ಸೋಮವಾರ, ಮೇ 16, 2022
30 °C

ಮ್ಯಾಮ್‌ಕೋಸ್ ಸದಸ್ಯರ ತುರ್ತು ವಿಶೇಷ ಮಹಾಸಭೆ.ಗುಟ್ಕಾ ಸ್ಯಾಶೆ ನಿಷೇಧ: ಸುಪ್ರೀಂಗೆ ಅರ್ಜಿ.

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಗುಟ್ಕಾ ಸ್ಯಾಶೆ ನಿಷೇಧ ಆದೇಶಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುವಾಗ ತಮ್ಮನ್ನೂ ಪರಿಗಣಿಸಬೇಕು ಎಂದು ರಾಜ್ಯದ ಅಡಿಕೆ ವಹಿವಾಟು ನಡೆಸುವ ಎಲ್ಲ ಸಹಕಾರಿ ಸಂಸ್ಥೆಗಳು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿವೆ. ನಗರದ ಎಪಿಎಂಸಿಯಲ್ಲಿ ಆವರಣದಲ್ಲಿ ಗುರುವಾರ ಹಮ್ಮಿ ಕೊಂಡಿದ್ದ ಮ್ಯಾಮ್‌ಕೋಸ್ ಸದಸ್ಯರ ತುರ್ತು ವಿಶೇಷ ಮಹಾಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.ಗುಟ್ಕಾ ಸ್ಯಾಶೆ ನಿಷೇಧಿಸಿರುವುದು ಅಡಿಕೆ ಬೆಳೆಗಾರರ ಮೇಲೆ ಪರಿಣಾಮ ಬೀರಿದ್ದು, ಅಡಿಕೆ ಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆ. ಈ ಹಿನ್ನೆಲೆಯಲ್ಲಿ ಆದೇಶಕ್ಕೆ ಸಂಬಂಧಿಸಿದ ವಿಚಾರಣೆಗೆ ತಮ್ಮನ್ನೂ ಪರಿಗಣಿಸಬೇಕು ಎಂದು ಈಗಾಗಲೇ ನಾಲ್ಕೈದು ಸಹಕಾರಿ ಸಂಸ್ಥೆಗಳು ಅರ್ಜಿ ಸಲ್ಲಿಸಿವೆ. ಅದೇ ರೀತಿ, ಉಳಿದೆಲ್ಲ ಸಹಕಾರಿ ಸಂಸ್ಥೆಗಳೂ ಅರ್ಜಿ ಸಲ್ಲಿಸಲು ನಿರ್ಧರಿಸಿವೆ. ಅಲ್ಲದೇ, ಗುಟ್ಕಾ ಸ್ಯಾಶೆ ನಿಷೇಧದಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ, ಬೆಳೆಗಾರರ ರಕ್ಷಣೆಗೆ ಮುಂದಾಗಬೇಕು ಎಂದು ಮಾರ್ಚ್ 21 ಮತ್ತು 22ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೆಹಲಿಗೆ ತೆರಳಲಿದ್ದಾರೆ. ಅವರ ಜತೆ ಅಡಿಕೆ ಸಹಕಾರಿ ಸಂಸ್ಥೆಗಳೂ ನಿಯೋಗ ತೆರಳಲು ನಿರ್ಧರಿಸಲಾಯಿತು.ಜತೆಗೆ ಅಡಿಕೆಗೆ ಬೆಂಬಲ ಬೆಲೆ ನೀಡುವ ಮೂಲಕ ರಕ್ಷಣೆ ನೀಡಬೇಕು ಎಂದು ಕೇಂದ್ರದ ಮೇಲೆ ಒತ್ತಡ ತರಲು ಶೀಘ್ರದಲ್ಲೇ ಶಿವಮೊಗ್ಗದಲ್ಲಿ ಅಡಿಕೆ ಬೆಳೆಗಾರರ ರಾಜ್ಯಮಟ್ಟದ ಬೃಹತ್ ಸಮಾವೇಶ ಹಮ್ಮಿಕೊಳ್ಳಲು ಎಲ್ಲ ನಿರ್ದೇಶಕರು ಮತ್ತು ಸದಸ್ಯರು ತೀರ್ಮಾನಿಸಿದರು. ಮಾರುಕಟ್ಟೆಯಲ್ಲಿ ಹೊಸ ಪರ್ಯಾಯ ಬೆಳೆಯನ್ನು ಕಂಡುಕೊಳ್ಳುವ ಅವಶ್ಯಕತೆ ಇರುವುದರಿಂದ ಕನಿಷ್ಠ 10 ವರ್ಷಗಳ ಕಾಲಾವಕಾಶ ಕೊಡುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಬೇಕು. ಹಾಗೂ ರಾಷ್ಟ್ರೀ ಕೃತ ಬ್ಯಾಂಕ್‌ಗಳ ಹಾಗೂ ಸಹಕಾರ ಸಂಘಗಳ ಸಾಲ ಮರುಪಾವತಿ ಅವಧಿಯನ್ನು ಸರ್ಕಾರ 2011ರ ಜೂನ್ 30ರವರೆಗೆ ವಿಸ್ತರಿಸಬೇಕು ಎಂದು ಸಭೆಯಲ್ಲಿ ಭಾಗವಸಿದ್ದ ಸದಸ್ಯರು ಒಮ್ಮತದಿಂದ ಒತ್ತಾಯಿಸಿದರು.ಸರ್ಕಾರ ಪ್ರಸ್ತುತ ಘೋಷಿಸಿರುವ 100 ಕೋಟಿ ರೂ ಆವರ್ತ ನಿಧಿ ಸಾಕಾಗದಿರುವುದರಿಂದ ಇನ್ನೂ ಹೆಚ್ಚಿನ ಆವರ್ತ ನಿಧಿ ಬಿಡುಗಡೆ ಮಾಡಬೇಕು ಎಂದು ಸಭೆ ಒತ್ತಾಯಿಸಿದೆ.ಸಭೆಯಲ್ಲಿ ಮ್ಯಾಮ್‌ಕೋಸ್ ಉಪಾಧ್ಯಕ್ಷ ಕೆ. ನರಸಿಂಹನಾಯ್ಕ, ಎಪಿಎಂಸಿ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಎಂಪಿಎಂ ಅಧ್ಯಕ್ಷ ಆರಗ ಜ್ಞಾನೇಂದ್ರ, ಮಾಜಿ ಶಾಸಕ ಎಚ್.ಎಂ. ಚಂದ್ರ ಶೇಖರಪ್ಪ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಬಿ. ಭಾನುಪ್ರಕಾಶ್, ಮ್ಯಾಮ್‌ಕೋಸ್ ವ್ಯವ ಸ್ಥಾಪಕ ನಿರ್ದೇಶಕ ಎ. ಪ್ರಸನ್ನಕುಮಾರಸ್ವಾಮಿ ಸೇರಿ ದಂತೆ ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗದ ಅಡಿಕೆ ಸಹಕಾರ ಸಂಘದ ಸುಮಾರು 1500ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದರು. ನಿರ್ದೇಶಕರು ಉಪಸ್ಥಿತರಿದ್ದರು. ವೈ.ಎಸ್. ಸುಬ್ರಹ್ಮಣ್ಯ ವಂದಿಸಿದರು. .

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.