ಬುಧವಾರ, ಜುಲೈ 28, 2021
28 °C

ಮೋಜಿನ ಪ್ರವಾಸ ಆಗದಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದಲ್ಲಿ ಸಾವಯವ ಕೃಷಿಯನ್ನು ಉತ್ತೇಜಿಸಲು ಮತ್ತು ಕೃಷಿ ಕ್ಷೇತ್ರದಲ್ಲಿನ ಹೊಸ ಹೊಸ ಬೆಳವಣಿಗೆ, ಸಂಶೋಧನೆ ಹಾಗೂ ಕೃಷಿ ಭೂಮಿಯ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಅರಿಯಲು ರೈತರಿಗೆ  ವಿದೇಶ ಪ್ರವಾಸ ಏರ್ಪಡಿಸಿರುವ ರಾಜ್ಯ ಸರ್ಕಾರದ ಕ್ರಮ ಸ್ವಾಗತಾರ್ಹ. ಈ ಬಾರಿ ಒಂದು ಸಾವಿರ ರೈತ ದಂಪತಿಗಳನ್ನು ಪ್ರವಾಸಕ್ಕೆ ಕಳುಹಿಸಲು ಕ್ಯೂಬಾ ದೇಶವನ್ನು ಆಯ್ಕೆ ಮಾಡಿಕೊಂಡಿರುವುದು ಅರ್ಥಪೂರ್ಣವಾಗಿದೆ. ಸಾವಯವ ಕೃಷಿಯನ್ನು ಪ್ರೋತ್ಸಾಹಿಸುವ ಮತ್ತು ಅದನ್ನು ಅಭಿವೃದ್ಧಿಪಡಿಸುವ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ.

 

ಕ್ಯೂಬಾದಲ್ಲಿ ನಡೆದ ಕ್ರಾಂತಿಯ ಹಿನ್ನೆಲೆಯಲ್ಲಿ ಅಮೆರಿಕ ವಿಧಿಸಿದ ಆರ್ಥಿಕ ದಿಗ್ಬಂಧನದಿಂದ ಕೃಷಿ ಉಪಕರಣಗಳು, ರಾಸಾಯನಿಕ ಗೊಬ್ಬರ ಆಮದಾಗುವುದು ನಿಂತಿತು. ಅಂತರರಾಷ್ಟ್ರೀಯ ಮಾರುಕಟ್ಟೆಯ ಬಾಂಧವ್ಯವೂ ಕಡಿದುಹೋಯಿತು. ಅಂತಹ ಕಷ್ಟದ ದಿನಗಳಲ್ಲಿ ಈ ಪುಟ್ಟ ರಾಷ್ಟ್ರ ದಿಟ್ಟತನದಿಂದ ಕೈಗೊಂಡಿದ್ದು ಸಾವಯವ ಕೃಷಿ ಪದ್ಧತಿ. ಅಲ್ಲಿನ ರೈತರು ತಮ್ಮಲ್ಲಿ ದೊರೆಯುವ ಕೊಟ್ಟಿಗೆ ಗೊಬ್ಬರ ಮತ್ತು ಕಸಕಡ್ಡಿಯನ್ನೇ ರಸವನ್ನಾಗಿ ಮಾಡಿ ಬಳಸಿದ ಹಟ್ಟಿಗೊಬ್ಬರದಿಂದಲೇ ಹೆಚ್ಚು ಇಳುವರಿಯ ಬೆಳೆ ತೆಗೆದರು. ಪರಿಶ್ರಮ ಮತ್ತು  ಸ್ವಾಭಿಮಾನದ ಸಾಧನೆಯಿಂದ ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕ್ಯೂಬಾ ಮಾಡಿದ ಸಾಹಸ ಮೆಚ್ಚುವಂತಹದ್ದು. ಈ ಹಿನ್ನೆಲೆಯಲ್ಲಿ ಕರ್ನಾಟಕ ಮಾತ್ರವಲ್ಲ, ಭಾರತದ ಇತರೆ ರಾಜ್ಯಗಳ ರೈತರೂ ಆ ದೇಶದ ಸಾವಯವ ಕೃಷಿಯನ್ನು ನೋಡಿ ಕಲಿಯಬೇಕಾದುದು ಬಹಳಷ್ಟಿದೆ.ಆದರೆ ಸಮಸ್ಯೆ ಇರುವುದು ಅಂತಹ ಒಂದು ದೇಶದ ಸಾವಯವ ಕೃಷಿಯನ್ನು ತೋರಿಸಲು ನಿಜವಾದ ಮತ್ತು ಅರ್ಹ ರೈತರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಆಗುವ ಲೋಪಗಳ ಬಗ್ಗೆ. ಈ ಹಿಂದೆ ಇರಾನ್ ಮತ್ತು ಚೀನಾಕ್ಕೆ ಹೋದವರಲ್ಲಿ ಬಹುತೇಕ ಮಂದಿ ಆಳುವ ಬಿಜೆಪಿಗೆ ಸೇರಿದ ನಾಯಕರು ಮತ್ತವರ ಬಂಧುಬಾಂಧವರು ಎನ್ನುವ ದೂರುಗಳು ಕೇಳಿಬಂದಿದ್ದವು. ರೈತರ ಹೆಸರಿನಲ್ಲಿ ಮಾಡುವ ಈ ಬಗೆಯ ಮೋಸ ಇನ್ನಾದರೂ ನಿಲ್ಲಬೇಕು. ಅಲ್ಲದೆ ಚೀನಾ ಪ್ರವಾಸ ಮಾಡುವ ಹೊತ್ತಿಗೆ ಅಲ್ಲಿ ಬೆಳೆಗಳೆಲ್ಲ ಕಟಾವು ಆಗಿದ್ದರಿಂದ ಅಲ್ಲಿನ ಆಧುನಿಕ ಬೇಸಾಯ ಪದ್ಧತಿಯಿಂದ ರಾಜ್ಯದ ರೈತರಿಗೆ ಎಷ್ಟರ ಮಟ್ಟಿಗೆ ಉಪಯೋಗವಾಯಿತೆನ್ನುವುದಕ್ಕೆ ಉತ್ತರ ಸಿಗುವುದು ಕಷ್ಟ.ಪ್ರವಾಸಕ್ಕೆ ಸಾವಯವ ಕೃಷಿಕರಲ್ಲದೆ ಬೇರೆ ರೈತರನ್ನೂ ಕಳುಹಿಸಬೇಕು. ಬೇರೆ ರೈತರಲ್ಲೂ ಸಾವಯವ ಕೃಷಿಯ ಬಗೆಗೆ ಆಸಕ್ತಿ ಉಂಟುಮಾಡಬೇಕು. ಕ್ಯೂಬಾದಲ್ಲಿ ಸಾವಯವ ಕೃಷಿ ಪದ್ಧತಿಗೆ ಅನುಸರಿಸುತ್ತಿರುವ ವಿಧಾನ ಮತ್ತು  ಕೃಷಿ ಭೂಮಿಯ ಸಂರಕ್ಷಣೆಗೆ ಕೈಗೊಳ್ಳುತ್ತಿರುವ ಕ್ರಮ, ಕೃಷಿ ತಂತ್ರಜ್ಞಾನ ಹಾಗೂ ಸಂಶೋಧನೆಯ ಬಗೆಗೆ ನಮ್ಮ ರೈತರಿಗೆ ಮಾಹಿತಿ ದೊರೆಯುವಂತೆ ನೋಡಿಕೊಳ್ಳಬೇಕು. ಆಗ ಮಾತ್ರ ರೈತರ ವಿದೇಶ ಪ್ರವಾಸ ಕಾರ್ಯಕ್ರಮದ ಉದ್ದೇಶ ಸಾರ್ಥಕವಾದೀತು. ಇಲ್ಲವಾದಲ್ಲಿ ಅದು ಮೋಜಿನ ಪ್ರವಾಸವಾಗುವ ಅಪಾಯವೇ ಹೆಚ್ಚು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.