ಶುಕ್ರವಾರ, ಮಾರ್ಚ್ 5, 2021
30 °C
ಮರೆಯಲಿ ಹ್ಯಾಂಗ

ಮೌಂಟೇನ್‌ ಏಶ್ : ಎಲ್ಲೆಲ್ಲು ಸಂಗೀತವೇ...

ನಿರೂಪಣೆ: ಆನಂದತೀರ್ಥ ಪ್ಯಾಟಿ Updated:

ಅಕ್ಷರ ಗಾತ್ರ : | |

ಮೌಂಟೇನ್‌ ಏಶ್ : ಎಲ್ಲೆಲ್ಲು ಸಂಗೀತವೇ...

ಅದೊಂದು ಪರ್ವತಶ್ರೇಣಿ. ನೋಡಲು ನಮ್ಮ ಹಿಮಾಲಯದ ತರಹದ್ದು. ಅಲ್ಲಿಗೆ ಹೋದಾಗ ಹಲವು ಭಾವನೆಗಳು ನನ್ನಲ್ಲಿ ಉದಿಸಿದವು. ಸ್ವಲ್ಪ ಹೊತ್ತು ಅಲ್ಲಲ್ಲಿ ತಿರುಗಾಡಿ, ದೊಡ್ಡ ಮರವೊಂದರ ಕೆಳಗೆ ಕುಳಿತೆ. ವಿಶಾಲ ಪರ್ವತ, ಸುತ್ತಮುತ್ತ ಹಸಿರೋ ಹಸಿರು ಹಸಿರು. ಯಾವುದೋ ಸುಂದರ ಕಲಾಕೃತಿಯಂತೆ ಭಾಸವಾಗುತ್ತಿದ್ದ ನೋಟ. ಕ್ಲಾರಿಯೋನೆಟ್ ಕೈಗೆತ್ತಿಕೊಂಡೆ. ಒಂದು ಹಾಡನ್ನು ನುಡಿಸಿ ಕಣ್ತೆರೆದಾಗ ನನ್ನ ಸುತ್ತಲೂ ಸಂಗೀತಾಸಕ್ತರು ಬಂದು ಕುಳಿತಿದ್ದರು; ನನಗೇ ಗೊತ್ತಿಲ್ಲದಂತೆ!ರಮ್ಯ ಪ್ರಕೃತಿಯ ತಾಣಗಳಲ್ಲಿ ಒಂದಾದ ಇಂಗ್ಲೆಂಡಿನ ಮೌಂಟೇನ್‌ ಏಶ್‌ (ಆಶ್) ಪರ್ವತ ಶ್ರೇಣಿಯನ್ನು ನೆನೆದಾಗಲೆಲ್ಲ ಅದರ ಸೌಂದರ್ಯ ನನ್ನ ಕಣ್ಣೆದುರು ಮತ್ತೆ ಮತ್ತೆ ಮೂಡುತ್ತದೆ. ಸಂಗೀತ ಕಾರ್ಯಕ್ರಮ ನೀಡಲು ದೇಶ–ವಿದೇಶಗಳಿಗೆ ನಾನು ಹೋಗಿದ್ದೇನೆ. ಅವುಗಳ ಪೈಕಿ ನನಗೆ ಹೆಚ್ಚು ಖುಷಿ ಕೊಟ್ಟಿರುವುದು ‘ಮೌಂಟೇನ್ ಏಶ್’. ಅದು ಮೊದಲ ನೋಟಕ್ಕೇ ನನ್ನನ್ನು ಆಕರ್ಷಿಸಿತು.ಸಂಸ್ಥೆಯೊಂದರ ಆಹ್ವಾನದ ಮೇರೆಗೆ ಕೆಲವು ವರ್ಷಗಳ ಹಿಂದೆ ಇಂಗ್ಲೆಂಡಿಗೆ ಹೋಗಿದ್ದೆ. ಹಲವು ಕಡೆ ಸಂಗೀತ ಸಭೆಗಳು ನಡೆದ ಬಳಿಕ, ಲಂಡನ್ನಿನ ಭಾರತೀಯ ವಿದ್ಯಾಭವನದಲ್ಲಿಯೂ ಕಾರ್ಯಕ್ರಮ ಏರ್ಪಾಡಾಗಿತ್ತು. ಅಲ್ಲಿ ಸಂಜೆ ಕ್ಲಾರಿಯೋನೆಟ್ ವಾದ್ಯದ ಮೂಲಕ ಸಭಿಕರ ಪ್ರಶಂಸೆ ಗಳಿಸಿದೆ. ಮರುದಿನ ‘ಮೌಂಟೇನ್‌ ಆಶ್‌’ಗೆ ನಮ್ಮನ್ನು ಕರೆದೊಯ್ಯುವುದಾಗಿ ಸಂಘಟಕರು ಹೇಳಿದರು. ಮರುದಿನ ಬೇಗನೇ ಲಂಡನ್‌ನಿಂದ ಹೊರಟು, ಐದಾರು ತಾಸು ಪ್ರಯಾಣದ ಬಳಿಕ ಮೌಂಟೇನ್‌ ಆಶ್ ತಲುಪಿದೆವು.ಆ ಪರ್ವತದ ದೂರನೋಟ ನನ್ನನ್ನು ವಿಸ್ಮಯಗೊಳಿಸಿತು. ವಾಹನದಿಂದ ಅಲ್ಲಲ್ಲಿ ಇಳಿದು, ಸುತ್ತಾಡಿದೆ. ಬೆಟ್ಟದ ತಪ್ಪಲಿನಲ್ಲಿ ಮಧ್ಯೆ ಮಧ್ಯೆ ಹಳ್ಳಿಗಳಿದ್ದವು. ಅಪರೂಪದ ಪ್ರಭೇದದ ಮರಗಳು ಅಲ್ಲಿವೆಯಂತೆ. ಅವುಗಳನ್ನು ನೋಡಲು ಸಂಶೋಧಕರು ಬಂದಿದ್ದರು. ಇದಲ್ಲದೇ ನಮ್ಮ ತರಹ ಸಂಗೀತಗಾರರು ಅಲ್ಲಿದ್ದರು; ಮತ್ತು ಅವರು ಅಲ್ಲಲ್ಲಿ ಕುಳಿತು ‘ಸಂಗೀತ ಪ್ರಾಕ್ಟೀಸ್’ ಮಾಡುತ್ತಿದ್ದರು!ಹೌದು! ಈ ಪರ್ವತಕ್ಕೆ ಸಂಗೀತಗಾರರು ಬರುತ್ತಾರೆ. ಜನರಿಂದ ತುಂಬಿ ತುಳುಕುವ ಸಂಗೀತ ಸಭೆಗಳು ನಮಗೆ ಬೇಕು. ಹಲವು ಕಲಾವಿದರಿಗೆ ಸಂಗೀತ ಕಾರ್ಯಕ್ರಮಗಳು ಜೀವನೋಪಾಯದ ವಿಧಾನ. ಆದರೆ ಅದರಾಚೆಗೂ ಪ್ರತಿ ಕಲಾವಿದನಿಗೆ ಬೇರೆಯದೇ ಆದ ತುಡಿತ ಇದ್ದೇ ಇರುತ್ತದೆ. ತನ್ನ ಮನತಣಿಯಲು ಏಕಾಂತದ ಸ್ಥಳವೊಂದನ್ನು ಹುಡುಕಿಕೊಂಡು ಹೋಗಿ, ಸಂಗೀತ ಸಾಧನೆ ಮಾಡಬೇಕೆನ್ನುವ ಆಸೆ ಇರುವುದು ಸಹಜ. ಅಂಥ ಕಲಾವಿದರು ಹಾಗೂ ಸಂಗೀತ ಕಲಿಯುತ್ತಿರುವವರು ‘ಮೌಂಟೇನ್‌ ಏಶ್‌’ಗೆ ಬರುತ್ತಾರೆ. ಅಲ್ಲಿನ ಬೃಹತ್‌ ಮರಗಳ ಕೆಳಗೆ ಕುಳಿತು ಹಾಡುತ್ತಾರೆ, ವಾದ್ಯ ನುಡಿಸುತ್ತಾರೆ. ಹೀಗಾಗಿ ಈ ಪರ್ವತ ಶ್ರೇಣಿ ಸಂಗೀತಮಯವಾಗಿದೆ ಎಂದರೆ ಉತ್ಪ್ರೇಕ್ಷೆ ಅನ್ನಬಾರದು.ನಾನು ಸಹ ಅಲ್ಲೊಂದು ಮರದ ಕೆಳಗೆ ಕೂತು, ನನಗೆ ಪ್ರಿಯವಾದ ರಾಗವೊಂದನ್ನು ನುಡಿಸಿದೆ. ಸ್ವಲ್ಪ ಹೊತ್ತಿನ ಬಳಿಕ ನೋಡಿದಾಗ ಜನರು ಸುತ್ತಲೂ ಕುಳಿತಿದ್ದುದು ಕಾಣಿಸಿತು. ಅವರೂ ನನ್ನ ಸಂಗೀತಕ್ಕೆ ತಲೆದೂಗುತ್ತಿದ್ದರು. ಅವರಲ್ಲಿ ಹಳ್ಳಿಗಳ ಜನರು ಇದ್ದರು. ಸಾಕಷ್ಟು ಹೊತ್ತು ವಿವಿಧ ರಾಗಗಳನ್ನು ನುಡಿಸಿದಾಗ ಮನಸ್ಸಿಗೆ ತೃಪ್ತಿಯಾದಂತೆನಿಸಿತು. ಅಲ್ಲಿಯವರೆಗೆ ನಾನು ಸಂಗೀತ ಹಾಗೂ ನಿಸರ್ಗದಲ್ಲಿ ಮುಳುಗಿಹೋಗಿದ್ದೆ. ಅಲ್ಲಿದ್ದ ಆರೇಳು ತಾಸುಗಳ ಅವಧಿಯಲ್ಲಿ ನಾನು ಕೆಲವು ಸಂಗೀತಗಾರರನ್ನು ಕಂಡೆ. ಅದು ಸುಂದರ ಪ್ರವಾಸಿ ತಾಣವೂ ಆಗಿರುವುದರಿಂದ ಪ್ರವಾಸಿಗರು ಬರುತ್ತಿರುತ್ತಾರೆ.ನಿಸರ್ಗದ ಈ ರಮಣೀಯ ತಾಣದಲ್ಲಿ ಗಾಲ್ಫ್‌ ಪ್ರಿಯರಿಗೂ ಒಂದಿಷ್ಟು ‘ತಾವು’ ಉಂಟು. ಇಲ್ಲಿನ ಗಾಲ್ಫ್ ಕೋರ್ಸ್‌ನಲ್ಲಿ ಆಟವಾಡಲು ಭಾರಿ ಬೇಡಿಕೆಯಂತೆ. ಇಲ್ಲಿ ಆಡುವವರು ಚೆಂಡನ್ನು ಬಾರಿಸುತ್ತಾ ಚಳಿಯನ್ನೂ ಓಡಿಸುತ್ತಾರಂತೆ!ನಮಗೆ ಗೊತ್ತಿಲ್ಲದ ಯಾವ, ಯಾವುದೋ ಮರಗಳು. ಅವುಗಳ ಎಲೆ ನೋಡಿದಾಗ ಹಸಿರನಲ್ಲಿ ಎಷ್ಟೊಂದು ಬಣ್ಣಗಳು ಎಂಬ ಉದ್ಗಾರ! ಈ ಹಸಿರನ್ನು ಅರಸಿ ಬರುವ ಬಾನಾಡಿಗಳು ಮರಗಳ ರೆಂಬೆಗಳಲ್ಲಿ ಸಂಗೀತ ಗೋಷ್ಠಿ ನಡೆಸುತ್ತವೆ. ಸಂಗೀತದ ಜುಗಲ್‌ಬಂದಿಯೇ ಇಲ್ಲಿ ನಡೆಯುತ್ತದೆ. ಪ್ರಕೃತಿ ಸೊಬಗು, ಬಾನಾಡಿಗಳ ಬೆಡಗು ಮತ್ತು ಅವುಗಳ ಸಂಗೀತ– ಇವುಗಳ ಸಾಂಗತ್ಯದಲ್ಲಿ ಮೈಮರೆತ ವ್ಯಕ್ತಿ ಸ್ವರ್ಗಕ್ಕೆ ಕಿಚ್ಚು ಹಚ್ಚಬೇಕು ಎನ್ನದಿದ್ದರೆ ಕೇಳಿ. ಇಂಗ್ಲೆಂಡ್‌ನ ಜನ ತಮ್ಮ ಪ್ರಾಕೃತಿಕ ತಾಣಗಳನ್ನು ಪ್ರವಾಸೋದ್ಯಮಕ್ಕೆ ಎಷ್ಟೊಂದು ಚೆನ್ನಾಗಿ ಬಳಸಿಕೊಂಡಿದ್ದಾರೆ. ನಮ್ಮ ದೇಶದಲ್ಲೂ ಇಷ್ಟೇ ಸೊಬಗಿನ ಬೇಕಾದಷ್ಟು ತಾಣಗಳಿವೆ. ಅವುಗಳನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದಕ್ಕೆ ‘ಮೌಂಟೇನ್ ಏಶ್’ ಮಾದರಿಯಾಗಿದೆ.ಈಗಲೂ ‘ಮೌಂಟೇನ್ ಏಶ್’ ಅಂದ ತಕ್ಷಣ ನನ್ನ ಮನಸ್ಸು ಅಲ್ಲಿಗೆ ಜಿಗಿಯುತ್ತದೆ. ಆ ನಯನ ಮನೋಹರ ಪರ್ವತ, ಅಲ್ಲಿನ ಹಸಿರು, ಬಗೆಬಗೆ ಹೂಗಳ ಲೋಕ ಕಣ್ಮುಂದೆ ಬರುತ್ತದೆ. ಮತ್ತೆ ಅಲ್ಲಿಗೆ ಹೋಗಿ ಪ್ರಕೃತಿಯೊಂದಿಗೆ ಬೆರೆತು, ಸಂಗೀತ ಸಾಧನೆ ಮಾಡುವ ಮನಸಾಗುತ್ತದೆ.

‘ಮೌಂಟೇನ್ ಏಶ್’

ಲಂಡನ್‌ನಿಂದ ೧೬೦ ಮೈಲು ದೂರದಲ್ಲಿದೆ ಮೌಂಟೇನ್ ಏಶ್. ಬೃಹತ್‌ ಮರಗಳು, ಹುಲ್ಲುಗಾವಲು, ಅಚ್ಚುಕಟ್ಟಾದ ಉದ್ಯಾನ... ಇವೆಲ್ಲ ಇಲ್ಲಿವೆ. ಆಸಕ್ತರನ್ನು ಸೆಳೆಯುವ ಮ್ಯೂಸಿಯಂಗಳು, ಕಲಾ ಗ್ಯಾಲರಿಗಳೂ ಇಲ್ಲುಂಟು. ಒಂದು ದಿನದ ಪ್ರವಾಸಕ್ಕೆ ಇದು ಸೂಕ್ತ ತಾಣ. ವರ್ಷದ ಒಂದೆರಡು ತಿಂಗಳು ತಾಪಮಾನ ಅಲ್ಪ ಏರಿಕೆ ಇರುವುದನ್ನು ಬಿಟ್ಟರೆ, ಉಳಿದ ದಿನಗಳಲ್ಲಿ ಚಳಿಯೋ ಚಳಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.