ಗುರುವಾರ , ಮೇ 19, 2022
21 °C

ಯುವಜನರ ಕೈಯಲ್ಲಿ ಮಾಹಿತಿ ಹಕ್ಕು ಕಾಯಿದೆ ಅಸ್ತ್ರ.....

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಮಾಹಿತಿ ಹಕ್ಕು ಕಾಯ್ದೆಯಿಂದ (ಆರ್‌ಟಿಐ) ದೇಶದಲ್ಲಿ ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದಂತಾಗಿದ್ದು, ಪ್ರತಿಯೊಬ್ಬರೂ, ಮುಖ್ಯವಾಗಿ ಯುವಜನತೆ ಈ ಕಾಯ್ದೆಯ ಬಗ್ಗೆ ಸ್ಪಷ್ಟ ಮಾಹಿತಿ ಪಡೆದುಕೊಳ್ಳಬೇಕು. ಇದನ್ನು ಪ್ರಬಲ ಅಸ್ತ್ರವನ್ನಾಗಿ ಮಾಡಬೇಕು ಎಂಬ ಸಂದೇಶ ನಗರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಹೊರಬಿದ್ದಿತು.ಆರ್‌ಟಿಐ ಆರನೇ ವರ್ಷಾಚರಣೆ ಪ್ರಯುಕ್ತ ಪುರಭವನದಲ್ಲಿ ಹಲವು ಜನಪರ ಸಂಘಟನೆಗಳು ಒಟ್ಟುಗೂಡಿ ರಚಿಸಿಕೊಂಡ `ಪಾರದರ್ಶಕತೆಗಾಗಿ ನಾಗರಿಕರ ಕಾರ್ಯ~ ಸಂಘಟನೆಯ ವತಿಯಿಂದ ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಈ ಸಂದೇಶ ಕೇಳಿಬಂತು.ಕಾರ್ಯಾಗಾರ ಉದ್ಘಾಟಿಸಿದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಚ್.ಆರ್.ದೇಶಪಾಂಡೆ ಮಾತನಾಡಿ, 21ನೇ ಶತಮಾನದ ಕ್ರಾಂತಿಕಾರಕ ಕಾಯ್ದೆ ಎಂದರೆ ಆರ್‌ಟಿಐ. ಇದನ್ನು ಸಮರ್ಥವಾಗಿ ಬಳಸಿದ್ದೇ ಆದರೆ ದೇಶದಲ್ಲಿ ಭ್ರಷ್ಟಾಚಾರವನ್ನು ನಿಗ್ರಹಿಸುವುದು ಸಾಧ್ಯವಿದೆ.ಆದರೆ ಇದನ್ನು ಸ್ವಾರ್ಥ ಸಾಧನೆಗಾಗಿ ಬಳಸದೆ, ಜನಸಾಮಾನ್ಯರ ಅನುಕೂಲಕ್ಕಾಗಿ, ಅಧಿಕಾರಿಗಳ ಕರ್ತವ್ಯ ಪ್ರಜ್ಞೆಯನ್ನು ಎಚ್ಚರಿಸುವುದಕ್ಕಾಗಿ ಬಳಸಬೇಕು ಎಂದು ಕಿವಿಮಾತು ಹೇಳಿದರು.ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು.ಆದರೆ ಮಾಹಿತಿ ಎಂಬ ಮೂಲ ವಿಚಾರ ಅವರ ಬಳಿ ಇಲ್ಲದಿದ್ದರೆ ಅವರ ಹೋರಾಟಕ್ಕೆ ಅರ್ಥವಿರುವುದಿಲ್ಲ. ರಾಷ್ಟ್ರದ ಭದ್ರತೆ, ಸಾರ್ವಭೌಮತೆಗೆ ಸಂಬಂಧಿಸಿದ ವಿಚಾರ ಹೊರತುಪಡಿಸಿ ಉಳಿದೆಲ್ಲಾ ಮಾಹಿತಿಗಳನ್ನು ಈ ಕಾಯ್ದೆ ಪ್ರಕಾರ ನೀಡಲೇಬೇಕಾಗುತ್ತದೆ. ಹೀಗಾಗಿ ಜನರು ತಮ್ಮ ಹಕ್ಕನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಇದರಿಂದಾಗಿ ಪ್ರಜಾಪ್ರಭುತ್ವದ ಮೂರೂ ಅಂಗಗಳು ಸಮರ್ಪಕವಾಗಿ ಕೆಲಸ ಮಾಡಲು ಸಾಧ್ಯ ಎಂದು ಅವರು ನುಡಿದರು.ಹೋರಾಟ ಎಚ್ಚರಿಕೆ: ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಪಿ.ಚೆಂಗಪ್ಪ ಮಾತನಾಡಿ, ಆರ್‌ಟಿಐನಿಂದಾಗಿ ಜನಪ್ರತಿನಿಧಿಗಳು ಇಂದು ತಿಹಾರ್ ಜೈಲು, ಪರಪ್ಪನ ಅಗ್ರಹಾರ ಜೈಲುಗಳಿಗೆ ತೆರಳಲು ಸರದಿಯಲ್ಲಿ ನಿಲ್ಲುವಂತಾಗಿದೆ. ಇದೇ ಕಾರಣಕ್ಕೆ ಈ ಕಾಯ್ದೆಗೆ ತಿದ್ದುಪಡಿ ತರುವ ಪ್ರಯತ್ನವೂ ನಡೆದಿವೆ. ಕೆಡುಕಿಗಾಗಿ ತಿದ್ದುಪಡಿ ತಂದರೆ ಉಗ್ರ ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಸಿದರು.ಪ್ರತಿಯೊಬ್ಬರೂ, ಮುಖ್ಯವಾಗಿ ಯುವಜನರು ಈ ಕಾಯ್ದೆಯನ್ನು ಸರಿಯಾಗಿ ಅರ್ಥಮಾಡಿಕೊಂಡರೆ ದೇಶ ಹಲವು ಸಂಕಷ್ಟಗಳಿಂದ ಪಾರಾಗಲು ಸಾಧ್ಯವಿದೆ. ಈ ಕಾಯ್ದೆಯಡಿ ಅರ್ಜಿ ಸಲ್ಲಿಸುವುದು ಬಹಳ ಸರಳ. ಎಲ್ಲಿಯೇ ಅನ್ಯಾಯವಾದರೂ ಮಾಹಿತಿ ತರಿಸಿಕೊಂಡು ಕಾನೂನುಬದ್ಧವಾಗಿ ಹೋರಾಟ ಮಾಡುವುದು ಸಾಧ್ಯವಿದೆ.ಮುಂದಿನ ದಿನಗಳಲ್ಲಿ ಜಿಲ್ಲಾ ಕಾನೂನು ಸಲಹಾ ಪ್ರಾಧಿಕಾರ ಮತ್ತು ವಕೀಲರ ಸಂಘಗಳ ನುರಿತ ವಕೀಲರು ಮತ್ತು ಕಾನೂನು ತಜ್ಞರಿಂದ ಉಚಿತ ತರಬೇತಿ ನೀಡಲಾಗುವುದು ಎಂದರು.ದೇಶದಲ್ಲಿ 800ಕ್ಕೂ ಅಧಿಕ ಕಾನೂನುಗಳಿದ್ದು, ಸ್ವತಃ ವಕೀಲರಿಗೇ ಅಷ್ಟೂ ಕಾನೂನು ತಿಳಿದಿಲ್ಲ.ಆರ್‌ಟಿಐ, ಮನೆಯೊಳಗೆ ನಡೆಯುವ ಹಿಂಸೆ ತಡೆ ಕಾಯ್ದೆಯಂತಹ ಅಗತ್ಯದ ಕಾಯ್ದೆಗಳ ಬಗ್ಗೆ ಜನರಿಗೆ ಮಾಹಿತಿ ಹೊಂದಿರಬೇಕು. ಮಾಹಿತಿ ನೀಡಲು ಜಿಲ್ಲೆಯ ವಕೀಲರೂ ಸಿದ್ಧ. ಯುವಜನತೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಸಾಮಾಜಿಕ ಕಾರ್ಯಕರ್ತೆ ರೀಟಾ ನರೋನ್ಹಾ, ಅಹಿಂದ ಜಿಲ್ಲಾ ಸಂಚಾಲಕ ಲೋಲಾಕ್ಷ, ಹರ್ಷರಾಜ ಗಟ್ಟಿ, ಅಡ್ಡೂರು ಕೃಷ್ಣರಾವ್ ಇದ್ದರು. ಆರು ವರ್ಷಗಳಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ದೇಶದ ಪ್ರಮುಖ ಆರ್‌ಟಿಐ ಕಾರ್ಯಕರ್ತರನ್ನು ಸ್ಮರಿಸಿ 2 ನಿಮಿಷ ಮೌನ ಆಚರಿಸಲಾಯಿತು.ಆರ್‌ಟಿಐ ಅರ್ಜಿ ಬರೆಯುವ ಬಗೆ:  ಗ್ರಾಹಕ ಹಕ್ಕು ಹೋರಾಟಗಾರ ಅಡ್ಡೂರು ಕೃಷ್ಣರಾವ್, ಆರ್‌ಟಿಐ ಅರ್ಜಿ ಬರೆಯುವ ಬಗ್ಗೆ ಮಾಹಿತಿ ನೀಡಿದರು. ಹಲವು ನಿದರ್ಶನ ಉದ್ಧರಿಸಿ ಆರ್‌ಟಿಐ ಗ್ರಾಹಕರಿಗೆ ಹೇಗೆ ನೆರವಾಗಿದೆ ಎಂಬುದನ್ನು ವಿವರಿಸಿದರು.ಬಿಳಿ ಹಾಳೆಯಲ್ಲಿ ಮೇಲೆ `ಮಾಹಿತಿ ಹಕ್ಕು ಕಾಯ್ದೆ ಪ್ರಕಾರ ಮಾಹಿತಿಗೆ ಅರ್ಜಿ~ ಎಂದು ಬರೆದು ವ್ಯಕ್ತಿ ಹೆಸರು-ವಿಳಾಸ ಹಾಗೂ ಯಾರಿಗೆ ಸಲ್ಲಿಸಬೇಕೋ ಅ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಬರೆಯಬೇಕು.ನೇರವಾಗಿ ಹೇಳಿಕೆ ರೂಪದಲ್ಲಿ ಅಥವಾ ಪ್ರಶ್ನೆ ಮೂಲಕ ಯಾವ ಮಾಹಿತಿ ಬೇಕೋ ಕೇಳಬೇಕು.ಕೊನೆಗೆ ರೂ. 10ರ ಡಿ.ಡಿ./ಪೋಸ್ಟಲ್ ಆರ್ಡರ್ ಖರೀದಿಸಿ ಅದರ ಪ್ರತಿ ಲಗತ್ತಿಸಬೇಕು. ಕೊನೆಗೆ ಸಹಿ ಅಗತ್ಯ. ಸಂಸ್ಥೆಯಲ್ಲ, ವ್ಯಕ್ತಿಗಳೇ ಅರ್ಜಿ ಸಲ್ಲಿಸಬೇಕು ಎಂದು ಮಾಹಿತಿ ನೀಡಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.