ಮಂಗಳವಾರ, ಮೇ 18, 2021
22 °C

`ಯುಪಿಎಸ್‌ಸಿ ಮಾದರಿಯಲ್ಲಿ ಕೆಪಿಎಸ್‌ಸಿ ಸಂದರ್ಶನ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಯುಪಿಎಸ್‌ಸಿ ಮಾದರಿಯಲ್ಲಿ ಕೆಪಿಎಸ್‌ಸಿ ಸಂದರ್ಶನ'

ಬೆಂಗಳೂರು: ನಾಗರಿಕ ಸೇವೆಗಳ ಹುದ್ದೆಗಳ ಭರ್ತಿಗೆ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ಸಂದರ್ಶನದ ಮಾದರಿಯನ್ನೇ ಗೆಜೆಟೆಡ್ ಪ್ರೊಬೇಷನರ್ಸ್‌ ಹುದ್ದೆಗಳ ಭರ್ತಿಗೆ ನಡೆಸುವ ಸಂದರ್ಶನದಲ್ಲೂ ಅಳವಡಿಸಿಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ವಿಧಾನಸಭೆಯಲ್ಲಿ ಸೋಮವಾರ ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿಯಮ 69ರ ಅಡಿ ಮಾಡಿದ ಪ್ರಸ್ತಾವಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ಮುಖ್ಯಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳನ್ನು ಸಂದರ್ಶನಕ್ಕೂ ಮೊದಲೇ ಯುಪಿಎಸ್‌ಸಿ ಪ್ರಕಟಿಸುವುದಿಲ್ಲ. ಆ ಪದ್ಧತಿಯನ್ನು ಕರ್ನಾಟಕ ಲೋಕಸೇವಾ ಆಯೋಗದಲ್ಲೂ (ಕೆಪಿಎಸ್‌ಸಿ) ಜಾರಿಗೆ ತರುವ ಕುರಿತು ಚರ್ಚೆ ನಡೆದಿದೆ ಎಂದರು.ಮುಖ್ಯಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳು ಯುಪಿಎಸ್‌ಸಿ ಅಧ್ಯಕ್ಷರು, ಸದಸ್ಯರು ಮತ್ತು ಕಾರ್ಯದರ್ಶಿ ಅವರಿಗೆ ಗೊತ್ತಾಗುವುದಿಲ್ಲ. ಸಂದರ್ಶನ ನಡೆದ ನಂತರ ಮುಖ್ಯಪರೀಕ್ಷೆ ಮತ್ತು ಸಂದರ್ಶನದಲ್ಲಿ ಪಡೆದ ಅಂಕಗಳನ್ನು ಒಟ್ಟಿಗೆ ಪ್ರಕಟಿಸಲಾಗುತ್ತದೆ. ಇದರಿಂದ ಪಾರದರ್ಶಕವಾಗಿ ಸಂದರ್ಶನ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.ಕೆಪಿಎಸ್‌ಸಿಯಲ್ಲಿನ ಭ್ರಷ್ಟಾಚಾರವನ್ನು ಸಾಧ್ಯವಾದ ಮಟ್ಟಿಗೆ ತಡೆಯಲಾಗುವುದು. ಗೆಜೆಟೆಡ್ ಪ್ರೊಬೇಷನರ್ಸ್‌ ಹುದ್ದೆಗಳ ಭರ್ತಿಗೆ ಈಚೆಗೆ ನಡೆದ ಸಂದರ್ಶನದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಸೂಕ್ತ ತನಿಖಾ ಸಂಸ್ಥೆಯಿಂದ ವಿಚಾರಣೆ ನಡೆಸಿ ವರದಿ ತರಿಸಿಕೊಳ್ಳಲಾಗುವುದು. ಆರೋಪ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದರು.ಡಾ.ಮೈತ್ರಿ ಅವರು ಲಿಖಿತ ಪರೀಕ್ಷೆಯಲ್ಲಿ 1,009 ಅಂಕಗಳನ್ನು ಪಡೆದಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಸೇರಿದ ಅವರು, ಆ ಸಮುದಾಯದ ಅಭ್ಯರ್ಥಿಗಳ ಪೈಕಿ ಅತಿ ಹೆಚ್ಚು ಅಂಕಗಳನ್ನು ಪಡೆದಿದ್ದರೂ, ಉಪ ವಿಭಾಗಾಧಿಕಾರಿ ಹುದ್ದೆಗೆ ಆಯ್ಕೆಯಾಗಿಲ್ಲ. ಕೆಪಿಎಸ್‌ಸಿ ಸದಸ್ಯರೊಬ್ಬರು ದೂರವಾಣಿ ಕರೆ ಮಾಡಿ ರೂ 75 ಲಕ್ಷ  ಕೇಳಿದ್ದರು. ಹಣ ನೀಡದ ಕಾರಣ ಉಪ ವಿಭಾಗಾಧಿಕಾರಿ ಹುದ್ದೆ ತಪ್ಪಿಸಿದ್ದಾರೆ.ಲಿಖಿತ ಪರೀಕ್ಷೆಯಲ್ಲಿ 937 ಅಂಕಗಳನ್ನು ಪಡೆದಿರುವ ಮತ್ತೊಬ್ಬರನ್ನು ಆ ಹುದ್ದೆಗೆ ಆಯ್ಕೆ ಮಾಡಲಾಗಿದೆ ಎಂದು ಮೈತ್ರಿ ದೂರು ನೀಡಿದ್ದಾರೆ ಎಂದು ತಿಳಿಸಿದರು.ಈ ಬಗ್ಗೆ 2-3 ವಾರಗಳಲ್ಲಿ ತನಿಖೆ ನಡೆಸಿ, ವರದಿ ಆಧಾರದ ಮೇಲೆ ಕಾನೂನು ರೀತಿಯ ಕ್ರಮಕೈಗೊಳ್ಳಲಾಗುವುದು. ನೇಮಕಾತಿಯಲ್ಲಿ ಅನ್ಯಾಯ ಆಗಿದ್ದರೆ ಸರಿಪಡಿಸಲಾಗುವುದು. ತನಿಖೆ ಆಗುವವರೆಗೂ ಆಯ್ಕೆಪಟ್ಟಿ  ತಡೆಹಿಡಿಯಲಾಗುವುದು. ಇದುವರೆಗೆ ಆಯ್ಕೆಪಟ್ಟಿ ಸರ್ಕಾರದ ಕೈಸೇರಿಲ್ಲ ಎಂದರು.`ಕ್ಷೇತ್ರದ ಜನತೆ ಮನವಿ ಮಾಡಿದಾಗ, ಅವರು ಸೂಚಿಸಿದ ಅಭ್ಯರ್ಥಿಗೆ ಅವಕಾಶ ಮಾಡಿಕೊಡಿ ಎಂದು ಕೆಪಿಎಸ್‌ಸಿ ಅಧ್ಯಕ್ಷರಿಗೆ, ಸದಸ್ಯರಿಗೆ ರಾಜಕಾರಣಿಗಳು ಮನವಿ ಮಾಡುವುದು ಸಹಜ. ಆದರೆ, ಅರ್ಹತೆ ಇರುವವರನ್ನು ಬಿಟ್ಟು, ಮೆರಿಟ್ ಇಲ್ಲದವರಿಗೆ ಕೊಡಿ' ಎನ್ನುವುದು ಸರಿಯಲ್ಲ ಎಂದರು.ಬಂಧನಕ್ಕೆ ಆಗ್ರಹ:  ಆಯೋಗ ನಡೆಸಿದ ಸ್ಪರ್ಧಾತ್ಮ ಪರೀಕ್ಷೆ ಬರೆಯದೆ ಪತ್ರಾಂಕಿತ ಅಧಿಕಾರಿಯಾಗಿ ಆಯ್ಕೆಯಾಗಿರುವುದು ಸಿಐಡಿ ತನಿಖೆಯಿಂದ ಬೆಳಕಿಗೆ ಬಂದಿದೆ ಎಂಬ ವರದಿಯನ್ನು ಕೆಲ ಮಾಧ್ಯಮಗಳು ಪ್ರಕಟಿಸಿವೆ. ಇದು ನಿಜ ಆಗಿದ್ದರೆ ಆ ಅಧಿಕಾರಿಯನ್ನು ಕೂಡಲೇ ಬಂಧಿಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.ಆಯ್ಕೆಯಾಗದ ಅಭ್ಯರ್ಥಿಗಳು ಮಾಧ್ಯಮಗಳ ಮೊರೆ ಹೋಗಿ, ಕೆಪಿಎಸ್‌ಸಿಗೆ ಕಳಂಕ ತರುವ ವ್ಯವಸ್ಥಿತ ಸಂಚು ನಡೆಸಿರುವ ಬಗ್ಗೆ ಸಂಶಯ ಇದೆ. ನಿಜವಾಗಿಯೂ ಲೋಪ ಆಗಿದೆ ಎಂದು ಲಿಖಿತವಾಗಿ ದೂರು ನೀಡಿದ್ದರೆ, ಆ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ಆದರೆ, ಮಾಧ್ಯಮಗಳ ವರದಿ ಆಧರಿಸಿ ತನಿಖೆ ನಡೆಸುವುದು ಸರಿಯಲ್ಲ ಎಂದರು.ಸಂದರ್ಶನದಲ್ಲಿ ಅಂಕಗಳನ್ನು ನೀಡುವ ಪರಮಾಧಿಕಾರ ಸದಸ್ಯರು, ಅಧ್ಯಕ್ಷರಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ ಅವರು ನೀಡುವ ಅಂಕಗಳನ್ನು ಪ್ರಶ್ನೆ ಮಾಡುವಂತಿಲ್ಲ. ಲೋಪ ಆಗಿದ್ದರೆ ದೂರುದಾರರು ಆಯೋಗದ ಕಾರ್ಯದರ್ಶಿಗೆ ತಿಳಿಸಬೇಕು.ಅವರು ಆ ವಿಷಯವನ್ನು ಸದಸ್ಯರು, ಅಧ್ಯಕ್ಷರ ಗಮನಕ್ಕೆ ತರಬೇಕು. ಅವರು ಸ್ಪಂದಿಸದಿದ್ದರೆ ಕಾರ್ಯದರ್ಶಿಗಳು ಸರ್ಕಾರದ ಗಮನಕ್ಕೆ ತರಬೇಕು. ಈ ಪ್ರಕ್ರಿಯೆ ನಡೆದಿದೆಯೇ ಎಂದು ಅವರು ಪ್ರಶ್ನಿಸಿದರು.ಸಂದರ್ಶನಕ್ಕೆ ನಿಗದಿಪಡಿಸಿರುವ 200 ಅಂಕಗಳನ್ನು 20ಕ್ಕೆ ಇಳಿಸಬೇಕು. ಭ್ರಷ್ಟಾಚಾರದ ಬಗ್ಗೆ ಧೈರ್ಯವಾಗಿ ದೂರು ನೀಡಿರುವ ಮೈತ್ರಿ ಅವರಿಗೆ ರಕ್ಷಣೆ ನೀಡಬೇಕು. ಈ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕು ಎಂದು ಯಡಿಯೂರಪ್ಪ ಆಗ್ರಹಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.