ಬುಧವಾರ, ಮೇ 18, 2022
27 °C

ಯಾರಿಗೆ ಒಲಿಯಲಿದೆ ಪಟ್ಟ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಫೆ. 10ರಂದು ನಡೆಯಲಿದ್ದು, ಚುನಾವಣೆ ಪ್ರಕ್ರಿಯೆ ಬೆಳಿಗ್ಗೆ 9ರಿಂದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಆರಂಭವಾಗಲಿದೆ. ಪ್ರಾದೇಶಿಕ ಆಯುಕ್ತರು ಚುನಾವಣೆ ಪ್ರಕ್ರಿಯೆ ನಡೆಸಲಿದ್ದಾರೆ.ಜಿ.ಪಂ. ಯಲ್ಲಿ ಒಟ್ಟು 31 ಸದಸ್ಯರಿದ್ದು, ಇದರಲ್ಲಿ ಬಿಜೆಪಿ 16, ಕಾಂಗ್ರೆಸ್ 13 ಹಾಗೂ ಜೆಡಿಎಸ್ 2 ಸ್ಥಾನಗಳನ್ನು ಹೊಂದಿವೆ. ಬಿಜೆಪಿಗೆ ಸರಳ ಬಹುಮತವಿದೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನ ಹಿಂದುಳಿದ ‘ಬಿ’ ವರ್ಗಕ್ಕೆ ಮೀಸಲಾಗಿದೆ. ಸಹಜವಾಗಿಯೇ ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಹೆಚ್ಚಾಗಿದ್ದು, ಮುಖಂಡರು ಸಾಲು-ಸಾಲು ಸಭೆಗಳನ್ನು ನಡೆಸುತ್ತಿದ್ದಾರೆ.ಅಧ್ಯಕ್ಷ ಸ್ಥಾನಕ್ಕೆ ಶಿಕಾರಿಪುರದ ಹೊಸೂರು ಕ್ಷೇತ್ರದ ಶಾಂತಮ್ಮ, ಹೊಸನಗರದ ನಗರ ಕ್ಷೇತ್ರದ ಶುಭಾ ಕೃಷ್ಣಮೂರ್ತಿ ಹಾಗೂ ಶಿವಮೊಗ್ಗದ ಹೊಳಲೂರು ಕ್ಷೇತ್ರದ ಗಾಯತ್ರಿ ಷಣ್ಮುಖ ಅವರು ಸ್ಪರ್ಧೆಯಲ್ಲಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಸೊರಬದ ಉಳವಿ ಕ್ಷೇತ್ರದ ಹುಣಸವಳ್ಳಿ ಗಂಗಾಧರಪ್ಪ ಆಯ್ಕೆ ಬಹುತೇಕ ಖಚಿತವಾಗಿದೆ.ಅಧ್ಯಕ್ಷ ಸ್ಥಾನ ಶಿಕಾರಿಪುರಕ್ಕೆ ದಕ್ಕಬೇಕು ಎಂಬುದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ ಮತ್ತವರ ಬೆಂಬಲಿಗರ ಒತ್ತಡ. ಶಿವಮೊಗ್ಗ ಗ್ರಾಮಾಂತರ ಪ್ರದೇಶದಲ್ಲಿ ಬಿಜೆಪಿಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕಾಗಿದ್ದರಿಂದ ಹೊಳಲೂರಿನ ಗಾಯತ್ರಿ ಷಣ್ಮುಖಪ್ಪ ಅವರಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂಬ ವಾದ ರಾಜ್ಯಸಭೆ ಸದಸ್ಯ ಆಯನೂರು ಮಂಜುನಾಥ್ ಬೆಂಬಲಿಗರದ್ದು.ಹೊಸನಗರ-ಸಾಗರ ಕ್ಷೇತ್ರದಲ್ಲಿ ಪಕ್ಷದ ಬಲವರ್ಧನೆ ನಿಟ್ಟಿನಲ್ಲಿ ನಗರ ಕ್ಷೇತ್ರದ ಶುಭಾ ಕೃಷ್ಣಮೂರ್ತಿ ಅವರನ್ನು ಅಧ್ಯಕ್ಷರನ್ನಾಗಿಸಬೇಕೆಂಬುದು ಪಕ್ಷದ ಒಟ್ಟಾರೆ ನಿಲುವು. ಆದರೆ, ಕೊನೆ ಗಳಿಗೆಯಲ್ಲಿ ಯಾವ ರೀತಿ ಚರ್ಚೆಗಳಾಗುತ್ತವೆ ಎಂಬುದು ಗೊತ್ತಿಲ್ಲ ಎಂದು ಮೂಲಗಳು ತಿಳಿಸಿವೆ.  ಆದರೆ, ಈ ಮಧ್ಯೆ ‘ಆಪರೇಷನ್ ಹಸ್ತ’ ಭೀತಿಗೆ ಒಳಪಟ್ಟ ಬಿಜೆಪಿ, ತನ್ನ ಎಲ್ಲಾ ಸದಸ್ಯರನ್ನು ಗೋವಾಕ್ಕೆ ಕಳುಹಿಸಿದ್ದು, ಈ ಸದಸ್ಯರೆಲ್ಲರೂ ಬುಧವಾರ ರಾತ್ರಿ ಶಿವಮೊಗ್ಗಕ್ಕೆ ಆಗಮಿಸಿದ್ದಾರೆ. ಇವರೆಲ್ಲರೂ ಫೆ. 10ರಂದು ಬೆಳಿಗ್ಗೆ ಚುನಾವಣೆ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಸ್ಪರ್ಧಿಸುವವರ ಹೆಸರನ್ನು ಫೆ. 10ರ ಬೆಳಿಗ್ಗೆಯೇ ಘೋಷಿಸಲಾಗುವುದು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಕೆ. ಸಿದ್ದರಾಮಣ್ಣ ತಿಳಿಸಿದ್ದಾರೆ.‘ಪಕ್ಷ, ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಬಿಜೆಪಿಯ ಇಬ್ಬರು ಸದಸ್ಯರು ನಮ್ಮ ಸಂಪರ್ಕದಲ್ಲಿದ್ದಾರೆ. ಚುನಾವಣೆ ನಡೆದ ಮೇಲೆಯೇ ಯಾರು ಅಧ್ಯಕ್ಷರು- ಉಪಾಧ್ಯಕ್ಷ ಎಂಬುದು ಸ್ಪಷ್ಟವಾಗುತ್ತದೆ’ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.