ಸೋಮವಾರ, ಜನವರಿ 27, 2020
26 °C

ಯುದ್ಧದಲ್ಲಿ ಪಾಕ್‌ ಗೆಲ್ಲದು: ಸಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯುದ್ಧದಲ್ಲಿ ಪಾಕ್‌ ಗೆಲ್ಲದು: ಸಿಂಗ್

ನವದೆಹಲಿ (ಪಿಟಿಐ): ‘ಭಾರತದ ವಿರುದ್ಧದ ಯಾವುದೇ ಯುದ್ಧವನ್ನು ಪಾಕಿ­ಸ್ತಾನವು ಗೆಲ್ಲುವುದಿಲ್ಲ’ ಎಂದು ಪ್ರಧಾನಿ ಮನಮೋಹನ್‌ ಸಿಂಗ್‌ ಬುಧವಾರ ಸ್ಪಷ್ಟವಾಗಿ ನುಡಿದರು. ಪಾಕಿಸ್ತಾನದ  ಪ್ರಭಾವಿ ಪತ್ರಿಕೆ­ಯೊಂದರಲ್ಲಿ ವರದಿಯಾಗಿರುವಂತೆ, ಪಾಕ್‌ ಪ್ರಧಾನಿ ನವಾಜ್‌ ಷರೀಫ್‌ ಅವರು ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ನೀಡಿದ್ದಾರೆ ಎನ್ನಲಾದ ‘ಭಾರತದ ವಿರುದ್ಧ ನಾಲ್ಕನೇ ಯುದ್ಧ ಸಾಧ್ಯತೆ’ಯ ಹೇಳಿಕೆ ಬಗ್ಗೆ ಪ್ರಧಾನಿ ಸಿಂಗ್‌ ಈ ಪ್ರತಿಕ್ರಿಯಿಸಿ, ‘ನನ್ನ ಜೀವಿ­ತಾವಧಿಯಲ್ಲಿ ಪಾಕಿಸ್ತಾ­ನವು ಭಾರತದ ವಿರುದ್ಧ ಯಾವುದೇ ಯುದ್ಧ ಗೆಲ್ಲು­ವುದಿಲ್ಲ’ ಎಂದು ತಿಳಿಸಿದರು.ಆದರೆ, ಪಾಕಿಸ್ತಾನದ ಪ್ರಧಾನಿ ಕಾರ್ಯಾಲ­ಯವು ನವಾಜ್‌ ಷರೀಫ್‌ ಅವರು ಇಂತಹ ಹೇಳಿಕೆಯನ್ನು ನೀಡಿಲ್ಲ ಎಂದಿದೆ.

‘ಷರೀಫ್‌ ಇಂತಹ ಯಾವುದೇ ಶಬ್ದ­ವನ್ನೂ ಬಳಸಿಲ್ಲ. ಪತ್ರಿಕೆ­ಯಲ್ಲಿನ ವರದಿ ಸತ್ಯಕ್ಕೆ ದೂರ, ನಿರಾಧಾರ ಮತ್ತು ದುರು­ದ್ದೇಶಪೂರಿತ’ ಎಂದು ಪಾಕ್‌ ಹೇಳಿದೆ.ಯುದ್ಧದ ಪ್ರಸ್ತಾಪವೇ ಇಲ್ಲ: ಷರೀಫ್‌ ಸ್ಪಷ್ಟನೆ (ಇಸ್ಲಾಮಾಬಾದ್‌ ವರದಿ): ‘ಕಾಶ್ಮೀರ ವಿವಾದವು ಪಾಕಿಸ್ತಾನ– ಭಾರತದ ನಡುವೆ ನಾಲ್ಕನೇ ಯುದ್ಧಕ್ಕೆ ಕಾರಣವಾಗ­ಬಹುದು’ ಎಂದು ಪಾಕ್ ಪ್ರಧಾನಿ ನವಾಜ್‌ ಷರೀಫ್‌ ಅವರು   ಹೇಳಿಕೆ­  ನೀಡಿಯೇ ಇಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ.ಈ ಸಂಬಂಧ ಪಾಕ್‌ನ ಪ್ರಮುಖ ಇಂಗ್ಲಿಷ್‌ ದಿನಪತ್ರಿಕೆಯೊಂದರಲ್ಲಿ ಬುಧ­ವಾರ ಪ್ರಕಟವಾದ ‘ಸುದ್ದಿ ಆಧಾರ­ರಹಿತ ಹಾಗೂ ದುರುದ್ದೇಶ­ಪೂರಿತ’ ಎಂದು ಪ್ರಧಾನಿ ಕಚೇರಿ ತಿಳಿಸಿದೆ.ಮುಜಫರಾಬಾದ್‌ನಲ್ಲಿ ಮಂಗಳ­ವಾರ ನಡೆದ ಪಾಕ್‌ ಆಕ್ರಮಿತ ಕಾಶ್ಮೀ­ರದ ಪ್ರಮುಖರ ಸಭೆಯಲ್ಲಿ ನವಾಜ್‌ ಷರೀಫ್‌ ಅವರು ಮಾತನಾಡಿ, ‘ಕಾಶ್ಮೀರ ಬಿಕ್ಕಟ್ಟು ಸೂಕ್ಷ್ಮ ವಿಷಯವಾಗಿದ್ದು, ಎರಡು ಅಣ್ವಸ್ತ್ರ ರಾಷ್ಟ್ರಗಳ ನಡುವೆ ಯಾವುದೇ ಸಂದರ್ಭದಲ್ಲಿ ಯುದ್ಧಕ್ಕೆ ಕಾರಣವಾಗಬಹುದೆಂದು ಅಭಿಪ್ರಾಯ­­ಪಟ್ಟಿದ್ದರು’ ಎಂದು ವರದಿಯಾಗಿತ್ತು.

ಉಭಯ ರಾಷ್ಟ್ರಗಳ ನಡುವಣ ಯಾವುದೇ ಕಗ್ಗಂಟಿನ ಪರಿಹಾರಕ್ಕೆ ಮಾತುಕತೆಯೇ ಸೂಕ್ತ ವೇದಿಕೆ ಎಂಬುದೇ ಷರೀಫ್‌ ಅವರ ನಂಬಿಕೆ. ಮುಜಫರಾಬಾದ್‌ ಸಭೆಯಲ್ಲಿ ಪ್ರಧಾನಿ ಈ ವಿಷಯ ಪ್ರಸ್ತಾಪಿಸಿದ್ದು ನಿಜ. ಭಾರತದ ಸೇನಾ ನೀತಿಯಿಂದಾಗಿ ಪಾಕ್‌ ಕೂಡ ಶಸ್ತ್ರಾಸ್ತ್ರ ಸಂಗ್ರಹ ಪೈಪೋ­ಟಿಗೆ ಇಳಿಯಬೇಕಾಗಿದೆ ಎಂದು ಷರೀಫ್‌ ಹೇಳಿದ್ದರೇ ವಿನಾ ಯುದ್ಧದ ಮಾತನ್ನು ಆಡಿಲ್ಲ ಎಂದು ಹೇಳಿಕೆಯಲ್ಲಿ ಸ್ಪಷ್ಟ­ಪಡಿಸಲಾಗಿದೆ.ಮಾತುಕತೆ ಆರಂಭಿಸಿ– ಖರ್‌ ಸಲಹೆ (ನವದೆಹಲಿ ವರದಿ): ಭಾರತ– ಪಾಕ್‌ ಮಾತುಕತೆ ಪ್ರಕ್ರಿಯೆ ಪುನರಾರಂಭ­ವಾಗ­­ಬೇಕು ಎಂದಿರುವ ಪಾಕ್‌ ವಿದೇಶಾಂಗ ಖಾತೆ ಮಾಜಿ ಸಚಿವೆ ಹೀನಾ ರಬ್ಬಾನಿ ಖರ್‌, ಈ ನಿಟ್ಟಿನಲ್ಲಿ ಎರಡೂ ದೇಶಗಳು ತಮ್ಮ ಹಳೆಯ ತಪ್ಪುಗಳ ಸರಕನ್ನು ಕೈಬಿಡ­ಬೇಕು ಎಂದು ಸಲಹೆ ನೀಡಿದ್ದಾರೆ.‘ನಾವಿಬ್ಬರೂ (ಭಾರತ–ಪಾಕ್‌) ಯುವ ಸಮುದಾಯದಲ್ಲಿ ಪರಸ್ಪರ ವಿಷ­ಬೀಜ ಬಿತ್ತಿದ್ದೇವೆ. ಹಳೆಯ ಐತಿ­ಹಾಸಿಕ ತಪ್ಪುಗಳನ್ನು ಪುನರಾವರ್ತಿಸು­ವುದು ಬೇಡ. ಅಂತಹ ಸರಕನ್ನು ಕಟ್ಟಿ­ಡೋಣ. ಅದನ್ನೇ ಮುಂದಿಟ್ಟುಕೊಂಡು ನಡೆದರೆ ಭವಿಷ್ಯಕ್ಕೆ ಕತ್ತಲು ಕವಿಯು­ತ್ತದೆ’ ಎಂದು ಅವರು ನವದೆಹಲಿಯಲ್ಲಿ ನಡೆದ ‘ಅಂಜೆಡಾ ಆಜ್‌ತಕ್‌’ ಸಮ್ಮೇ­ಳನ­ದಲ್ಲಿ ಹೇಳಿದ್ದಾರೆ.‘ಭಯೋತ್ಪಾದನೆಯು ಭಾರತಕ್ಕಿಂತ ನಮಗೇ ಹೆಚ್ಚು ಸವಾಲುಗಳನ್ನು ಒಡ್ಡಿದೆ. ಹಫೀಜ್‌ ಸಯೀದ್‌ನನ್ನು ಎರಡು ಸಾರಿ ಬಂಧಿಸಲಾಗಿತ್ತು. ಮುಂಬೈ ಮೇಲೆ ನಡೆದ ದಾಳಿ ಬಗ್ಗೆ ನ್ಯಾಯಾಲಯದಲ್ಲಿ  ಗಟ್ಟಿಯಾಗಿ ನಿಲ್ಲುವಂತಹ ಸಾಕ್ಷ್ಯಗಳನ್ನು ನೀವು (ಭಾರತ) ಒದಗಿಸಿ. ಪಾಕ್‌ ಹಿತ­ದೃಷ್ಟಿಯಿಂದ ಈ ಪ್ರಕರಣ ಎಷ್ಟು ಬೇಗ ಬಗೆಹರಿವುದೋ ಅಷ್ಟೂ ಒಳ್ಳೆಯದು’ ಎಂದಿದ್ದಾರೆ.

ಪ್ರತಿಕ್ರಿಯಿಸಿ (+)