ಮಂಗಳವಾರ, ಮೇ 24, 2022
27 °C

ಮೊರಾರ್ಜಿ ಶಾಲೆ: ಒಂದೇ ಹುದ್ದೆ ಇಬ್ಬರು ಶಿಕ್ಷಕರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವುದು ಸಹಜ. ಆದರೆ, ಶಿಕ್ಷಕರ ಸಂಖ್ಯೆ ಹೆಚ್ಚಾಗಿ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವುದನ್ನು ಕೇಳಿದ್ದೀರಾ?ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವು ಶಿಕ್ಷಕರ ನೇಮಕಾತಿ ವಿಷಯದಲ್ಲಿ ತಳೆದ ನಿಲುವು ರಾಜ್ಯದಾದ್ಯಂತ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಈ ಗೊಂದಲ ಸೃಷ್ಟಿಸಿದೆ.ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ರಾಜ್ಯ ಸರ್ಕಾರ ಕಳೆದ ವರ್ಷ ಶಿಕ್ಷಕರ ನೇಮಕಕ್ಕೆ ಅಧಿಸೂಚನೆ ಹೊರಡಿಸಿತು. ಈ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ, ಹೊರ ಸಂಪನ್ಮೂಲಗಳಿಂದ ನೇಮಕಗೊಂಡ ಕೆಲವು ಶಿಕ್ಷಕರು ಹೊಸ ನೇಮಕಾತಿ ವೇಳೆ ಕೃಪಾಂಕ ನೀಡುವಂತೆ ಒತ್ತಾಯಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

 

ಏಪ್ರಿಲ್ 20ರಂದು ಮಧ್ಯಂತರ ತೀರ್ಪು ಪ್ರಕಟಿಸಿದ ಹೈಕೋರ್ಟ್, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಕೃಪಾಂಕ ನೀಡಬೇಕು, ವಯೋಮಿತಿ ಸಡಿಲಿಕೆ ಮಾಡಬೇಕು ಹಾಗೂ ಮುಂದಿನ ತೀರ್ಪು ಪ್ರಕಟ ಆಗುವವರೆಗೆ ಅವರನ್ನು ಯಾವುದೇ ಕಾರಣಕ್ಕೆ ಕೆಲಸದಿಂದ ತೆಗೆಯಬಾರದು ಎಂದು ಆದೇಶಿಸಿತು. ಈ ಬಗ್ಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರು, ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಪತ್ರ ಬರೆದು ಹೊರ ಸಂಪನ್ಮೂಲಗಳಿಂದ ನೇಮಕಗೊಂಡು ವಸತಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು 2012-13ನೇ ಸಾಲಿನಲ್ಲೂ ಮುಂದುವರಿಸುವಂತೆ ಸೂಚಿಸಿದ್ದಾರೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವು ಕೋರ್ಟಿನ ಮಧ್ಯಂತರ ಆದೇಶ ಕಡೆಗಣಿಸಿ ಹೊರ ಸಂಪನ್ಮೂಲದಿಂದ ನೇಮಕಗೊಂಡ ಶಿಕ್ಷಕರಿಗೆ ಕೃಪಾಂಕ ನೀಡದೆಯೇ ತರಾತುರಿಯಲ್ಲಿ ಹೊಸ ನೇಮಕಾತಿ ನಡೆಸಿದೆ. ನೇಮಕಗೊಂಡ ಶಿಕ್ಷಕರಿಗೆ ಕಳೆದ ಮೇ 31ರಿಂದ ಕೌನ್ಸೆಲಿಂಗ್ ನಡೆಸಿ, ವಸತಿ ಶಾಲೆಗಳಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿತು.`ಈಗ ಒಂದೇ ಹುದ್ದೆಯಲ್ಲಿ ಇಬ್ಬರು ಅಧ್ಯಾಪಕರು ಕರ್ತವ್ಯ ನಿರ್ವಹಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹೊರ ಸಂಪನ್ಮೂಲದಿಂದ ನೇಮಕಗೊಂಡ ಹಿಂದಿನ ಶಿಕ್ಷಕರು ಹಾಗೂ ಸಂಸ್ಥೆಯಿಂದ ಹೊಸತಾಗಿ ನೇಮಕವಾದ ಶಿಕ್ಷಕರ ನಡುವೆ ಯಾರನ್ನು ಪರಿಗಣಿಸಬೇಕು ಎಂಬ ಗೊಂದಲ ವಿದ್ಯಾರ್ಥಿಗಳದ್ದು. ಹೊರ ಸಂಪನ್ಮೂಲ ಸ್ಥಿತಿಯಲ್ಲಿ ನೇಮಕವಾದವರ ಪೈಕಿ ವಸತಿ ಶಾಲೆಯ ಮುಖ್ಯೋಪಾಧ್ಯಾಯರೂ ಸೇರಿದ್ದಾರೆ.ಅಂತಹ ಕಡೆ  ಯಾರನ್ನು ಮುಖ್ಯೋಪಾಧ್ಯಾಯರು ಎಂದು ಪರಿಗಣಿಸಬೇಕೆಂಬ ಗೊಂದಲವೂ ಇದೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ಈ ತೀರ್ಮಾನದಿಂದಾಗಿ ಮಕ್ಕಳ ಎದುರು ಶಿಕ್ಷಕರೂ ಮುಜುಗರ ಎದುರಿಸಬೇಕಾಗಿದೆ~ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಮುಖ್ಯೋಪಾಧ್ಯಾಯರೊಬ್ಬರು `ಪ್ರಜಾವಾಣಿ~ ಜತೆ ಅಳಲು ತೋಡಿಕೊಂಡರು.ರಾಜ್ಯದಾದ್ಯಂತ ಈ ರೀತಿಯ ಸುಮಾರು 800 ಮಂದಿ ಶಿಕ್ಷಕರು ಈ ಸಮಸ್ಯೆ ಎದುರಿಸುತ್ತಿದ್ದಾರೆ.

 ಹತ್ತಾರು ವರ್ಷಗಳಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಅರೆಕಾಲಿಕ ಶಿಕ್ಷಕರ ಮೂಲಕವೇ ನಡೆಯುತ್ತಿದ್ದವು. ದಕ್ಷಿಣ ಕನ್ನಡ ಜಿಲ್ಲೆಯ 10 ಶಾಲೆಗಳ ಪೈಕಿ ಒಂದು ಶಾಲೆ ಹೊರತುಪಡಿಸಿ ಉಳಿದೆಲ್ಲ ಶಾಲೆಗಳೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಪಡೆದಿವೆ.

 

ಈಗ ಕಾಯಂ ಶಿಕ್ಷಕರ ನೇಮಕಾತಿಯಿಂದ ಸೃಷ್ಟಿಯಾದ ಗೊಂದಲದಿಂದ ವಿದ್ಯಾರ್ಥಿಗಳ ಕಲಿಕೆಯ ಮೇಳೆ ಪರಿಣಾಮ ಬೀರಲಿದೆ ಎಂಬ ಆತಂಕ ಪೋಷಕರದು. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿದೇರ್ಶಕ ಶಾಂತಪ್ಪ ಅವರನ್ನು ಸಂಪರ್ಕಿಸಲು ಯತ್ನಿಸಿದರೆ ಅವರು ಕರೆಯನ್ನು ಸ್ವೀಕರಿಸಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.