ಸೋಮವಾರ, ಮೇ 10, 2021
25 °C

ಮೋಹ, ದ್ವೇಷದ ಮಿಶ್ರಾವತಾರಿ

ವಿಶಾಖ ಎನ್. Updated:

ಅಕ್ಷರ ಗಾತ್ರ : | |

ಅವರಿಗೆ ಹಿಟ್ಲರ್ ಅಂದರೆ ಬಲು ಇಷ್ಟ. ಮೇಲುನೋಟಕ್ಕೆ ಕ್ರೂರಿ ಎನಿಸಿದರೂ ಹಿಟ್ಲರ್ ಕಲೆಗಾರ ಎಂಬುದು ಅವರ ವಾದ. ತಮಗೂ ಹಿಟ್ಲರ್‌ಗೂ ಸಾಕಷ್ಟು ಸಾಮ್ಯತೆ ಇದೆ ಎಂದು ಕೂಡ ನಿಸ್ಸಂಕೋಚವಾಗಿ ಹೇಳಿಕೊಂಡವರು. ದೇಶೋದ್ಧಾರಕ್ಕೆ ಹಿಟ್ಲರ್‌ನಂಥ ಉಕ್ಕಿನ ಕೈಗಳ ಸರ್ವಾಧಿಕಾರಿ ಬೇಕು ಎಂದು ಪದೇಪದೇ ಭಾಷಣ ಮಾಡಿದ್ದಾರೆ.ಸಂದರ್ಶನಗಳಲ್ಲೂ ಅದನ್ನೇ ಪುನರುಚ್ಚರಿಸಿದ್ದಾರೆ. ಬರವಣಿಗೆಯಲ್ಲಂತೂ ಅದನ್ನು ಲೆಕ್ಕವಿಲ್ಲದಷ್ಟು ಸಲ ದಾಖಲಿಸಿದ್ದಾರೆ.ಶಾರುಖ್ ಖಾನ್ ನಟನೆಯ `ಮೈ ನೇಮ್ ಈಸ್ ಖಾನ್~ ಸಿನಿಮಾ ತೆರೆಕಂಡಾಗ ಆ ನಟ ಪಾಕಿಸ್ತಾನದ ಪರ ಎಂದು ತಗಾದೆ ತೆಗೆದವರೂ ಇದೇ ಬಾಳಾ ಠಾಕ್ರೆ. 2006ರಲ್ಲಿ ವ್ಯಾಲೆಂಟೈನ್ಸ್ ಡೇ ಆಚರಣೆಯ ಸಂಭ್ರಮದಲ್ಲಿ ಮುಳುಗಿದ್ದ ಹೆಣ್ಣುಮಕ್ಕಳನ್ನು ಅವರು ಕಟ್ಟಿದ `ಶಿವಸೇನೆ~ಯವರು ಹೊಡೆದ ಮೇಲೆ `ತಪ್ಪಾಗಿಹೋಯಿತು~ ಎಂದು ಕನ್ನಡಕದೊಳಗಿನ ಕಣ್ಣಲ್ಲೇ ನೀರು ತುಂಬಿಕೊಂಡದ್ದೂ ಇದೇ ಠಾಕ್ರೆ. ಹೆಸರಿನಲ್ಲೇ ಇರುವಂತೆ ಅವರದ್ದು `ಭಾಳಾ~ ವ್ಯಕ್ತಿತ್ವ.ಬಾಳಾ ಠಾಕ್ರೆ ಪೂರ್ತಿ ಹೆಸರು ಬಾಳಾ ಕೇಶವ ಠಾಕ್ರೆ. ಹುಟ್ಟಿದ್ದು ಪುಣೆಯಲ್ಲಿ, ಜನವರಿ 23, 1926ರಂದು. ಅವರ ಅನುಯಾಯಿಗಳು ಹಿಂದೂಹೃದಯ್ ಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಎಂದೇ ಅವರನ್ನು ಸಂಬೋಧಿಸುವುದು.ತಂದೆ ಕೇಶವ್ ಸೀತಾರಾಂ ಠಾಕ್ರೆ ಕೆಳ ಮಧ್ಯಮ ವರ್ಗದ, ಮರಾಠಿ ಕುಟುಂಬದವರು. ಪ್ರಗತಿಪರ ಸಾಮಾಜಿಕ ಚಳವಳಿಕಾರರೆಂದೇ ಗುರುತಿಸಿಕೊಂಡಿದ್ದ ಅವರು 1950ರ ದಶಕದಲ್ಲಿ ವ್ಯಾಪಕವಾಗಿದ್ದ ಸಂಯುಕ್ತ ಮಹಾರಾಷ್ಟ್ರ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿದ್ದರು. ಮಹಾರಾಷ್ಟ್ರದಲ್ಲಿ ಮರಾಠಿ ಮಾತನಾಡುವವರದ್ದೇ ಪ್ರತ್ಯೇಕ ರಾಜ್ಯ ಸ್ಥಾಪಿಸಿ, ಅದಕ್ಕೆ ಬಾಂಬೆಯನ್ನು ರಾಜಧಾನಿಯನ್ನಾಗಿಸುವುದು ಆ ಚಳವಳಿಯ ಉದ್ದೇಶವಾಗಿತ್ತು. `ಪ್ರಬೋಧನ್~ ಎಂಬ ಪಾಕ್ಷಿಕ ತರುತ್ತಿದ್ದ ಕೇಶವ್ ಸೀತಾರಾಂ ಠಾಕ್ರೆ ಅದರಲ್ಲಿ ಹಿಂದುತ್ವದ ವಿಚಾರವಿರುವ, ಮರಾಠಿಗರ ಪರವಾದ ಲೇಖನಗಳನ್ನು ಬರೆದರು.

ಅವರ ಚಿಂತನೆಯನ್ನು ಬೆಂಬಲಿಸಿದವರು ಅವರನ್ನು ಪ್ರಬೋಧಂಕರ್ ಠಾಕ್ರೆ ಎಂದೇ ಕರೆಯುತ್ತಿದ್ದರು. ಕಾರ್ಟೂನ್, ಸಂಗೀತ ಎಲ್ಲದರಲ್ಲೂ ಒಲವಿದ್ದ ಅವರು ಕೆಲವು ಮರಾಠಿ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದೂ ಉಂಟು. ಗಾಯಕ ಮಹಮ್ಮದ್ ರಫಿ ಕೈಲಿ ಮೊದಲ ಮರಾಠಿ ಹಾಡನ್ನು ಹಾಡಿಸಿದ ಹೆಗ್ಗಳಿಕೆ ಅವರದ್ದು. ಅವರಿಗೆ ನಿರರ್ಗಳವಾಗಿ ಮಾತನಾಡುವಷ್ಟು ಉರ್ದು ಭಾಷೆ ಒಲಿದಿತ್ತು.ಇಂಥ ತಂದೆಯ ಮಗನಾದ ಬಾಳಾ ಠಾಕ್ರೆಯವರಿಗೆ ಹಿಂದುತ್ವ, ಮರಾಠಿ ಅಭಿಮಾನ ರಕ್ತಗತವಾಗಿ ಬಂದದ್ದು. ಮುಂಬೈನ `ಫ್ರೀ ಪ್ರೆಸ್ ಜರ್ನಲ್~ನಲ್ಲಿ ಕಾರ್ಟೂನಿಸ್ಟ್ ಆಗಿ ವೃತ್ತಿ ಬದುಕನ್ನು ಆರಂಭಿಸಿದ ಬಾಳಾ ಠಾಕ್ರೆ, ತಮ್ಮ ಕಾರ್ಟೂನ್ ಗೆರೆಗಳ ಮೂಲಕವೂ ಮರಾಠಿಗರ ಮೇಲೆ ನಡೆಯುತ್ತಿದ್ದ ಶೋಷಣೆಯನ್ನೇ ಚಿತ್ರಿಸಿದರು. ಅವರ ಕೆಲವು ಕಾರ್ಟೂನ್‌ಗಳು ಟೈಮ್ಸ ಇಂಡಿಯಾದ ಭಾನುವಾರದ ಸಂಚಿಕೆಗಳಲ್ಲೂ ಪ್ರಕಟವಾದವು. 1960ರಲ್ಲಿ ಕಾರ್ಟೂನ್‌ಗಳಿಗೇ ಮೀಸಲಾದ `ಮಾರ್ಮಿಕ್~ ಎಂಬ ವಾರಪತ್ರಿಕೆಯನ್ನು ಅವರು ಪ್ರಾರಂಭಿಸಿದರು. ಮುಂಬೈಯಲ್ಲಿದ್ದ ಗುಜರಾತಿ ಹಾಗೂ ದಕ್ಷಿಣ ಭಾರತದ ಕಾರ್ಮಿಕ ವರ್ಗವನ್ನು ವಿರೋಧಿಸುತ್ತಾ ಅವರು ಅಸಂಖ್ಯ ಕಾರ್ಟೂನ್‌ಗಳನ್ನು ಬರೆದರು.ಪರರಾಜ್ಯದವರ ಹಾವಳಿಯಿಂದ ಮರಾಠಿಗರಿಗೆ ಉದ್ಯೋಗದ ಸಮಸ್ಯೆ ಎದುರಾಗಿದೆ ಎಂಬುದು ಅವರ ವಾದವಾಗಿತ್ತು. ಅದಕ್ಕಾಗಿಯೇ ಕಾರ್ಟೂನ್ ಮೂಲಕ ಅವರು ಹೋರಾಟ ಮಾಡಿದರು.ಜೂನ್ 19, 1966ರಂದು ಬಾಳಾ ಠಾಕ್ರೆ ಶಿವಸೇನೆ ಕಟ್ಟಿದರು. ಅದರ ಉದ್ದೇಶವೂ ಮರಾಠಿಗರ ಹಿತರಕ್ಷಣೆಗಾಗಿ ಹೋರಾಡುವುದೇ ಆಗಿತ್ತು. ಗುಜರಾತಿ ಮಾರ್ವಾಡಿಗಳು ಹಾಗೂ ದಕ್ಷಿಣ ಭಾರತದವರೆಂದರೆ ಅವರಿಗೆ ಇನ್ನಿಲ್ಲದ ಅಸಹನೆ. ಕಮ್ಯುನಿಸ್ಟ್ ವಿರೋಧಿ ಪಕ್ಷವಾಗಿದ್ದ ಶಿವಸೇನೆಯ ಅನೇಕ ಕಾರ್ಯಕರ್ತರು ಮಾರ್ವಾಡಿ ವ್ಯಾಪಾರಿಗಳಿಂದ `ಪ್ರೊಟೆಕ್ಷನ್ ಮನಿ~ ವಸೂಲು ಮಾಡಿದರು. ಹಿಂದೂ ರಾಷ್ಟ್ರೀಯತೆಯನ್ನು ಬೆಂಬಲಿಸಿದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಒಕ್ಕೂಟಕ್ಕೆ ಮುಂದೆ ಶಿವಸೇನೆ ಸೇರಿಕೊಂಡಿತು.ಶಿವಸೇನೆ-ಬಿಜೆಪಿ ಒಗ್ಗೂಡಿ 1995ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗಿಳಿದವು. ಒಕ್ಕೂಟಕ್ಕೆ ಚುನಾವಣೆಯಲ್ಲಿ ಗೆಲುವು ಸಿಕ್ಕಿತು. 1995ರಿಂದ 99ರವರೆಗೆ ಅದರದ್ದೇ ಆಡಳಿತ. ತೆರೆಮರೆಯಿಂದಲೇ ಮಹಾರಾಷ್ಟ್ರ ಸರ್ಕಾರವನ್ನು ಬಾಳಾ ಠಾಕ್ರೆ ನಿಯಂತ್ರಿಸುತ್ತಿದ್ದುದರಿಂದ ಅವರಿಗೆ `ಸರ್ಕಾರದ ರಿಮೋಟ್ ಕಂಟ್ರೋಲ್~ ಎಂಬ ಗುಣ ವಿಶೇಷಣ ಅಂಟಿಕೊಂಡಿತು.ಇಷ್ಟೆಲ್ಲಾ ಸಾಧ್ಯವಾಗಲು 1989ರಲ್ಲಿ ಬಾಳಾ ಠಾಕ್ರೆ ಪ್ರಾರಂಭಿಸಿದ ಶಿವಸೇನೆಯ ಮುಖವಾಣಿ `ಸಾಮ್ನಾ~ ಪತ್ರಿಕೆಯ ಕಾಣಿಕೆಯೂ ಇದೆ.ಕಿರಿಕಿರಿ ಉಂಟುಮಾಡುವಂಥ ಹೇಳಿಕೆ ಕೊಡುವುದರಲ್ಲಿ ಹೆಸರುವಾಸಿಯಾಗಿರುವ ಬಾಳಾ ಠಾಕ್ರೆ 1999 ಜುಲೈ 28ರಿಂದ ಆರು ವರ್ಷ ಮತದಾನ ಮಾಡುವ ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕಳೆದುಕೊಂಡರು. ಚುನಾವಣಾ ಆಯೋಗವು ಅವರ ಮೇಲೆ ಈ ನಿಷೇಧ ಹೇರಿತು. 2005ರಲ್ಲಿ ನಿಷೇಧದ ಅವಧಿ ಪೂರ್ಣಗೊಂಡ ಮೇಲೆ 2006ರಲ್ಲಿ ಬಿಎಂಸಿ ಚುನಾವಣೆಯಲ್ಲಿ ಬಾಳಾ ಠಾಕ್ರೆ ಮತ್ತೆ ಮತ ಚಲಾಯಿಸಿದರು.ಮುಸ್ಲಿಮರ ವಿರುದ್ಧ ಸಂದರ್ಭ ಸಿಕ್ಕಾಗಲೆಲ್ಲಾ ಹರಿಹಾಯುವ ಅವರು `ನನ್ನ ಸಿಟ್ಟೇನಿದ್ದರೂ ಭಾರತದಲ್ಲಿರುವ ಮುಸ್ಲಿಮರ ಮೇಲೆ. ಅವರವರ ದೇಶದಲ್ಲೇ ಇರುವ ಮುಸ್ಲಿಮರ ಬಗ್ಗೆ ನನ್ನದೇನೂ ತಕರಾರಿಲ್ಲ~ ಎಂದಿದ್ದರು. 2002ರಲ್ಲಿ ಮುಸ್ಲಿಂ ಭಯೋತ್ಪಾದಕರ ವಿರುದ್ಧ ಸೆಟೆದುನಿಂತ ಬಾಳಾ ಠಾಕ್ರೆ ಹಿಂದೂ ಆತ್ಮಹತ್ಯಾ ದಳಗಳನ್ನು ಹುಟ್ಟುಹಾಕಲು ಕರೆಕೊಟ್ಟರು. ವಿವಿಧ ಕೋಮುಗಳ ನಡುವೆ ವೈರತ್ವ ತುಂಬುವ ಇಂಥ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಮಹಾರಾಷ್ಟ್ರ ಸರ್ಕಾರ ಅವರ ವಿರುದ್ಧ ಪ್ರಕರಣ ದಾಖಲಿಸಿತು.

ಭಾರತ ಸೇನೆಯ ನಿವೃತ್ತ ಅಧಿಕಾರಿಗಳಾದ ಜಯಂತ ರಾವ್ ಚಿತಲೆ (ಲೆಫ್ಟಿನೆಂಟ್ ಕರ್ನಲ್ ಆಗಿದ್ದವರು) ಹಾಗೂ ಪಿ.ಎನ್.ಹೂನ್ (ಲೆಫ್ಟಿನೆಂಟ್ ಜನರಲ್ ಆಗಿದ್ದವರು) ಅವರನ್ನು ಆತ್ಮಹತ್ಯಾ ದಳಕ್ಕೆ ತರಬೇತಿ ನೀಡುವಂತೆ ಠಾಕ್ರೆ ಪತ್ರಿಕೆಯ ಸಂಪಾದಕೀಯದ ಮೂಲಕ ಆಹ್ವಾನ ನೀಡಿದ್ದರು.`ನಾಲ್ಕು ಕೋಟಿ ಬಾಂಗ್ಲಾ ಮುಸ್ಲಿಮರನ್ನು ದೇಶದಿಂದ ಹೊರಗೋಡಿಸಿದರೆ ನಮ್ಮ ದೇಶ ಸುರಕ್ಷಿತವಾಗುತ್ತದೆ~ ಎಂದು ಭಾಷಣ ಮಾಡಿದ ಬಾಳಾ ಠಾಕ್ರೆ ಭಾರತವನ್ನು ಹಿಂದೂ ರಾಷ್ಟ್ರ ಎಂದೇ ಕರೆಯಬೇಕೆಂದು ಪ್ರತಿಪಾದಿಸಿದರು. `ಮುಸ್ಲಿಮರು ದೇಶದಲ್ಲಿ ಕ್ಯಾನ್ಸರ್‌ನಂತೆ ಹರಡುತ್ತಿದ್ದಾರೆ~ ಎಂದು 1980ರಲ್ಲಿ ಹೇಳಿಕೆ ನೀಡಿದ್ದ ಠಾಕ್ರೆ, 2006ರಲ್ಲಿ ಮುಂಬೈ ರೈಲಿನಲ್ಲಿ ಬಾಂಬ್ ಸ್ಫೋಟಗಳಾದಾಗ ಅಮಾಯಕ ಮುಸ್ಲಿಮರಿಗೆ ಸಾಂತ್ವನ ಹೇಳಿ ಅಚ್ಚರಿ ಮೂಡಿಸಿದ್ದರು. ಜುಲೈ 18ರಂದು ಮೃತಪಟ್ಟವರಿಗೆ ಸಂತಾಪ ಸೂಚಿಸಲು ಕರೆದಿದ್ದ ಸಭೆಗೆ ಮುಂಬೈನ ಮುಸ್ಲಿಮರೂ ಬಂದಿದ್ದನ್ನು ಕಂಡು ಠಾಕ್ರೆಯವರ ಬಾಯಲ್ಲಿ ಆ ಮಾತು ಬಂದಿತ್ತು.2008ರಲ್ಲಿ ಮತ್ತೆ ಅವರು, `ವಿಪರೀತವಾಗುತ್ತಿರುವ ಇಸ್ಲಾಂ ಭಯೋತ್ಪಾದನೆಗೆ ಹಿಂದೂ ಭಯೋತ್ಪಾದನೆಯೇ ಉತ್ತರ~ ಎಂದು ಬರೆದು ಹಳೆಯ ರಾಗ ಹಾಡಿದ್ದರು. ಅದೇ ವರ್ಷ ಬಿಹಾರಿಗಳನ್ನು ಬೈದು ಇನ್ನೊಂದು ಸಂಪಾದಕೀಯ ಬರೆದರು. `ಏಕ್ ಬಿಹಾರಿ ಸೌ ಬಿಮಾರಿ~ (ಒಬ್ಬ ಬಿಹಾರಿ ಇದ್ದರೆ ನೂರು ಕಾಯಿಲೆ ಎಂಬರ್ಥ) ಎಂಬ ಆ ಶೀರ್ಷಿಕೆಯ ಸಂಪಾದಕೀಯಕ್ಕೆ ಬಿಹಾರದ ಮುಖ್ಯಮಂತ್ರಿ ನಿತಿಶ್ ಕುಮಾರ್ ಖಾರವಾಗಿ ಪ್ರತಿಕ್ರಿಯಿಸಿದ್ದರು.ಕರ್ನಾಟಕದ ಬರ ಪೀಡಿತ ಪ್ರದೇಶಗಳಿಗೆ ಮಹಾರಾಷ್ಟ್ರ ಸರ್ಕಾರ ನೀರು ಬಿಡುವ ನಿರ್ಧಾರ ಪ್ರಕಟಿಸಿದ್ದನ್ನು ಈಗ ಠಾಕ್ರೆ ಟೀಕಿಸುತ್ತಿದ್ದಾರೆ. ಕರ್ನಾಟಕಕ್ಕೆ ನೀರು ಬಿಡುವ ಮೂಲಕ ಕಾಂಗ್ರೆಸ್ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಮರಾಠಿಗರ ಬೆನ್ನಿಗೆ ಚೂರಿ ಹಾಕಿದೆ ಎಂದು ಕಿಡಿಕಾರಿದ್ದಾರೆ.`ಮರಾಠಿ ಭಾಷಿಗರ ಮೇಲೆ ನಿರಂತರ ಶೋಷಣೆ ಮಾಡುತ್ತಿರುವ ಕನ್ನಡಿಗರಿಗೆ ಒಂದು ಹನಿ ನೀರನ್ನೂ ಕೊಡಕೂಡದು. ಅವರಿಗೆ ನೀರು ಕೊಟ್ಟರೆ ಹಾವಿಗೆ ಹಾಲೆರೆದಂತೆ~ ಎಂದು `ಸಾಮ್ನಾ~ ಪತ್ರಿಕೆಯ ಸಂಪಾದಕೀಯದಲ್ಲೇ ಬರೆದರು. ದೂಧ್‌ಗಂಗಾ ಹಾಗೂ ವರ್ನಾ ನದಿಗಳಿಂದ ಕರ್ನಾಟಕದಲ್ಲಿ ಮುಂಗಾರು ಮಳೆಯಾಗುವವರೆಗೆ ನೀರು ಬಿಡಲು ಮಹಾರಾಷ್ಟ್ರ ಸರ್ಕಾರ ಒಪ್ಪಿದ್ದಕ್ಕೆ ಅವರು ಕಟುವಾಗಿ ಟೀಕೆ ಮಾಡಿದ್ದು.ಬಾಳಾ ಠಾಕ್ರೆ ಅವರ ಪತ್ನಿ ಮೀನಾ ಠಾಕ್ರೆ. ಬಿಂದುಮಾಧವ್ ಠಾಕ್ರೆ, ಜೈದೇವ್ ಠಾಕ್ರೆ ಹಾಗೂ ಉದ್ಧವ್ ಠಾಕ್ರೆ ಅವರ ಮಕ್ಕಳು. ಬಿಂದುಮಾಧವ್ ಠಾಕ್ರೆ 1996ರಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟರು. ಬಿಜೆಪಿ ಜೊತೆ ಶಿವಸೇನೆ ಕೈಜೋಡಿಸಿದ್ದಕ್ಕೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ ಜೈದೇವ್ ತಂದೆಯಿಂದ ಬೇರೆಯೇ ಆಗಿ ಬದುಕತೊಡಗಿದರು. ಕಿರಿಯ ಮಗ ಉದ್ಧವ್ ಶಿವಸೇನೆಯ ಕಾರ್ಯನಿರ್ವಾಹಕ ಅಧ್ಯಕ್ಷ. ವನ್ಯಜೀವಿ ಛಾಯಾಚಿತ್ರಗಳನ್ನು ತೆಗೆಯುವ ಹವ್ಯಾಸ ಇರುವ ಅವರು ಕೆಲವು ಛಾಯಾಚಿತ್ರ ಪ್ರದರ್ಶನಗಳನ್ನೂ ಆಯೋಜಿಸಿದ್ದಾರೆ.ಕಾವಿ ಬಟ್ಟೆ. ಹಣೆ ಮೇಲೆ ದೊಡ್ಡ ಕುಂಕುಮ. ಕೊರಳಲ್ಲಿ ರುದ್ರಾಕ್ಷಿ. ಅಗಲವಾದ ಕನ್ನಡಕ, ಫ್ರೆಂಚ್ ಗಡ್ಡದಿಂದ ಹತ್ತು ಮಂದಿಯ ನಡುವೆ ಹನ್ನೊಂದನೆಯವರಂತೆ ಕಾಣುವ ಬಾಳಾ ಠಾಕ್ರೆ ವಿಚಾರದ ದೃಷ್ಟಿಯಿಂದಲೂ ವಿಚಿತ್ರ. ಸಿಂಹದ ಮುಖಗಳಿರುವ ದೊಡ್ಡ ಕುರ್ಚಿಯ ಮೇಲೆ ಆಸೀನರಾದ ಅವರು ಸಿಂಹಾಸನದ ಮೇಲೆ ಕುಳಿತ ರಾಜನ ಗತ್ತಿನಲ್ಲೇ ಕಾಣುತ್ತಾರೆ!

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.