಭಾಷೆ~, `ನಿಶ್ಯಬ್ದದ ಭೀತಿ~, `ತಲಪರಿಗೆ~, `ಅಣ್ವಸ್ತ್ರವೂ ಅಡುಗೆಭಟ್ಟನೂ~, ಮುಂತಾದ ಬರಹಗಳು ವಸ್ತು ಹಾಗೂ ಬರಹದ ಕಸುಬುದಾರಿಕೆ, ಎರಡು ಕಾರಣದಿಂದಲೂ ಗಮನಸೆಳೆಯುತ್ತವೆ.`ಚೋಮನ ಕನಸು~, `ಸುಂದರಿಯ ಷರತ್ತುಗಳು~, `ಒಡೆದು ಬಿದ್ದ ಕೊಳಲ ನಾದ...~, `ತಾಯ್ನುಡಿಯ ತಲ್ಲಣಗಳು~ ಬರಹಗಳು ಓದುಗನನ್ನು ತಲ್ಲಣಗೊಳಿಸುವಷ್ಟು ಪರಿಣಾಮಕಾರಿಯಾಗಿವೆ.`ಹುಡುಕಾಟ~ದ ಬರಹಗಳ ಹಿಂದೆ ಆರೋಗ್ಯಕರ ಸಮಾಜದ ಬಗ್ಗೆ ಕನಸು ಕಾಣುವ ಹಾಗೂ ವರ್ತಮಾನದ ವ್ಯವಸ್ಥೆಯ ಬಗ್ಗೆ ಸಾತ್ವಿಕ ಸಿಟ್ಟುಳ್ಳ ಮನಸ್ಸನ್ನು ಕಾಣಬಹುದು. ಪತ್ರಿಕಾ ಕಾಲಂಗಳ ಚೌಕಟ್ಟಿನಾಚೆಗೂ ಶಂಕರ್ ಬರಹಗಳು ವಿಸ್ತರಿಸಲಿ ಎನ್ನುವ ಹಂಬಲವನ್ನು ಈ ಪುಸ್ತಕ ಓದುಗನಲ್ಲಿ ಹುಟ್ಟಿಸುತ್ತದೆ.ಹುಡುಕಾಟ

ಲೇ: ಎನ್.ಎಸ್. ಶಂಕರ್

ಪು: 334; ಬೆ: ರೂ. 200; ಪ್ರ: ಪ್ರೆಸ್‌ಕ್ಲಬ್ ಪ್ರಕಾಶ, ಕಬ್ಬನ್ ಉದ್ಯಾನ, ಬೆಂಗಳೂರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.