ಭಾನುವಾರ, ಜೂನ್ 13, 2021
26 °C

ಯಾದಗಿರಿ ರೈಲು ನಿಲ್ದಾಣ ನವೀಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ:  ರಾಜ್ಯದ ಅತಿ ಹೆಚ್ಚು ದಟ್ಟಣೆ ಹೊಂದಿರುವ ರೈಲು ನಿಲ್ದಾಣಗಳಲ್ಲಿ ಒಂದಾಗಿರುವ ಯಾದಗಿರಿರೈಲು ನಿಲ್ದಾಣಕ್ಕೆ ನವೀಕರಣ ಭಾಗ್ಯ ಕೂಡಿ ಬಂದಿದೆ. ಇದೀಗ ನವೀಕರಣ ಕಾಮಗಾರಿಗೆ ಚಾಲನೆ ಸಿಕ್ಕಿದ್ದು, ಶೀಘ್ರದಲ್ಲಿಯೇ ಸುಸಜ್ಜಿತ ಕಟ್ಟಡ ನಿರ್ಮಾಣ ಆಗುವ ಆಶಾಭಾವನೆ ನಗರದ ನಾಗರಿಕರಲ್ಲಿ ಮೂಡಿದೆ.ದಕ್ಷಿಣ ಮಧ್ಯ ರೈಲ್ವೆ ಗುಂತಕಲ್ ವಿಭಾಗದಲ್ಲಿಯೇ ಅತಿ ಹೆಚ್ಚು ಆದಾಯ ಹೊಂದಿರುವ ಯಾದಗಿರಿ ರೈಲು ನಿಲ್ದಾಣಕ್ಕೆ ಅನೇಕ ಸೌಲಭ್ಯಗಳು ಅಗತ್ಯವಾಗಿದ್ದು, ಹಳೆಯದಾದ ಕಟ್ಟಡದ ನವೀಕರಣ ಮಾಡಬೇಕೆಂಬ ಒತ್ತಾಯ ಬಹುದಿನಗಳಿಂದ ಕೇಳಿ ಬರುತ್ತಲೇ ಇತ್ತು. ಇದೀಗ ಸುಮಾರು ರೂ.1.5 ಕೋಟಿ ವೆಚ್ಚದಲ್ಲಿ ಇಲ್ಲಿಯ ರೈಲು ನಿಲ್ದಾಣದ ನವೀಕರಣ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನು ರೈಲ್ವೆ ಅಧಿಕಾರಿಗಳು ನೀಡಿದ್ದಾರೆ.ಒಂದೇ ಅಂತಸ್ತಿನ ರೈಲು ನಿಲ್ದಾಣದಲ್ಲಿ ಇನ್ನೊಂದು ಮಹಡಿ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಇದರಿಂದಾಗಿ ಲಗೇಜ್ ರೂಮ್, ವಸತಿಗೃಹಗಳಂತಹ ಸೌಲಭ್ಯಗಳನ್ನು ಪ್ರಯಾಣಿಕರಿಗೆ ಒದಗಿಸಲಾಗುವುದು. ಅಲ್ಲದೇ ನೋಡಲು ಸುಂದರವಾಗಿ ಕಾಣುವಂತೆ ಕಟ್ಟಡವನ್ನು ನವೀಕರಣ ಮಾಡಲಾಗುವುದು ಎಂದು ತಿಳಿಸಿದ್ದಾರೆ.ಸೌಲಭ್ಯಗಳ ಕೊರತೆ:  ಬಹುದಿನಗಳಿಂದಲೂ ಇಲ್ಲಿಯ ರೈಲ್ವೆ ನಿಲ್ದಾಣದಲ್ಲಿ ಹಲವಾರು ಕೊರತೆಗಳು ಎದ್ದು ಕಾಣುತ್ತಲೇ ಇವೆ. ರೈಲು ನಿಲ್ದಾಣದಲ್ಲಿ ನೀರಿನ ವ್ಯವಸ್ಥೆ, ಶೌಚಾಲಯ, ಮೂತ್ರಾಯಗಳ ಸಮಸ್ಯೆ ತೀವ್ರವಾಗಿದೆ. ಇದರ ಪರಿಣಾಮ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.ಸದ್ಯಕ್ಕಿರುವ ಮೂತ್ರಾಲಯಗಳ ನಿರ್ವಹಣೆ ಇಲ್ಲದೇ, ದುರ್ವಾಸನೆ ಬೀರುತ್ತಿವೆ. ಇದರಿಂದಾಗಿ ಪ್ರಯಾಣಿಕರು ಈ ಮೂತ್ರಾಲಯಗಳನ್ನು ಬಳಸದಂತಹ ವಾತಾವರಣವಿದೆ. ಇನ್ನೊಂದೆಡೆ ರೈಲ್ವೆ ನಿಲ್ದಾಣದಲ್ಲಿ ನೀರಿನ ಸಮಸ್ಯೆಯೂ ತೀವ್ರವಾಗಿದೆ.ಪಕ್ಕದಲ್ಲಿಯೇ ಭೀಮಾ ನದಿ ಇದ್ದರೂ, ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಜನರು ನೀರಿಗಾಗಿ ಪರದಾಡುವ ಸ್ಥಿತಿ ಇದೆ. ದೂರದ ಊರುಗಳಿಗೆ ಹೋಗುವ ಪ್ರಯಾಣಿಕರು ಅಪ್ಪಿ ತಪ್ಪಿ ನೀರಿಗಾಗಿ ಯಾದಗಿರಿ ನಿಲ್ದಾಣದಲ್ಲಿ ಇಳಿದರೆ, ನಿರಾಸೆ ಅನುಭವಿಸಲೇ ಬೇಕು. ಇಂತಹ ವಾತಾವರಣ ನಿವಾರಣೆ ಮಾಡಬೇಕು. ರೈಲು ನಿಲ್ದಾಣದಲ್ಲಿ ನೀರಿಗಾಗಿ ಬೋರವೆಲ್ ಕೊರೆಸಬೇಕು ಎಂದು ಲಕ್ಷ್ಮಿ ಗಣೇಶ ಯುವಕ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ತಂಬಾಕೆ ಒತ್ತಾಯಿಸುತ್ತಾರೆ.ರೈಲಿಗಾಗಿ ಕಾದು ಕುಳಿತುಕೊಳ್ಳಲು ಜನರಿಗೆ ಸೂಕ್ತ ಸ್ಥಳವಿಲ್ಲ. ಒಂದೇ ಜಾಗೆಯಲ್ಲಿ ಟಿಕಿಟ್ ಕೌಂಟರ್‌ಗಳಿದ್ದು, ಅದರ ಪಕ್ಕದಲ್ಲಿಯೇ ಜನರು ಕುಳಿತುಕೊಳ್ಳಬೇಕಾಗಿದೆ. ಇದರ ಜೊತೆಗೆ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಕೊಠಡಿಗಳು ಇಲ್ಲಿ ಇಲ್ಲದೇ ಇರುವುದು ತೊಂದರೆಯನ್ನು ಹೆಚ್ಚಿಸಿದೆ.ಈ ಹಿನ್ನೆಲೆಯಲ್ಲಿ ಕಟ್ಟಡ ನವೀಕರಣದ ಸಂದರ್ಭದಲ್ಲಿ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ವಿಶ್ರಾಂತಿ ಗೃಹಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎನ್ನುತ್ತಾರೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್. ಭೀಮುನಾಯಕ.ಆಶಾಕಿರಣ:  ಜಿಲ್ಲಾ ಕೇಂದ್ರವಾಗಿರುವ ಯಾದಗಿರಿಯು ಈ ಭಾಗದಲ್ಲಿಯೇ ಅತಿ ಹೆಚ್ಚು ಆದಾಯ ತಂದು ಕೊಡುವ ರೈಲು ನಿಲ್ದಾಣ. ನಿತ್ಯ ಸುಮಾರು ರೂ. 3 ಲಕ್ಷಕ್ಕೂ ಅಧಿಕ ಆದಾಯ ಇಲ್ಲಿದೆ. ಆದರೂ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಮಾತ್ರ ಹಿಂದೇಟು ಹಾಕುತ್ತಲೇ ಇದೆ. ಈಗಾಗಲೇ ಅನೇಕ ಸಂಘಟನೆಗಳು ನಿಲ್ದಾಣದಲ್ಲಿ ಸೌಲಭ್ಯ ಕಲ್ಪಿಸಿ ಎಂದು ಒತ್ತಾಯಿಸುತ್ತಲೇ ಬಂದಿವೆ.ಇದೀಗ ಸುಮಾರು ರೂ.1.5 ಕೋಟಿ ವೆಚ್ಚದಲ್ಲಿ ರೈಲ್ವೆ ನಿಲ್ದಾಣದ ನವೀಕರಣ ಕಾರ್ಯ ಆರಂಭವಾಗಿದ್ದು, ನಗರದ ನಾಗರಿಕರಲ್ಲಿ ಹೊಸ ಆಶಾಕಿರಣವೊಂದು ಮೂಡುವಂತೆ ಮಾಡಿದೆ. ಇನ್ನಾದರೂ ರೈಲ್ವೆ ಇಲಾಖೆ, ಜಿಲ್ಲೆಯ ಜನರಿಗೆ ಸೌಲಭ್ಯ ಕಲ್ಪಿಸಲು ಮುಂದಾಗಲಿದೆ ಎಂದು ವಿಶ್ವಾಸ ಜನರಲ್ಲಿ ಮನೆ ಮಾಡಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.